ನಖ್ಖರ್ ಖಾನಗೆ 126ರ ಹರೆಯ !

7
ನಸುಕಂದು ಬಣ್ಣದ ಮರಳುಗಲ್ಲಿನಲ್ಲಿ ಈ ಪ್ರಾಚ್ಯ ವಸ್ತು ಸಂಗ್ರಹಾಲಯ ನಿರ್ಮಾಣ

ನಖ್ಖರ್ ಖಾನಗೆ 126ರ ಹರೆಯ !

Published:
Updated:
Deccan Herald

ವಿಜಯಪುರದ ಐತಿಹಾಸಿಕ ಗೋಳಗುಮ್ಮಟದ ಎದುರು ಆಕರ್ಷಕ ವಾಸ್ತುಶಿಲ್ಪವಿರುವ ಕಟ್ಟಡವಿದೆ. ನಸುಕಂದು ಬಣ್ಣದ ಮರಳುಗಲ್ಲಿನಲ್ಲಿ ನಿರ್ಮಿಸಿರುವ ಈ ಕಟ್ಟಡ, ಎದುರಿನ ಗುಮ್ಮಟ ನೋಡಿ ಬಂದವರನ್ನು ತನ್ನತ್ತ ಸೆಳೆಯುತ್ತದೆ. ಎರಡು ಬೃಹತ್ ಕಂಬಗಳ ನಡುವೆ ನಿಲ್ಲಿಸಿದ ಕೋಟೆಯಂತೆ ಕಾಣುವ ಈ ಕಟ್ಟಡಕ್ಕೆ ಇಂಡೋಸಾರ್ಸೆನಿಕ್ ಶೈಲಿಯ ಪ್ರಮುಖದ್ವಾರವಿದೆ. ಅದೇ ಆಕಾರದ ಏಳು ಕಿಟಕಿಗಳಿವೆ. ಇದೇ ನಖ್ಖರ್ ಖಾನ ಎಂಬ ಪ್ರಾಚ್ಯ ವಸ್ತು ಸಂಗ್ರಹಾಲಯ.

1892ರಲ್ಲಿ ಆರಂಭವಾದ ಈ ಮ್ಯೂಸಿಯಂ ಈಗ ಒಂದೂಕಾಲು ಶತಮಾನ ಪೂರೈಸಿದೆ. ಕ್ರಿ.ಶ 6ನೇ ಶತಮಾನದಿಂದ 18ನೇ ಶತಮಾನದ ನಡುವಿನ ಕಾಲಘಟ್ಟದ ವಸ್ತುಗಳನ್ನು ತನ್ನೊಡಲಲ್ಲಿಟ್ಟುಕೊಂಡಿರುವ ಈ ಸಂಗ್ರಹಾಲಯ, ಗೋಳಗುಮ್ಮಟದಷ್ಟೇ ಪ್ರವಾಸಿಗರ ಆಕರ್ಷಣೆಯ ಕೇಂದ್ರ. 

ಮ್ಯೂಸಿಯಂನ ಪ್ರವೇಶ ದ್ವಾರದ ಅಕ್ಕ–ಪಕ್ಕದಲ್ಲಿ ಆರು ಚಿಕ್ಕ–ಡೊಡ್ಡ ತೋಪುಗಳನ್ನಿಟ್ಟಿದ್ದಾರೆ. ತೋಪಿಗೆ ಬಳಸುತ್ತಿದ್ದ ಕಲ್ಲು ಗುಂಡುಗಳನ್ನೂ ಪ್ರದರ್ಶನಕ್ಕಿಡಲಾಗಿದೆ. ಮುಖ್ಯದ್ವಾರ ದಾಟಿಕೊಂಡು ಮ್ಯೂಸಿಯಂ ಒಳಗೆ ಪ್ರವೇಶಿಸುತ್ತಿದ್ದಂತೆ ಪಕ್ಕದಲ್ಲಿ ನೆಲಮಾಳಿಗೆಗೆ ಹೋಗುವ ಮೆಟ್ಟಿಲು ಕಾಣಿಸುತ್ತದೆ. ನೆಲಮಾಳಿಗೆ ಸೇರಿದಂತೆ ಮೂರು ಅಂತಸ್ತುಗಳಲ್ಲಿ 8 ಗ್ಯಾಲರಿಗಳಿವೆ. ಅದರಲ್ಲಿ ಮೂರು ಗ್ಯಾಲರಿ ನೆಲಮಹಡಿಯಲ್ಲಿ ಉಳಿದ ಐದು ಗ್ಯಾಲರಿ ಮೊದಲ ಮಹಡಿಯಲ್ಲಿವೆ.

ಪ್ರಮುಖ ಆಕರ್ಷಣೆಗಳು

11ನೇ ಶತಮಾನದ ಅಷ್ಟಭುಜಾಕಾರದ ನಟರಾಜನ ಭಗ್ನ ಪ್ರತಿಮೆ, ಶಿವ ತನ್ನ ಗಣಗಳ ಜತೆ ನರ್ತಿಸುತ್ತಿರುವ ಕಲ್ಲಿನ ಬಾಗಿಲು ತೋರಣ, ಕಹಳೆ ಊದುತ್ತಿರುವ, ಮದ್ದಲೆ ಬಾರಿಸುತ್ತಿರುವ ಉಬ್ಬು ಶಿಲ್ಪಗಳಿವೆ. ಏಳು–ಎಂಟನೇ ಶತಮಾನದ ವೀರಗಲ್ಲುಗಳು, ಶಾಸನಗಳು, ಸಮಭಂಗಿಯಲ್ಲಿರುವ ಅಪರೂಪದ ಕೇಶವ, ವೀರಭದ್ರ, 8ನೇ ಶತಮಾನದ ಐಹೊಳೆಯಲ್ಲಿ ದೊರೆತ ಕಲ್ಲಿನ ಗಣೇಶ, 14ನೇ ಶತಮಾನದ ಪಾರ್ಶ್ವನಾಥ ವಿಗ್ರಹಗಳು ಮ್ಯೂಸಿಯಂನ ಪ್ರಮುಖ ಆಕರ್ಷಣೆ.

ನೆಲಮಹಡಿಯ ಮಧ್ಯದಲ್ಲಿ ಕ್ರಿ.ಶ. ಆರನೇ ಶತಮಾನದಲ್ಲಿ ಮಂಗಳೇಶ ನಿರ್ಮಿಸಿದ ಮಹಾಕೂಟದಲ್ಲಿ ದೊರೆತ ಅಪರೂಪದ ಎತ್ತರದ ವಿಜಯ ಸ್ತಂಭವಿದೆ. ವಿಜಯನಗರ ಸಾಮ್ರಾಜ್ಯದ ಕೊನೆಯ ದೊರೆ ಅಳಿಯ ರಾಮರಾಯನ ಕಲ್ಲಿನ ಶಿರೋ ಭಾಗವನ್ನು ಇಲ್ಲಿಡಲಾಗಿದೆ. ಕಲ್ಲಿನ ಮೊಸಳೆಗಳನ್ನೂ ಪ್ರದರ್ಶನಕ್ಕಿಡಲಾಗಿದೆ.

11–12ನೇ ಶತಮಾನದಲ್ಲಿ ಅಗ್ರಹಾರ ಸಾಲೋಟಗಿ ವಿದ್ಯಾಲಯಕ್ಕೆ ದಾನಕೊಟ್ಟ ಸ್ತಂಭ ಶಾಸನವಿದ್ದು, ಇದರ ಮೂರು ದಿಕ್ಕುಗಳಲ್ಲಿ ಸಂಸ್ಕೃತ ಲಿಪಿ, ಕೆಳಭಾಗದಲ್ಲಿ ಕನ್ನಡ ಲಿಪಿಯಿದೆ. 13ನೇ ಶತಮಾನದ ಕನ್ನಡ ಶಾಸನವೊಂದರಲ್ಲಿ ವಿಜಯಪುರ ಉಲ್ಲೇಖವಿದೆ. ಕ್ರಿ.ಶ 17ನೇ ಶತಮಾನದ ಕಲಾತ್ಮಕ ಹಸ್ತ ಪ್ರತಿಯನ್ನು ಹೊಂದಿರುವ ಅರೇಬಿಕ್–ಪರ್ಶಿಯನ್ ಲಿಪಿಗಳ ಶಾಸನ ಶಿಲೆಗಳಿವೆ. ಪುಷ್ಪಗಳ ವಿನ್ಯಾಸ ಹೊಂದಿರುವ ಕಲ್ಲಿನ ಜಾಲಂದ್ರಗಳು, ಕಲ್ಲಿನ ಸರಪಳಿಗಳು ಆಕರ್ಷಿಸುತ್ತವೆ.

ಮೂವತ್ತೆರಡು ಮೆಟ್ಟಿಲುಗಳನ್ನೇರಿ ಮೊದಲ ಮಹಡಿ ತಲುಪಿದರೆ, ಆದಿಲ್‌ ಶಾಹಿ ಅರಸರ ಕಲೆ, ಸಂಸ್ಕೃತಿಯ ವೈಭವ ಅನಾವರಣಗೊಳ್ಳಲಿದೆ. ಬಹುತೇಕ ಪ್ರಾಚ್ಯ ವಸ್ತುಗಳ ದರ್ಶನ ಲಭ್ಯ. ಅರಸರು ಬಳಸುತ್ತಿದ್ದ ನಿತ್ಯೋಪಯೋಗಿ ವಸ್ತುಗಳು, ಸುಲ್ತಾನರು ತೊಡುತ್ತಿದ್ದ ನಿಲುವಂಗಿ, ಕಠಾರಿ, ಭರ್ಜಿ, ರಾಜರು–ರಾಣಿಯರ ಭಾವಚಿತ್ರ, ಸೂಫಿ ಸಂತರ ಭಾವಚಿತ್ರದ ಚಿತ್ರಕಲೆಯೂ ಕಾಣಿಸುತ್ತದೆ.

ಚೀನಿ ಮಣ್ಣಿನ ತಟ್ಟೆ, ಬಟ್ಟಲು, ಹೂಜಿ, ಆದಿಲ್‌ ಶಾಹಿ ಸುಲ್ತಾನರು ಭೋಜನಕ್ಕೂ ಮುನ್ನ ಸೆಲಡನ್‌ ಪಾತ್ರೆಯಲ್ಲಿ ಆಹಾರ ಪರೀಕ್ಷಿಸುತ್ತಿದ್ದ ಪರಿ, ಅವರ ಕಾಲದ ತಂತ್ರಜ್ಞಾನವನ್ನು ಪರಿಚಯಿಸಲಿದೆ. ಜತೆಗೆ ಆ ಕಾಲದಲ್ಲೇ ಚೀನಾದೊಂದಿಗೆ ಹೊಂದಿದ್ದ ರಾಜತಾಂತ್ರಿಕ–ವ್ಯವಹಾರಿಕ ಸಂಬಂಧವನ್ನು ಈ ವಸ್ತುಗಳು ಬಿಂಬಿಸುತ್ತವೆ.

17ನೇ ಶತಮಾನದ್ದು ಎನ್ನಲಾದ ಚಿನ್ನದ ಲೇಪನವಿರುವ ವರ್ಣಚಿತ್ರ, ದಖನಿ ಶೈಲಿಯ ಚಿಕಣಿ ಚಿತ್ರಗಳಲ್ಲಿ ಚಾಂದ್‌ಬೀಬಿ, ರಂಭಾವತಿ, ಔರಂಗಜೇಬನ ಪುತ್ರಿ ಜೈಬುನ್ನೀಸಾ ಚಿತ್ರಗಳಿವೆ. ಆದಿಲ್‌ಶಾಹಿ ಅರಸರು, ಸೂಫಿ ಸಂತರ ಚಿತ್ರಗಳು ಜತೆಗೆ ನಾಣ್ಯಗಳನ್ನು ಜೋಡಿಸಿದ್ದಾರೆ. ಹಳದಿ, ಕೆಂಪು, ನೀಲಿ ವರ್ಣಗಳಲ್ಲಿರುವ ಕುರಾನ್‌ನ ಹಸ್ತ ಪ್ರತಿಗಳು ಗಮನಸೆಳೆಯುತ್ತವೆ. ಇದರಲ್ಲಿ ಕೆಲ ಅಕ್ಷರಗಳಿಗೆ ಚಿನ್ನ ಲೇಪಿತವಾಗಿದೆ. ಇವು 13 ರಿಂದ 18ನೇ ಶತಮಾನದ ಅವಧಿಯಲ್ಲಿ ರಚನೆಯಾಗಿರುವಂಥದ್ದು ಎಂಬುದನ್ನು ಮ್ಯೂಸಿಯಂನ ದಾಖಲೆ ತಿಳಿಸುತ್ತದೆ.

ಐತಿಹಾಸಿಕ ಮಹತ್ವವುಳ್ಳ ಗದ್ಯ–ಪದ್ಯಗಳ ಗ್ರಂಥಗಳು, ಶೃಂಗಾರ ಕಾವ್ಯಗಳು, ರಾಜಮುದ್ರೆಯಿರುವ ಸನ್ನದ್‌, ಫರ್ಮಾನ್, ಪರ್ಶಿಯಾದ ರತ್ನಗಂಬಳಿ, ವಿಶಿಷ್ಟ ತಂತ್ರಜ್ಞಾನ ಒಳಗೊಂಡ ಬೀಗ, ಬಿದರಿ ಅಲಂಕೃತ ಪಾತ್ರೆ, ಅಫ್ಜಲ್‌ಖಾನ್‌ ಬಳಸಿದ್ದ ಎನ್ನಲಾದ ಏಳು ಕೆ.ಜಿ. ತೂಕದ 3.9 ಅಡಿ ಉದ್ದದ ಖಡ್ಗ ಸೇರಿದಂತೆ ಇನ್ನಿತರೆ ಅಪರೂಪದ ವಸ್ತುಗಳನ್ನು ಭದ್ರವಾದ ಗಾಜಿನ ಕಪಾಟುಗಳಲ್ಲಿ ಪ್ರದರ್ಶಿಸಲಾಗಿದೆ.

3 ಲಕ್ಷ ಜನರಿಂದ ವೀಕ್ಷಣೆ: ಶುಕ್ರವಾರ ಹೊರತುಪಡಿಸಿ ವಾರದ ಉಳಿದ ದಿನಗಳಲ್ಲಿ ನಿತ್ಯ ಮುಂಜಾನೆ 9 ರಿಂದ ಸಂಜೆ 5 ಗಂಟೆವರೆಗೂ ಮ್ಯೂಸಿಯಂ ವೀಕ್ಷಣೆಗೆ ಲಭ್ಯ. ಪ್ರಸ್ತುತ ನಿತ್ಯ 800–900 ಪ್ರವಾಸಿಗರು ಭೇಟಿ ನೀಡುತ್ತಾರೆ. ವರ್ಷಕ್ಕೆ 3 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಮ್ಯೂಸಿಯಂ ವೀಕ್ಷಿಸುತ್ತಾರೆ. ವಾರ್ಷಿಕ ₹16 ಲಕ್ಷ ಆದಾಯ ಬರುತ್ತದೆ. ಮಕ್ಕಳಿಗೆ ಉಚಿತ ಪ್ರವೇಶವಿದೆ ಎಂದು ಭಾರತೀಯ ಪ್ರಾಚ್ಯವಸ್ತು ಸರ್ವೇಕ್ಷಣಾ ಇಲಾಖೆಯ ಮ್ಯೂಸಿಯಂ ವಿಭಾಗದ ಅಧಿಕಾರಿ ಡಾ.ಎ.ವಿ. ನಾಗನೂರ, ಆರ್‌.ಎಂ. ಕರ್ಜಗಿ ಮಾಹಿತಿ ನೀಡುತ್ತಾರೆ.

**

ಮ್ಯೂಸಿಯಂ ಪ್ರಾರಂಭದ ಹಿಂದಿನ ಕಥೆ

ವಿಜಯಪುರ ಜಿಲ್ಲೆಯ ಪುರಾತನ ಐತಿಹ್ಯ, ವಸ್ತುಗಳ ಅಧ್ಯಯನ ಆರಂಭಿಸಿದ ಇಂಗ್ಲೆಂಡ್‌ನ ಡಾ.ಜೆಮ್ಸ್‌ ಬರ್ಗೇಸ್‌, ಹೆನ್ರಿ ಕಸಿನ್ಸ್ ಇಲ್ಲಿನ ಆನಂದ ಮಹಲ್ ಹಿಂಭಾಗದ ಚಿಕ್ಕ ಕಟ್ಟಡದಲ್ಲಿ, ಆ ವಸ್ತುಗಳನ್ನು ಸಂಗ್ರಹಿಸಲಾರಂಭಿಸಿದರು. 1892ರಿಂದ ಆರಂಭವಾದ ಈ ವಸ್ತು ಸಂಗ್ರಹ ಕೆಲಸ, ಕೊನೆಗೆ ಪ್ರಾಚ್ಯ ವಸ್ತು ಸಂಗ್ರಹಾಲಯವಾಯಿತು (ಮ್ಯೂಸಿಯಂ). ಮ್ಯೂಸಿಯಂ ಚಾಲನೆಗೂ ಕಾರಣವಾಯಿತು. 

ಈ ಅವಧಿಯಲ್ಲೇ ಬ್ರಿಟಿಷರು ಆಗಿನ ಕಲಾದಗಿ ಜಿಲ್ಲಾ ಕೇಂದ್ರವನ್ನು ವಿಜಯಪುರಕ್ಕೆ ಸ್ಥಳಾಂತರಿಸಿದರು. ಸರ್ಕಾರಿ ಕಚೇರಿಗಳ ಬಳಕೆಗಾಗಿ ಆದಿಲ್‌ಶಾಹಿ ಅರಸರು ತಮ್ಮ ಆಡಳಿತದಲ್ಲಿ ನಿರ್ಮಿಸಿದ್ದ ಐತಿಹಾಸಿಕ ಸ್ಮಾರಕಗಳನ್ನು ಜೀರ್ಣೋದ್ಧಾರ ಮಾಡಲು ಮತ್ತು ಅವುಗಳನ್ನು ಬಳಸಲು ಮುಂದಾದರು. ಈ ಸಂದರ್ಭದಲ್ಲಿ ದೊರೆತ ಅಪರೂಪದ ವಸ್ತುಗಳ ಸಂಗ್ರಹವೇ ಈ ವಸ್ತು ಸಂಗ್ರಹಾಲಯ. ಆದರೆ, ಜಾಗದ ಕೊರತೆ ಕಾಡಿದ್ದರಿಂದ, ಮೊಹಮ್ಮದ್ ಆದಿಲ್‌ಶಾಹಿ ಗೋಳಗುಮ್ಮಟದ ಮುಂಭಾಗ ಕ್ರಿ.ಶ.1631ರಲ್ಲೇ ನಿರ್ಮಿಸಿದ್ದ ನಖ್ಖರ್ ಖಾನ/ನಗರ ಖಾನ ಕಟ್ಟಡಕ್ಕೆ ಅವಶೇಷಗಳನ್ನು 1912ರಲ್ಲಿ ಸ್ಥಳಾಂತರಿಸಿದರು.

**

ಮ್ಯೂಸಿಯಂ ನಡೆದು ಬಂದ ಹಾದಿ

1892ರಲ್ಲಿ ಬ್ರಿಟಿಷರಿಂದ ಆರಂಭ
1912ರಲ್ಲಿ ವಿಧ್ಯುಕ್ತ ಚಾಲನೆ
1967ರಲ್ಲಿ ಎಎಸ್‌ಐ ಸುಪರ್ದಿಗೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !