ವಂಚನೆ ಹಣದಲ್ಲಿ ಕನಸಿನ ಮನೆ!

7
ಪೊಲೀಸ್ ಬಲೆಗೆ ಸಿಎಆರ್ ಹೆಡ್‌ಕಾನ್‌ಸ್ಟೆಬಲ್‌!

ವಂಚನೆ ಹಣದಲ್ಲಿ ಕನಸಿನ ಮನೆ!

Published:
Updated:
Prajavani

ಬೆಂಗಳೂರು: ಅಬಕಾರಿ ಇಲಾಖೆಯಲ್ಲಿ ಪಿಎಸ್‌ಐ ಕೆಲಸ ಕೊಡಿಸುವುದಾಗಿ 50ಕ್ಕೂ ಹೆಚ್ಚು ಮಂದಿಯಿಂದ ಲಕ್ಷ ಲಕ್ಷ ಪೀಕಿರುವ ಸಿಎಆರ್ ಹೆಡ್‌ಕಾನ್‌ಸ್ಟೆಬಲ್ ಜೆ.ಗೋವಿಂದರಾಜು (50), ಆ ಹಣದಲ್ಲೇ ಅಂದ್ರಹಳ್ಳಿಯಲ್ಲಿ ₹ 1.5 ಕೋಟಿ ಮೌಲ್ಯದ ಭವ್ಯ ಮನೆ ಕಟ್ಟಿಸಿದ್ದಾನೆ!

2013 ರಿಂದಲೂ ಈ ದಂಧೆಯಲ್ಲಿ ತೊಡಗಿರುವ ಈತ, ಉದ್ಯೋಗಾಕಾಂಕ್ಷಿಗಳನ್ನು ಕೆಪಿಎಸ್‌ಸಿ ಕಚೇರಿ ಸುತ್ತಮುತ್ತಲ ಅಂಗಡಿಗಳ ಸಮೀಪವೇ ಕರೆಸಿಕೊಂಡು ಹಣ ಪಡೆದುಕೊಂಡಿದ್ದಾನೆ. ವಿಧಾನಸೌಧ ಪೊಲೀಸರು ಶುಕ್ರವಾರ ಗೋವಿಂದರಾಜುನನ್ನು ಬಂಧಿಸಿದ್ದು, ತಲೆಮರೆಸಿಕೊಂಡಿರುವ ಆತನ ಸಹಚರ ರಿಯಲ್ ಎಸ್ಟೇಟ್ ಏಜೆಂಟ್ ಸಂಜೀವಯ್ಯನ ಬಂಧನಕ್ಕೆ ಬಲೆ ಬೀಸಿದ್ದಾರೆ.

‘ದಾಬಸ್‌ಪೇಟೆ ಸಮೀಪದ ಮಣ್ಣೆಲೆ ಗ್ರಾಮದವನಾದ ಗೋವಿಂದರಾಜು, 1996ರಲ್ಲಿ ಪೊಲೀಸ್ ಇಲಾಖೆ ಸೇರಿದ್ದ. 2013 ರಿಂದ 2016ರವರೆಗೆ ಕೆಪಿಎಸ್‌ಸಿ ಕಚೇರಿಯಲ್ಲಿ ಭದ್ರತಾ ಕೆಲಸಕ್ಕೆ ನಿಯೋಜನೆಗೊಂಡಿದ್ದ ಈತ, ಆ ಅವಧಿಯಿಂದಲೇ ದಂಧೆ ಪ್ರಾರಂಭಿಸಿದ್ದಾನೆ’ ಎಂದು ಪೊಲೀಸರು ಹೇಳಿದರು.

ವಿವಿಧ ಕೆಲಸಗಳಿಗಾಗಿ ಕೆಪಿಎಸ್‌ಸಿ ಕಚೇರಿಗೆ ಬರುತ್ತಿದ್ದ ಸಾರ್ವಜನಿಕರನ್ನು ಭೇಟಿಯಾಗುತ್ತಿದ್ದ ಈತ, ‘ನನಗೆ ಇಲ್ಲಿ ಹಲವು ಅಧಿಕಾರಿಗಳ ಪರಿಚಯವಿದೆ. ಸರ್ಕಾರದ ಮಟ್ಟದಲ್ಲೂ ಸಂಪರ್ಕ ಹೊಂದಿದ್ದೇನೆ. ನೀವು ಹಣ ಕೊಟ್ಟರೆ ಸರ್ಕಾರಿ ಕೆಲಸ ಕೊಡಿಸುತ್ತೇನೆ’ ಎಂದು ನಂಬಿಸುತ್ತಿದ್ದ. 

ಚೆಕ್‌ ಬೌನ್ಸ್‌ನಿಂದ ಬಯಲು: ಹೊಸಕೆರೆಹಳ್ಳಿ ರಂಗನಾಥ್ ಎಂಬುವರು ನಗರದಲ್ಲಿ ಪೇಂಟಿಂಗ್ ಕೆಲಸ ಮಾಡಿಕೊಂಡಿದ್ದರು. ಅವರ ಮಗ ಬಿ.ಕಾಂ ವ್ಯಾಸಂಗ ಮುಗಿಸಿ, 2013ರಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ. ಮಗನಿಗೆ ಸರ್ಕಾರಿ ನೌಕರಿ ಕೊಡಿಸಬೇಕೆಂದು ರಂಗನಾಥ್ ಪರಿಚಿತರ ಮೂಲಕ ಗೋವಿಂದರಾಜುನನ್ನು ಸಂಪರ್ಕಿಸಿದ್ದರು. ‘₹ 11 ಲಕ್ಷ ಕೊಟ್ಟರೆ ಅಬಕಾರಿಯಲ್ಲಿ ಪಿಎಸ್‌ಐ ಹುದ್ದೆ ಕೊಡಿಸುತ್ತೇನೆ’ ಎಂದು ಹೇಳಿದ ಆತನ ಮಾತನ್ನು ನಂಬಿ, ಮನೆಯಲ್ಲಿದ್ದ ಚಿನ್ನವನ್ನೆಲ್ಲ ಮಾರಿ ಮುಂಗಡವಾಗಿ ₹ 7 ಲಕ್ಷ ಕೊಟ್ಟಿದ್ದರು.

ಫಲಿತಾಂಶ ಪ್ರಕಟವಾದಾಗ ಆಯ್ಕೆಯಾದವರ ಪಟ್ಟಿಯಲ್ಲಿ ರಂಗನಾಥ್ ಪುತ್ರನ ಹೆಸರಿರಲಿಲ್ಲ. ಈ ಬಗ್ಗೆ ವಿಚಾರಿಸಿದಾಗ, ‘ತಾಂತ್ರಿಕ ತೊಂದರೆಯಿಂದ ಫಲಿತಾಂಶದಲ್ಲಿ ಏನೋ ಯಡವಟ್ಟಾಗಿದೆ. ಸ್ವಲ್ಪ ದಿನ ಸುಮ್ಮನಿರಿ’ ಎಂದಿದ್ದ. ಇಲ್ಲದ ಸಬೂಬುಗಳನ್ನು ಹೇಳಿಕೊಂಡೇ ಐದು ವರ್ಷ ತಳ್ಳಿದ್ದ ಆತ, ಕೊನೆಗೂ 2018ರಲ್ಲಿ ₹ 7 ಲಕ್ಷಕ್ಕೆ ಚೆಕ್ ಕೊಟ್ಟಿದ್ದ. ಆದರೆ, ಅದೂ ಬೌನ್ಸ್ ಆಗಿದ್ದರಿಂದ 2018ರ ಡಿ.29ರಂದು ರಂಗನಾಥ್ ಠಾಣೆ ಮೆಟ್ಟಿಲೇರಿದ್ದರು.

ಪೊಲೀಸರು ಆ ಪ್ರಕರಣದ ತನಿಖೆ ಕೈಗೆತ್ತಿಕೊಂಡಾಗ, ಗೋವಿಂದರಾಜುವಿನ ವಂಚನೆ ಕೃತ್ಯಗಳು ಒಂದೊಂದಾಗಿ ಬಿಚ್ಚಿಕೊಂಡಿವೆ. ಶುಕ್ರವಾರ ಆತನ ಬಂಧನವಾಗಿರುವ ವಿಷಯ ತಿಳಿದು, ಮೋಸ ಹೋದ ಹತ್ತಕ್ಕೂ ಹೆಚ್ಚು ಮಂದಿ ಠಾಣೆಗೆ ತೆರಳಿ ಅಳಲು ತೋಡಿಕೊಂಡಿದ್ದಾರೆ. 

‘ಅನುಕಂಪ’ ಬೇಡವೆಂದ: ‘ಅಗ್ನಿಶಾಮಕ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಸಿದ್ದರಾಜು ಎಂಬುವರು, 2018ರಲ್ಲಿ ಅನಾರೋಗ್ಯದಿಂದ ನಿಧನರಾದರು. ಅನುಕಂಪದ ಆಧಾರದ ಮೇಲೆ ಅವರ ಕೆಲಸವನ್ನು ಮಗ ಹರೀಶ್‌ಗೆ ನೀಡಲಾಯಿತು. ಆದರೆ, ಪಿಎಸ್‌ಐ ಆಗಬೇಕೆಂಬ ಆಸೆಯಿಂದ ಆ ಕೆಲಸ ತೊರೆಯಲು ನಿರ್ಧರಿಸಿದ ಹರೀಶ್, ಅಬಕಾರಿ ಇಲಾಖೆಯಲ್ಲಿ ಹುದ್ದೆ ಕೊಡಿಸುವುಂತೆ ಗೋವಿಂದರಾಜುಗೆ ₹ 6.5 ಲಕ್ಷ ನೀಡಿ ಮೋಸ ಹೋಗಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದರು.

ಸಿಎಆರ್ ಸಿಬ್ಬಂದಿಯನ್ನು ಹೆಚ್ಚು ಕಾಲ ಒಂದೇ ಕಚೇರಿಯಲ್ಲಿ ಭದ್ರತೆಗೆ ನಿಯೋಜಿಸಬಾರದು. ಪ್ರತಿ ಆರು ತಿಂಗಳಿಗೊಮ್ಮೆ ಅವರನ್ನು ಬದಲಾವಣೆ ಮಾಡುತ್ತಿರಬೇಕು.

-ಡಿ.ದೇವರಾಜ್

ಡಿಸಿಪಿ, ಕೇಂದ್ರ ವಿಭಾಗ

ಬರಹ ಇಷ್ಟವಾಯಿತೆ?

 • 11

  Happy
 • 3

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !