ವನ್ಯಜೀವಿ ದಾಳಿಗೆ ತತ್ತರಿಸಿದ ಜನ

7
ಅರಣ್ಯದಂಚಿನ ಜಮೀನುಗಳಿಗೆ ನುಗ್ಗಿ ಬೆಳೆ ನಾಶ ಮಾಡುವ ಕಾಡು ಪ್ರಾಣಿಗಳು

ವನ್ಯಜೀವಿ ದಾಳಿಗೆ ತತ್ತರಿಸಿದ ಜನ

Published:
Updated:
Prajavani

ಹನೂರು: ಬೇಸಿಗೆ ಸಮೀಪಿಸಿದೆ. ಈಗಲೇ ಅರಣ್ಯದೊಳಗಿನ ನೀರಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಇದರ ಬೆನ್ನಲ್ಲೇ ಅರಣ್ಯದಂಚಿನ ಜಮೀನುಗಳಲ್ಲಿ ಕಟಾವಿಗೆ ಬಂದ ಫಸಲು ದಿನನಿತ್ಯ ವನ್ಯಪ್ರಾಣಿಗಳ ಪಾಲಾಗುತ್ತಿರುವುದು ರೈತರನ್ನು ಚಿಂತೆಗೀಡು ಮಾಡಿದೆ.

ಬಿಳಿಗಿರಿರಂಗನಾಥಸ್ವಾಮಿ ಹುಲಿರಕ್ಷಿತಾರಣ್ಯಕ್ಕೆ ಹೊಂದಿಕೊಂಡಂತಿರುವ ಕಣ್ಣೂರು, ಚನ್ನಾಲಿಂಗನಹಳ್ಳಿ, ಚಿಕ್ಕಮಾಲಾಪುರ, ಮಧುವನಹಳ್ಳಿ ಗ್ರಾಮಗಳ ರೈತರು ವನ್ಯಜೀವಿಗಳ ಉಪಟಳದಿಂದಾಗಿ ಹೈರಾಣಾಗಿದ್ದಾರೆ.

‘ನಮ್ಮ ಜಮೀನುಗಳು ಅರಣ್ಯಕ್ಕೆ ಹೊಂದಿಕೊಂಡಂತೆ ಇವೆ. ಕಳೆದ ವರ್ಷ ಉತ್ತಮ ಮಳೆಯಾಗಿ ಫಸಲು ಚೆನ್ನಾಗಿ ಬಂದಿತ್ತು. ಆದರೆ, ಈ ಬಾರಿ ಮಳೆಯಿಲ್ಲದ ಪರಿಣಾಮ ಪಂಪ್‌ಸೆಟ್‌ನಲ್ಲಿ ಬರುವ ಅಲ್ಪ ನೀರಿನಲ್ಲೇ ಜೋಳ ಬೆಳೆದಿದ್ದೆ. ಬೆಳಿಗ್ಗೆ ಸಮಯದಲ್ಲಿ ನವಿಲು, ಕೋತಿಗಳ ಕಾಟ. ರಾತ್ರಿಯಾದರೆ ಕಾಡಾನೆ, ಕಾಡುಹಂದಿಗಳ ಹಾವಳಿ. ಇದುವರೆಗೆ ಜಮೀನಿನಲ್ಲಿ ಬೆಳೆದಿದ್ದ ಒಂದು ಎಕರೆ ಜೋಳದ ಫಸಲು ಈಗ ಕಾಡಾನೆಗಳ ಪಾಲಾಗಿದೆ’ ಎನ್ನುತ್ತಾರೆ ರೈತ ವೃಷವೇಂದ್ರಸ್ವಾಮಿ.

ಇದಲ್ಲದೇ ಸುತ್ತಮುತ್ತಲ ಜಮೀನುಗಳಿಗೂ ಲಗ್ಗೆ ಇಡುತ್ತಿರುವ ಕಾಡಾನೆಗಳ ಹಿಂಡು ಫಸಲನ್ನು ತಿಂದು ಹಾಳು ಮಾಡುವುದರ ಜತೆಗೆ ನೀರಾವರಿ ಪರಿಕರಗಳನ್ನು ಧ್ವಂಸಗೊಳಿಸುತ್ತಿವೆ. ಚಿನ್ನಸ್ವಾಮಿ ಎಂಬುವವರ ಬಾಳೆ ತೋಟಕ್ಕೆ ನುಗ್ಗಿರುವ ಕಾಡಾನೆಗಳು ಎರಡು ಎಕರೆ ಬಾಳೆ ಫಸಲು ಹಾಗೂ ಪೈಪ್‌ಗಳನ್ನು ತುಳಿದು ಹಾಳು ಮಾಡಿವೆ. ಇದಕ್ಕೆ ಹೊಂದಿಕೊಂಡಂತೆ ಇರುವ ಪುಟ್ಟಸಿದ್ದಮ್ಮ ಅವರ ಜಮೀನಿನ ಒಂದು ಎಕರೆ ಜೋಳ, ನಂಜಮ್ಮ ಅವರ ಜಮೀನಿನಲ್ಲಿ ತೆಂಗಿನ ಮರ ಹಾಗೂ ಸುತ್ತಲೂ ಹಾಕಿದ್ದ ತಂತಿ ಬೇಲಿಯನ್ನು ಮುರಿದು ಹಾಕಿವೆ. ನಾರಾಯಣ ಅವರ ಒಂದು ಎಕರೆ ಜೋಳದ ಫಸಲನ್ನು ತಿಂದು ಹಾಳು ಮಾಡಿದೆ.

‘ರಾತ್ರಿ 10 ಗಂಟೆ ಬಳಿಕ ಬರುವ ಕಾಡಾನೆಗಳು ಜಮೀನಿನೊಳಗೆ ಎಲ್ಲಂದರಲ್ಲಿ ಅಡ್ಡಾಡಿ ಸಿಕ್ಕಿದ್ದನ್ನು ಮುರಿದು ಫಸಲನ್ನು ನಾಶಗೊಳಿಸುತ್ತಿವೆ. ಮನೆಯಲ್ಲಿ ಮಕ್ಕಳು ಮಹಿಳೆಯರಿದ್ದಾರೆ. ಫಸಲು ತಿನ್ನಲು ಬರುವ ಕಾಡಾನೆಗಳು ನಮ್ಮ ಮೇಲು ದಾಳಿ ಮಾಡಿದರೆ ಗತಿ ಏನು’ ಎಂದು ಚಿನ್ನಸ್ವಾಮಿ ತಮ್ಮ ದುಗುಡವನ್ನು ‘ಪ್ರಜಾವಾಣಿ’ ಮುಂದೆ ತೋಡಿಕೊಂಡರು. 

‘ನಮ್ಮ ಜಮೀನಿಗೆ ಕಾಡುಪ್ರಾಣಿಗಳು ಬರುತ್ತಿವೆ; ತಡೆಗಟ್ಟಿ ಎಂದು ಕಾಡಂಚಿನಲ್ಲಿ ವಾಸವಿರುವ ಜನರು ಹೇಳುತ್ತಾರೆ. ಇಲಾಖೆ ವತಿಯಿಂದ ಕ್ರಮವಹಿಸಿದರೆ ಜಾನುವಾರುಗಳನ್ನು ಮೇಯಿಸಲು ಅರಣ್ಯದ ಸುತ್ತಲೂ ಹಾಕಿರುವ ಸೋಲಾರ್‌ ಬೇಲಿಯನ್ನು ಕಿತ್ತು ನಾಶಗೊಳಿಸುತ್ತಾರೆ. ಹೀಗಾದರೆ ವನ್ಯಪ್ರಾಣಿಗಳ ಹಾವಳಿ ತಡೆಗಟ್ಟುವುದು ಹೇಗೆ’ ಎಂದು ಪ್ರಶ್ನಿಸುತ್ತಾರೆ‌ ಅರಣ್ಯ ಇಲಾಖೆ ಸಿಬ್ಬಂದಿ.

ಮುಗಿಯದ ಕಥೆ, ಹೆಚ್ಚುತ್ತಲೇ ಇದೆ ಬೆಳೆ ಹಾನಿ

ವನ್ಯಜೀವಿಗಳ ಹಾವಳಿ ಸಮಸ್ಯೆಯನ್ನು ಕಣ್ಣೂರು, ಚನ್ನಾಲಿಂಗನಹಳ್ಳಿ, ಚಿಕ್ಕಮಾಲಾಪುರ, ಮಧುವನಹಳ್ಳಿ ಗ್ರಾಮಗಳ ರೈತರು ಮಾತ್ರ ಎದುರಿಸುತ್ತಿಲ್ಲ. ಜಿಲ್ಲೆಯಲ್ಲಿರುವ ನಾಲ್ಕು ಅಭಯಾರಣ್ಯಗಳ ಅರಣ್ಯದಂಚಿನ ಜನರು ಇದೇ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. 

ಜಿಲ್ಲೆಯ ಪ್ರಾದೇಶಿಕ ಅರಣ್ಯ ಇಲಾಖೆಯ ವ್ಯಾಪ್ತಿಗೆ ಬರುವ ಮೂರು ಅಭಯಾರಣ್ಯಗಳಾದ ಬಿಆರ್‌ಟಿ ಹುಲಿಸಂರಕ್ಷಿತ ಪ್ರದೇಶ, ಮಲೆ ಮಹದೇಶ್ವರ ವನ್ಯಧಾಮ ಮತ್ತು ಕಾವೇರಿ ವನ್ಯಧಾಮಗಳ ವ್ಯಾಪ್ತಿಯಲ್ಲಿ ಕಳೆದ ಐದು ವರ್ಷಗಳ ಅವಧಿಯಲ್ಲಿ ಕಾಡು ಪ್ರಾಣಿಗಳ ಹಾವಳಿಯಿಂದಾಗಿ 2,668 ಬೆಳೆ ಹಾನಿ ಪ್ರಕರಣಗಳು ಸಂಭವಿಸಿವೆ. 

ಈ ಅಂಕಿ ಅಂಶಗಳನ್ನು ಪರಿಶೀಲನೆ ನಡೆಸಿದಾಗ, ವರ್ಷ ವರ್ಷವೂ ದಾಳಿ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಅರಣ್ಯ ಇಲಾಖೆಯು ಸೋಲಾರ್‌ ಬೇಲಿ, ಆನೆ ಕಂದಕ ನಿರ್ಮಾಣದಂತಹ ಕ್ರಮಗಳನ್ನು ಕೈಗೊಂಡಿದ್ದರೂ ವನ್ಯಜೀವಿಗಳ ಹಾವಳಿ ದೊಡ್ಡ ಮಟ್ಟದಲ್ಲಿ ನಿಯಂತ್ರಣಕ್ಕೆ ಬರುತ್ತಿಲ್ಲ. 

ಕಾವೇರಿ ವನ್ಯಧಾಮದಲ್ಲಂತೂ ಬೆಳೆ ಹಾನಿ ಪ್ರಕರಣಗಳ ಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ.2013–14ನೇ ಸಾಲಿನಲ್ಲಿ ಇಲ್ಲಿ 146 ಬೆಳೆ ಹಾನಿ ಪ್ರಕರಣಗಳು ವರದಿಯಾಗಿತ್ತು. 2017–18ಕ್ಕೆ ಇದು 1,190ಕ್ಕೆ ಹೆಚ್ಚಾಗಿದೆ.

ಪರಿಹಾರ: ಬೆಳೆ ಕಳೆದುಕೊಂಡವರಿಗೆ ಅರಣ್ಯ ಇಲಾಖೆ ಪರಿಹಾರ ನೀಡಿದೆ. ಐದು ವರ್ಷಗಳಲ್ಲಿ ಮೂರು ಅಭಯಾರಣ್ಯಗಳಲ್ಲಿ ₹1.69 ಕೋಟಿ ಪರಿಹಾರ ನೀಡಿದೆ. 

ಪ್ರತಿಯೊಂದು ಬೆಳೆಗೂ ಪರಿಹಾರ ಮೊತ್ತ ನಿಗದಿಪಡಿಸಲಾಗಿದೆ. ಉದಾ: ಜೋಳಕ್ಕೆ ಎಕರೆಗೆ ₹1,240 ಕೊಡಲಾಗುತ್ತಿದೆ. ಬಾಳೆಗೆ ಒಂದು ಗಿಡಕ್ಕೆ ₹160 ನಿಗದಿಪಡಿಸಲಾಗಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !