ಬೆಸ್ಕಾಂ ಎಂಜಿನಿಯರ್ ವಿರುದ್ಧ ಎಫ್‌ಐಆರ್‌

7
ನೈಸರ್ಗಿಕ ಅನಿಲದ ಪೈಪ್‌ ತುಂಡು; ನಿರ್ಲಕ್ಷ್ಯ ಆರೋಪ

ಬೆಸ್ಕಾಂ ಎಂಜಿನಿಯರ್ ವಿರುದ್ಧ ಎಫ್‌ಐಆರ್‌

Published:
Updated:

ಬೆಂಗಳೂರು: ಸಿಂಗಸಂದ್ರ ಬಳಿಯ ಎಇಸಿಎಸ್ ಬಡಾವಣೆಯ ನೆಲದಡಿಯಲ್ಲಿ ಅಳವಡಿಸಿದ್ದ ನೈಸರ್ಗಿಕ ಅನಿಲದ ಪೈಪ್‌ ತುಂಡಾಗಿ ಬೆಂಕಿ ಹೊತ್ತಿಕೊಂಡಿದ್ದ ಪ್ರಕರಣ ಸಂಬಂಧ ಬೆಸ್ಕಾಂನ ಸಹಾಯಕ ಎಂಜಿನಿಯರ್ ಮೋಹನ್ ವಿರುದ್ಧ ಪ್ರಕರಣ ದಾಖಲಾಗಿದೆ.

ಚೈತನ್ಯ ಶಾಲೆ ಸಮೀಪದ ಶಿವ ದೇವಸ್ಥಾನ ರಸ್ತೆಯಲ್ಲಿ ಶನಿವಾರ (ಜ. 19ರಂದು) ಗ್ಯಾಸ್‌ ಪೈಪ್ ಒಡೆದಿದ್ದರಿಂದಾಗಿ ಬೆಂಕಿ ಹೊತ್ತಿಕೊಂಡಿತ್ತು. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದರು.

‘ಅವಘಡ ಸಂಬಂಧ ‘ಗೇಲ್’ ಸಂಸ್ಥೆ ಮುಖ್ಯ ವ್ಯವಸ್ಥಾಪಕ ರವಿಕುಮಾರ್ ರೇಬಾ ಸೋಮವಾರ ದೂರು ನೀಡಿದ್ದಾರೆ. ಅದರನ್ವಯ  ಸಹಾಯಕ ಎಂಜಿನಿಯರ್ ಮೋಹನ್, ಗುತ್ತಿಗೆದಾರ ಹಾಗೂ ಕಾರ್ಮಿಕರ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಂಡಿದ್ದೇವೆ. ಆರೋಪಿಗಳಿಗೆ ನೋಟಿಸ್ ಕೊಟ್ಟು ವಿಚಾರಣೆ ನಡೆಸಬೇಕಿದೆ’ ಎಂದು ಪರಪ್ಪನ ಅಗ್ರಹಾರ ಪೊಲೀಸರು ಹೇಳಿದರು.

ಅನುಮತಿ ಪಡೆಯದ ಎಂಜಿನಿಯರ್: ‘ಮನೆಗಳಿಗೆ ನೇರವಾಗಿ ನೈಸರ್ಗಿಕ ಅನಿಲ ಪೂರೈಕೆ ಮಾಡಲು ಗೇಲ್‌ ವತಿಯಿಂದ ನೆಲದಡಿಯಲ್ಲಿ ಪೈಪ್‌ಲೈನ್ ಅಳವಡಿಸಲಾಗಿದೆ. ಎಂಜಿನಿಯರ್ ಮೋಹನ್, ಯಾವುದೇ ಅನುಮತಿ ಪಡೆಯದೇ ನಿರ್ಲಕ್ಷ್ಯ ಹಾಗೂ ಅಜಾಗರೂಕತೆಯಿಂದ ಪೈಪ್‌ ಇರುವ ಜಾಗದಲ್ಲಿ ಗುಂಡಿ ತೊಡಿಸಿದ್ದರಿಂದಾಗಿ ಅವಘಡ ಸಂಭವಿಸಿದೆ’ ಎಂದು ರವಿಕುಮಾರ್‌ ದೂರಿನಲ್ಲಿ ಹೇಳಿದ್ದಾರೆ.

‘ಬೆಸ್ಕಾಂನವರು ಎಚ್‌.ಟಿ. ಕೇಬಲ್‌ ಅಳವಡಿಸುವುದಕ್ಕಾಗಿ ಜ. 19ರಂದು ಸಂಜೆ 6.55 ಗಂಟೆ ಸುಮಾರಿಗೆ ರಸ್ತೆ ಪಕ್ಕದಲ್ಲಿ ಗುಂಡಿ ತೊಡುತ್ತಿದ್ದರು. ಅದೇ ವೇಳೆ ಪೈಪ್ ಒಡೆದಿತ್ತು. ಗ್ಯಾಸ್‌ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿತ್ತು. 7.30 ಗಂಟೆ ಸುಮಾರಿಗೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಗ್ಯಾಸ್ ಆಪರೇಟರ್‌ಗಳು, ಸ್ಥಳಕ್ಕೆ ಬಂದು ಬೆಂಕಿ ನಂದಿಸಿದ್ದರು. ನಂತರವೇ ಗ್ಯಾಸ್ ಸರಬರಾಜು ಯಥಾಸ್ಥಿತಿಗೆ ಬಂತು’ ಎಂದು ತಿಳಿಸಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !