ತಿರುಮಲ ಛತ್ರ ಪರಿಶೀಲನೆಗೆ ಪರಿಷತ್‌ ಸದಸ್ಯರ ನಿಯೋಗ

7

ತಿರುಮಲ ಛತ್ರ ಪರಿಶೀಲನೆಗೆ ಪರಿಷತ್‌ ಸದಸ್ಯರ ನಿಯೋಗ

Published:
Updated:

ಬೆಂಗಳೂರು: ತಿರುಪತಿ ತಿರುಮಲ ದೇವಸ್ಥಾನಕ್ಕೆ ರಾಜ್ಯದಿಂದ ಭೇಟಿ ನೀಡುವ ಭಕ್ತರ ಅನುಕೂಲಕ್ಕಾಗಿ ನಿರ್ಮಿಸಿರುವ ಮುಜರಾಯಿ ಇಲಾಖೆ ಛತ್ರಗಳ ಪರಿಸ್ಥಿತಿಯನ್ನು ಪರಿಶೀಲಿಸಲು ವಿಧಾನ ಪರಿಷತ್‌ ಸದಸ್ಯರ ನಿಯೋಗವನ್ನು ಕರೆದೊಯ್ಯುವುದಾಗಿ ಮುಜರಾಯಿ ಸಚಿವ ಪಿ.ಟಿ.ಪರಮೇಶ್ವರ ತಿಳಿಸಿದರು.

ವಿಧಾನ ಪರಿಷತ್ತಿನಲ್ಲಿ ಬುಧವಾರ ಈ ಬಗ್ಗೆ ಗಮನ ಸೆಳೆದ ಕಾಂಗ್ರೆಸ್‌ನ ಪಿ.ಆರ್‌.ರಮೇಶ್, ‘ಈ ಛತ್ರಗಳ ಪರಿಸ್ಥಿತಿ ಶೋಚನೀಯವಾಗಿದೆ. ಸ್ವಚ್ಛತೆಯನ್ನೂ ಕಾಪಾಡುತ್ತಿಲ್ಲ’ ಎಂದು ದೂರಿದರು.

‘ಅಲ್ಲಿ ಹೊಸ ಕಟ್ಟಡ ನಿರ್ಮಿಸಲು ನ್ಯಾಯಾಲಯದಲ್ಲಿರುವ ವ್ಯಾಜ್ಯವೊಂದು ಅಡ್ಡಿಯಾಗಿದೆ. ಛತ್ರದ 60 ಕೊಠಡಿಗಳನ್ನು ನವೀಕರಿಸಿ, 40 ಕೊಠಡಿಗಳಲ್ಲಿ ಹವಾನಿಯಂತ್ರಣ ವ್ಯವಸ್ಥೆ ಅಳವಡಿಸಿದ್ದೇವೆ. ಈ ಕೊಠಡಿಗಳ ಆನ್‌ಲೈನ್‌ ಬುಕಿಂಗ್‌ಗೂ ವ್ಯವಸ್ಥೆ ಕಲ್ಪಿಸಿದ್ದೇವೆ’ ಎಂದು ಸಚಿವರು ತಿಳಿಸಿದರು.

‘ಕೊಠಡಿಗಳ ಮಾಲೀಕತ್ವದಲ್ಲಿ ಪಾಲು ನೀಡುವ ಒಪ್ಪಂದದ ಮೇರೆಗೆ ಖಾಸಗಿಯವರಿಂದ ದೇಣಿಗೆ ಪಡೆದು ಇಲ್ಲಿ ಛತ್ರ ನಿರ್ಮಿಸಲಾಗಿದೆ. ಕಟ್ಟಡ ನಿರ್ಮಿಸಲು ದೇಣಿಗೆ ನೀಡಿದವರಿಗೆ ಅಥವಾ ಅವರು ಸೂಚಿಸುವ ವ್ಯಕ್ತಿಗಳಿಗೆ ಅಲ್ಲಿನ ಕೊಠಡಿಗಳನ್ನು ಉಚಿತವಾಗಿ ನೀಡಲಾಗುತ್ತಿತ್ತು. ಈ ಪರಿಪಾಟವನ್ನು ಕೈಬಿಟ್ಟಿದ್ದು ಸರಿಯಲ್ಲ. ಸರ್ಕಾರಕ್ಕೆ ಈ ಅಧಿಕಾರವೂ ಇಲ್ಲ’ ಎಂದರು.

‘ದಾನಿಗಳ ವಾಸ್ತವ್ಯಕ್ಕೆ ವರ್ಷದಲ್ಲಿ 20 ದಿನಗಳು ಕೊಠಡಿಗಳನ್ನು ನೀಡಲಾಗುತ್ತದೆ. ಅವರಿಂದ ಕೊಠಡಿ ಶುಲ್ಕದ ಶೇ 25ರಷ್ಟು ಮೊತ್ತವನ್ನು ಸ್ವೀಕರಿಸಲಾಗುತ್ತದೆ. ಇದು 10 ವರ್ಷಗಳ ಅವಧಿಗೆ ಸೀಮಿತ ಎಂದು 2010ರಲ್ಲಿ ಇಲಾಖೆ ಆದೇಶ ಹೊರಡಿಸಿದೆ. ರಾಜ್ಯದಿಂದ ಈ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಹೆಚ್ಚಳವಾಗಿದ್ದು, ಅವರ ಬೇಡಿಕೆಯನ್ನು ಪೂರೈಸುವಷ್ಟು ಕೊಠಡಿಗಳು ಅಲ್ಲಿಲ್ಲ. ಹಾಗಾಗಿ ಈ ಕ್ರಮ ಕೈಗೊಳ್ಳಲಾಗಿದೆ’ ಎಂದು ಸಚಿವರು ಸಮರ್ಥಿಸಿಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !