ಅವಿರೋಧ ಆಯ್ಕೆಗೆ ಸಹಕರಿಸಿ; ಪಾಟೀಲ ಮನವಿ

7
ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಗೆ ಚುನಾವಣೆ

ಅವಿರೋಧ ಆಯ್ಕೆಗೆ ಸಹಕರಿಸಿ; ಪಾಟೀಲ ಮನವಿ

Published:
Updated:

ವಿಜಯಪುರ: ‘ಸಹಕಾರ ಕ್ಷೇತ್ರದಲ್ಲಿ ಅಂಬೆಗಾಲಿಡುತ್ತಿರುವ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಗೆ ಚುನಾವಣೆ ಪ್ರಕ್ರಿಯೆ ನಡೆದಿದ್ದು, ಅವಿರೋಧ ಆಯ್ಕೆಗೆ ಎಲ್ಲರೂ ಸಹಕರಿಸಬೇಕು’ ಎಂದು ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಅಧ್ಯಕ್ಷ, ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಮನವಿ ಮಾಡಿದರು.

‘ಕಾರ್ಖಾನೆಯ ಮೇಲೆ ₹ 210 ಕೋಟಿ ಋಣಭಾರವಿದೆ. ತನ್ನ ಸ್ವಂತ ಶಕ್ತಿ ಮೇಲೆ ನಿಲ್ಲುವ ತನಕ ಚುನಾವಣೆ ಪ್ರಕ್ರಿಯೆ ಬೇಡ. ಪ್ರಜಾಪ್ರಭುತ್ವದ ಆಶಯಕ್ಕೆ ತಕ್ಕಂತೆ ಎಲ್ಲರ ಸಹಕಾರದಿಂದ ನಿರ್ದೇಶಕರ ಅವಿರೋಧ ಆಯ್ಕೆ ನಡೆಸೋಣ’ ಎಂದು ಭಾನುವಾರ ಸಂಜೆ ನಗರದಲ್ಲಿ ನಡೆದ ತುರ್ತು ಪತ್ರಿಕಾಗೋಷ್ಠಿಯಲ್ಲಿ ಮತದಾರರಿಗೆ ಬಿನ್ನವಿಸಿಕೊಂಡರು.

‘ಇಂಡಿ, ನಾಗಠಾಣ, ಸಿಂದಗಿ ಭಾಗದ ಶಾಸಕರು, ಸಚಿವರು, ಸಂಸದರು ಸೇರಿದಂತೆ ಈ ಭಾಗದ ಎಲ್ಲ ಮುಖಂಡರಲ್ಲಿ ಮನವಿ ಮಾಡಿಕೊಳ್ಳುವೆ. ಈ ಹಿಂದೆ ಪ್ರತಿಷ್ಠೆಗಾಗಿಯೇ ದಶಕಗಳ ಅವಧಿ ಕಾರ್ಖಾನೆ ಕಾರ್ಯಾರಂಭಿಸಲು ಸಾಧ್ಯವಾಗಿರಲಿಲ್ಲ.

ಈಗಲೂ ಚುನಾವಣೆ ನೆಪದಲ್ಲಿ ಮತ್ತೆ ಪ್ರತಿಷ್ಠೆ ಕಾರ್ಖಾನೆ ಆವರಣಕ್ಕೆ ಒಳ ನುಸುಳುವುದು ಬೇಡ. ಎಲ್ಲರ ಒಪ್ಪಿಗೆಯ ಮೇರೆಗೆ ಅವಿರೋಧ ಆಯ್ಕೆ ಪ್ರಕ್ರಿಯೆ ನಡೆಸೋಣ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗಿಯಾಗೋಣ’ ಎಂದು ಯಶವಂತರಾಯಗೌಡ ಪಾಟೀಲ ಮನವಿ ಮಾಡಿಕೊಂಡರು.

‘ಯಾವುದೇ ಪಕ್ಷದ ಚಿಹ್ನೆ ಚುನಾವಣೆಯಲ್ಲಿ ಬಳಕೆಯಾಗಲ್ಲ. ಪಕ್ಷಾತೀತ, ಜಾತ್ಯತೀತವಾಗಿ ಸಹಕಾರ ತತ್ವದಡಿ ನೂತನ ಆಡಳಿತ ಮಂಡಳಿ ಆಯ್ಕೆಯಾಗುವಂತೆ ಎಲ್ಲರೂ ನೋಡಿಕೊಳ್ಳೋಣ. ಈ ನಿರ್ದೇಶಕರ ಆಡಳಿತ ಮಂಡಳಿ ಮುಂದಿನ ಐದು ವರ್ಷದ ಅವಧಿಯಲ್ಲಿ ಕಾರ್ಖಾನೆಯ ಸಶಕ್ತಿಕರಣದತ್ತ ಸಾಗಲಿ. ಕಾರ್ಖಾನೆ ಋಣಮುಕ್ತಗೊಳ್ಳಲಿ. ಎಲ್ಲರೂ ಪರಸ್ಪರ ವಿಶ್ವಾಸದಿಂದ ಉತ್ತಮ ಆಡಳಿತ ಮಂಡಳಿಯೊಂದನ್ನು ಅಸ್ತಿತ್ವಕ್ಕೆ ತರೋಣ’ ಎಂದು ಕಾರ್ಖಾನೆಯ ಷೇರುದಾರರು, ರಾಜಕೀಯ ಮುಖಂಡರಲ್ಲಿ ಪತ್ರಿಕಾಗೋಷ್ಠಿ ಮೂಲಕ ಕೇಳಿಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !