ಮಹಾರಾಷ್ಟ್ರ ಜತೆ ಒಪ್ಪಂದ; ಬ್ಯಾರೇಜ್‌ ಎತ್ತರ ಹೆಚ್ಚಳ: ಗೃಹ ಸಚಿವ ಎಂ.ಬಿ.ಪಾಟೀಲ

ಮಂಗಳವಾರ, ಮಾರ್ಚ್ 19, 2019
26 °C
ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಜತೆ ಚರ್ಚೆ

ಮಹಾರಾಷ್ಟ್ರ ಜತೆ ಒಪ್ಪಂದ; ಬ್ಯಾರೇಜ್‌ ಎತ್ತರ ಹೆಚ್ಚಳ: ಗೃಹ ಸಚಿವ ಎಂ.ಬಿ.ಪಾಟೀಲ

Published:
Updated:

ವಿಜಯಪುರ: ‘ನೆರೆಯ ಮಹಾರಾಷ್ಟ್ರದ ಜತೆ ನೀರಿನ ಒಪ್ಪಂದ ಮಾಡಿಕೊಳ್ಳುವಂತೆ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಜತೆ ಚರ್ಚಿಸುವೆ’ ಎಂದು ಗೃಹ ಸಚಿವ ಎಂ.ಬಿ.ಪಾಟೀಲ ಹೇಳಿದರು.

‘ಕೊಯ್ನಾ ಜಲಾಶಯದಿಂದ ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರಿಗಾಗಿ 2 ಟಿಎಂಸಿ ಅಡಿ, ಕೆರೆ ತುಂಬಿಸುವ ಯೋಜನೆಗಾಗಿ 1 ಟಿಎಂಸಿ ಅಡಿ ನೀರನ್ನು ಮಹಾರಾಷ್ಟ್ರದಿಂದ ಪಡೆಯುವುದು. ಮಳೆಗಾಲದ ಅವಧಿಯಲ್ಲಿ ನಾವು ಜತ್ತ ಭಾಗಕ್ಕೆ ಮೂರು ಟಿಎಂಸಿ ಅಡಿ ನೀರನ್ನು ಪೂರೈಸುವ ಒಪ್ಪಂದದ ಪ್ರಸ್ತಾಪವೊಂದನ್ನು ಜಲಸಂಪನ್ಮೂಲ ಸಚಿವರ ಬಳಿ ಹೇಳುವೆ’ ಎಂದು ಶುಕ್ರವಾರ ಮಾಧ್ಯಮದವರಿಗೆ ತಿಳಿಸಿದರು.

ತುಬಚಿ–ಬಬಲೇಶ್ವರ ಏತ ನೀರಾವರಿ ಯೋಜನೆಯ ವಿವಿಧ ಹಂತದ ಕಾಮಗಾರಿ ಪರಿಶೀಲಿಸಿದ ಬಳಿಕ ಪತ್ರಕರ್ತರ ಜತೆ ಮಾತನಾಡಿದ ಗೃಹ ಸಚಿವರು, ‘ಇದರಿಂದ ಪ್ರತಿ ಬೇಸಿಗೆಯಲ್ಲೂ ಮೂರು ಜಿಲ್ಲೆಗಳ ಜನರು ಕುಡಿಯುವ ನೀರಿಗಾಗಿ ಬವಣೆ ಪಡುವುದು ತಪ್ಪಲಿದೆ. ಸರ್ಕಾರವೂ ಸಹ ಪ್ರತಿ ವರ್ಷ ಮಹಾರಾಷ್ಟ್ರ ಸರ್ಕಾರದ ಮುಂದೆ ಬೇಡಿಕೆ ಸಲ್ಲಿಸುವುದು ಸ್ಥಗಿತಗೊಳ್ಳಲಿದೆ’ ಎಂದು ಹೇಳಿದರು.

‘ಕೊರ್ತಿ–ಕೊಲ್ಹಾರ, ಗಲಗಲಿ ಬ್ಯಾರೇಜ್‌ ಎತ್ತರವನ್ನು ತಲಾ 3 ಮೀಟರ್ ಎತ್ತರಕ್ಕೆ ಹೆಚ್ಚಿಸುವ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಮುಗಿದಿದೆ. ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ. ಈ ಎರಡೂ ಬ್ಯಾರೇಜ್‌ನ ಎತ್ತರ ಹೆಚ್ಚಳಗೊಂಡರೆ, ಕನಿಷ್ಠ ಆರು ಟಿಎಂಸಿ ಅಡಿ ನೀರು ಲಭ್ಯವಾಗಲಿದೆ. ವಿಜಯಪುರ, ಬಾಗಲಕೋಟೆ ಜಿಲ್ಲೆಯ ವಿವಿಧ ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆಯ ಹಾಹಾಕಾರ ತಪ್ಪಲಿದೆ’ ಎಂದು ಮಾಹಿತಿ ನೀಡಿದರು.

ಚೌಕಿದಾರ್ ಎಲ್ಲಿ ?
‘ರಫೇಲ್ ಯುದ್ಧ ವಿಮಾನ ಖರೀದಿಗೆ ಸಂಬಂಧಿಸಿದ ಕಡತಗಳೇ ಕಣ್ಮರೆಯಾಗಿವೆ ಎಂಬುದನ್ನು ಕೇಂದ್ರ ಸರ್ಕಾರವೇ ಒಪ್ಪಿಕೊಂಡು, ಸುಪ್ರೀಂಕೋರ್ಟ್‌ಗೆ ತಿಳಿಸಿದೆ. ಮಹತ್ವದ ಸೂಕ್ಷ್ಮ ಕಡತಗಳೇ ಕಳವಾಗಿವೆ ಎಂದರೇ ಚೌಕಿದಾರ್‌ ಏನು ಮಾಡುತ್ತಿದ್ದಾರೆ’ ಎಂದು ಎಂ.ಬಿ.ಪಾಟೀಲ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ರಾಮಮಂದಿರದ ವಿಷಯದಲ್ಲಿ ಪಕ್ಷದ ತೀರ್ಮಾನವೇ ಅಂತಿಮ. ಹಿರಿಯರು ಈ ಕುರಿತು ನಿರ್ಧರಿಸಲಿದ್ದಾರೆ’ ಎಂದು ತಿಳಿಸಿದರು.

11ಕ್ಕೆ ಸ್ಕ್ರೀನಿಂಗ್ ಕಮಿಟಿ ಸಭೆ: ‘ಸೀಟು ಹಂಚಿಕೆ ಕುರಿತಂತೆ ಚುನಾವಣಾ ಸಮಿತಿ ಸಭೆ ನಡೆದಿವೆ. ನಾವು ಗೆದ್ದಿರುವ 10, ಜೆಡಿಎಸ್‌ನ 2, ಶಿವಮೊಗ್ಗ ಹೊರತುಪಡಿಸಿ, ಉಳಿದ ಕ್ಷೇತ್ರಗಳಲ್ಲಿ ಅಭ್ಯರ್ಥಿ ಯಾರಾಗಬೇಕು ಎಂಬ ಚರ್ಚೆ ನಡೆದಿದೆ. ಮಾರ್ಚ್‌ 11ಕ್ಕೆ ಸ್ಕ್ರೀನಿಂಗ್ ಕಮಿಟಿ ಸಭೆ ನಡೆಯಲಿದೆ. 12ರ ವೇಳಗೆ ಚಿತ್ರಣ ಸ್ಪಷ್ಟವಾಗಲಿದೆ’ ಎಂದು ಗೃಹ ಸಚಿವರು ತಿಳಿಸಿದರು.

‘ಸಮ್ಮಿಶ್ರ ಸರ್ಕಾರದ ಪತನಗೊಳ್ಳಲಿದೆ ಎಂದು ಆರಂಭದಿಂದಲೂ ಬಿಜೆಪಿಯವರು ಅದನ್ನೇ ಹೇಳುತ್ತಿದ್ದಾರೆ. ನಾವು ಸುಭದ್ರ ಎನ್ನುತ್ತೇವೆ. ಸರ್ಕಾರಕ್ಕೆ ಏನು ಆಗಲ್ಲ’ ಎಂದು ಪಾಟೀಲ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !