ನಗದು, ಒಡವೆ ಕಳ್ಳತನ

7
ಸಿನಿಮೀಯ ಶೈಲಿಯಲ್ಲಿ ಹಲ್ಲೆ

ನಗದು, ಒಡವೆ ಕಳ್ಳತನ

Published:
Updated:
Prajavani

ಮುಂಡಗೋಡ: ತಾಲ್ಲೂಕಿನ ಟಿಬೆಟನ್ 1ನೇ ಕ್ಯಾಂಪ್‌ನಲ್ಲಿ ಸಿನೀಮಿಯ ರೀತಿಯಲ್ಲಿ ದಾಳಿ ಮಾಡಿದ ದರೋಡೆಕೋರರು ಬೌದ್ಧ ಬಿಕ್ಕು ಹಾಗೂ ಟಿಬೆಟನ್ ಮಹಿಳೆಯನ್ನು ಹಗ್ಗದಿಂದ ಕಟ್ಟಿಹಾಕಿ, ಮನೆಯಲ್ಲಿದ್ದ ₹ 7ಲಕ್ಷ ನಗದು, ₹ 4ಲಕ್ಷ ಮೌಲ್ಯದ ಬಂಗಾರದ ಆಭರಣ ಹಾಗೂ ಮೂರು ಮೊಬೈಲ್‌ಗಳನ್ನು ದೋಚಿಕೊಂಡು ಹೋಗಿದ್ದಾರೆ.

ಶನಿವಾರ ರಾತ್ರಿ 11.30ರ ಸುಮಾರಿಗೆ ಮನೆಯ ಆವರಣದಲ್ಲಿ ನಾಯಿ ಬೊಗಳುತ್ತಿರುವುದರಿಂದ ಹೊರಗೆ ಬಂದ ಬಿಕ್ಕುವೊಬ್ಬರ ಮೇಲೆ ದುಷ್ಕರ್ಮಿಗಳು ತಲ್ವಾರ್‌ನಿಂದ ಹಲ್ಲೆ ಮಾಡಿ ಕೈಗೆ ಗಾಯಗೊಳಿಸಿದ್ದಾರೆ. ನಂತರ ಗದ್ದಲ ಕೇಳಿ ಹೊರಗೆ ಬಂದ ಮಹಿಳೆಯನ್ನು ಸಹ ಬೆದರಿಸಿ, ಇಬ್ಬರನ್ನೂ ಮನೆಯ ಒಳಗೆ ಹಗ್ಗದಿಂದ ಕಟ್ಟಿ ಹಾಕಿ, ಬಾಯಿಗೆ ಪಟ್ಟಿ ಅಂಟಿಸಿದ್ದಾರೆ.

‘ಹಿಂದಿಯಲ್ಲಿ ಮಾತನಾಡುತ್ತಿದ್ದ ನಾಲ್ವರು ಏಕಾಏಕಿ ದಾಳಿ ಮಾಡಿದರು. ಮನೆಯ ಹೊರಗೆ ಇದ್ದ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಒಡೆದು, ಡಿವಿಆರ್‌ ಸಹ ತೆಗೆದುಕೊಂಡು ಹೋಗಿದ್ದಾರೆ. ಮನೆಯ ಸುತ್ತಲಿನ ತಂತಿಬೇಲಿಯನ್ನು ಕತ್ತರಿಸಿ ಆವರಣದೊಳಕ್ಕೆ ನುಗ್ಗಿದ್ದಾರೆ’ ಎಂದು ಬಿಕ್ಕು ತಿಳಿಸಿದರು.

ಶಿರಸಿ ಡಿಎಸ್‌ಪಿ ಜಿ.ಟಿ.ನಾಯಕ, ಮುಂಡಗೋಡ ಸಿಪಿಐ ಶಿವಾನಂದ ಚಲವಾದಿ, ಶಿರಸಿ ಸಿಪಿಐ ಬಿ.ಗಿರೀಶ್, ಜೊಯಿಡಾ ಸಿಪಿಐ ರಮೇಶ ಹೂಗಾರ, ಅಂಕೋಲಾ ಪಿಎಸ್‌ಐ ಎಸ್‌.ಆರ್‌.ಶ್ರೀಧರ್ ಭೇಟಿ ನೀಡಿ ಪರಿಶೀಲಿಸಿದರು. ಬೆರಳಚ್ಚು ತಜ್ಞರು, ಶ್ವಾನದಳದಿಂದ ಶೋಧ ಕಾರ್ಯ ನಡೆಸಲಾಯಿತು.

‘ಕಳ್ಳರ ಪತ್ತೆಗಾಗಿ ನಾಲ್ಕು ತಂಡಗಳನ್ನು ರಚಿಸಲಾಗಿದೆ. ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಳ್ಳಲಾಗಿದ್ದು ಲಭ್ಯವಿರುವ ಮಾಹಿತಿಯನ್ನು ಕಲೆಹಾಕಿ ಆರೋಪಿಗಳನ್ನು ಬಂಧಿಸಲಾಗುವುದು’ ಎಂದು ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಗೋಪಾಲ್ ಬ್ಯಾಕೋಡ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !