ಕಸೂತಿಯಲ್ಲಿ ಅರಳಿದ ಬದುಕು

ಸೋಮವಾರ, ಜೂನ್ 17, 2019
27 °C

ಕಸೂತಿಯಲ್ಲಿ ಅರಳಿದ ಬದುಕು

Published:
Updated:
Prajavani

ಧಾರವಾಡದ ಆರತಿ ಹಿರೇಮಠ ಅವರು ದೇಸಿ ಕಲೆಯಾದ ‘ಕಸೂತಿ’ ಚಿತ್ತಾರವನ್ನು ಬಿಡಿಸುವ ಇಳಕಲ್‌, ಬೆಟಗೇರಿ, ಕಾಂಜೀವರಂ ಸೀರೆಗಳಿಗೆ ದೇಶದಲ್ಲಷ್ಟೇ ಅಲ್ಲ, ವಿದೇಶಗಳಲ್ಲೂ ಭಾರಿ ಬೇಡಿಕೆಯಿದೆ. ಇಷ್ಟೇ ಅಲ್ಲ, ಅವರು 200 ಬಡ ಕುಟುಂಬಗಳ ಮಹಿಳೆಯರಿಗೂ ಕಸೂತಿ ಕಲಿಸಿ, ಬದುಕು ಕಟ್ಟಿಕೊಟ್ಟಿದ್ದಾರೆ.

**

ಕವಿರತ್ನ ಕಾಳಿದಾಸನ ಕಾವ್ಯದಲ್ಲಿ ಬಣ್ಣನೆಗೊಳಗಾದ, ಚಾಲುಕ್ಯ ವಂಶಸ್ಥರನ್ನು ಮೋಡಿ ಮಾಡಿದ, ಗುಪ್ತರು ಮತ್ತು ಮೊಘಲರ ಕಾಲದಲ್ಲಿ ಉತ್ತುಂಗಕ್ಕೇರಿದ, ಮೈಸೂರು ಅರಸರ ಕಾಲದ 64 ಕಲೆಗಳಲ್ಲಿ ವಿಶಿಷ್ಟ ಸ್ಥಾನ ಪಡೆದ ಅಪ್ರತಿಮ ಕಲೆ ‘ಕಸೂತಿ’. ಉತ್ತರ ಕರ್ನಾಟಕ ಮೂಲದ ಈ ದೇಸಿ ಕಲೆ ವಿದೇಶದಲ್ಲೂ ಈಗ ಮನ್ನಣೆ ಗಳಿಸಿದೆ.

ಧಾರವಾಡದ ಆರತಿ ಪಿ. ಹಿರೇಮಠ ಅವರ ನವಿರಾದ ಕಸೂತಿ ಕುಸುರಿಗೆ ಅಮೆರಿಕಾ, ನ್ಯೂಜಿಲೆಂಡ್‌, ಸಿಂಗಪುರ, ಆಸ್ಟ್ರೇಲಿಯ ಸೇರಿದಂತೆ ವಿವಿಧ ದೇಶಗಳಲ್ಲಿ ಬೇಡಿಕೆಯಿದೆ. ಫೇಸ್‌ಬುಕ್‌ನಲ್ಲಿರುವ ‘Kasuti pride of karnataka’ ವಾಲ್‌ನಲ್ಲಿ ಪ್ರದರ್ಶಿಸುವ ಕಸೂತಿ ಸೀರೆಗಳನ್ನು ವಿದೇಶಗಳಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು ಇಷ್ಟಪಟ್ಟು ತರಿಸಿಕೊಳ್ಳುತ್ತಾರೆ. ಇದೇ ರೀತಿ ದೆಹಲಿ, ಮುಂಬೈ, ಪುಣೆ, ಚೆನ್ನೈ, ಅಹಮದಾಬಾದ್‌ ಸೇರಿದಂತೆ ಹೊರ ರಾಜ್ಯಗಳ ನಗರಗಳಿಗೂ ‘ಆರತಿ ಕ್ರಾಫ್ಟ್ಸ್‌’ ಸೀರೆಗಳು ರವಾನೆಯಾಗುತ್ತವೆ.

ಸೂಜಿ–ದಾರದ ನಂಟು
ಬೆಂಗಳೂರು ಮೂಲದ ಆರತಿ ಅವರು 1989ರಲ್ಲಿ ಪ್ರವೀಣ ಹಿರೇಮಠ ಅವರನ್ನು ವಿವಾಹವಾದ ನಂತರ ‘ಪೇಢಾ ನಗರಿ’ ಧಾರವಾಡಕ್ಕೆ ಕಾಲಿಟ್ಟರು. ಧಾರವಾಡದ ಕೆಲವು ಕಸೂತಿ ಕಲಾವಿದೆಯರು ಆರತಿ ಅವರನ್ನು ಭೇಟಿ ಮಾಡಿ, ‘ನಿಮ್ಮ ತಾಯಿ ಲಲಿತಾ ಹುಕ್ಕೇರಿ ಅವರು ತಮ್ಮ ಸೀರೆಗಳಿಗೆ ಕಸೂತಿ ಹಾಕಿಸಿಕೊಳ್ಳುತ್ತಿದ್ದರು. ನೀವು ಬೆಂಗಳೂರಿನ ಸ್ನೇಹಿತೆಯರಿಗೆ ಕಸೂತಿ ಸೀರೆಗಳನ್ನು ಪರಿಚಯಿಸಿ, ಆರ್ಡರ್‌ ಕೊಡಿಸಿದರೆ ನಮಗೆ ಸಹಾಯವಾಗುತ್ತದೆ’ ಎಂದರಂತೆ. ಇದಕ್ಕೆ ಒಪ್ಪಿದ ಆರತಿ ಅವರು ಸತತ 10 ವರ್ಷಗಳವರೆಗೆ ಜಾಬ್‌ ಆರ್ಡರ್‌ಗಳನ್ನು ಕೊಡಿಸಿದರು.

‘ಸೀಮಾ’ ಎನ್‌ಜಿಒ ಸ್ಥಾಪನೆ
ಕಸೂತಿ ಕಸುಬುದಾರರೊಂದಿಗಿನ 10–12 ವರ್ಷಗಳ ಒಡನಾಟವು ಕಸೂತಿ ಕಲೆಯ ಶ್ರೇಷ್ಠತೆ ಮತ್ತು ಕಸುಬುದಾರರ ಬದುಕು–ಬವಣೆಯನ್ನು ಆರತಿ ಅವರಿಗೆ ಅರ್ಥ ಮಾಡಿಸಿತ್ತು. ಹೀಗಾಗಿ ಕಸೂತಿ ಕಲಾವಿದೆಯರ ಕಲ್ಯಾಣಕ್ಕಾಗಿ ‘ಸೀಮಾ’ (ಸೊಸೈಟಿ ಫಾರ್‌ ಎಂಪವರ್‌ಮೆಂಟ್‌ ಆ್ಯಂಡ್‌ ಮೊಬಿಲೈಜೇಶನ್‌ ಆಫ್‌ ಆರ್ಟಿಸಾನ್ಸ್‌) ಸಂಘಟನೆಯನ್ನು ಹುಟ್ಟು ಹಾಕಿದರು. ಹುಬ್ಬಳ್ಳಿ, ಗದಗ, ಕಲಘಟಗಿ, ತುಮರಿಕೊಪ್ಪ, ಅಮ್ಮಿನಬಾವಿ, ರಾಮದುರ್ಗ, ನವಲಗುಂದ ಸೇರಿದಂತೆ ಪಟ್ಟಣ ಮತ್ತು ಹಳ್ಳಿಗಳಲ್ಲಿ ಒಂದು ತಿಂಗಳ ಉಚಿತ ಕಸೂತಿ ಶಿಬಿರಗಳನ್ನು ಆಯೋಜಿಸಿದರು. ದುಡಿಮೆಗಾಗಿ ಮನೆಯಿಂದ ಹೊರ ಹೋಗಲು ಇಷ್ಟಪಡದ ಮುಸ್ಲಿಂ ಹೆಣ್ಣುಮಕ್ಕಳು ಮತ್ತು ಬಡ–ಮಧ್ಯಮ ವರ್ಗದ ಮಹಿಳೆಯರನ್ನು ಗುರುತಿಸಿ, ಉಚಿತ ತರಬೇತಿಯ ಜತೆಗೆ, ಸ್ಟೈಫಂಡ್‌ ಅನ್ನೂ ನೀಡಿದರು. ಅಷ್ಟೇ ಅಲ್ಲ, ಸರ್ಕಾರದಿಂದ ದೊರೆಯುವ ಸವಲತ್ತು ಮತ್ತು ಆರೋಗ್ಯ ವಿಮೆಯ ಸೌಲಭ್ಯವನ್ನೂ ಕಲ್ಪಿಸಿದರು. ಹೀಗೆ 400 ಹೆಣ್ಣುಮಕ್ಕಳಿಗೆ ಕಸೂತಿ ಕಸುಬನ್ನು ಪರಿಚಯಿಸಿ, ಸ್ವಾವಲಂಬಿ ಜೀವನಕ್ಕೆ ದಾರಿ ಮಾಡಿಕೊಟ್ಟರು.

ಇಳಕಲ್‌ ಸೀರೆ ಮೇಲೆ ಕಸೂತಿ ಚಿತ್ತಾರ
ಕಸೂತಿ ಕಸುಬಿಗೆ ಯಂತ್ರ, ವಿದ್ಯುತ್‌, ದೊಡ್ಡ ಕೊಠಡಿ, ಬಂಡವಾಳ... ಇವಾವೂ ಬೇಕಿಲ್ಲ. ಬೇಕಿರುವುದು ಸೂಜಿ, ದಾರ ಮತ್ತು ಹೊಲಿಗೆ ಹಾಕಲು ನುರಿತ ಕೈ ಮಾತ್ರ! ‘ಕ’ ಎಂದರೆ ಕೈ, ‘ಸೂತಿ’ ಎಂದರೆ ಹತ್ತಿ ಎಂದರ್ಥ. ಬಟ್ಟೆಯ ಮೇಲೆ ನೂಲಿನಿಂದ ವಿವಿಧ ಚಿತ್ತಾರ ಬಿಡಿಸುವುದೇ ಕಸೂತಿಯ ವಿಶೇಷ. ಉತ್ತರ ಪ್ರದೇಶದ ಚಿಕನ್‌ಕಾರಿ, ಮಣಿಪುರದ ರೇಷ್ಮೆ ಕಸೂತಿ, ಬಂಗಾಳದ ಕಾಂಥಾ, ಬಿಹಾರದ ದೋಮುಹಾ, ಒಡಿಶಾದ ಜಾಳಿಗೆ, ಪಂಜಾಬಿನ ಫುಲ್‌ಕಾರಿ ಕಸೂತಿಗಳಿಗಿಂತ ಭಿನ್ನ ಮತ್ತು ವೈಶಿಷ್ಟ್ಯವನ್ನು ಹೊಂದಿದೆ ‘ಕರ್ನಾಟಕ ಕಸೂತಿ’.

‘ಕರ್ನಾಟಕ ಕಸೂತಿ’ ಪ್ರಕಾರವನ್ನು ಮುಂದುವರಿಸಿಕೊಂಡು ಹೋಗುತ್ತಿರುವ ಆರತಿ ಮತ್ತು ಅವರ ಒಡನಾಡಿ ಕಲಾವಿದೆಯರು, ನೇಕಾರರಿಂದ ತಯಾರಾದ ಇಳಕಲ್‌ ರೇಷ್ಮೆ ಸೀರೆ, ಬೆಟಗೇರಿ ಕಾಟನ್‌ ಸೀರೆ, ಮಹೇಶ್ವರಿ ಕಾಟನ್‌ ಆ್ಯಂಡ್‌ ಸಿಲ್ಕ್ ಹಾಗೂ ಕಾಂಜೀವರಂ ಸೀರೆಗಳ ಮೇಲೆ ಮನಮೋಹಕ ಕಸೂತಿ ಚಿತ್ತಾರವನ್ನು ಬಿಡಿಸುತ್ತಾರೆ. ಸಾಂಪ್ರದಾಯಿಕ ಮತ್ತು ಪ್ರಚಲಿತ ಎರಡೂ ಪ್ರಕಾರದ ಕಸೂತಿಗಳನ್ನು ಬಿಡಿಸುವುದರಿಂದ ಗೃಹಿಣಿ ಮತ್ತು ಯುವತಿಯರಿಗೆ ಇವರ ಕಸೂತಿ ಸೀರೆಗಳೆಂದರೆ ಅಚ್ಚುಮೆಚ್ಚು.

ದೇವಾಲಯದ ಗೋಪುರ, ರಥ, ಪಲ್ಲಕ್ಕಿ, ನವಿಲು, ಅಂಬಾರಿ, ಆನೆ, ಗಂಡೋಳಿ ಕಮಲ, ಗೋಧಿ ಕಮಲ, ಸುರುಳಿಗುಬ್ಬಿ ಕಮಲ, ರಾಮನ ತೊಟ್ಟಿಲು, ಚಿಟ್ಟಿ ಹೂ, ಪಡ್ಲ ಹೂ, ಗುಂಡಾಳ ಪಟ್ಟಿ, ಮಗಿ ಪಟ್ಟಿ, ಕಾಯಿ ಪಟ್ಟಿ... ಹೀಗೆ ನಾನಾ ರೀತಿಯ ಚಿತ್ರಗಳನ್ನು ಸೀರೆಗಳ ಮೇಲೆ ಬಿಡಿಸುತ್ತಾರೆ. ಗವಂತಿ, ಮುರ್ಗಿ, ನೇಗಿ ಮತ್ತು ಮೆಂಥಿ ಸ್ಟಿಚ್‌ಗಳನ್ನು ಪ್ರಮುಖವಾಗಿ ಹಾಕುತ್ತಾರೆ.


ಕಸೂತಿ ಸೀರೆಯಲ್ಲಿ ಮಿಂಚುತ್ತಿರುವ ನೀರೆಯರು

200 ಕುಟುಂಬಗಳಿಗೆ ಜೀವನಾಧಾರ!
‘ನನ್ನೊಂದಿಗೆ ಪ್ರಸ್ತುತ 200 ಬಡ ಮಹಿಳೆಯರು ಕಸೂತಿ ಕೆಲಸದಲ್ಲಿ ತೊಡಗಿದ್ದಾರೆ. ಇವರೆಲ್ಲ ಅವರವರ ಮನೆಯಲ್ಲೇ ಕುಳಿತು ದುಡಿಮೆ ಮಾಡುತ್ತಾರೆ. ಸೀರೆ, ಸೂಜಿ, ನೂಲಿನ ದಾರ ಮುಂತಾದ ಕಚ್ಚಾ ವಸ್ತುಗಳನ್ನು ನಾವೇ ಪೂರೈಸುತ್ತೇವೆ. ಕಸೂತಿ ಮಾಡಿದ ನಂತರ ಅವರೇ ಬಂದು ಧಾರವಾಡದ ಸನ್ಮತಿ ಲೇಔಟ್‌ನಲ್ಲಿರುವ ನಮ್ಮ ಮನೆಗೆ ತಂದು ಕೊಡುತ್ತಾರೆ. ಕೆಲವರ ಮನೆಗಳಿಂದ ನಾವೇ ಹೋಗಿ ತರುತ್ತೇವೆ. ನುರಿತ ಕೈಗಳಾದರೆ ತಿಂಗಳಿಗೆ ಐದಾರು ಸೀರೆಗಳಿಗೆ ಕಸೂತಿ ಹಾಕಬಹುದು. ಒಂದು ಸೀರೆಗೆ ಕಸೂತಿ ಹಾಕಿದರೆ ₹ 1,200ರಿಂದ ₹ 2,500ರವರೆಗೆ ಕೂಲಿ ಸಿಗುತ್ತದೆ’ ಎನ್ನುತ್ತಾರೆ ಆರತಿ ಹಿರೇಮಠ.

‘ಎಂಟು ವರ್ಷಗಳ ಕಾಲ ಕೆಎಸ್‌ಐಸಿ ಸಂಸ್ಥೆಯೊಂದಿಗೆ ಟೈ ಅಪ್‌ ಮಾಡಿಕೊಂಡಿದ್ದೆ. ಪ್ರಸ್ತುತ jaypore.com, itokri.com, ajiolife.com ಮುಂತಾದ ಆನ್‌ಲೈನ್‌ ಸ್ಟೋರ್‌ಗಳೊಂದಿಗೆ ಒಪ್ಪಂದ ಮಾಡಿಕೊಂಡು ಕಸೂತಿ ಸೀರೆಗಳನ್ನು ಮಾರಾಟ ಮಾಡುತ್ತಿದ್ದೇನೆ. ₹ 35 ಸಾವಿರ ಬಂಡವಾಳದಿಂದ ಈ ಕಸುಬನ್ನು ಆರಂಭಿಸಿ, ಪ್ರಸ್ತುತ ತಿಂಗಳಿಗೆ ಸರಾಸರಿ ₹ 3 ಲಕ್ಷ ವಹಿವಾಟು ನಡೆಸುತ್ತಿದ್ದೇನೆ. ಇಲ್ಲಿ ಲಾಭಕ್ಕಿಂತ ಕಸೂತಿ ಕಲೆಯನ್ನು ಉಳಿಸಿ–ಬೆಳೆಸಬೇಕು ಎಂಬುದು ನಮ್ಮ ಆದ್ಯತೆ’ ಎನ್ನುತ್ತಾರೆ ಆರತಿ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !