ಮಹಿಳೆಗೆ ಕಿರುಕುಳ, ಅಪಘಾತ, ಚೂರಿ ಇರಿತ...

7
ಹೊಸ ವರ್ಷದ ಸಂಭ್ರಮದ ನಡುವೆಯೇ ನಡೆದ ಅಹಿತಕರ ಘಟನೆಗಳು

ಮಹಿಳೆಗೆ ಕಿರುಕುಳ, ಅಪಘಾತ, ಚೂರಿ ಇರಿತ...

Published:
Updated:

ಬೆಂಗಳೂರು: ಹೊಸ ವರ್ಷದ ಸಂಭ್ರಮದ ನಡುವೆಯೇ ರಾಜಧಾನಿಯಲ್ಲಿ ಕೆಲ ಅಹಿತಕರ ಘಟನೆಗಳೂ ವರದಿಯಾಗಿವೆ. ಬಿಹಾರದ ದಂಪತಿ ಜತೆ ಪಾನಮತ್ತ ಪುಂಡರು ಅಸಭ್ಯವಾಗಿ ವರ್ತಿಸಿದ್ದರೆ, ಕೇಕ್ ಬೀಳಿಸಿದನೆಂದು ಯುವಕನ ತೊಡೆಗೆ ಚಾಕು ಇರಿಯಲಾಗಿದೆ. ಪಾರ್ಟಿ ಮುಗಿಸಿ ಮನೆಗೆ ಹೊರಟಿದ್ದ ವಿದ್ಯಾರ್ಥಿಗಳಿಬ್ಬರು ರಸ್ತೆ ಅಪಘಾತದಲ್ಲಿ ಅಸುನೀಗಿದ್ದಾರೆ. ಇದೆಲ್ಲದರ ನಡುವೆ ₹ 54 ಕೋಟಿ ಮೊತ್ತದ ಮದ್ಯ ಬಿಕರಿಯಾಗಿದೆ...

ಡಿ.31ರ ಸಂಜೆ ನಂತರ ನಗರದಲ್ಲಿ ನಡೆದಿರುವ ಕೆಲ ಪ್ರಮುಖ ವಿದ್ಯಮಾನಗಳಿವು.

ಮೈಮುಟ್ಟಿ ದುರ್ವರ್ತನೆ: ಬ್ರಿಗೇಡ್ ರಸ್ತೆಯಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಮುಗಿಸಿಕೊಂಡು ಮನೆಗೆ ಮರಳುತ್ತಿದ್ದ ಸಂಶೋಧನಾ ವಿದ್ಯಾರ್ಥಿನಿಯ ಮೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ ಪುಂಡರು, ಅವರ ಪತಿ ಮೇಲೂ ಹಲ್ಲೆ ನಡೆಸಿ ಮೊಬೈಲ್ ಕಿತ್ತುಕೊಂಡು ಹೋಗಿದ್ದಾರೆ.

ಸೋಮವಾರ ರಾತ್ರಿ 1 ಗಂಟೆ ಸುಮಾರಿಗೆ ರಿಚ್ಮಂಡ್ ವೃತ್ತದ ಬಳಿ ಈ ಘಟನೆ ನಡೆದಿದ್ದು, ಮೂವರು ಪುಂಡರ ಪೈಕಿ ಅರ್ಜುನ್ (26) ಎಂಬಾತನನ್ನು ಸಾರ್ವಜನಿಕರೇ ಹಿಡಿದು ಪೊಲೀಸರ ವಶಕ್ಕೆ ಕೊಟ್ಟಿದ್ದಾರೆ. ಸಂತ್ರಸ್ತೆ ಅಶೋಕನಗರ ಠಾಣೆಗೆ ದೂರು ಕೊಟ್ಟಿದ್ದು, ಪೊಲೀಸರು ಉಳಿದಿಬ್ಬರ ಬಂಧನಕ್ಕೆ ಬಲೆ ಬೀಸಿದ್ದಾರೆ.

‘ಪ್ರಜಾವಾಣಿ’ ಜತೆ ಮಾತನಾಡಿದ ಸಂತ್ರಸ್ತೆ, ‘ನಾವು ಬಿಹಾರದವರು. ಹತ್ತು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದೇವೆ. ಪತಿ ಖಾಸಗಿ ಕಾಲೇಜು ಒಂದರಲ್ಲಿ ಉಪನ್ಯಾಸಕರಾಗಿದ್ದಾರೆ. ಎಂ.ಜಿ.ರಸ್ತೆಯಲ್ಲಿ ಹೊಸ ವರ್ಷಾಚರಣೆಯ ಸಂಭ್ರಮ ಜೋರಿರುತ್ತದೆ ಎಂದು ಪರಿಚಿತರು ಹೇಳಿದ್ದರು. ಮಾಧ್ಯಮಗಳಲ್ಲೂ ನೋಡಿದ್ದೆವು. ಹೀಗಾಗಿ, ಪತಿಯನ್ನು ಕರೆದುಕೊಂಡು ರಾತ್ರಿ ಎಂ.ಜಿ.ರಸ್ತೆಗೆ ತೆರಳಿದ್ದೆ’ ಎಂದು ವಿವರಿಸಿದರು.

‘12.15ರವರೆಗೂ ಎಂ.ಜಿ.ರಸ್ತೆಯಲ್ಲೇ ಇದ್ದು, ಆನಂತರ ಸ್ಕೂಟರ್‌ನಲ್ಲಿ ಮನೆಗೆ ಹೊರಟಿದ್ದೆವು. ಹೊಸ ವರ್ಷದ ಶುಭಾಶಯ ತಿಳಿಸಲು ತಂದೆ ಪದೇ ಪದೇ ಕರೆ ಮಾಡುತ್ತಿದ್ದರಿಂದ ರಿಚ್ಮಂಡ್ ವೃತ್ತದ (ಕೆ.ಎಚ್ ರಸ್ತೆ ಕಡೆಗೆ) ಬಳಿ ಪತಿ ಸ್ಕೂಟರ್ ನಿಲ್ಲಿಸಿದರು. ಅವರು ಫೋನ್‌ನಲ್ಲಿ ಮಾತನಾಡುತ್ತಿದ್ದಾಗ ಮೂವರು ಯುವಕರು ಬೈಕ್‌ನಲ್ಲಿ ‘ಹ್ಯಾಪಿ ನ್ಯೂ ಇಯರ್’ ಎಂದು ಕೂಗುತ್ತ ಬಂದರು. ಹಿಂದೆ ಕುಳಿತಿದ್ದವನು ನನ್ನ ಬೆನ್ನಿಗೆ ಹೊಡೆದ. ಬಳಿಕ ಸ್ವಲ್ಪ ಮುಂದೆ ಹೋಗಿ ಅವರು ಬೈಕ್ ನಿಲ್ಲಿಸಿದರು.’

‘ಆತ ನನ್ನ ಮೈ ಮುಟ್ಟಿದ ವಿಚಾರವನ್ನು ಪತಿಗೆ ಹೇಳಿದೆ. ಕೂಡಲೇ ಅವರು ಹತ್ತಿರ ಹೋಗಿ ದುರ್ವರ್ತನೆಯನ್ನು ಪ್ರಶ್ನೆ ಮಾಡಿದರು. ಅವಾಚ್ಯ ಶಬ್ದಗಳಿಂದ ನಿಂದಿಸಿ ಅವರ ಮೇಲೂ ಹಲ್ಲೆ ನಡೆಸಿದ ಅವರು, ಪುನಃ ನನ್ನ ಹತ್ತಿರಕ್ಕೆ ಬರುತ್ತಿದ್ದರು. ನಾನು ಕೂಗಿಕೊಳ್ಳುತ್ತಿದ್ದಂತೆಯೇ ಇತರೆ ವಾಹನಗಳ ಸವಾರರು ನೆರವಿಗೆ ಬಂದರು. ಈ ಹಂತದಲ್ಲಿ ಒಬ್ಬಾತ, ‘ನಮ್ಮದು ತಪ್ಪಾಯ್ತು. ಮದ್ಯದ ಅಮಲಿನಲ್ಲಿ ಹಾಗೆ ವರ್ತಿಸಿಬಿಟ್ಟೆವು’ ಎಂದು ಅಂಗಲಾಚಿದ. ಆದರೆ, ನನ್ನ ಮೈಮುಟ್ಟಿದವನು ಹಾಗೇ ಕೂಗಾಟ ಮುಂದುವರಿಸಿದ್ದ.’

‘ಸ್ವಲ್ಪ ಸಮಯದಲ್ಲೇ ಪೊಲೀಸರ ಹೊಯ್ಸಳ ವಾಹನ ಸ್ಥಳಕ್ಕೆ ಬಂತು. ಈ ವೇಳೆ ಸ್ಕೂಟರ್‌ ಮೇಲಿದ್ದ ನನ್ನ ಮೊಬೈಲ್ ತೆಗೆದುಕೊಂಡು ಇಬ್ಬರು ಓಡಿ ಹೋದರು. ಇನ್ನೊಬ್ಬನನ್ನು ಜನರೇ ಹಿಡಿದು ಪೊಲೀಸರ ವಶಕ್ಕೆ ಕೊಟ್ಟರು. 45 ನಿಮಿಷಗಳ ಬಳಿಕ ಹಿರಿಯ ಪೊಲೀಸ್ ಅಧಿಕಾರಿಗಳೂ ಸ್ಥಳಕ್ಕೆ ಬಂದರು. ಅವರ ಸಲಹೆಯಂತೆ ಅಶೋಕನಗರ ಠಾಣೆಗೆ ತೆರಳಿ ದೂರು ಕೊಟ್ಟೆ.’

‘ಹತ್ತು ವರ್ಷಗಳಲ್ಲಿ ಇಂಥ ಸಣ್ಣ ತೊಂದರೆಯೂ ನನಗೆ ಎದುರಾಗಿರಲಿಲ್ಲ. ಉನ್ನತ ಶಿಕ್ಷಣದ ಕಲಿಕೆಗೆ ಬೆಂಗಳೂರು ಹೇಳಿ ಮಾಡಿಸಿದ ಜಾಗ. ಇತರೆ ನಗರಗಳಿಗಿಂತ ಹೆಚ್ಚು ಸುರಕ್ಷತೆಯೂ ಇಲ್ಲಿದೆ. ಇದೇ ಕಾರಣಗಳಿಂದ ಹೊರಗಿನವರಿಗೆ ಹೆಚ್ಚಾಗಿ ಬರುತ್ತಿದ್ದಾರೆ. ದುರ್ವರ್ತನೆ ತೋರುವ ಬೆರಳೆಣಿಕೆಯಷ್ಟು ಪುಂಡರೂ ಇಲ್ಲಿದ್ದಾರೆ. ಪೊಲೀಸರೇ ಅವರನ್ನು ತಿದ್ದಬೇಕು’ ಎಂದು ಹೇಳಿದರು.

‘ಲೈಂಗಿಕ ಕಿರುಕುಳ (354ಎ), ಉದ್ದೇಶಪೂರ್ವಕವಾಗಿ ಶಾಂತಿ ಕದಡಿದ (ಐಪಿಸಿ 504), ಬೆದರಿಕೆ ಹಾಕಿದ (506), ಹಲ್ಲೆ ನಡೆಸಿದ (323), ಕಳ್ಳತನ (379) ಹಾಗೂ ಅಕ್ರಮ ಬಂಧನ (341) ಆರೋಪಗಳಡಿ ಎಫ್‌ಐಆರ್ ದಾಖಲಿಸಲಾಗಿದೆ. ತಿರುಚಿಯವನಾದ ಅರ್ಜುನ್, ಗಾರೆ ಕೆಲಸ ಮಾಡಿಕೊಂಡು ಸಂಪಂಗಿರಾಮನಗರದ ಪೇಯಿಂಗ್ ಗೆಸ್ಟ್ ಕಟ್ಟಡವೊಂದರಲ್ಲಿ ನೆಲೆಸಿದ್ದ. ತಲೆಮರೆಸಿಕೊಂಡಿರುವ ಇಬ್ಬರ ಸುಳಿವು ಸಿಕ್ಕಿದ್ದು, ಸದ್ಯದಲ್ಲೇ ಅವರನ್ನು ಪತ್ತೆ ಮಾಡುತ್ತೇವೆ’ ಎಂದು ಕೇಂದ್ರ ವಿಭಾಗದ ಡಿಸಿಪಿ ಡಿ.ದೇವರಾಜ್ ಹೇಳಿದರು.

ಕರಾಳ ನೆನಪು: 2016ರ ಡಿ.31ರ ರಾತ್ರಿ ಹೊಸ ವರ್ಷಾಚರಣೆ ವೇಳೆ ಇಬ್ಬರು ಯುವತಿಯರು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದರು. ಆ ಸಂಬಂಧ ಪ್ರಕರಣ ದಾಖಲಾದ ಬಳಿಕ, ‘ಕೆಲ ಯುವಕರು ತಮ್ಮೊಂದಿಗೂ ಅಸಭ್ಯವಾಗಿ ವರ್ತಿಸಿದ್ದಾರೆ’ ಎಂದು ಇನ್ನೂ ನಾಲ್ಕೈದು ಯುವತಿಯರು ಠಾಣೆಗಳ ಮೆಟ್ಟಿಲೇರಿದ್ದರು. ಈ ಪ್ರಕರಣಗಳು ರಾಷ್ಟ್ರವ್ಯಾಪಿ ಸುದ್ದಿಯಾಗಿದ್ದವು.

ಕೇಕ್ ಬೀಳಿಸಿದ್ದಕ್ಕೆ ಚಾಕು ಚುಚ್ಚಿದರು!

ಹೊಸ ವರ್ಷದ ಆಚರಣೆಗೆ ತಂದಿದ್ದ ಕೇಕನ್ನು ನೆಲಕ್ಕೆ ಬೀಳಿಸಿದ ವಿಚಾರಕ್ಕೆ ಜಗಳವಾಗಿ ಯುವಕರಿಬ್ಬರು ಪ್ರವೀಣ್ (26) ಎಂಬುವರ ತೊಡೆಗೆ ಚಾಕುವಿನಿಂದ ಇರಿದಿದ್ದಾರೆ.

ಬಸವೇಶ್ವರನಗರ ಸಮೀಪದ ಕಮಲಾನಗರ 5ನೇ ಮುಖ್ಯರಸ್ತೆಯಲ್ಲಿ ಸೋಮವಾರ ರಾತ್ರಿ 11.30ರ ಸುಮಾರಿಗೆ ಈ ಘಟನೆ ನಡೆದಿದೆ. ಸ್ಥಳೀಯ ಯುವಕರು ಬೈಕ್ ಮೇಲೆ ಕೇಕ್ ಇಟ್ಟುಕೊಂಡು, ಹೊಸ ವರ್ಷವನ್ನು ಸ್ವಾಗತಿಸಲು ಕಾಯುತ್ತಿದ್ದರು. ಇದೇ ವೇಳೆ ಪ್ರವೀಣ್ ಅಲ್ಲಿಗೆ ಬಂದಿದ್ದು, ಅವರ ಸ್ಕೂಟರ್‌ ಆಕಸ್ಮಿಕವಾಗಿ ಬೈಕ್‌ಗೆ ತಾಗಿದೆ. ಆಗ ಕೇಕ್ ಕೆಳಗೆ ಬಿದ್ದಿದೆ.

ಇದರಿಂದ ಕುಪಿತಗೊಂಡ ಯುವಕರು, ಜಗಳ ಪ್ರಾರಂಭಿಸಿದ್ದಾರೆ. ಪ್ರವೀಣ್ ಸಹ ತಿರುಗಿಬಿದ್ದಿದ್ದರಿಂದ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಆಗ ಮನೆಯೊಳಗೆ ಹೋಗಿ ಚಾಕು ತಂದು, ತೊಡೆ ಹಾಗೂ ಕೈಗೆ ಚುಚ್ಚಿದ್ದಾರೆ. ಸ್ಥಳೀಯರು ತಕ್ಷಣ ಗಾಯಾಳುವನ್ನು ಆಸ್ಪತ್ರೆಗೆ ಕರೆದೊಯ್ದಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಯುವಕರು ತಲೆಮರೆಸಿಕೊಂಡಿದ್ದು, ಶೋಧ ನಡೆಯುತ್ತಿದೆ ಎಂದು ಬಸವೇಶ್ವರನಗರ ಪೊಲೀಸರು ತಿಳಿಸಿದರು.

ಪೈಪ್‌ನಿಂದ ಹೊಡೆದು ಕಾರ್ಮಿಕನ ಹತ್ಯೆ

ಮುಂಗಡ ಪಡೆದು ಕೆಲಸಕ್ಕೆ ಬರುವುದಿಲ್ಲವೆಂದ ಜಾರ್ಖಂಡ್‌ನ ಕಾರ್ಮಿಕನನ್ನು ಭೀಮ್ ಶರ್ಮಾ ಎಂಬಾತ ಕಬ್ಬಿಣದ ಪೈಪ್‌ನಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ.

ಇಂದಿರಾನಗರ 6ನೇ ಮುಖ್ಯರಸ್ತೆಯಲ್ಲಿ ಸೋಮವಾರ ರಾತ್ರಿ ಈ ಘಟನೆ ನಡೆದಿದೆ. ಮೃತ ಕಾರ್ಮಿಕನ ಹೆಸರು, ವಿಳಾಸ ಗೊತ್ತಾಗಿಲ್ಲ. ಕೆಲಸ ಹುಡುಕಿಕೊಂಡು ಸೋಮವಾರವಷ್ಟೇ ನಗರಕ್ಕೆ ಬಂದಿದ್ದ ಆತ, ಗಾರೆ ಮೇಸ್ತ್ರಿಯೊಬ್ಬರನ್ನು ಭೇಟಿಯಾಗಿದ್ದ. ತಮ್ಮ ಬಳಿಯೇ ಕೆಲಸ ಮಾಡುವಂತೆ ಹೇಳಿದ್ದ ಆ ಮೇಸ್ತ್ರಿ, ಮುಂಗಡವಾಗಿ ₹ 2 ಸಾವಿರ ಕೊಟ್ಟಿದ್ದರು. ಭೀಮ್‌ ಶರ್ಮಾನ ಮನೆಯಲ್ಲೇ ಉಳಿದುಕೊಳ್ಳವಂತೆ ಆತನಿಗೆ ಸೂಚಿಸಿದ್ದರು.

ರಾತ್ರಿ 11.30ರ ಸುಮಾರಿಗೆ ಇಬ್ಬರೂ ಪಾನಮತ್ತರಾಗಿದ್ದರು. ಈ ವೇಳೆ ಕಾರ್ಮಿಕ, ‘ಮೇಸ್ತ್ರಿಗೆ ಹೇಳಬೇಡ. ನಾನು ಬೆಳಿಗ್ಗೆ ಊರಿಗೆ ವಾಪಸ್ ಹೋಗುತ್ತೇನೆ’ ಎಂದಿದ್ದ. ಇದರಿಂದ ಕುಪಿತಗೊಂಡ ಭೀಮ್, ‘ಮುಂಗಡ ಪಡೆದಿದ್ದೀಯಾ. ಸುಮ್ಮನೆ ಕೆಲಸ ಮಾಡು. ನಿನ್ನನ್ನು ನೋಡಿಕೊಳ್ಳುವ ಹೊಣೆಯನ್ನು ನನಗೆ ವಹಿಸಿದ್ದಾರೆ’ ಎಂದಿದ್ದ. ಹೀಗೆ, ಶುರುವಾದ ಜಗಳ ವಿಕೋಪಕ್ಕೆ ಹೋಗಿದ್ದು ಆರೋಪಿ ಪೈಪ್ ತೆಗೆದುಕೊಂಡು ತಲೆಗೆ ಹೊಡೆದಿದ್ದ.

ಬಳಿಕ ಆಚೆ ಬಂದು, ನಡೆದ ಘಟನೆಯನ್ನು ಹೊಯ್ಸಳ ಪೊಲೀಸರಿಗೆ ವಿವರಿಸಿದ್ದ. ಅವರು ಸ್ಥಳಕ್ಕೆ ಹೋಗುವಷ್ಟರಲ್ಲಿ ಕಾರ್ಮಿಕ ಕೊನೆಯುಸಿರೆಳೆದಿದ್ದ. ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು, ಮೃತನ ಗುರುತು ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ.

₹168 ಕೋಟಿ ಮೌಲ್ಯದ ಮದ್ಯ ಮಾರಾಟ

 ಹೊಸ ವರ್ಷಾಚರಣೆ ಮುನ್ನಾದಿನವಾದ ಸೋಮವಾರ (ಡಿ. 31ರಂದು) ರಾಜ್ಯದಾದ್ಯಂತ ₹168 ಕೋಟಿ ಮೌಲ್ಯದ ಐಎಂಎಲ್‌ (ಇಂಡಿಯನ್ ಮೇಡ್ ಲಿಕ್ಕರ್) ಹಾಗೂ ಬಿಯರ್ ಮಾರಾಟ ಆಗಿದೆ.

ದಿನದ ಮದ್ಯ ಮಾರಾಟ ಪಟ್ಟಿಯನ್ನು ಮಂಗಳವಾರ ಬಿಡುಗಡೆ ಮಾಡಿರುವ ಅಬಕಾರಿ ಇಲಾಖೆ, ‘₹145 ಕೋಟಿ ಮೌಲ್ಯದ ಐಎಂಎಲ್‌ (ಇಂಡಿಯನ್ ಮೇಡ್ ಲಿಕ್ಕರ್) ಹಾಗೂ ₹23 ಕೋಟಿ ಮೌಲ್ಯದ ಬಿಯರ್ ಮಾರಾಟ ಆಗಿದೆ’ ಎಂದು ಹೇಳಿದೆ. 

‘ಬೆಂಗಳೂರು ನಗರ ಜಿಲ್ಲೆಯಲ್ಲಿ ₹54.56 ಕೋಟಿ ಹಾಗೂ ಗ್ರಾಮಾಂತರ ಜಿಲ್ಲೆಯಲ್ಲಿ ₹3.88 ಕೋಟಿ ಮೌಲ್ಯದ ಮದ್ಯ ಮಾರಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಮಾರಾಟದಲ್ಲಿ ಅಷ್ಟೇನು ಹೆಚ್ಚಳ ಕಂಡುಬಂದಿಲ್ಲ’ ಎಂದಿದೆ. 

ಪಾನಮತ್ತರಾಗಿ ಚಾಲನೆ: 667 ಪ್ರಕರಣ

ಪಾನಮತ್ತರಾಗಿ ವಾಹನ ಚಲಾಯಿಸುತ್ತಿದ್ದ 667 ಮಂದಿ ವಿರುದ್ಧ ಸಂಚಾರ ಪೊಲೀಸರು ಸೋಮವಾರ ಮಧ್ಯರಾತ್ರಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಹೊಸ ಸಂಭ್ರಮಾಚರಣೆ ವೇಳೆ ಪಾನಮತ್ತರಾಗಿ ವಾಹನ ಚಲಾಯಿಸುವವರ ಪತ್ತೆಗಾಗಿ ಪೊಲೀಸರು, ನಗರದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿದ್ದರು. 

‘ಪಾನಮತ್ತರಾಗಿದ್ದ ಕೆಲವರ ವಾಹನಗಳನ್ನು ಜಪ್ತಿ ಮಾಡಲಾಯಿತು. ನ್ಯಾಯಾಲಯದಲ್ಲಿ ದಂಡ ಪಾವತಿ ಮಾಡುವಂತೆ ನೋಟಿಸ್‌ ನೀಡಲಾಯಿತು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು. 

‘ನಗರದ ಹೊರವಲಯದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಹೆಚ್ಚಿನ ಪ್ರಕರಣಗಳು ದಾಖಲಾಗಿವೆ. ಕೆಲವರು, ತಪಾಸಣೆ ನಿರತ ಸಿಬ್ಬಂದಿ ಜೊತೆಯೇ ಜಗಳ ತೆಗೆದಿದ್ದರು. ಅಂಥವರಿಗೆ ಎಚ್ಚರಿಕೆ ನೀಡಿ ಕಳುಹಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 18

  Happy
 • 2

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !