ಕೂಲ್‌ ಕೂಲ್ ಮಹಾಬಲೇಶ್ವರ

ಮಂಗಳವಾರ, ಏಪ್ರಿಲ್ 23, 2019
33 °C

ಕೂಲ್‌ ಕೂಲ್ ಮಹಾಬಲೇಶ್ವರ

Published:
Updated:
Prajavani

ಏಪ್ರಿಲ್‌ ಮಧ್ಯ ಭಾಗ. ಪುಣೆ ವಿಮಾನ ನಿಲ್ದಾಣದಲ್ಲಿ ಇಳಿದಾಗ ಹಣೆಯಿಂದ ಜಿನುಗುತ್ತಿದ್ದ ಬೆವರು ಕಿರಿಕಿರಿ ಮೂಡಿಸಿತ್ತು. ಟಿಳಕ್‌ ರಸ್ತೆಯಲ್ಲಿರುವ ರೆಸ್ಟೋರೆಂಟ್‌ನಲ್ಲಿ ಮಹಾರಾಷ್ಟ್ರಿಯನ್‌ ಥಾಲಿ ಊಟ ಸವಿದ ನಂತರ ಸೆಕೆಯ ಜೊತೆ ಮಂಪರೂ ಜೊತೆಗೂಡತೊಡಗಿತ್ತು. ಆದರೆ ಸುವ್‌ನಲ್ಲಿ ಮಹಾಬಲೇಶ್ವರ ರಸ್ತೆಯತ್ತ ತಿರುಗಿದಾಗ ಗಗನ ಚುಂಬಿಸುವ ಪಶ್ಚಿಮಘಟ್ಟದ ಬೆಟ್ಟಗಳ ಶ್ರೇಣಿ, ಭಯ ಉಕ್ಕಿಸುವ ಕಣಿವೆಗಳ ದೃಶ್ಯ ನಿದ್ರೆಯನ್ನು ಹಿಂದಿಕ್ಕಿ ಲಹರಿಯಲ್ಲಿ ತೇಲಿಸತೊಡಗಿತ್ತು.

ಬ್ರಿಟಿಷರ ಕಾಲದಲ್ಲಿ ಬಾಂಬೆ ಪ್ರೆಸಿಡೆನ್ಸಿಗೆ ಬೇಸಿಗೆ ರಾಜಧಾನಿಯಾಗಿದ್ದ ಮಹಾಬಲೇಶ್ವರ ಕೇವಲ ಗಿರಿಧಾಮವಾಗಿ ಮಾತ್ರವಲ್ಲ, ಎತ್ತರದ ಶಿಖರಗಳು, ಸೌಂದರ್ಯವನ್ನೇ ಹೊದ್ದುಕೊಂಡಂತಿರುವ ಕಣಿವೆಗಳು, ಅಪರೂಪದ ಗಿಡ– ಮರಗಳಿಂದ ಕೂಡಿದ ದಟ್ಟ ಅರಣ್ಯ, ತಾಜಾ ಹವೆ, ಎಲ್ಲಕ್ಕಿಂತ ಮಿಗಿಲಾಗಿ ಎಂತಹ ಕಡು ಬೇಸಿಗೆಯಲ್ಲೂ ಮೈಗೆ ಕಚಗುಳಿಯಿಡುವ ಶೀತಲ ಹವೆಯಿಂದಾಗಿ ನೀವು ಫಿದಾ ಆಗಿಬಿಡುತ್ತೀರಾ.

ಪುಣೆಯಿಂದ 120 ಕಿ.ಮೀ. ದೂರದಲ್ಲಿರುವ ಈ ಗಿರಿಧಾಮದಲ್ಲಿ ಭೇಟಿ ನೀಡಬಹುದಾದ ಜಾಗಗಳು ಬಹಳ. ಆದರೆ ನಗರದ ಗದ್ದಲದಿಂದ ದೂರವಾದ ಶಾಂತ ವಾತಾವರಣ ನಿಮ್ಮ ಮನಸ್ಸನ್ನು ಸೆಳೆದುಬಿಡುತ್ತದೆ. ಅಲ್ಲಿಗೆ ಭೇಟಿ ನೀಡುವ ಪ್ರತಿಯೊಬ್ಬ ಪ್ರವಾಸಿಗನ ಆಕರ್ಷಣೆ ಎತ್ತರದಲ್ಲಿ ನಿಂತು ಭೂರಮೆಯ ಚೆಲುವನ್ನು ವೀಕ್ಷಿಸಬಹುದಾದ ಅರ್ಥರ್‌ ಸೀಟ್‌. ಸದಾ ಕಾಲ ಹಸಿರಿನಿಂದ ಕೂಡಿರುವ ಪಶ್ಚಿಮ ಘಟ್ಟದ ಬೆಟ್ಟಗಳ ಸಾಲು ಕಣ್ಣಳತೆಗೂ ನಿಲುಕದ್ದು. ಕ್ಯಾಮೆರಾದ ವ್ಯೂ ಫೈಂಡರ್‌ನಲ್ಲಿ ಪಚ್ಚೆ ರಾಶಿಯನ್ನು ಚೆಲ್ಲಿದಂತೆ ಕಾಣುವ ಆ ಸೌಂದರ್ಯದ ಜೊತೆ ಬೀಸುವ ಕುಳಿರ್ಗಾಳಿ ಮೆಲ್ಲನೆ ಮೈ ನಡುಗಿಸುತ್ತದೆ.

ವಿಲ್ಸನ್‌ ಪಾಯಿಂಟ್‌, ಪುರಾತನ ಮಹಾಬಲೇಶ್ವರ ದೇವಾಲಯ, ಪ್ರತಾಪಗಡ ಕೋಟೆ, ಬೇಸಿಗೆಯಲ್ಲೂ ನಿಮಗೆ ಕಾಣಿಸಿಕೊಳ್ಳುವ, ಕಣಿವೆಯೊಳಗೆ ಇಳಿದು ಮರೆಯಾಗುವ ಜಲಪಾತ ಸುಂದರಿ ಲಿಂಗಮಾಲಾ, ಮಧುಚಂದ್ರಕ್ಕೆಂದು ಬಂದ ಜೋಡಿಯಾದರೆ ಬೋಟ್‌ನಲ್ಲಿ ತೇಲುತ್ತ ಪಿಸುಗುಡಲು ವೆನ್ನಾ ಸರೋವರ, ಐದು ನದಿಗಳ ಸಂಗಮದಿಂದ ಪಾವನಗೊಂಡ ಪಂಚಗಂಗಾ ದೇಗುಲ... ಎಲ್ಲವನ್ನೂ ಕಾರಿನಲ್ಲಿ ಕುಳಿತು ಸುತ್ತಲು ಎರಡು ದಿನಗಳು ಸಾಕು; ಆದರೆ ನಗರದ ದೂಳು, ಹೊಗೆ, ಮಾಲಿನ್ಯದ ಸೋಂಕಿರದ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಎರಡು ಕಂಗಳು ಸಾಲವು!

ಪುರಾತನ ಪವಿತ್ರ ಸ್ಥಳಗಳ ಸೌಂದರ್ಯ, ಆಧುನಿಕ ಸ್ಟ್ರಾಬೆರಿ ತೋಟಗಳ ಆಕರ್ಷಣೆಗಳ ಹದವಾದ ಮಿಶ್ರಣ ಮಹಾಬಲೇಶ್ವರ. ಹೌದು, ನೀವು ಇಲ್ಲಿಗೆ ಭೇಟಿ ಕೊಟ್ಟಾಗ ಸುತ್ತುವಾಗಲೆಲ್ಲ ಕಾಣುವುದು ಸ್ಟ್ರಾಬೆರಿ ತೋಟಗಳು; ಕಾಡುವುದು ಆ ಕೆಂಪು ಹಣ್ಣುಗಳ ಗೊಂಚಲು. ಪಚ್ಚೆ ಹಸಿರಿನ ಎಲೆಗಳ ಪೊದೆಯಂತ ಗಿಡಗಳಲ್ಲಿ ಅವಿತು ಕುಳಿತ ಕಡುಗೆಂಪು ಹಣ್ಣುಗಳ ತಾಜಾ ಸವಿಯನ್ನು ಉಣಬಡಿಸುವ ಹಲವು ತೋಟಗಳು ಅಲ್ಲಿವೆ. ಅಂದರೆ ಪ್ರವಾಸಿಗರು ಹಣ್ಣಾಗುವ ಕಾಲದಲ್ಲಿ ಹೋದರೆ ತಾವೇ ಹಣ್ಣುಗಳನ್ನು ಕಿತ್ತು ಸವಿಯಲು ಹಲವು ತೋಟಗಳ ಮಾಲೀಕರು ಅವಕಾಶ ಮಾಡಿಕೊಟ್ಟಿದ್ದಾರೆ. ಜೊತೆಗೆ ತಾಜಾ ಸ್ಟ್ರಾಬೆರಿ ಹಣ್ಣಿನಿಂದ ಮಾಡಿದ ಪಾನೀಯ, ಐಸ್‌ಕ್ರೀಂ ಮೊದಲಾದ ಬಗೆಬಗೆಯ ಸವಿಯನ್ನು ಅನುಭವಿಸಬಹುದು. 20 ಕಿ.ಮೀ. ಅಂತರದಲ್ಲಿರುವ ಪಂಚಗಣಿಗೆ ಮಾರ್ಚ್‌ನಲ್ಲಿ ಹೋದರೆ ಸ್ಟ್ರಾಬೆರಿ ಉತ್ಸವದಲ್ಲಿ ಭಾಗವಹಿಸಬಹುದು. ಸ್ಟ್ರಾಬೆರಿಯಿಂದಲೇ ಮಾಡಿದ ತೇರನ್ನು ಎಳೆಯುತ್ತ ಹಣ್ಣುಗಳನ್ನು ಬೀರುತ್ತ ನಗೆ ಬೀರುವ ಸುಂದರಿಯರು, ನರ್ತಿಸುವ ಪ್ರವಾಸಿಗರು..

ಪಂಚಗಣಿಯಲ್ಲಿ ತೇಲುವ ಮೋಡಗಳನ್ನು ಮುಖಕ್ಕೆ ಬಡಿಸಿಕೊಳ್ಳುತ್ತ ಇಲ್ಲಿ ಓಡಾಡುವುದೇ ಖುಷಿ. ಇಲ್ಲಿರುವ ಟೇಬಲ್ ಲ್ಯಾಂಡ್‌ ಏಷ್ಯಾದಲ್ಲೇ ಎರಡನೇ ಅತಿ ಉದ್ದದ ಬೆಟ್ಟಗಳ ಸಾಲು ಎಂಬ ಹೆಸರು ಪಡೆದಿದೆ. ಪಂಚಗಣಿಯಲ್ಲಿರುವ ಶೇರ್‌ಬಾಗ್‌ ಕೆಲವು ಅಪರೂಪದ ಪ್ರಾಣಿ– ಪಕ್ಷಿಗಳ ಸಂಕುಲದಿಂದ ಸೆಳೆದರೆ, ಸಮೀಪದ ವಾಯಿನಲ್ಲಿ ಗಣಪತಿ ದೇಗುಲ ಪ್ರಸಿದ್ಧ. ಜೊತೆಗೆ ಅದ್ಭುತ ಚಾರಣದ ಜಾಗಗಳು ಇಲ್ಲಿವೆ.

ಹೋಗುವುದು ಹೇಗೆ?

ಬೆಂಗಳೂರಿನಿಂದ ಪುಣೆಗೆ ಸಾಕಷ್ಟು ರೈಲುಗಳಿವೆ. ಬೆಂಗಳೂರಿನಿಂದ ವಿಮಾನದಲ್ಲೂ ಪುಣೆ ತಲುಪಬಹುದು. ಬಸ್‌ ಅಥವಾ ಕಾರಿನಲ್ಲಿ ಹೋಗುವವರಿಗೆ ಬಹಳ ದೂರವೆನಿಸುವುದಿಲ್ಲ.

ಡಿಸೆಂಬರ್‌ (10 ಡಿ.ಸೆ.)ನಿಂದ ಮೇ ತಿಂಗಳವರೆಗೆ ಉತ್ತಮ ಹವಾಮಾನವಿರುತ್ತದೆ. ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿಯುತ್ತದೆ.

ಊಟ– ಉಪಹಾರ ವಸತಿಗೆ ಎಲ್ಲ ವರ್ಗದವರಿಗೂ ಕೈಗೆಟುಕುವಂತಹ ಉತ್ತಮ ಹೋಟೆಲ್‌ಗಳಿವೆ. ಹೋಂಸ್ಟೇಗಳೂ ಲಭ್ಯ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !