ಬಾಳು ಕೊಡುವುದಾಗಿ ₹90 ಲಕ್ಷ ಪೀಕಿದ್ದ!

7
ಫೇಸ್‌ಬುಕ್ ಗೆಳತಿಗೆ ನಿವೇಶನದ ಆಮಿಷ l ವಿಚ್ಛೇದನ ಕೊಡಿಸಿ ಪರಾರಿಯಾಗಿದ್ದ ವಂಚಕನ ಸೆರೆ

ಬಾಳು ಕೊಡುವುದಾಗಿ ₹90 ಲಕ್ಷ ಪೀಕಿದ್ದ!

Published:
Updated:
Deccan Herald

ಬೆಂಗಳೂರು: ಮದುವೆ ಆಗುವುದಾಗಿ ಹಾಗೂ ಕಡಿಮೆ ಬೆಲೆಗೆ ನಿವೇಶನ ಕೊಡಿಸುವುದಾಗಿ ಫೇಸ್‌ಬುಕ್ ಗೆಳತಿಗೆ ನಂಬಿಸಿ ₹ 90 ಲಕ್ಷ ನಗದು ಹಾಗೂ ಚಿನ್ನಾಭರಣ ಸುಲಿಗೆ ಮಾಡಿದ್ದ ವಂಚಕನೊಬ್ಬ ಯಶವಂತಪುರ ಪೊಲೀಸರ ಬಲೆಗೆ ಬಿದ್ದಿದ್ದಾನೆ.

‘ಸುಬೇದಾರ್‌ಪಾಳ್ಯದ ವಾದಿರಾಜ್ (40) ಎಂಬಾತನನ್ನು ಬಂಧಿಸಿ, ₹ 3 ಲಕ್ಷ ಜಪ್ತಿ ಮಾಡಿದ್ದೇವೆ. ಎಚ್‌ಎಎಲ್‌ ಸಂಸ್ಥೆಯ ನಿವೃತ್ತ ಅಧಿಕಾರಿಯೊಬ್ಬರ ಮಗನಾದ ಈತನ ವಿರುದ್ಧ ಮೈಸೂರಿನ ವಿಚ್ಛೇದಿತ ಮಹಿಳೆಯೊಬ್ಬರು ನ.13ರಂದು ದೂರು ಕೊಟ್ಟಿದ್ದರು. ಮೊಬೈಲ್ ಕರೆ ವಿವರದ (ಸಿಡಿಆರ್) ಸುಳಿವು ಆಧರಿಸಿ ಆರೋಪಿಯನ್ನು ಪತ್ತೆ ಮಾಡಿದೆವು’ ಎಂದು ಪೊಲೀಸರು ಹೇಳಿದ್ದಾರೆ.

ನಾನಾ ಆಮಿಷ: ವಾದಿರಾಜ್ ಹಲವು ವರ್ಷಗಳಿಂದ ಇದೇ ದಂಧೆ ನಡೆಸುತ್ತ ಬಂದಿದ್ದಾನೆ. ಫೇಸ್‌ಬುಕ್‌ನಲ್ಲಿ ಯುವತಿಯರನ್ನು ಪರಿಚಯ ಮಾಡಿಕೊಂಡು ಸರ್ಕಾರಿ ನಿವೇಶನ, ಉದ್ಯೋಗ, ಚಲನಚಿತ್ರಗಳಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ ಸುಲಿಗೆ ಮಾಡುತ್ತಿದ್ದಾನೆ. ಗಂಡನ ಈ ವರ್ತನೆ ಸಹಿಸದೆ ಪತ್ನಿ ಐದು ವರ್ಷಗಳ ಹಿಂದೆಯೇ ಪ್ರತ್ಯೇಕವಾಗಿದ್ದಾರೆ. ಪೋಷಕರು ಸಹ ಆರೋಪಿಯನ್ನು ಮನೆಯಿಂದ ಹೊರಹಾಕಿದ್ದಾರೆ.

ಫಿರ್ಯಾದಿ ಮಹಿಳೆಗೆ 2017ರ ಜೂನ್‌ನಲ್ಲಿ ಫೇಸ್‌ಬುಕ್ ಮೂಲಕ ವಾದಿರಾಜ್‌ನ ಪರಿಚಯವಾಗಿದೆ. ಕೆಲ ದಿನಗಳ ಚಾಟಿಂಗ್ ಬಳಿಕ ಇಬ್ಬರೂ ಆತ್ಮೀಯರಾಗಿದ್ದು, ಕೌಟುಂಬಿಕ ಸಮಸ್ಯೆಗಳನ್ನು ಪರಸ್ಪರ ಹಂಚಿಕೊಂಡಿದ್ದಾರೆ. ತಾವು ವಿಚ್ಛೇದನ ಪಡೆಯಲು ಓಡಾಡುತ್ತಿರುವುದಾಗಿ ಸಂತ್ರಸ್ತೆ ಹೇಳಿಕೊಂಡಾಗ, ‘ನೀವು ಈ ವಯಸ್ಸಿಗೇ ಗಂಡನಿಂದ ದೂರವಾಗುತ್ತಿರುವುದನ್ನು ನೋಡಿದರೆ ಬೇಸರವಾಗುತ್ತದೆ. ನಾನೇ ನಿಮ್ಮನ್ನು ಮದುವೆ ಆಗಿ ಬಾಳು ಕೊಡುತ್ತೇನೆ’ ಎಂದು ನಂಬಿಸಿದ್ದ.

‘ನೀವು ನೋಡುವುದಕ್ಕೂ ಚೆನ್ನಾಗಿದ್ದೀರಾ. ನನಗೆ ಧಾರಾವಾಹಿ ಹಾಗೂ ಸಿನಿಮಾಗಳ ನಿರ್ಮಾಪಕರ ಪರಿಚಯವಿದೆ. ನೀವು ಒಪ್ಪಿದರೆ ಅವರೊಂದಿಗೆ ಮಾತನಾಡಿ ನಟನೆಗೆ ಅವಕಾಶಗಳನ್ನು ಕೊಡಿಸುತ್ತೇನೆ’ ಎಂದೂ ಹೇಳಿದ್ದ. ಆ ನಾಜೂಕಿನ ಮಾತುಗಳನ್ನು ನಂಬಿದ ಸಂತ್ರಸ್ತೆ, ಕೆಲ ದಿನಗಳ ನಂತರ ಆತನನ್ನು ಭೇಟಿಯಾಗಿದ್ದರು. ವಾದಿರಾಜ್ ಜತೆ ಮಡಿಕೇರಿ, ಊಟಿ ಸೇರಿದಂತೆ ನಾಲ್ಕೈದು ಪ್ರವಾಸಿ ತಾಣಗಳಿಗೂ ಹೋಗಿ ಬಂದಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸಂಸಾರಕ್ಕೆ ಹಣ ಬೇಕೆಂದ: ‘ಯಶವಂತಪುರದ ನವನಿಧಿ ಕಂಫರ್ಟ್‌ ಲಾಡ್ಜ್‌ನಲ್ಲಿ ನಾನು ಕಚೇರಿ ಹೊಂದಿರುವುದಾಗಿ ಹೇಳಿದ್ದ ವಾದಿರಾಜ್, ಒಮ್ಮೆ ಅಲ್ಲಿಗೆ ಕರೆಸಿಕೊಂಡಿದ್ದ. ‘ನಾಳೆ ದೇವಸ್ಥಾನದಲ್ಲಿ ಮದುವೆ ಆಗೋಣ. ಆದರೆ, ಸಂಸಾರ ನಡೆಸುವುದಕ್ಕೆ ಹಾಗೂ ಮನೆ ಬಾಡಿಗೆ ಪಡೆಯುವುದಕ್ಕೆ ಸದ್ಯ ನನ್ನ ಬಳಿ ದುಡ್ಡಿಲ್ಲ. ನೀವು ₹ 6 ಲಕ್ಷ ಹೊಂದಿಸಿದರೆ ಕೆಲ ದಿನಗಳ ಬಳಿಕ ಮರಳಿಸುತ್ತೇನೆ’ ಎಂದಿದ್ದ. ಅದಕ್ಕೆ ಒಪ್ಪಿದ ನಾನು, ಮನೆಯಲ್ಲಿದ್ದ 130 ಗ್ರಾಂ ಚಿನ್ನಾಭರಣವನ್ನು ಹಾಗೂ ಸೋದರಿಯಿಂದ ಪಡೆದಿದ್ದ ₹ 5 ಲಕ್ಷವನ್ನು ಆತನಿಗೆ ಕೊಟ್ಟಿದ್ದೆ’ ಎಂದು ಸಂತ್ರಸ್ತೆ ದೂರಿನಲ್ಲಿ ವಿವರಿಸಿದ್ದಾರೆ.

‘ಹಣ ಕೈಸೇರಿದ ಬಳಿಕ ವಿವಿಧ ನೆಪಗಳನ್ನು ಹೇಳಿ ಮದುವೆ ದಿನಾಂಕ ಮುಂದೂಡಿದ. ಕೆಲ ದಿನಗಳ ನಂತರ ಪುನಃ ನನ್ನನ್ನು ಭೇಟಿಯಾಗಿ, ‘ಸಚಿವರ ಸಂಬಂಧಿಕರಾದ ಹರೀಶ್ ಗೌಡ ಹಾಗೂ ರಾಕೇಶ್ ಎಂಬುವರು ನನ್ನ ಆಪ್ತರು. ಅವರ ಮೂಲಕ ಸರ್ಕಾರಿ ನಿವೇಶನಗಳನ್ನು ಕಡಿಮೆ ಬೆಲೆಗೆ ನಿಮ್ಮ ಸಂಬಂಧಿಕರಿಗೆ ಕೊಡಿಸುತ್ತೇನೆ’ ಎಂದಿದ್ದ. ಆ ಮಾತನ್ನೂ ನಂಬಿದ ನಾನು, ಸಂಬಂಧಿಕರು ಹಾಗೂ ಸ್ನೇಹಿತರಿಂದ ತಲಾ ₹ 2 ಲಕ್ಷ ಸಂಗ್ರಹಿಸಿ, 45 ನಿವೇಶನಗಳ ಖರೀದಿಗಾಗಿ ₹ 90 ಲಕ್ಷ ಹೊಂದಿಸಿ ಕೊಟ್ಟಿದ್ದೆ’ ಎಂದು ಹೇಳಿದ್ದಾರೆ.

ವಿಚ್ಛೇದನವನ್ನೂ ಕೊಡಿಸಿದ: ‘ತಾನೇ ಮುತುವರ್ಜಿ ವಹಿಸಿ ವಿಚ್ಛೇದನ ಪ್ರಕರಣವನ್ನು ಇತ್ಯರ್ಥ ಮಾಡಿಸಿದ ವಾದಿರಾಜ್, ಆ ನಂತರ ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡು ನಾಪತ್ತೆಯಾದ. ಹುಡುಕಿಕೊಂಡು ಯಶವಂತಪುರಕ್ಕೆ ಹೋದರೆ, ಆತನ ಕಚೇರಿಗೂ ಬೀಗ ಬಿದ್ದಿತ್ತು. ನನ್ನ ಎಟಿಎಂ ಕಾರ್ಡ್‌ ಆತನ ಬಳಿಯೇ ಇದೆ. ಅದರ ಪಿನ್ ನಂಬರ್ ಕೂಡ ವಾದಿರಾಜ್‌ಗೆ ಗೊತ್ತಿದೆ. ಆದಷ್ಟು ಬೇಗ ಆರೋಪಿಯನ್ನು ಬಂಧಿಸಿ ಹಣ ವಾಪಸ್ ಕೊಡಿಸಿ’ ಎಂದು ಸಂತ್ರಸ್ತೆ ಮನವಿ ಮಾಡಿದ್ದರು.

ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆ

‘ವಾದಿರಾಜ್ ಹಾಗೂ ಸಂತ್ರಸ್ತೆ ಲಾಡ್ಜ್‌ನಲ್ಲಿ ಭೇಟಿಯಾಗಿರುವ ದೃಶ್ಯ ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಆತನ ಚಹರೆ ಹಿಡಿದು ಪೋಷಕರನ್ನು ಪತ್ತೆ ಮಾಡಿದೆವು. ಆದರೆ, ‘ಆರು ತಿಂಗಳ ಹಿಂದೆಯೇ ಆತನನ್ನು ಮನೆಯಿಂದ ಹೊರ ಹಾಕಿದ್ದೇವೆ’ ಎಂದು ಅವರು ಹೇಳಿದರು. ವಾದಿರಾಜ್‌ನ ಗೆಳೆಯರ ಬಳಗದಲ್ಲಿ ವಿಚಾರಿಸಿದಾಗ ಆತನ ಇನ್ನೊಂದು ಮೊಬೈಲ್ ಸಂಖ್ಯೆ ಸಿಕ್ಕಿತು. ಅದರ ಜಾಡು ಹಿಡಿದು ಮತ್ತೀಕೆರೆಯಲ್ಲಿ ವಶಕ್ಕೆ ಪಡೆದೆವು’ ಎಂದು ಪೊಲೀಸರು ಮಾಹಿತಿ ನೀಡಿದರು.

Tags: 

ಬರಹ ಇಷ್ಟವಾಯಿತೆ?

 • 32

  Happy
 • 1

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !