ಚಹಾ ಕುಡಿಸಿ 1,270 ಕೆ.ಜಿ ಗೋಡಂಬಿ ಕದ್ದರು!

7
ಮಹಾರಾಷ್ಟ್ರದ ಕಾರ್ಖಾನೆಗೆ ವಂಚನೆ, ಕಳ್ಳನ ಸೆರೆ ಹಿಡಿದ ಪೊಲೀಸರು

ಚಹಾ ಕುಡಿಸಿ 1,270 ಕೆ.ಜಿ ಗೋಡಂಬಿ ಕದ್ದರು!

Published:
Updated:

ಬೆಂಗಳೂರು: ‘ಡ್ರೈಫ್ರೂಟ್ಸ್’ ವ್ಯಾಪಾರಿಗಳ ಸೋಗಿನಲ್ಲಿ ಕಳವು ಕಾರ್ಯಾಚರಣೆಗೆ ಇಳಿದ ದುಷ್ಕರ್ಮಿಗಳಿಬ್ಬರು, ಕಾರ್ಖಾನೆ ನೌಕರನಿಗೆ ಅರ್ಧ ಕಪ್‌ ಚಹಾ ಕುಡಿಸಿ ₹13 ಲಕ್ಷ ಮೌಲ್ಯದ 1,270 ಕೆ.ಜಿ ಗೋಡಂಬಿ ಇದ್ದ ಟಿನ್‌ಗಳನ್ನು ಹೊತ್ತೊಯ್ದಿದ್ದಾರೆ!

ಈ ಸಂಬಂಧ ಮಹಾರಾಷ್ಟ್ರದ ‘ಸುರಭಿ ಕಾಜು ಪ್ರಕ್ರಿಯಾ ಉದ್ಯೋಗ್’ ಕಾರ್ಖಾನೆ ವ್ಯವಸ್ಥಾಪಕ ಕೃಷ್ಣ ಬಾಗಿಲಗೇಕರ್ ಅವರು ಕಲಾಸಿಪಾಳ್ಯ ಠಾಣೆಗೆ ದೂರು ಕೊಟ್ಟಿದ್ದಾರೆ. ಮಂಗಳೂರಿನ ಸಿದ್ದಿಕ್ ಎಂಬಾತನನ್ನು ಬಂಧಿಸಿ 200 ಕೆ.ಜಿ ಗೋಡಂಬಿ ಜಪ್ತಿ ಮಾಡಿರುವ ಪೊಲೀಸರು, ಪ್ರಮುಖ ಆರೋಪಿ ಕೇರಳದ ನೌಷದ್ ಅಲಿಯಾಸ್ ಸಾದಿಕ್ ಬಂಧನಕ್ಕೆ ಬಲೆ ಬೀಸಿದ್ದಾರೆ.

ಡಿ.3ರಂದು ಮಹಾರಾಷ್ಟ್ರಕ್ಕೆ ತೆರಳಿದ್ದ ನೌಷದ್ ಹಾಗೂ ಸಿದ್ದಿಕ್, ಕಾರ್ಖಾನೆ ವ್ಯವಸ್ಥಾಪಕರನ್ನು ಭೇಟಿಯಾಗಿದ್ದರು. ‘ನಾವು ಬೆಂಗಳೂರಿನವರು. ಹೊಸದಾಗಿ ಡ್ರೈಫ್ರೂಟ್ಸ್ ವ್ಯಾಪಾರ ಶುರು ಮಾಡುತ್ತಿದ್ದೇವೆ. ಇನ್ನುಮುಂದೆ ನಿಮ್ಮಿಂದಲೇ ಮಾಲು ಖರೀದಿಸುತ್ತೇವೆ’ ಎಂದು ನಂಬಿಸಿದ್ದರು. ಅದಕ್ಕೆ ಅವರೂ ಒಪ್ಪಿದ್ದರು.

ಅದೇ ದಿನ 1,270 ಕೆ.ಜಿ ಗೋಡಂಬಿ ಇದ್ದ 127 ಟಿನ್‌ಗಳನ್ನು ಪಡೆದುಕೊಂಡಿದ್ದ ಆರೋಪಿಗಳು, ‘ನಾವು ಸದ್ಯ ಹಣ ತಂದಿಲ್ಲ. ನಿಮ್ಮ ನೌಕರನೊಬ್ಬನನ್ನು ನಮ್ಮೊಟ್ಟಿಗೆ ಕಳುಹಿಸಿಕೊಡಿ. ಬೆಳಗಾವಿಯಲ್ಲಿರುವ ಸಂಬಂಧಿಯಿಂದ ಹಣ ಕೊಡಿಸುತ್ತೇವೆ’ ಎಂದಿದ್ದರು. ಅಂತೆಯೇ ಅವರು ಸಿದ್ದಪ್ಪರಾಮು ಪಾಟೀಲ ಎಂಬ ಕಾರ್ಮಿಕನನ್ನು ಜೊತೆಗೆ ಕಳುಹಿಸಿದ್ದರು.

ಬೆಂಗಳೂರಿಗೂ ಕರೆದರು: ‘ವ್ಯವಸ್ಥಾಪಕ ಸೂಚನೆಯಂತೆ ಡಿ.5ರ ರಾತ್ರಿ ಕಾರ್ಖಾನೆಯ ವಾಹನದಲ್ಲೇ ಮಾಲನ್ನು ಬೆಳಗಾವಿ ಬಸ್ ನಿಲ್ದಾಣಕ್ಕೆ ಸಾಗಿಸಿದೆವು. ಟಿನ್‌ಗಳನ್ನು ಬಸ್‌ಗೆ ಲೋಡ್ ಮಾಡಿ ₹ 13 ಲಕ್ಷ ಕೇಳಿದಾಗ, ‘ಸಂಬಂಧಿ ನಿನ್ನೆ ರಾತ್ರಿಯಷ್ಟೇ ಬೆಂಗಳೂರಿಗೆ ಹೋಗಿದ್ದಾನಂತೆ. ಅಲ್ಲಿಗೇ ಹೋಗೋಣ ಬನ್ನಿ’ ಎಂದರು. ನಂತರ ಅವರ ಜತೆ ಬೆಂಗಳೂರಿನ ಬಸ್ ಹತ್ತಿದ್ದೆ’ ಎಂದು ಪಾಟೀಲ ಪೊಲೀಸರಿಗೆ ಹೇಳಿಕೆ ಕೊಟ್ಟಿದ್ದಾರೆ.

‘ಬೆಳಿಗ್ಗೆ 8 ಗಂಟೆಗೆ ಬಸ್ ಕಲಾಸಿಪಾಳ್ಯದ ‘ನ್ಯಾಷನಲ್ ಟ್ರಾವೆಲ್ಸ್’ ಏಜೆನ್ಸಿಯ ನಿಲ್ದಾಣಕ್ಕೆ ಬಂತು. ಟಿನ್‌ಗಳನ್ನು ಇಳಿಸಿಕೊಳ್ಳುವಂತೆ ಹೇಳಿದಾಗ, ‘ನಮ್ಮ ಅಂಗಡಿಯಿಂದ ವಾಹನ ಬರುತ್ತದೆ. ಅಲ್ಲಿಯವರೆಗೂ ಬಸ್‌ನಲ್ಲೇ ಇರಲಿ’ ಎಂದರು. ಈ ಹಂತದಲ್ಲಿ ಸಿದ್ದಿಕ್, ‘ಬನ್ನಿ ಚಹಾ ಕುಡಿದು ಬರೋಣ’ ಎಂದು ಸಮೀಪದ ಅಂಗಡಿಗೆ ಕರೆದುಕೊಂಡು ಹೋದ. ಅರ್ಧ ಕಪ್‌ ಚಹಾ ಕುಡಿದು ವಾಪಸ್ ಬರುವಷ್ಟರಲ್ಲಿ ಬಸ್‌ನಲ್ಲಿ ಟಿನ್‌ಗಳೇ ಇರಲಿಲ್ಲ’ ಎಂದು ವಿವರಿಸಿದ್ದಾರೆ.

ಅಯ್ಯೋ ಮೊಬೈಲ್: ‘ಟಿನ್‌ಗಳ ಬಗ್ಗೆ ಪ್ರಶ್ನಿಸಿದಾಗ ಸಿದ್ದಿಕ್, ‘ನಮ್ಮ ಹುಡುಗರು ಅನ್‌ಲೋಡ್ ಮಾಡಿಕೊಂಡು ಹೋಗಿದ್ದಾರೆ. ಇಲ್ಲೇ ಇರಿ. ನೌಷದ್ ಅಣ್ಣ ಬಂದು ಹಣ ಕೊಡುತ್ತಾರೆ’ ಎಂದು ಹೇಳಿದ. ನಾಲ್ಕೈದು ನಿಮಿಷ ಇಬ್ಬರೂ ಅಲ್ಲೇ ಮಾತನಾಡುತ್ತ ನಿಂತಿದ್ದೆವು. ಒಮ್ಮೆಲೆ ಆತ, ‘ಅಯ್ಯೋ ಮೊಬೈಲನ್ನು ಟೀ ಅಂಗಡಿಯಲ್ಲಿ ಚಾರ್ಜ್‌ಗೆ ಹಾಕಿದ್ದೆ. ಅಲ್ಲೇ ಬಿಟ್ಟು ಬಂದಿದ್ದೇನೆ. ತೆಗೆದುಕೊಂಡು ಬರುತ್ತೇನೆ’ ಎಂದು ಹೇಳಿ ಹೊರಟು ಹೋದವನು ಅರ್ಧ ತಾಸು ಕಳೆದರೂ ವಾಪಸಾಗಲಿಲ್ಲ. ಸುತ್ತಮುತ್ತ ಹುಡುಕಾಡಿದರೂ ಸುಳಿವೇ ಸಿಗಲಿಲ್ಲ. ಕೂಡಲೇ ವ್ಯವಸ್ಥಾಪಕರಿಗೆ ಕರೆ ಮಾಡಿ ವಿಷಯ ತಿಳಿಸಿದೆ’ ಎಂದು ಪಾಟೀಲ ಹೇಳಿರುವುದಾಗಿ ಪೊಲೀಸರು ಮಾಹಿತಿ ನೀಡಿದರು.

ಸುಳಿವು ಕೊಟ್ಟ ವಿಸಿಟಿಂಗ್ ಕಾರ್ಡ್

‘ನೌಷದ್ ಹಾಗೂ ಸಿದ್ದಿಕ್, ಕಾರ್ಖಾನೆ ವ್ಯವಸ್ಥಾಪಕರಿಗೆ ವಿಸಿಟಿಂಗ್ ಕಾರ್ಡ್ ಕೊಟ್ಟು ತಮ್ಮ ಪರಿಚಯ ಮಾಡಿಕೊಂಡಿದ್ದರು. ಕೃತ್ಯ ಎಸಗಿದ ನಂತರ ಇಬ್ಬರೂ ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡಿದ್ದರು. ವಿಸಿಟಿಂಗ್ ಕಾರ್ಡ್‌ನಲ್ಲಿದ್ದ ಮೊಬೈಲ್ ಸಂಖ್ಯೆ ಆಧರಿಸಿ ‘ಟವರ್ ಡಂಪ್’ ತನಿಖೆ ನಡೆಸಿದಾಗ, ಆ ಸಂಖ್ಯೆ ಹಿಂದೆ ವಿಜಯನಗರ ವ್ಯಾಪ್ತಿಯ ಟವರ್‌ನಿಂದ ಸಂಪರ್ಕ ಪಡೆದಿದ್ದ ಸಂಗತಿ ಗೊತ್ತಾಯಿತು’ ಎಂದು ಅಧಿಕಾರಿಯೊಬ್ಬರು ಹೇಳಿದರು.

‘ಆ ಸುಳಿವು ಹಿಡಿದು ಆರೋಪಿಗಳು ತಂಗಿದ್ದ ಮನೆಯನ್ನು ಪತ್ತೆ ಹಚ್ಚಿದೆವು. ಅದರ ಮಾಲೀಕರನ್ನು ವಿಚಾರಿಸಿದಾಗ, ‘ಸಿದ್ದಿಕ್ ಹಾಗೂ ನೌಷದ್ ಎಂಬುವರು ಮೂರು ತಿಂಗಳಿನಿಂದ ನಮ್ಮ ಮನೆಯಲ್ಲೇ ವಾಸವಿದ್ದರು. 15 ದಿನಗಳಿಂದ ಅವರನ್ನು ನೋಡಿಲ್ಲ’ ಎಂದರು. ಅಲ್ಲದೆ, ಮನೆ ಬಾಡಿಗೆ ಪಡೆಯುವಾಗ ಅವರು ಕೊಟ್ಟಿದ್ದ ದಾಖಲೆಗಳನ್ನು ಒಪ್ಪಿಸಿದರು. ಮೂಲ ವಿಳಾಸ ಸಿಗುತ್ತಿ
ದ್ದಂತೆಯೇ ಮಂಗಳೂರಿಗೆ ತೆರಳಿ ಸಿದ್ದಿಕ್‌ನನ್ನು ವಶಕ್ಕೆ ಪಡೆದೆವು’ ಎಂದು ಮಾಹಿತಿ ನೀಡಿದರು.

***

ಆರೋಪಿಗಳು ಮಹಾರಾಷ್ಟ್ರ ಹಾಗೂ ಕೇರಳದ ಇನ್ನೂ ಮೂರು ಕಾರ್ಖಾನೆಗಳಿಗೆ ಇದೇ ರೀತಿ ವಂಚಿಸಿರುವ ಮಾಹಿತಿ ಇದೆ. ನೌಷದ್ ಸಿಕ್ಕ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ

-ಕಲಾಸಿಪಾಳ್ಯ ಪೊಲೀಸರು

ಬರಹ ಇಷ್ಟವಾಯಿತೆ?

 • 34

  Happy
 • 0

  Amused
 • 1

  Sad
 • 1

  Frustrated
 • 1

  Angry

Comments:

0 comments

Write the first review for this !