ಮಂಗಳವಾರ, ನವೆಂಬರ್ 12, 2019
28 °C
ಕೇರಳ ಮಾದರಿಯಂತೆ ರಾಜ್ಯದಲ್ಲೂ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೂಡಿಕೆ

ಜಾಗತಿಕ ಹೂಡಿಕೆದಾರರ ಸಮಾವೇಶ: ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ

Published:
Updated:
Prajavani

ಚಾಮರಾಜನಗರ: ಕೇರಳ ಮಾದರಿಯಂತೆ, ರಾಜ್ಯದಲ್ಲೂ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಆಯೋಜಿಸಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಅವರು ಸೋಮವಾರ ಹೇಳಿದರು.

‘ಪ್ರವಾಸೋದ್ಯಮ ಕ್ಷೇತ್ರದಲ್ಲಿ ಖಾಸಗಿ ಬಂಡವಾಳ ಆಕರ್ಷಿಸಲು ಕೇರಳದಲ್ಲಿ ಸೆ. 16ರಂದು ಜಾಗತಿಕ ಹೂಡಿಕೆದಾರರ ಸಮಾವೇಶ ಆಯೋಜಿಸಲಾಗುತ್ತಿದೆ. ಪ್ರವಾಸಿ ತಾಣಗಳನ್ನು ಸರ್ಕಾರಿ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಸಮಗ್ರವಾಗಿ ಅಭಿವೃದ್ಧಿ ಪಡಿಸಲು ಅವಕಾಶ ಇದೆ. ನಾನು ಕೂಡ ಆ ಸಮಾವೇಶದಲ್ಲಿ ಭಾಗವಹಿಸುತ್ತಿದ್ದು, ನಂತರ ಮುಖ್ಯಮಂತ್ರಿ ಹಾಗೂ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಾವೇಶದ ರೂಪುರೇಷೆ ಸಿದ್ಧಪಡಿಸಲಾಗುವುದು’ ಎಂದು ಸುದ್ದಿಗಾರರಿಗೆ ತಿಳಿಸಿದರು.

2020ಕ್ಕೆ ಹೊಸ ಪ್ರವಾಸೋದ್ಯಮ ನೀತಿ: ‘ಮುಂದಿನ ವರ್ಷ ಹೊಸ ಪ್ರವಾಸೋದ್ಯಮ ನೀತಿ ತರಬೇಕಾಗಿದೆ. ಪಶ್ಚಿಮ ಘಟ್ಟದಿಂದ ಹಿಡಿದು ಚಾಮರಾಜನಗರದವರೆಗೆ ಪ್ರವಾಸಿ ತಾಣಗಳ ಸಮಗ್ರ ಅಭಿವೃದ್ಧಿಗಾಗಿ ನೀತಿ ರೂಪಿಸಲಿದ್ದೇವೆ. ಇದರ ಜೊತೆಗೆ ಪಾರಂಪರಿಕ ಪ್ರವಾಸೋದ್ಯಮ ನೀತಿ, ಕರಾವಳಿ ಪ್ರವಾಸೋದ್ಯಮ ನೀತಿಯೂ ಇರಲಿದೆ’ ಎಂದರು.

ಪ್ರವಾಸೋದ್ಯಮ ಸರ್ಕಿಟ್‌: ‘ಮಂಡ್ಯ, ಮೈಸೂರು, ಚಾಮರಾಜನಗರ ಮತ್ತು ಕೊಡಗು ಜಿಲ್ಲೆಗಳನ್ನು ‌ಪ್ರವಾಸೋದ್ಯಮ ಸರ್ಕಿಟ್‌ (ಟೂರಿಸಂ ಸರ್ಕಿಟ್‌) ಮಾಡುವ ನಿಟ್ಟಿನಲ್ಲಿ ಐದು ಜಿಲ್ಲೆಯ ಅಧಿಕಾರಿಗಳು ಸೇರಿ ಮೂರು ಹಂತಗಳಲ್ಲಿ ಅನುಷ್ಠಾನಕ್ಕೆ ಬರುವಂತೆ ಸಮಗ್ರ ಯೋಜನೆ ರೂಪಿಸಲು ಸೂಚಿಸಲಾಗಿದೆ’ ಎಂದರು.

ಜಂಟಿ ಅಭಿವೃದ್ಧಿ: ‘ಗಗನಚುಕ್ಕಿ ಮತ್ತು ಭರಚುಕ್ಕಿ ಜಲಪಾತ, ಸುತ್ತಮುತ್ತಲಿನ ಪ್ರದೇಶಗಳನ್ನು ಜಂಟಿಯಾಗಿ ಅಭಿವೃದ್ಧಿ ಪಡಿಸಲು ಉದ್ದೇಶಿಸಲಾಗಿದೆ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ನಂಬಿಕೆ ಇದೆ; ಮೂಢನಂಬಿಕೆ ಇಲ್ಲ’

‘ನನಗೆ ನಂಬಿಕೆ ಇದೆ. ಮೂಢನಂಬಿಕೆ ಇಲ್ಲ. ಒಂದು ವೇಳೆ ನಾನು ಮುಖ್ಯಮಂತ್ರಿಯಾದರೆ ಮೊದಲ ದಿನವೇ ಚಾಮರಾಜನಗರಕ್ಕೆ ಭೇಟಿ ನೀಡುತ್ತೇನೆ’ ಎಂದು ಸಿ.ಟಿ.ರವಿ ಹೇಳಿದರು.

ಯಡಿಯೂರಪ್ಪ ಅವರು ಚಾಮರಾಜನಗರಕ್ಕೆ ಬರುತ್ತಾರೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಇಲ್ಲಿಗೆ ಬರುವುದು ಬಿಡುವುದು ಮುಖ್ಯಮಂತ್ರಿ ವಿವೇಚನೆಗೆ ಬಿಟ್ಟಿದ್ದು. ಈ ಪ್ರಶ್ನೆಯನ್ನು ನೀವು ಅವರಿಗೇ ಕೇಳಬೇಕು. ಅವರನ್ನು ಕರೆದುಕೊಂಡು ಬರಬೇಕಾದವರು ಇಲ್ಲಿನ ಶಾಸಕರು’ ಎಂದರು.

‘ಸೆಂಥಿಲ್‌ ಕಾರಣ ಒಪ್ಪುವಂಥದಲ್ಲ’

ಮಂಡ್ಯ: ‘ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂಬ ಕಾರಣ ನೀಡಿ, ಸಸಿಕಾಂತ್‌ ಸೆಂಥಿಲ್‌ ಐಎಎಸ್‌ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರೆ ಅದು ಸಂಸತ್‌ ವ್ಯವಸ್ಥೆಯನ್ನು ಅವಮಾನಿಸಿದಂತೆ’ ಎಂದು ಸಚಿವ ಸಿ.ಟಿ.ರವಿ ಸೋಮವಾರ ಇಲ್ಲಿ ಅಭಿಪ್ರಾಯಪಟ್ಟರು.

‘ಕಾಶ್ಮೀರ ಸಮಸ್ಯೆ, ಪ್ರಜಾಪ್ರಭುತ್ವದ ವಿಚಾರ ಪ್ರಸ್ತಾಪಿಸಿ ರಾಜೀನಾಮೆ ನೀಡುವುದು ಸರಿಯಲ್ಲ. ಕಾಶ್ಮೀರ ವಿಚಾರದಲ್ಲಿ ಸಂಸತ್‌ ನಿರ್ಣಯ ಕೈಗೊಂಡಿದ್ದು ಅದಕ್ಕೆ ಎಲ್ಲಾ ಸದಸ್ಯರೂ ಸಮ್ಮತಿಸಿದ್ದಾರೆ.ಸೆಂಥಿಲ್‌ ಪಾರ್ಲಿಮೆಂಟ್‌ಗಿಂತಲೂ ದೊಡ್ಡವರಲ್ಲ’ ಎಂದರು.

ಮಂಗಳೂರು (ವರದಿ): ಅಧಿಕಾರಿಗಳು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕು. ರಾಜಕೀಯ ಪ್ರೇರಿತ ಸಿದ್ಧಾಂತ ಇರುವ ಅಧಿಕಾರಿ, ಹುದ್ದೆಯಲ್ಲಿ ಇರುವುದು ಪ್ರಜಾಪ್ರಭುತ್ವಕ್ಕೂ ಅಪಾಯಕಾರಿ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ, ಶಾಸಕ ಸಂಜೀವ್‌ ಮಠಂದೂರು, ಸಸಿಕಾಂತ್‌ ಸೆಂಥಿಲ್‌ ವಿರುದ್ಧ ವಾಗ್ದಾಳಿ ನಡೆಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶ ವಿರೋಧಿ ಹೇಳಿಕೆ ನೀಡುವವರನ್ನು ದೇಶ ವಿರೋಧಿಗಳೆಂದು ಕರೆಯದೆ ದೇಶಪ್ರೇಮಿಗಳು ಎಂದು ಕರೆಯಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಪ್ರತಿಕ್ರಿಯಿಸಿ (+)