ಸೋಮವಾರ, ಡಿಸೆಂಬರ್ 9, 2019
16 °C

ಕೃಷಿ ವಲಯಕ್ಕೆ ಕೋಳಿ ಉದ್ಯಮ: ಸಚಿವ ವೆಂಕಟರಾವ್ ನಾಡಗೌಡ ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೆಂಗಳೂರು: 'ಕೋಳಿ ಸಾಕಾಣಿಕೆಯನ್ನು ಉದ್ಯಮ ವಲಯದಿಂದ ಬೇರ್ಪಡಿಸಿ ಕೃಷಿ ವಲಯಕ್ಕೆ ಸೇರಿಸಲು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರೊಂದಿಗೆ ಸಭೆ ನಡೆಸಿ ಚರ್ಚಿಸುತ್ತೇನೆ' ಎಂದು ಪಶುಸಂಗೋಪನೆ ಮತ್ತು ಮೀನುಗಾರಿಕೆ ಸಚಿವ ವೆಂಕಟರಾವ್ ನಾಡಗೌಡ ಭರವಸೆ ನೀಡಿದರು.

ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳ ನಿಗಮ ನಗರದ ಕರ್ನಾಟಕ ಪಶುವೈದ್ಯಕೀಯ ಪರಿಷತ್‌ನಲ್ಲಿ ಆಯೋಜಿಸಿದ್ದ ವಿಶ್ವ ಮೊಟ್ಟೆ ದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಕೋಳಿ ಸಾಕಾಣಿಕೆಯನ್ನು ಕೃಷಿಗೆ ಸೇರಿಸುವುದರಿಂದ ಶೂನ್ಯ ಬಡ್ಡಿದರಲ್ಲಿ ಸಾಲ ದೊರೆಯಲಿದೆ. ಅದು ಸದ್ಯ ಕೈಗಾರಿಕಾ ವಲಯ ಆಗಿರುವುದರಿಂದ ಬ್ಯಾಂಕ್‌ಗಳು ಶೇ 17ರಷ್ಟು ಬಡ್ಡಿದರದಲ್ಲಿ ಸಾಲ ನೀಡುತ್ತಿವೆ.‌ ಇದರಿಂದ ರೈತರಿಗೆ ಹೊರೆಯಾಗುತ್ತಿದೆ' ಎಂದರು.

'ಬೆಂಗಳೂರು ಭಾಗದವರಿಗೆ‌ ಅಲ್ಲದೆ, ಉತ್ತರ ಕರ್ನಾಟಕ, ಹೈದರಾಬಾದ್‌–ಕರ್ನಾಟಕ ಭಾಗದ ಜನರಿಗೂ ಕೋಳಿ, ಕುರಿ, ಹೈನುಗಾರಿಕೆ, ಮೀನು ಸಾಕಾಣಿಕೆ ಕುರಿತು ತರಬೇತಿ ನೀಡಬೇಕು’ ಎಂದು ಕುಕ್ಕುಟ ಮಂಡಳಿಗೆ ಸೂಚಿಸಿದರು.

ಕೋಳಿ ಉದ್ಯಮ ಪಶುವೈದ್ಯ ಸಂಸ್ಥೆ ಅಧ್ಯಕ್ಷ ಜಿ.ದೇವೇಗೌಡ, ‘ಮೊಟ್ಟೆಯಲ್ಲಿ ಹೆಚ್ಚು ಪೌಷ್ಟಿಕಾಂಶವಿದೆ. ಆದ್ದರಿಂದ ಅಂಗನವಾಡಿ ಮಕ್ಕಳಿಗೆ, ಗರ್ಭಿಣಿಯರಿಗೆ, ಬಾಣಂತಿಯರಿಗೆ ವಿತರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಮೊಟ್ಟೆ ತಿಂದರೆ ಅಡ್ಡ ಪರಿಣಾಮಗಳು ಆಗುವುದಿಲ್ಲ ಎಂಬುದನ್ನು ಜನರಿಗೆ ಅರಿವು ಮೂಡಿಸಬೇಕು’ ಎಂದು ಹೇಳಿದರು.

1996ರಿಂದ ಪ್ರತಿ ಅಕ್ಟೋಬರ್‌ ಎರಡನೇ ವಾರದ ಶುಕ್ರವಾರದಂದು ವಿಶ್ವದಾದ್ಯಂತ ಮೊಟ್ಟೆಯ ದಿನವನ್ನು ಆಚರಿಸಲಾಗುತ್ತದೆ.‌

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು