ಬಾಡಿಗೆ ಕೊಟ್ಟು ಆಂಬುಲೆನ್ಸ್‌ನಲ್ಲಿ ಪ್ರಯಾಣ!

ಶನಿವಾರ, ಮೇ 25, 2019
28 °C
ಚಾಲಕನಿಗೆ ₹ 600 ದಂಡ * ಚಾಲನಾ ಪರವಾನಗಿ ಜಪ್ತಿ

ಬಾಡಿಗೆ ಕೊಟ್ಟು ಆಂಬುಲೆನ್ಸ್‌ನಲ್ಲಿ ಪ್ರಯಾಣ!

Published:
Updated:
Prajavani

ಬೆಂಗಳೂರು: ಆ ದಿನ ಸಂಜೆ ‌ಯಲಹಂಕದ ಕೋಗಿಲು ಜಂಕ್ಷನ್ ಬಳಿ ವಿಪರೀತ ವಾಹನ ದಟ್ಟಣೆ ಉಂಟಾಗಿತ್ತು. ಹಿಂದಿನಿಂದ ಆಂಬುಲೆನ್ಸ್‌ನ ಸೈರನ್ ಮೊಳಗುತ್ತಿದ್ದಂತೆಯೇ ಸವಾರರೆಲ್ಲ ಪ್ರಯಾಸ ಪಟ್ಟು ಹೇಗೋ ಅದಕ್ಕೆ ದಾರಿ ಮಾಡಿಕೊಟ್ಟರು. ಆದರೆ, ಆ ಆಂಬುಲೆನ್ಸ್‌ನಲ್ಲಿ ಯಾವ ರೋಗಿಯೂ ಇರಲಿಲ್ಲ. ಬದಲಾಗಿ ಹತ್ತಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಇದ್ದರು!

ಈ ಪ್ರಸಂಗ ಜರುಗಿದ್ದು ಮಾರ್ಚ್ 27ರಂದು. ಇಷ್ಟುದಿನ ಚುನಾವಣೆ ಕೆಲಸಗಳಲ್ಲಿ ನಿರತರಾಗಿದ್ದ ಹೆಬ್ಬಾಳ ಸಂಚಾರ ಪೊಲೀಸರು, ನೋಂದಣಿ ಸಂಖ್ಯೆ ಆಧರಿಸಿ ಮಂಗಳವಾರ ಆ ಆಂಬುಲೆನ್ಸ್ ಜಪ್ತಿ ಮಾಡಿದ್ದಾರೆ. ಅಲ್ಲದೆ, ಚಾಲಕ ಬಾಲಕೃಷ್ಣ ಅಲಿಯಾಸ್ ಬಾಲ ಅವರಿಗೆ ₹ 600 ದಂಡ ವಿಧಿಸಿ, ಚಾಲನಾ ಪರವಾನಗಿಯನ್ನೂ ವಶಕ್ಕೆ ಪಡೆದಿದ್ದಾರೆ.

ಫೇಸ್‌ಬುಕ್‌ನಲ್ಲಿ ವಿಡಿಯೊ: ‘ಸಾರ್ವಜನಿಕರ ಪ್ರಯಾಣಕ್ಕೆ ಬಸ್, ಆಟೊ, ಮೆಟ್ರೊ, ರೈಲು ಹಾಗೂ ವಿಮಾನಗಳು ಇರುವುದನ್ನು ನೋಡಿದ್ದೇವೆ. ಆದರೆ, ಇತ್ತೀಚಿನ ದಿನಗಳಲ್ಲಿ ಆಂಬುಲೆನ್ಸ್‌ನಲ್ಲೂ ಪ್ರಯಾಣಿಕರು ಓಡಾಟ ನಡೆಸುತ್ತಿದ್ದಾರೆ’ ಎಂದು ರಾಣಾ ಪಟೇಲ್ ಎಂಬುವರು ಮಾರ್ಚ್ 27ರಂದು ವಿಡಿಯೊ ಸಮೇತ ಸ್ಟೇಟಸ್ ಹಾಕಿದ್ದರು.

‘ಕೆಲಸ ಮುಗಿಸಿಕೊಂಡು ಬೈಕ್‌ನಲ್ಲಿ ಅಗ್ರಹಾರ ಲೇಔಟ್‌ನ ನನ್ನ ಮನೆಗೆ ಹೋಗುತ್ತಿದ್ದೆ. ಆಂಬುಲೆನ್ಸ್‌ನ (ಕೆಎ 51–ಎಬಿ–2411) ಸೈರನ್ ಶಬ್ದ ಕೇಳಿದ ಕೂಡಲೇ, ದಾರಿ ಮಾಡಿಕೊಟ್ಟೆ. ಆದರೆ, ಹಿಂದಿನಿಂದ ಕಂಡಿದ್ದೇ ಬೇರೆ. ಅದರಲ್ಲಿ ಪ್ರಯಾಣಿಕರ ಗುಂಪೇ ಇತ್ತು. ಆಂಬುಲೆನ್ಸ್‌ನಲ್ಲಿ ಹೋದರೆ ಬೇಗನೆ ಮನೆ ತಲುಪಬಹುದು ಎಂಬ ಉದ್ದೇಶದಿಂದ ಅದರಲ್ಲಿ ಹೊರಟಿದ್ದರೇನೋ ಗೊತ್ತಿಲ್ಲ. ಆದರೆ, ಇದು ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಂಡಂತೆ. ಪೊಲೀಸರು ಏನಾದರೂ ಕ್ರಮ ತೆಗೆದುಕೊಳ್ಳುತ್ತಾರಾ ಕಾದು ನೋಡಬೇಕು’ ಎಂದೂ ಬರೆದಿದ್ದರು.

‘ಆ ದಿನ ಆಸ್ಪತ್ರೆಗಳಿಂದ ಯಾವುದೇ ತುರ್ತು ಕರೆಗಳು ಬಂದಿರಲಿಲ್ಲ. ಹೆಬ್ಬಾಳದ ಕಡೆಗೆ ಹೊರಟಿದ್ದ ನಾನು, ಖರ್ಚಿಗೆ ಹಣ ಮಾಡಿಕೊಳ್ಳಲು ಪ್ರಯಾಣಿಕರನ್ನು ಹತ್ತಿಸಿಕೊಂಡೆ. ಇನ್ನುಮುಂದೆ ಎಂದೂ ಹೀಗೆ ಮಾಡುವುದಿಲ್ಲ’  ಎಂದು ಚಾಲಕ ಮುಚ್ಚಳಿಕೆ ಬರೆದುಕೊಟ್ಟಿರುವುದಾಗಿ ಪೊಲೀಸರು ಮಾಹಿತಿ ನೀಡಿದರು.

ನಿರ್ದಾಕ್ಷಿಣ್ಯ ಕ್ರಮ

‘ಸಾಮಾನ್ಯವಾಗಿ ಪೊಲೀಸರು ಆಂಬುಲೆನ್ಸ್‌ಗಳ ತಪಾಸಣೆ ನಡೆಸುವುದು ಕಡಿಮೆ. ರೋಗಿಗಳನ್ನು ತುರ್ತಾಗಿ ಕರೆದೊಯ್ಯುತ್ತಿದ್ದಾರೆ ಎಂದು ಭಾವಿಸಿ ಅವುಗಳ ಸುಗಮ ಸಂಚಾರಕ್ಕೆ ಎಲ್ಲರೂ ಅನುವು ಮಾಡಿಕೊಡುತ್ತಾರೆ. ಇದನ್ನೇ ದುರುಪಯೋಗ ಮಾಡಿಕೊಳ್ಳುತ್ತಿರುವ ಚಾಲಕರು, ರೋಗಿಗಳಿಲ್ಲದಿದ್ದರೂ ಸೈರನ್ ಹಾಕಿಕೊಂಡು ಹೋಗುವ ಖಯಾಲಿ ಬೆಳೆಸಿಕೊಂಡಿದ್ದಾರೆ. ಅಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು’ ಎಂದು ಹಿರಿಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 8

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !