ನೆಕ್ಲೇಸ್‌ಗಾಗಿ ಹತ್ಯೆ; ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

ಭಾನುವಾರ, ಜೂನ್ 16, 2019
22 °C

ನೆಕ್ಲೇಸ್‌ಗಾಗಿ ಹತ್ಯೆ; ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

Published:
Updated:

ಬೆಂಗಳೂರು: ಪುರಾತನ ಕಾಲದ ವಜ್ರದ ನೆಕ್ಲೇಸ್ ದೋಚುವುದಕ್ಕಾಗಿ ಉದಯ್ ರಾಜಸಿಂಗ್‌ (61) ಎಂಬುವರನ್ನು ಹತ್ಯೆ ಮಾಡಿ, ಅವರ ಪತ್ನಿ ಸುಶೀಲಾ (57) ಅವರ ಕೊಲೆಗೆ ಯತ್ನಿಸಿದ್ದ ಆರು ಅಪರಾಧಿಗಳಿಗೆ ನಗರದ 57ನೇ ಸಿಸಿಎಚ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ಬ್ಯಾಂಕೊಂದರ ನಿವೃತ್ತ ಉದ್ಯೋಗಿ ಆಗಿದ್ದ ಉದಯ್, ಪತ್ನಿ ಜೊತೆ ಲಕ್ಕಸಂದ್ರದಲ್ಲಿ ವಾಸವಿದ್ದರು. ತಮ್ಮ ಬಳಿ ಇದ್ದ ₹ 18 ಕೋಟಿ ಮೌಲ್ಯದ ವಜ್ರದ ನೆಕ್ಲೇಸ್ ಮಾರಾಟ ಮಾಡಲು ಮುಂದಾಗಿದ್ದರು. ಗ್ರಾಹಕರ ಸೋಗಿನಲ್ಲಿ 2014ರ ಮಾರ್ಚ್‌ 25ರಂದು ಮನೆಗೆ ನುಗ್ಗಿದ್ದ ಅಪರಾಧಿಗಳು ಕೃತ್ಯ ಎಸಗಿದ್ದರು.

ಸುಶೀಲಾ ನೀಡಿದ್ದ ದೂರು ಆಧರಿಸಿ ತನಿಖೆ ಕೈಗೊಂಡಿದ್ದ ಆಡುಗೋಡಿ ಠಾಣೆ ಇನ್‌ಸ್ಪೆಕ್ಟರ್ ಎಸ್.ಸುಧೀರ್, ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. 

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಎನ್‌. ಸುನೀಲ್‌ಕುಮಾರ್ ಸಿಂಗ್, ಗುರುವಾರ ಶಿಕ್ಷೆ ಪ್ರಮಾಣ ಪ್ರಕಟಿಸಿದರು. ಪಬ್ಲಿಕ್ ಪ್ರಾಸಿಕ್ಯೂಟರ್ ಎಚ್‌.ಎಸ್.ದೇವೇಂದ್ರಪ್ಪ ವಾದಿಸಿದ್ದರು.

‘ಅಪರಾಧಿಗಳಿಗೆ ತಲಾ ₹1 ಲಕ್ಷ ದಂಡವನ್ನೂ ವಿಧಿಸಲಾಗಿದ್ದು, ಆ ಹಣದಲ್ಲಿ ₹ 3 ಲಕ್ಷವನ್ನು ಸುಶೀಲಾ ಅವರಿಗೆ ನೀಡುವಂತೆ ಆದೇಶದಲ್ಲಿ ತಿಳಿಸಲಾಗಿದೆ’ ಎಂದು ದೇವೇಂದ್ರಪ್ಪ ಹೇಳಿದರು.

ಪ್ರಕರಣದ ವಿವರ: ‘ಉದಯ್ ಅವರು ನೆಕ್ಲೇಸ್‌ ಖರೀದಿಸುವ ಗ್ರಾಹಕರನ್ನು ಹುಡುಕಿಕೊಡುವಂತೆ ಅಪರಾಧಿ ಅಭಿಷೇಕ್‌ಗೆ ಹೇಳಿದ್ದರು. ನಿತ್ಯವೂ ಮನೆಗೆ ಬಂದು ಹೋಗುತ್ತಿದ್ದ ಆತ, ದಂಪತಿಯನ್ನು ಕೊಂದು ಆಭರಣವನ್ನು ದೋಚಿಕೊಂಡು ಹೋಗಲು ಸಂಚು ರೂಪಿಸಿದ್ದ’ ಎಂದು ಪೊಲೀಸರು ಹೇಳಿದರು. ‘ಮೈಸೂರು, ಹಾಸನ ಹಾಗೂ ಮಂಡ್ಯದ ಸ್ನೇಹಿತರನ್ನು ಸಂಪರ್ಕಿಸಿದ್ದ ಆತ ಕೊಲೆಗೆ ಸಿದ್ಧತೆ ಮಾಡಿಕೊಂಡಿದ್ದ. ಅವರನ್ನೇ ಗ್ರಾಹಕರೆಂದು ಮನೆಗೆ ಕರೆದುಕೊಂಡು ಹೋಗಿದ್ದ ಅಭಿಷೇಕ, ನೆಕ್ಲೇಸ್ ತೋರಿಸಲು ಹೇಳಿ ಅವರ ಮೇಲೆ ಆರೋಪಿಗಳು ಹಲ್ಲೆ ಮಾಡಿದ್ದರು’ ಎಂದು ವಿವರಿಸಿದರು.

‘ಮೈಸೂರು ಹಾಗೂ ಬೆಂಗಳೂರಿನ ಹಲವರ ಬಳಿ ಆರೋಪಿಗಳು ಸಾಲ ಮಾಡಿದ್ದರು.₹18 ಕೋಟಿ ಮೌಲ್ಯದ ವಜ್ರದ ನೆಕ್ಲೇಸನ್ನು ಲಂಡನ್‌ನ ಆಭರಣ ವ್ಯಾಪಾರಿಯೊಬ್ಬರಿಗೆ ₹ 40 ಕೋಟಿಗೆ ಮಾರಾಟ ಮಾಡಿ ಬಂದ ಹಣದಿಂದ ಸಾಲ ತೀರಿಸಲು ಆರೋಪಿಗಳು ಯೋಜಿಸಿದ್ದರು’ ಎಂದು ಪೊಲೀಸರು ಹೇಳಿದರು. 

ಶಿಕ್ಷೆಗೊಳಗಾದ ಅಪರಾಧಿಗಳು
ಮೈಸೂರಿನ ಅಭಿಷೇಕ್ ಅಲಿಯಾಸ್ ಶ್ರೀರಂಗ, ದಿಲೀಪ್ ಕುಮಾರ್, ಶ್ರೀಧರ್, ಅಮಿತ್ ಕುಮಾರ್, ಮಂಡ್ಯ ಜಿಲ್ಲೆಯ ಸತೀಶ್, ಹಾಸನ ಜಿಲ್ಲೆಯ ಕಿರಣ್ 

ಆರೋಪಿಗಾಗಿ ಶೋಧ
‘ಸದ್ಯ ಆರು ಮಂದಿಗೆ ಶಿಕ್ಷೆಯಾಗಿದೆ. ಪ್ರಕರಣದ ಇನ್ನೊಬ್ಬ ಆರೋಪಿ ಮಧುಸೂದನ್ ತಲೆಮರೆಸಿಕೊಂಡಿದ್ದಾನೆ. ಆತನಿಗಾಗಿ ಶೋಧ ನಡೆಸಲಾಗುತ್ತಿದೆ’ ಎಂದು ಆಡುಗೋಡಿ ಪೊಲೀಸರು ಹೇಳಿದರು. ‘ಎಂಬಿಎ ಪದವೀಧರನಾಗಿದ್ದ ಆತ, ಮಲ್ಲೇಶ್ವರದಲ್ಲಿರುವ ಎಚ್‌ಡಿಎಫ್‌ಸಿ ಬ್ಯಾಂಕ್ ಶಾಖೆಯಲ್ಲಿ ಸಹಾಯಕ ಮ್ಯಾನೇಜರ್ ಆಗಿ ಕೆಲ ವರ್ಷ ಕೆಲಸ ಮಾಡಿದ್ದ’ ಎಂದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !