ಲಕ್ಷ್ಮಣ ಹತ್ಯೆಗೆ ಪ್ರೇಮಿಗಳದ್ದೇ ಮಾಸ್ಟರ್ ಪ್ಲಾನ್ !

ಮಂಗಳವಾರ, ಮಾರ್ಚ್ 26, 2019
27 °C
ಕೊಲೆ ರಹಸ್ಯ ಭೇದಿಸಿದ ಸಿಸಿಬಿ

ಲಕ್ಷ್ಮಣ ಹತ್ಯೆಗೆ ಪ್ರೇಮಿಗಳದ್ದೇ ಮಾಸ್ಟರ್ ಪ್ಲಾನ್ !

Published:
Updated:
Prajavani

ಬೆಂಗಳೂರು: ತಮ್ಮನ್ನು ದೂರ ಮಾಡಲು ಪ್ರಯತ್ನಿಸುತ್ತಿದ್ದ ಕುಖ್ಯಾತ ರೌಡಿ ಲಕ್ಷ್ಮಣನನ್ನು ಪ್ರೇಮಿಗಳೇ ಸಂಚು ರೂಪಿಸಿ ನಡುರಸ್ತೆಯಲ್ಲೇ ಬರ್ಬರವಾಗಿ ಹತ್ಯೆ ಮಾಡಿಸಿರುವ ಸಂಗತಿ ಸಿಸಿಬಿ ತನಿಖೆಯಿಂದ ಬಯಲಾಗಿದೆ.

ಮಹಾಲಕ್ಷ್ಮಿಲೇಔಟ್‌ನಲ್ಲಿ ನಡೆದಿದ್ದ ಲಕ್ಷ್ಮಣನ ಕೊಲೆ ಪ್ರಕರಣ ಭೇದಿಸಿರುವ ಸಿಸಿಬಿ ಪೊಲೀಸರು, ಪ್ರೇಮಿಗಳು ಸೇರಿದಂತೆ ಎಂಟು ಮಂದಿಯನ್ನು ಬಂಧಿಸಿದ್ದಾರೆ.

ಸಿನಿಮಾ ಮ್ಯಾನೇಜರ್ ರೂಪೇಶ್ (25), ಆತನ ಪ್ರೇಯಸಿ ವರ್ಷಿಣಿ (21), ರೌಡಿಗಳಾದ ಕ್ಯಾಟ್ ರಾಜ್, ಹೇಮಂತ್ ಅಲಿಯಾಸ್ ಹೇಮಿ, ಮದ್ದೂರು ಗೋಪನಹಳ್ಳಿಯ ಅಲೋಕ್, ನಾಗರಭಾವಿಯ ದೇವರಾಜ್, ಹೊಸಹಳ್ಳಿಯ ವರುಣ್‌ಕುಮಾರ್ ಹಾಗೂ ಮಾಗಡಿ ಮುಖ್ಯರಸ್ತೆಯ ಮಧುಕುಮಾರ್ ಬಂಧಿತರು.

‘ಎಲ್ಲ ಆರೋಪಿಗಳನ್ನು 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಮಂಗಳವಾರ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ 10 ದಿನ ಕಸ್ಟಡಿಗೆ ಪಡೆದುಕೊಳ್ಳಲಾಗಿದೆ’ ಎಂದು ಸಿಸಿಬಿಯ ಹೆಚ್ಚುವರಿ ಪೊಲೀಸ್ ಕಮಿಷನರ್ ಅಲೋಕ್‌ಕುಮಾರ್‌ ಸುದ್ದಿಗಾರರಿಗೆ ತಿಳಿಸಿದರು.

ಮೂರ್ನಾಲ್ಕು ವರ್ಷಗಳ ಪ್ರೀತಿ: ‘ಚನ್ನಪಟ್ಟಣದ ರೂಪೇಶ್, ರಾಜರಾಜೇಶ್ವರಿನಗರದಲ್ಲಿ ವಾಸವಿದ್ದ. ಸಿನಿಮಾಗಳಿಗೆ ಕಲಾವಿದರನ್ನು ಪೂರೈಕೆ ಮಾಡುವ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ. ಮೂರ್ನಾಲ್ಕು ವರ್ಷಗಳ ಹಿಂದೆ ಆತನಿಗೆ ವರ್ಷಿಣಿ ಪರಿಚಯವಾಗಿತ್ತು. ಪರಿಚಯ ಸ್ನೇಹವಾಗಿ ಪ್ರೀತಿಗೆ ತಿರುಗಿತ್ತು’ ಎಂದು ಸಿಸಿಬಿ ಅಧಿಕಾರಿಯೊಬ್ಬರು ತಿಳಿಸಿದರು.

‘ದಡಿಯಾ ಹರೀಶ್ ಹಾಗೂ ಪದ್ಮಾ ದಂಪತಿ ಪುತ್ರಿಯಾದ ವರ್ಷಿಣಿ, ಮನೋವಿಜ್ಞಾನ ವಿಭಾಗದ ವಿದ್ಯಾರ್ಥಿನಿ. ಹೆಚ್ಚಿನ ವ್ಯಾಸಂಗಕ್ಕಾಗಿ ಆಕೆಯನ್ನು ಪೋಷಕರು ಲಂಡನ್‌ಗೆ ಕಳುಹಿಸಿದ್ದರು. ಆ ಬಳಿಕವೂ ಪ್ರೇಮಿಗಳು, ನಿತ್ಯವೂ ವಾಟ್ಸ್‌ಆ್ಯಪ್‌ನಲ್ಲಿ ಕರೆಮಾಡಿ ಮಾತನಾಡುತ್ತಿದ್ದರು. ಪ್ರೀತಿಯ ವಿಷಯ ಗೊತ್ತಾಗುತ್ತಿದ್ದಂತೆ ಪೋಷಕರು, ತಮ್ಮ ಪಕ್ಕದ ಮನೆಯಲ್ಲಿ ವಾಸವಿದ್ದ ರೌಡಿ ಲಕ್ಷ್ಮಣನನ್ನು ಸಂಪರ್ಕಿಸಿದ್ದರು. ‘ರೂಪೇಶ್‌ ಎಂಬಾತ ನಮ್ಮ ಮಗಳ ತಲೆ ಕೆಡಿಸುತ್ತಿದ್ದಾನೆ. ಆತನಿಗೆ ಬುದ್ಧಿ ಕಲಿಸು’ ಎಂದು ಹೇಳಿದ್ದರು. ವರ್ಷಿಣಿ ಹಾಗೂ ರೂಪೇಶ್‌ಗೆ ಕರೆ ಮಾಡಿದ್ದ ಲಕ್ಷ್ಮಣ, ಪರಸ್ಪರ ಮಾತನಾಡದಂತೆ ಎಚ್ಚರಿಕೆ ನೀಡಿದ್ದ. ಅದಕ್ಕೆ ಪ್ರೇಮಿಗಳು ತಲೆಕೆಡಿಸಿಕೊಂಡಿರಲಿಲ್ಲ’ ಎಂದರು.  

ಜೈಲಿನಲ್ಲೇ ನಡೆದಿತ್ತು ಸಂಚು: ‘ವರ್ಷಿಣಿಯನ್ನು ರೂಪೇಶ್‌ನಿಂದ ದೂರ ಮಾಡಿ ತನ್ನವಳನ್ನಾಗಿ ಮಾಡಿಕೊಳ್ಳಲು ಲಕ್ಷ್ಮಣ ಯೋಚಿಸಲಾರಂಭಿಸಿದ್ದ. ಅದೇ ಕಾರಣಕ್ಕೆ ನಿತ್ಯವೂ ರೂಪೇಶ್‌ಗೆ ಕರೆ ಮಾಡಿ, ಊರು ಬಿಟ್ಟು ಹೋಗುವಂತೆ ಜೀವ ಬೆದರಿಕೆ ಹಾಕುತ್ತಿದ್ದ. ಯುವತಿ ಜೊತೆಗೆ ನಯವಾಗಿ ಮಾತನಾಡಿ ತನ್ನತ್ತ ಸೆಳೆಯಲು ಪ್ರಯತ್ನಿಸುತ್ತಿದ್ದ’ ಎಂದು ಸಿಸಿಬಿ ಅಧಿಕಾರಿ ಹೇಳಿದರು.

‘ಲಕ್ಷ್ಮಣನ ಕಾಟ ವಿಪರೀತ ಆಗಿದ್ದರಿಂದ ನೊಂದ ಪ್ರೇಮಿಗಳು, ಆತನನ್ನು ವೈರಿಗಳಿಂದ ಕೊಲೆ ಮಾಡಿಸಲು ತೀರ್ಮಾನಿಸಿದ್ದರು. ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ ಕ್ಯಾಟ್‌ ರಾಜ್‌ನನ್ನು ಭೇಟಿಯಾಗಿದ್ದ ರೂಪೇಶ್, ‘ನಿನ್ನನ್ನು ಜಾಮೀನು ಮೇಲೆ ಹೊರ ತರುತ್ತೇನೆ. ನೀನು, ಲಕ್ಷ್ಮಣನನ್ನು ಹತ್ಯೆ ಮಾಡಬೇಕು’ ಎಂದು ಹೇಳಿದ್ದ.’

‘ಕೃಷ್ಣಮೂರ್ತಿಯನ್ನು ಅಲಿಯಾಸ್‌ ಮಚ್ಚ ಕೊಲೆ ಮಾಡಿದ್ದ ಲಕ್ಷ್ಮಣನನ್ನು ಮುಗಿಸಲು ಹಲವು ವರ್ಷಗಳಿಂದ ಹೊಂಚು ಹಾಕುತ್ತಿದ್ದ ಕ್ಯಾಟ್ ರಾಜ್, ರೂಪೇಶ್‌ನ ಮಾತಿಗೆ ಒಪ್ಪಿದ್ದ. ಸಹಚರರಾದ ಹೇಮಂತ್‌, ಅಲೋಕ್, ದೇವರಾಜ್‌ ಹಾಗೂ ಮಧುಗೂ ವಿಷಯ ತಿಳಿಸಿ ಹತ್ಯೆಗೆ ಸಜ್ಜಾಗುವಂತೆ ತಿಳಿಸಿದ್ದ’ ಎಂದರು. 

ಯುವತಿ ಮೂಲಕ ಕರೆಸಿಕೊಂಡು ಹತ್ಯೆ; ‘ರೌಡಿ ಲಕ್ಷ್ಮಣ ಜೊತೆಗೂ ವರ್ಷಿಣಿ, ಸಲುಗೆಯಿಂದಲೇ ಮಾತನಾಡುತ್ತಿದ್ದಳು. ಅದು ರೂಪೇಶ್‌ನಿಗೂ ಗೊತ್ತಿತ್ತು. ಆ ಸಲುಗೆಯನ್ನು ಬಳಸಿಕೊಂಡೇ ಲಕ್ಷ್ಮಣನ ಹತ್ಯೆಗೆ ಪ್ಲಾನ್ ಸಿದ್ಧವಾಗಿತ್ತು’ ಎಂದು ಸಿಸಿಬಿ ಪೊಲೀಸರು ಹೇಳಿದರು.

‘ಮಾ. 7ರಂದು ಬೆಳಿಗ್ಗೆ 9 ಗಂಟೆಗೆ ಲಕ್ಷ್ಮಣನಿಗೆ ವಾಟ್ಸ್‌ಆ್ಯಪ್‌ನಲ್ಲಿ ಕರೆ ಮಾಡಿದ್ದ ವರ್ಷಿಣಿ, ‘ನಾನು ನಿನ್ನನ್ನು ಭೇಟಿಯಾಗಲು ಲಂಡನ್‌ನಿಂದ ಬೆಂಗಳೂರಿಗೆ ಬರುತ್ತಿದ್ದೇನೆ. ಇಬ್ಬರೂ ಏಕಾಂತದಲ್ಲಿ ಮಾತನಾಡೋಣ’ ಎಂದು ಹೇಳಿದ್ದಳು. ಆಕೆ ತನ್ನವಳಾಗುವ ಕಾಲ ಬಂತು ಎಂದು ಖುಷಿಯಾಗಿದ್ದ ಲಕ್ಷ್ಮಣ, ಆರ್.ಜಿ. ಪ್ಯಾಲೇಸ್ ಹೋಟೆಲ್‌ನಲ್ಲಿ ಕೊಠಡಿ ಕಾಯ್ದಿರಿಸಿದ್ದ. ನಗರಕ್ಕೆ ಬಂದ ನಂತರ ಆಕೆಯನ್ನೂ ಗೋವಾಕ್ಕೆ ಕರೆದೊಯ್ಯಲು ತೀರ್ಮಾನಿಸಿದ್ದ. ಆ ವಿಷಯವನ್ನು ವರ್ಷಿಣಿಗೂ ತಿಳಿಸಿ, ತನ್ನ ಮನೆಯಿಂದ ಹೊರಗೆ ಬಂದಿದ್ದ’.

‘ಲಕ್ಷ್ಮಣ ಕಾರಿನಲ್ಲಿ ಹೋಗುತ್ತಿದ್ದ ವಿಷಯವನ್ನು ವರ್ಷಿಣಿ, ರೂಪೇಶ್‌ಗೆ ತಿಳಿಸಿದ್ದಳು. ಆತ, ಕ್ಯಾಟ್‌ ರಾಜ್‌ನಿಗೆ ವಿಷಯ ಮುಟ್ಟಿಸಿ ಸ್ಥಳಕ್ಕೆ ಹೋಗುವಂತೆ ಹೇಳಿದ್ದ. ಸ್ಕಾರ್ಪಿಯೊ ಕಾರಿನಲ್ಲಿ ಮೈಸೂರು ಸ್ಯಾಂಡಲ್‌ ಸೋಪು ಫ್ಯಾಕ್ಟರಿ ಎದುರು ಬಂದಿದ್ದ ಆರೋಪಿಗಳು, ಲಕ್ಷ್ಮಣನ ಕಾರು ತಡೆದಿದ್ದರು. ಹೇಮಂತ್‌ನೇ ಮೊದಲು ಲಾಂಗ್‌ ಬೀಸಿದ್ದ. ನಂತರ, ಉಳಿದೆಲ್ಲ ಆರೋಪಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದರು. ಮಾ. 8ರಂದು ರಾತ್ರಿ ವರ್ಷಿಣಿ ವಿಮಾನದಲ್ಲಿ ನಗರಕ್ಕೆ ಬಂದಿದ್ದಳು’ ಎಂದು ಹೇಳಿದರು.

ಸಚಿವ ತಮ್ಮಣ್ಣ ಕರೆ; ಅಲೋಕ್‌ಕುಮಾರ್ ನಿರಾಕರಣೆ

ಆರೋಪಿ ವರ್ಷಿಣಿಯ ತಾಯಿ ಪದ್ಮಾ, ಮದ್ದೂರು ತಾಲ್ಲೂಕು ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಆಗಿದ್ದಾರೆ. ಆರೋಪಿಗಳ ಬಂಧನವಾಗುತ್ತಿದ್ದಂತೆ ಸಿಸಿಬಿ ಪೊಲೀಸರು, ವರ್ಷಿಣಿ ಮನೆ ಮೇಲೆ ದಾಳಿ ಮಾಡಿದ್ದರು. ಅದೇ ಸಂದರ್ಭದಲ್ಲಿ ತನಿಖಾಧಿಕಾರಿಗೆ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರು ಕರೆ ಮಾಡಿದ್ದರು ಎಂಬ ಸುದ್ದಿ ಹರಿದಾಡಿತ್ತು.

ಅದಕ್ಕೆ ಪ್ರತಿಕ್ರಿಯಿಸಿದ ಅಲೋಕ್‌ಕುಮಾರ್, ‘ನನಗಾಗಲಿ, ನನ್ನ ಅಧಿಕಾರಿಗಳಿಗಾಗಲಿ ಯಾರೊಬ್ಬರೂ ಕರೆ ಮಾಡಿಲ್ಲ. ತಪ್ಪಿತಸ್ಥರು ಯಾರೇ ಇದ್ದರೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ. ನಮಗೆ ಯಾವುದೇ ರಾಜಕೀಯ ಒತ್ತಡ ಇಲ್ಲ’ ಎಂದು ಹೇಳಿದರು.

‘ಪ್ರಕರಣದ ಸಂಚಿನಲ್ಲಿ ವರ್ಷಿಣಿ ಅವರ ಕುಟುಂಬದವರ ಪಾತ್ರವೂ ಇರುವ ಅನುಮಾನವಿದೆ. ಅದನ್ನು ಪತ್ತೆ ಮಾಡುತ್ತಿದ್ದೇವೆ’ ಎಂದರು.  

ರೌಡಿ ಹೇಮಂತ್ ಕಾಲಿಗೆ ಗುಂಡೇಟು

ಲಕ್ಷ್ಮಣ ಹತ್ಯೆ ಬಳಿಕ ತಲೆಮರೆಸಿಕೊಂಡಿದ್ದ ರೌಡಿ ಹೇಮಂತ್‌ ಅಲಿಯಾಸ್ ಹೇಮಿಯನ್ನು ಸಿಸಿಬಿಯ ಇನ್‌ಸ್ಪೆಕ್ಟರ್ ಹರೀಶ್ ಅವರು ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ.

ಅನ್ನಪೂರ್ಣೇಶ್ವರಿ ನಗರ ಬಳಿಯ ಹನುಮಗಿರಿ ದೇವಸ್ಥಾನ ಸಮೀಪ ಹೇಮಂತ್ ಅಡಗಿಕೊಂಡಿದ್ದ. ಸಿಸಿಬಿ ಪೊಲೀಸರ ತಂಡ ಆತನನ್ನು ಬಂಧಿಸಲು ಹೋದಾಗ, ಕಾನ್‌ಸ್ಟೆಬಲ್ ಆನಂದ್ ಎಂಬುವರ ಮೇಲೆಯೇ ಹಲ್ಲೆ ನಡೆಸಲು ಮುಂದಾಗಿದ್ದ. ಆತ್ಮರಕ್ಷಣೆಗಾಗಿ ಹರೀಶ್ ಆತನ ಮೇಲೆ ಗುಂಡು ಹಾರಿಸಿದರು.

‘ಬ್ಯಾಡರಹಳ್ಳಿ‌ ಠಾಣೆ ರೌಡಿಶೀಟರ್ ಆಗಿದ್ದ ಹೇಮಂತ್, ಕೊಲೆ, ಕೊಲೆಗೆ ಯತ್ನ ಹಾಗೂ ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದ. ಜಡೇಜಾ ರವಿ ಹಾಗೂ ಚನ್ನಪಟ್ಟಣದ ಆಂಬೊಡೆ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ. ಕೃತ್ಯಕ್ಕೆ ಈತನದ್ದೇ ಸ್ಕಾರ್ಪಿಯಾ ಬಳಸಲಾಗಿತ್ತು. ಅದನ್ನು ಜಪ್ತಿ ಮಾಡಬೇಕಿದೆ’ ಎಂದು ಸಿಸಿಬಿ ಅಧಿಕಾರಿಯೊಬ್ಬರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !