ನಟನ ಹತ್ಯೆಗೆ ಸಂಚು: ಸ್ಲಂ ಭರತ ಕಸ್ಟಡಿಗೆ

ಬುಧವಾರ, ಮಾರ್ಚ್ 20, 2019
31 °C

ನಟನ ಹತ್ಯೆಗೆ ಸಂಚು: ಸ್ಲಂ ಭರತ ಕಸ್ಟಡಿಗೆ

Published:
Updated:

ಬೆಂಗಳೂರು: ಕನ್ನಡದ ಪ್ರಸಿದ್ಧ ನಟರೊಬ್ಬರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ಆರೋಪದಡಿ ಇತ್ತೀಚೆಗಷ್ಟೇ ನಾಲ್ವರನ್ನು ಬಂಧಿಸಿದ್ದ ಸಿಸಿಬಿ ಪೊಲೀಸರು, ಇದೀಗ ಕುಖ್ಯಾತ ರೌಡಿ ಭರತ ಅಲಿಯಾಸ್ ಸ್ಲಂ ಭರತನನ್ನು ವಿಚಾರಣೆಗಾಗಿ ಕಸ್ಟಡಿಗೆ ಪಡೆದಿದ್ದಾರೆ.

ತನ್ನ ವಿರುದ್ಧ ಸಾಕ್ಷ್ಯ ಹೇಳಿದ್ದವರಿಗೆ ಮಚ್ಚಿನಿಂದ ಹೊಡೆದು ಪರಾರಿಯಾಗಿದ್ದ ಭರತನನ್ನು ಕಾಲಿಗೆ ಗುಂಡು ಹಾರಿಸಿ ಸೆರೆ ಹಿಡಿದಿದ್ದ ಪೊಲೀಸರು, ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದ್ದರು. ನಟನ ಹತ್ಯೆಗೆ ಸಂಚು ಪ್ರಕರಣದಲ್ಲಿ ನಾಲ್ವರು ಆರೋಪಿಗಳ ಬಂಧನವಾಗುತ್ತಿದ್ದಂತೆ ಪೊಲೀಸರು, ಭರತನನ್ನು ಕಸ್ಟಡಿಗೆ ನೀಡುವಂತೆ 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ನ್ಯಾಯಾಲಯ, ಐದು ದಿನಗಳವರೆಗೆ ಭರತನನ್ನು ಸಿಸಿಬಿ ಪೊಲೀಸರ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದೆ.

ನಟನ ಹೆಸರು ಗೊತ್ತಾಗಿಲ್ಲ: ‘‌ನಟನ ಹತ್ಯೆಗೆ ಸಂಚು ರೂಪಿಸಿದ್ದ ಶೇಷಾದ್ರಿಪುರದ ನಿತೇಶ್, ನಿತ್ಯಾನಂದ್, ವಿಜಯನಗರದ ಮಧುಸೂದನ್ ಹಾಗೂ ಪಿ.ಜಿ.ಹಳ್ಳಿಯ ಪೃಥ್ವಿರಾಜ್‌ನನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ. ಈಗ ಭರತನನ್ನು ವಿಚಾರಣೆ ನಡೆಸಬೇಕಿದೆ’ ಎಂದು ಸಿಸಿಬಿ ಅಧಿಕಾರಿಯೊಬ್ಬರು ತಿಳಿಸಿದರು.

‘ಪ್ರಸಿದ್ಧ ನಟನನ್ನು ಕೊಂದರೆ ಹೆಸರು ಮಾಡಬಹುದು ಎಂದು ಆರೋಪಿಗಳು ಅಂದುಕೊಂಡಿದ್ದರು. ಆದರೆ, ಯಾವ ನಟನನ್ನು ಕೊಲ್ಲಬೇಕು ಎಂಬುದನ್ನು ತೀರ್ಮಾನಿಸಿರಲಿಲ್ಲ. ಭರತನೇ ಜೈಲಿನಲ್ಲಿದ್ದುಕೊಂಡು ಕೊಲೆಗೆ ಸಂಚು ರೂಪಿಸುತ್ತಿದ್ದ. ಅದನ್ನು ಜಾರಿಗೆ ತರಲು ಸಹಚರರು ಸಜ್ಜಾಗಿದ್ದರು. ಅಷ್ಟರಲ್ಲೇ ನಮಗೆ ಸಿಕ್ಕಿಬಿದ್ದರು’ ಎಂದು ಹೇಳಿದರು.  

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 1

  Frustrated
 • 4

  Angry

Comments:

0 comments

Write the first review for this !