ತಾಂಬಾ ದಸರಾಕ್ಕೆ ಕ್ಷಣಗಣನೆ..!

7
ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರಿಂದ ವಿಧ್ಯುಕ್ತ ಚಾಲನೆ 10ಕ್ಕೆ

ತಾಂಬಾ ದಸರಾಕ್ಕೆ ಕ್ಷಣಗಣನೆ..!

Published:
Updated:
Deccan Herald

ತಾಂಬಾ: ಉತ್ತರ ಕರ್ನಾಟಕದ ದಸರಾ ಎಂದೇ ಈ ಭಾಗದಲ್ಲಿ ಖ್ಯಾತಿಯಾಗಿರುವ ತಾಂಬಾ ನಾಡದೇವಿ ಉತ್ಸವಕ್ಕೆ ಅಪಾರ ಜನಸ್ತೋಮದ ಸಮ್ಮುಖ, ಬುಧವಾರ ಜೆಡಿಎಸ್‌ ಅಗ್ರೇಸರ ಎಚ್‌.ಡಿ.ದೇವೇಗೌಡರಿಂದ ವಿಧ್ಯುಕ್ತ ಚಾಲನೆ ಸಿಗಲಿದೆ.

ಮೆರವಣಿಗೆ ಅದ್ಧೂರಿಯಿಂದ ನಡೆಯಲಿದೆ. ವಿವಿಧ ಭಾಗದ ಕಲಾವಿದರು ಪಾಲ್ಗೊಂಡು ಉತ್ಸವದ ಮೆರುಗು ಹೆಚ್ಚಿಸಲಿದ್ದಾರೆ. ಪೂರ್ಣಕುಂಭ ಹೊತ್ತು ಮೆರವಣಿಗೆಯ ಮುಂಚೂಣಿಯಲ್ಲಿ ಸಾಗುವ ವನಿತೆಯರ ಸಂಭ್ರಮ, ಸಡಗರದ ವೈಯಾರವನ್ನು ಕಣ್ತುಂಬಿಕೊಳ್ಳುವುದೇ ಒಂದು ಆನಂದ. ಆನೆಯೂ ಮೆರವಣಿಗೆಯ ಪ್ರಮುಖ ಆಕರ್ಷಣೆ.

ಜಿಲ್ಲೆಯ ಗ್ರಾಮೀಣ ಪರಿಸರದಲ್ಲಿ ನಡೆಯುವ ವೈಭವದ ದಸರಾ ಉತ್ಸವಗಳಲ್ಲಿ ತಾಂಬಾ ನಾಡದೇವಿ ಉತ್ಸವ ಮೊದಲ ಸ್ಥಾನ ಪಡೆದಿದೆ. 47 ವರ್ಷಗಳಿಂದ ಈ ಉತ್ಸವ ಗ್ರಾಮದಲ್ಲಿ ಆಯೋಜನೆಗೊಳ್ಳುತ್ತಿರುವುದು ವಿಶೇಷ.

ಜಗದಂಬಾ ವಿದ್ಯಾವರ್ಧಕ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ದಿ.ಫೂಲಸಿಂಗ್ ಚವ್ಹಾಣ ಆರಂಭಿಸಿದ ನಾಡದೇವಿ ಉತ್ಸವವನ್ನು ಇದೀಗ ಅವರ ಪುತ್ರರಾದ ಅಂಬಾಭವಾನಿ ಎಜುಕೇಶನ್ ಟ್ರಸ್ಟ್‌ ಅಧ್ಯಕ್ಷ, ನಾಗಠಾಣ ಶಾಸಕ ದೇವಾನಂದ ಚವ್ಹಾಣ, ರವಿಕುಮಾರ ಚವ್ಹಾಣ ಮುಂದುವರೆಸಿಕೊಂಡು ಬಂದಿದ್ದಾರೆ.

ವರ್ಷದಿಂದ ವರ್ಷಕ್ಕೆ ಉತ್ಸವದ ವಿಜೃಂಭಣೆ ಹೆಚ್ಚುತ್ತಿದೆ. ಮೈಸೂರು ದಸರಾ ವೀಕ್ಷಿಸಲು ಸಾಧ್ಯವಾಗದ ಗ್ರಾಮೀಣ ಜನರು ತಾಂಬಾ ನಾಡದೇವಿ ಉತ್ಸವವನ್ನೇ ಕಣ್ತುಂಬಿಕೊಳ್ಳುವುದು ವಿಶೇಷ.

ಕಲಾವಿದರ ಮೆರುಗು:

ಬುಧವಾರ (ಅ 10) ನಡೆಯಲಿರುವ ನಾಡದೇವಿಯ ದಸರಾ ಉದ್ಘಾಟನಾ ಸಮಾರಂಭದ ಮೆರವಣಿಗೆಯಲ್ಲಿ ನಾಡಿನ ವಿವಿಧ ಭಾಗದ ಕಲಾವಿದರು ಭಾಗಿಯಾಗಿ ತಮ್ಮ ಕಲೆ ಪ್ರದರ್ಶಿಸಲಿದ್ದಾರೆ.

10000ಕ್ಕೂ ಹೆಚ್ಚು ಮುತ್ತೈದೆಯರು ಪೂರ್ಣ ಕುಂಭ ಹೊತ್ತು ಮೆರವಣಿಗೆಯ ಮೆರುಗು ಹೆಚ್ಚಿಸಲಿದ್ದಾರೆ. ಇದಕ್ಕೆ ಪೂರಕವಾಗಿ ಆನೆಯ ಗಂಭೀರ ನಡಿಗೆ, ಕುದುರೆ ಮೆರವಣಿಗೆ, ಯಕ್ಷಗಾನ, ಡೊಳ್ಳು ವಾದನ, ಗೊಂಬೆಗಳ ಕುಣಿತ, ಕೀಲು ಕುದುರೆ ಕುಣಿತ, ಬಂಜಾರಾ ಕಲೆಯ ನೃತ್ಯ, ಡೊಳ್ಳು ಕುಣಿತ, ಝಾಂಜ್ ಮೇಳ, ಲೇಜಿಮ್, ಡಂಬಲ್ಸ್... ಸೇರಿದಂತೆ ವಿವಿಧ ಕಲೆ ಪ್ರದರ್ಶಿಸುವ ತಂಡಗಳು ಈಗಾಗಲೇ ಗ್ರಾಮದಲ್ಲಿ ಬೀಡು ಬಿಟ್ಟಿವೆ. ಎರಡು ಕಿ.ಮೀ. ದೂರದ ಮೆರವಣಿಗೆ ಕಣ್ತುಂಬಿಕೊಳ್ಳುವುದೇ ಒಂದು ಆನಂದ.

ನಾಡದೇವಿ ಉತ್ಸವ ಇದೇ 10ರಿಂದ 18ರವರೆಗೆ ನಡೆಯಲಿದೆ. ಒಂಭತ್ತು ದಿನ ನಿರಂತರವಾಗಿ ವಿವಿಧ ಸಾಂಸ್ಕೃತಿಕ, ಮನರಂಜನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಾಡಿನ ಶ್ರೇಷ್ಠ ಕಲಾವಿದರು, ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರು ದಸರಾ ಉತ್ಸವದಲ್ಲಿ ಭಾಗಿಯಾಗಲಿದ್ದಾರೆ. ಕಬಡ್ಡಿ ಪಂದ್ಯಾವಳಿ, ರಂಗೋಲಿ ಸ್ಪರ್ಧೆ, ಚಿತ್ರಕಲೆ, ನೃತ್ಯ ಸ್ಪರ್ಧೆ ಸಹ ನಡೆಯಲಿವೆ. ಈ ಸಂದರ್ಭ ಕೃಷಿ ಮೇಳವೂ ಜರುಗಲಿದೆ.

ತೊಗರಿ ಹೊಲದಲ್ಲಿ ಹೆಲಿಪ್ಯಾಡ್..!

ಎಚ್‌.ಡಿ.ದೇವೇಗೌಡ ಬೆಂಗಳೂರಿನಿಂದ ತಾಂಬಾಕ್ಕೆ ನೇರವಾಗಿ ಹೆಲಿಕಾಫ್ಟರ್‌ನಲ್ಲಿ ಬಂದು ಹೋಗುವ ವ್ಯವಸ್ಥೆ ಕಲ್ಪಿಸಲಾಗಿದೆ. ಇದಕ್ಕಾಗಿ ತಾಂಬಾ ಗ್ರಾಮದಿಂದ ಅರ್ಧ ಕಿ.ಮೀ. ದೂರದ ಹೊಲದಲ್ಲಿ ತಾತ್ಕಾಲಿಕ ಹೆಲಿಪ್ಯಾಡ್‌ ನಿರ್ಮಿಸಲಾಗಿದೆ.

ಶಾಸಕ ದೇವಾನಂದ ಸಂಬಂಧಿಕರ ಹೊಲವನ್ನೇ ಹೆಲಿಪ್ಯಾಡ್‌ಗೆ ಆಯ್ಕೆ ಮಾಡಿಕೊಳ್ಳಲಾಗಿದೆ. ಮಳೆಯಿಲ್ಲದೆ ಬಾಡುತ್ತಿದ್ದ ತೊಗರಿಯನ್ನು ತೆಗೆದು ಹೆಲಿಪ್ಯಾಡ್‌ ನಿರ್ಮಿಸಲಾಗಿದೆ. ಇಲ್ಲಿಂದ ವೇದಿಕೆಗೆ ರಸ್ತೆ ಮಾರ್ಗವಾಗಿ ದೇವೇಗೌಡ ಬರಲಿದ್ದಾರೆ ಎನ್ನಲಾಗಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !