ಆಪ್ತಮಿತ್ರನ ಕೊಂದು ಸಮಾಧಿ ಮುಂದೆ ಪಶ್ಚಾತ್ತಾಪ!

7
ಮೂರು ವರ್ಷಗಳ ಬಳಿಕ ಬಯಲಾಯ್ತು ಸಾವಿನ ರಹಸ್ಯ * ಚಲಿಸುತ್ತಿದ್ದ ರೈಲಿನ ಮುಂದೆ ತಳ್ಳಿ ಹತ್ಯೆ

ಆಪ್ತಮಿತ್ರನ ಕೊಂದು ಸಮಾಧಿ ಮುಂದೆ ಪಶ್ಚಾತ್ತಾಪ!

Published:
Updated:
Prajavani

ಬೆಂಗಳೂರು: ಮೂರು ವರ್ಷಗಳ ಹಿಂದೆ ತನ್ನ ಸ್ನೇಹಿತನನ್ನು ಚಲಿಸುತ್ತಿದ್ದ ರೈಲಿನ ಮುಂದೆ ತಳ್ಳಿ ಕೊಲೆಗೈದಿದ್ದ ಅಭಿಷೇಕ್‌ (24) ಎಂಬಾತನಿಗೆ, ಇತ್ತೀಚೆಗೆ ಆ ಕರಾಳ ನೆನಪು ಕಾಡಲಾರಂಭಿಸಿತ್ತು. ಮೃತ ಸ್ನೇಹಿತ ಪ್ರತಿರಾತ್ರಿ ಕನಸಿನಲ್ಲಿ ಬರುತ್ತಿದ್ದರಿಂದ ಕಂಗಾಲಾಗಿದ್ದ ಅಭಿಷೇಕ್, ಕುಡಿದ ಮತ್ತಿನಲ್ಲಿ ‘ಆಪ್ತಮಿತ್ರ’ನ ಸಾವಿನ ರಹಸ್ಯವನ್ನು ಗೆಳೆಯರೆದರು ಬಹಿರಂಗಪಡಿಸಿ ಜೈಲು ಸೇರಿದ್ದಾನೆ!

ನಾಯಂಡಹಳ್ಳಿಯ ವಿನಾಯಕ ಲೇಔಟ್ ನಿವಾಸಿ ದಿನೇಶ್ (25) ಕೊಲೆಯಾದವರು. ಮೃತರ ತಂದೆ ಎಂ.ನಾಗರಾಜ್ ಕೊಟ್ಟ ದೂರಿನ ಅನ್ವಯ ಜ.14ರಂದು ಕೊಲೆ (ಐಪಿಸಿ 302) ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡ ಬೆಂಗಳೂರು ರೈಲ್ವೆ ಪೊಲೀಸರು, ಅಭಿಷೇಕ್‌ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ.

ಐದು ವರ್ಷಗಳ ಸ್ನೇಹ: ನಾಗರಾಜ್ ಸ್ವಂತ ಗ್ಯಾರೇಜ್ ಇಟ್ಟುಕೊಂಡಿದ್ದು, ಪಿಯುಸಿ ವ್ಯಾಸಂಗ ಮುಗಿಸಿದ ಬಳಿಕ ದಿನೇಶ್ ತಂದೆಯ ಗ್ಯಾರೇಜ್‌ನಲ್ಲೇ ಕೆಲಸ ಮಾಡುತ್ತಿದ್ದ. 2011ರಲ್ಲಿ ಅಭಿಷೇಕ್ ಕುಟುಂಬ ನಾಗರಾಜ್ ಅವರ ಪಕ್ಕದ ಮನೆಗೇ ಬಾಡಿಗೆ ಬಂತು. ಹೀಗೆ ಸ್ನೇಹಿತರಾದ ಅಭಿಷೇಕ್ ಹಾಗೂ ದಿನೇಶ್, ಕೆಲವೇ ದಿನಗಳಲ್ಲಿ ದುಶ್ಚಟಗಳ ದಾಸರಾದರು ಎಂದು ಪೊಲೀಸರು ಹೇಳಿದರು.

2016ರ ಮಾರ್ಚ್ ‌16ರ ಬೆಳಿಗ್ಗೆ ದಿನೇಶ್ ನಾಯಂಡಹಳ್ಳಿ ನಿಲ್ದಾಣದ ರೈಲ್ವೆ ಹಳಿ ಮೇಲೆ ಶವವಾಗಿ ಪತ್ತೆಯಾಗಿದ್ದರು. ಮೈಮೇಲೆ ರೈಲು ಹರಿದಿದ್ದರಿಂದ ದೇಹ ಛಿದ್ರವಾಗಿತ್ತು. ಮಗನ ಸಾವಿನ ಬಗ್ಗೆ ಪೋಷಕರು ಆಗಲೇ ಸಂಶಯ ವ್ಯಕ್ತಪಡಿಸಿದ್ದರು. ಆದರೆ, ಪೊಲೀಸರು ಹಲವರನ್ನು ವಿಚಾರಣೆ ನಡೆಸಿದ್ದರಾದರೂ ಯಾವುದೇ ಪ್ರಯೋಜನವಾಗಿರಲಿಲ್ಲ.

ನಶೆಯಲ್ಲಿ ಬಾಯ್ಬಿಟ್ಟ: ತನ್ನ ಸ್ನೇಹಿತರಾದ ಸುನೀಲ್ ಹಾಗೂ ಕೆಂಪೇಗೌಡ ಅವರೊಂದಿಗೆ ಇದೇ ಜ.13ರಂದು ಮದ್ಯಪಾನ ಮಾಡುತ್ತ ಕುಳಿತಿದ್ದ ಅಭಿಷೇಕ್, ನಶೆಯಲ್ಲಿ ದಿನೇಶ್ ಸಾವಿನ ಕುರಿತು ಮಾತನಾಡಿದ್ದ.

‘ನಾವೆಲ್ಲ ಒಳ್ಳೆಯ ಸ್ನೇಹಿತರು. ಆದರೆ, ನಿಮಗೆ ತಿಳಿಯದಂತಹ ದೊಡ್ಡ ತಪ್ಪು ಮಾಡಿದ್ದೇನೆ. ಆ ದಿನ ನಾಯಂಡಹಳ್ಳಿಯ ‘ಅಮೃತ ವೈನ್ಸ್‌’ನಲ್ಲಿ ನಾವೆಲ್ಲ ಪಾರ್ಟಿ ಮಾಡುವಾಗ ದಿನೇಶ್ ಸಹ ಜತೆಗಿದ್ದ. ನೀವಿಬ್ಬರೂ ಮನೆಗೆ ಹೋದ ಬಳಿಕ ನಾನು ಹಾಗೂ ದಿನೇಶ್ ನಾಯಂಡಹಳ್ಳಿ ರೈಲು ನಿಲ್ದಾಣದ ಬಳಿ ಹೋಗಿದ್ದೆವು. ಆಗ ಹಣಕಾಸಿನ ವಿಚಾರಕ್ಕೆ ನಮ್ಮ ನಡುವೆ ಜಗಳವಾಗಿತ್ತು. ಇದೇ ವೇಳೆ ಮೈಸೂರಿನ ಕಡೆಗೆ ರೈಲು ಹೋಗುತ್ತಿತ್ತು. ದಿನೇಶ್‌ನನ್ನು ನಾನೇ ರೈಲಿನ ಮುಂದೆ ತಳ್ಳಿ ಕೊಲೆ ಮಾಡಿದ್ದೆ’ ಎಂದು ಹೇಳಿದ್ದ.  

ಈ ವಿಷಯ ಕೇಳಿ ದಿಗಿಲುಗೊಂಡ ಸ್ನೇಹಿತರು, ಕೂಡಲೇ ದಿನೇಶ್ ತಂದೆಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಮರುದಿನ ಅವರು ಠಾಣೆಯ ಮೆಟ್ಟಿಲೇರಿದ್ದರು. ಪೊಲೀಸರು ಅಭಿಷೇಕ್‌ನನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ತಪ್ಪೊಪ್ಪಿಕೊಂಡಿದ್ದಾನೆ.

ಸಮಾಧಿ ಮುಂದೆ ನಿಂತು ಕ್ಷಮೆ

‘ಗೆಳೆಯ ಹಳಿ ದಾಟುವಾಗ ರೈಲಿಗೆ ಸಿಲುಕಿ ಸತ್ತು ಹೋದ’ ಎಂದೇ ಹೇಳಿಕೊಂಡು ತಿರುಗಾಡುತ್ತಿದ್ದ ಅಭಿಷೇಕ್‌ಗೆ ಇತ್ತೀಚೆಗೆ ಆತನ ನೆನಪು ಕಾಡಲಾರಂಭಿಸಿತ್ತು. ‘ದಿನೇಶ್ ಕನಸಿನಲ್ಲೂ ಬರುತ್ತಿದ್ದಾನೆ. ನನ್ನ ತಪ್ಪಿನ ಅರಿವಾಗಿ ಕೆಲ ದಿನಗಳ ಹಿಂದೆ ಆತನ ಸಮಾಧಿಗೆ ಪೂಜೆ ಸಲ್ಲಿಸಿದ್ದೇನೆ. ಅದರ ಮುಂದೆ ನಿಂತು ಕ್ಷಮೆಯನ್ನೂ ಕೋರಿದ್ದೇನೆ’ ಎಂದು ಆರೋಪಿ ಪೊಲೀಸರೆದುರು ಪಶ್ಚಾತ್ತಾಪ ಪಟ್ಟಿದ್ದಾನೆ.

ಸಂಶಯವಿದ್ದರೂ ನಂಬಿ ಕೆಟ್ಟೆವು

‘ಮಗನ ಶವ ಪತ್ತೆಯಾದ ಸ್ಥಳಕ್ಕೆ ಅಭಿಷೇಕ್ ಬಂದಿರಲಿಲ್ಲ. ತಿಥಿ ಕಾರ್ಯಕ್ಕೂ ಬರಲಿಲ್ಲ. ಗೆಳೆಯನ ಸಾವಿನಿಂದ ತುಂಬ ನೊಂದುಕೊಂಡಿರಬೇಕು ಎಂದೇ ಭಾವಿಸಿದ್ದೆವು. ಅದಾದ ಕೆಲವೇ ದಿನಗಳಲ್ಲಿ ಆತನ ಕುಟುಂಬ ಮನೆ ಖಾಲಿ ಮಾಡಿತು. ಅನುಮಾನದ ಮೇಲೆ ಒಮ್ಮೆ ಅಭಿಷೇಕ್‌ನನ್ನು ಹಿಡಿದು ವಿಚಾರಿಸಿದ್ದೆ. ‘ನಾವಿಬ್ಬರೂ ಹೇಗಿದ್ದೆವು ಎಂಬುದು ನಿಮಗೂ ಗೊತ್ತು. ಆದರೂ, ನನ್ನ ಮೇಲೇ ಸಂಶಯಪಡುತ್ತೀರಲ್ಲ’ ಎಂದು ಅತ್ತಿದ್ದ. ಆತನ ಮಾತು ಕೇಳಿ ನನ್ನ ಮೇಲೆ ನನಗೇ ಬೇಸರವಾಗಿತ್ತು. ಆ ವಿಚಾರವನ್ನು ಅಲ್ಲಿಗೇ ಬಿಟ್ಟಿದ್ದೆ. ಈಗ ನೋಡಿದರೆ, ನನ್ನ ಅತಿಯಾದ ನಂಬಿಕೆಯೇ ಸುಳ್ಳಾಗಿದೆ’ ಎಂದು ನಾಗರಾಜ್ ಹೇಳಿದರು.

ಬರಹ ಇಷ್ಟವಾಯಿತೆ?

 • 56

  Happy
 • 5

  Amused
 • 5

  Sad
 • 6

  Frustrated
 • 4

  Angry

Comments:

0 comments

Write the first review for this !