ಸೈಕಲ್‌ ತುಳಿಯುತ್ತಾ ಉದ್ಯಾನ ಸುತ್ತೋಣ ಬನ್ನಿ...

7
ಮಾಲಿನ್ಯ ನಿಯಂತ್ರಣಕ್ಕೆ ಹೊಸ ಪ್ರಯೋಗ * ಕಬ್ಬನ್‌ ಪಾರ್ಕ್‌ನಲ್ಲಿ ರೂಪುಗೊಳ್ಳುತ್ತಿದೆ ಸೈಕಲ್‌ ಸ್ಟ್ಯಾಂಡ್‌

ಸೈಕಲ್‌ ತುಳಿಯುತ್ತಾ ಉದ್ಯಾನ ಸುತ್ತೋಣ ಬನ್ನಿ...

Published:
Updated:

ಬೆಂಗಳೂರು: ಉದ್ಯಾನವನ್ನೇನೋ ಸುತ್ತಲು ಇಷ್ಟ. ಆದರೆ, ನೂರಾರು ಎಕರೆಗಳಷ್ಟು ಮೈಚಾಚಿಕೊಂಡಿರುವ ಅದನ್ನು ಸುತ್ತು ಹಾಕೋದು ಹೇಗೆ ಎನ್ನುವವರ ನೆರವಿಗೆ ಬರಲಿದೆ ಸೈಕಲ್‌. 

ಹೌದು. ರಾಜ್ಯ ತೋಟಗಾರಿಕೆ ಇಲಾಖೆಯು ಕಬ್ಬನ್‌ ಉದ್ಯಾನದಲ್ಲಿ (ಚಾಮರಾಜೇಂದ್ರ ಉದ್ಯಾನ) ಇದೇ ಮೊದಲ ಬಾರಿಗೆ ಸೈಕಲ್‌ ಸೇವೆಯನ್ನು ಪರಿಚಯಿಸಲು ಮುಂದಾಗಿದೆ. 

ನಗರದಲ್ಲಿ ಪ್ರತಿದಿನ ವಾಹನಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ವಾಯು ಮಾಲಿನ್ಯದ ಮಿತಿ ಮೀರುತ್ತಿದೆ. ಮಾಲಿನ್ಯ ನಿಯಂತ್ರಣದ ಜತೆಗೆ ಪ್ರವಾಸಿಗರನ್ನೂ ಆಕರ್ಷಿಸಲು ‘ಸೈಕಲ್‌ ಟೂರಿಸಂ’ಗೆ ಉತ್ತೇಜನ ನೀಡಲು ಇಲಾಖೆ ನಿರ್ಧರಿಸಿದೆ.

ತೋಟಗಾರಿಕೆ, ಪ್ರವಾಸೋದ್ಯಮ ಇಲಾಖೆಗಳು ಹಾಗೂ ‘ನಮ್ಮ ನಿಮ್ಮ ಸೈಕಲ್‌ ಫೌಂಡೇಷನ್‌’ ಮತ್ತು ಡಿಸ್ಕವರಿ ವಿಲ್ಹೇಜ್‌ ಸಹಯೋಗದಲ್ಲಿ ಹಡ್ಸನ್‌ ವೃತ್ತದ ಸಮೀಪ ಉದ್ಯಾನದಲ್ಲಿ ಸೈಕಲ್‌ ಸ್ಟ್ಯಾಂಡ್‌ ನಿರ್ಮಾಣವಾಗುತ್ತಿದೆ. 

‘ಕಳೆದ ವರ್ಷ ನಮ್ಮ ಇಲಾಖೆಯು ಸೈಕಲ್‌ ಸ್ಟ್ಯಾಂಡ್‌ ನಿರ್ಮಾಣಕ್ಕಾಗಿ ಪ್ರವಾಸೋದ್ಯಮ ಇಲಾಖೆಯಿಂದ ಆರ್ಥಿಕ ನೆರವು ಕೋರಿತ್ತು.  ಇಲಾಖೆ  ₹4.40 ಲಕ್ಷ ಅನುದಾನ ಮಂಜೂರು ಮಾಡಿದೆ’ ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ತಿಳಿಸಿದರು.

‘ಅಮೆರಿಕ, ಯುರೋಪ್‌ನ ದೇಶಗಳಲ್ಲಿ ಸೈಕಲ್‌ ಟೂರಿಸಂಗೆ ಹೆಚ್ಚು ಒತ್ತು ನೀಡಲಾಗಿದೆ. ತನ್ಮೂಲಕ ಪರಿಸರ ಸಂರಕ್ಷಣೆಗೆ ಕೊಡುಗೆ ನೀಡುವ ಜತೆಗೆ ಆದಾಯವನ್ನೂ ಪಡೆಯಲಾಗುತ್ತಿದೆ. ನಮ್ಮಲ್ಲೂ ಇಂತಹ ಪರಿಪಾಠ ಬೆಳೆಯಬೇಕು. ಹಾಗಾಗಿ, ಕಬ್ಬನ್‌ ಉದ್ಯಾನದಲ್ಲಿ ಸೈಕಲ್‌ ಬಳಕೆಗೆ ಉತ್ತೇಜನ ನೀಡಲು ಮುಂದಾಗಿದ್ದೇವೆ’ ಎನ್ನುತ್ತಾರೆ ‘ನಮ್ಮ ನಿಮ್ಮ ಸೈಕಲ್‌ ಫೌಂಡೇಷನ್‌’ನ ಮಾನವ ಸಂಪನ್ಮೂಲ ಅಧಿಕಾರಿ ಮುರಳಿ.

‘ಉದ್ಯಾನದ ನಾಲ್ಕೂ ಗೇಟ್‌ಗಳ ಬಳಿ ಸೈಕಲ್‌ ಸ್ಟ್ಯಾಂಡ್‌ ನಿರ್ಮಾಣ ಮಾಡುವ ಉದ್ದೇಶವಿತ್ತು. ಆದರೆ, ತೋಟಗಾರಿಕೆ ಇಲಾಖೆ ಹಡ್ಸನ್‌ ವೃತ್ತದ ಬಳಿ ಮಾತ್ರ ಸ್ಟ್ಯಾಂಡ್‌ ನಿರ್ಮಾಣಕ್ಕೆ ಅವಕಾಶ ನೀಡಿದೆ. ಮುಂಬರುವ ದಿನಗಳಲ್ಲಿ ಇತರ ಕಡೆಗಳಲ್ಲೂ ಸೇವೆ ಆರಂಭಿಸಲಿದ್ದೇವೆ’ ಎಂದು ವಿವರಿಸಿದರು.

‘ಎರಡು ತಿಂಗಳ ಕಾಲ ಸೈಕಲ್‌ಗಳ ಪ್ರಾಯೋಗಿಕ ಸಂಚಾರ ನಡೆಯಲಿದೆ. ಸಾರ್ವಜನಿಕರ ಪ್ರತಿಕ್ರಿಯೆ ಆಧರಿಸಿ ಮುಂದಿನ ದಿನಗಳಲ್ಲಿ ಸೈಕಲ್‌ಗಳ ಸಂಖ್ಯೆಯನ್ನು ಹೆಚ್ಚಿಸುವ ಕುರಿತು ನಿರ್ಧಾರ ತೆಗೆದುಕೊಳ್ಳುತ್ತೇವೆ. ತಿಂಗಳೊಳಗಾಗಿ ಸಾರ್ವಜನಿಕರಿಗೆ ಈ ಸೇವೆ ಸಿಗಲಿದೆ’ ಎಂದು ತೋಟಗಾರಿಕೆ ಇಲಾಖೆ (ಕಬ್ಬನ್‌ ಉದ್ಯಾನ) ಉಪ ನಿರ್ದೇಶಕ ಮಹಾಂತೇಶ್‌ ಮುರಗೋಡ ಹೇಳಿದರು.

ಬಾಡಿಗೆರಹಿತ ಸೈಕಲ್ ಸವಾರಿ: ಪ್ರತಿ ಭಾನುವಾರ ಬೆಳಿಗ್ಗೆ 8 ರಿಂದ ಸಂಜೆ 5ರವರೆಗೆ ಉದ್ಯಾನದ ಒಳ ರಸ್ತೆಗಳಲ್ಲಿ ನಗರ ಭೂಸಾರಿಗೆ ನಿರ್ದೇಶನಾಲಯದ ಸಹಯೋಗದಲ್ಲಿ ಬ್ಯಾಂಡ್ ಸ್ಟ್ಯಾಂಡ್ ಆವರಣದಲ್ಲಿ ಉಚಿತವಾಗಿ ಈ ಸೇವೆ ನೀಡಲಾಗುತ್ತಿದೆ. ಬಾಡಿಗೆ ರಹಿತ ಸೈಕಲ್ ಸವಾರಿ ಸೌಲಭ್ಯ ಕಲ್ಪಿಸಲಾಗಿದೆ.

‘ಹಡ್ಸನ್‌ ಪ್ರವೇಶದ್ವಾರಕ್ಕೆ ಹೊಸ ಸ್ಪರ್ಶ’
ಕಬ್ಬನ್‌ ಉದ್ಯಾನದ ಹೈಕೋರ್ಟ್‌ ಬಳಿಯ ಪ್ರವೇಶ ದ್ವಾರದ ಮಾದರಿಯಲ್ಲೇ  ಹಡ್ಸನ್‌‌ ವೃತ್ತದ ಬಳಿಯ ಪ್ರವೇಶ ದ್ವಾರಕ್ಕೂ ಹೊಸ ಸ್ಪರ್ಶ ನೀಡಲಾಗುತ್ತಿದೆ. 

‘₹45 ಲಕ್ಷ ವೆಚ್ಚದಲ್ಲಿ ಕಳೆದ ಆರು ತಿಂಗಳಿನಿಂದಲೇ ಪ್ರವೇಶ ದ್ವಾರ ನಿರ್ಮಾಣ ಕಾರ್ಯ ನಡೆಯುತ್ತಿದೆ. ಉದ್ಯಾನದ ಆಕರ್ಷಣೆ ಹೆಚ್ಚಿಸುವ ಹಾಗೂ ಸೂಕ್ತ ಭದ್ರತೆ ಒದಗಿಸುವ ನಿಟ್ಟಿನಲ್ಲಿ ದ್ವಾರದ ವಿನ್ಯಾಸದಲ್ಲಿ ಮಾರ್ಪಾಡು ಮಾಡಲಾಗುತ್ತಿದೆ’ ಎಂದು ಮುರಗೋಡ ತಿಳಿಸುತ್ತಾರೆ.

ಉದ್ಯಾನ ಸುತ್ತ ಗ್ರಿಲ್‌ ಬೇಲಿ: ಉದ್ಯಾನವನ್ನು ಸುರಕ್ಷಿತ ತಾಣವಾಗಿಸಲು ಕಬ್ಬಿಣದ ಗ್ರಿಲ್‌ಗಳ ಎತ್ತರದ ಬೇಲಿ ನಿರ್ಮಿಸಲಾಗುತ್ತಿದೆ. ಹಡ್ಸನ್‌ ವೃತ್ತದಿಂದ ವೆಂಕಟಪ್ಪ ಆರ್ಟ್‌ ಗ್ಯಾಲರಿವರೆಗೆ ಕಸ್ತೂರಬಾ ರಸ್ತೆ ಬದಿಯಲ್ಲಿ ಹೊಸ ಬೇಲಿ ನಿರ್ಮಾಣಗೊಳ್ಳುತ್ತಿದೆ.

‘ಆ್ಯಪ್‌ ಮೂಲಕ ಸೇವೆ‌’
‘ಸೈಕಲ್‌ ಸ್ಟ್ಯಾಂಡ್‌ ಸೇವೆ ಪಡೆಯಲು‘nammanimmacycle’ ಎಂಬ ಆ್ಯಪ್‌ ಅನ್ನುಅಭಿವೃದ್ಧಿಪಡಿಸಲಾಗಿದೆ. ಸಾರ್ವಜನಿಕರ ಬಳಕೆಗೆ ಶೀಘ್ರವೆ ಇದನ್ನು ಬಿಡುಗಡೆಗೊಳಿಸಲಾಗುವುದು. ಓಲಾ, ಉಬರ್‌ ಆ್ಯಪ್‌ಗಳ ಮಾದರಿಯಲ್ಲೇ ಇದನ್ನು ಬಳಸಬಹುದು’ ಎಂದು ಮುರಳಿ ಮಾಹಿತಿ ನೀಡುತ್ತಾರೆ.

‘ಸದ್ಯ 20 ರಿಂದ 30 ಸೈಕಲ್‌ಗಳು ಸೇವೆಗೆ‌ ಲಭ್ಯವಾಗಲಿವೆ. ಇದರಲ್ಲಿ ಸಿಂಗಲ್‌, ಡಬ್ಬಲ್‌ ಹಾಗೂ ಮಲ್ಟಿ ರೈಡರ್‌ ಸೈಕಲ್‌ಗಳೂ ಇರಲಿವೆ. ಬಾಡಿಗೆ ಆಧಾರದ ಮೇಲೆ ಗಂಟೆಗೆ ಇಂತಿಷ್ಟು ಹಣ ಪಾವತಿಸಿ ಸೇವೆ ಪಡೆಯಬಹುದು. ಸಿಂಗಲ್‌ ರೈಡರ್‌ ಸೈಕಲ್‌ಗೆ ಎರಡು ಗಂಟೆಗೆ ಅಂದಾಜು ₹25 ಶುಲ್ಕ ನಿಗದಿಪಡಿಸಲಿದ್ದೇವೆ. ಉಳಿದವುಗಳಿಗೆ ಇನ್ನೂ ಶುಲ್ಕ ಅಂತಿಮವಾಗಿಲ್ಲ’ ಎಂದು ಹೇಳುತ್ತಾರೆ. 

‘ಬಾಡಿಗೆರಹಿತ ಸೈಕಲ್ ಸವಾರಿ’
ಪ್ರತಿ ಭಾನುವಾರ ಬೆಳಿಗ್ಗೆ 8 ರಿಂದ ಸಂಜೆ 5ರವರೆಗೆ ಉದ್ಯಾನದ ಒಳ ರಸ್ತೆಗಳಲ್ಲಿ ನಗರ ಭೂಸಾರಿಗೆ ನಿರ್ದೇಶನಾಲಯದ ಸಹಯೋಗದಲ್ಲಿ ಬಾಡಿಗೆ ರಹಿತ ಸೈಕಲ್ ಸವಾರಿ ಸೌಲಭ್ಯ ಕಲ್ಪಿಸಲಾಗಿದೆ. 

ಭಾನುವಾರ ಉದ್ಯಾನದ ಒಳಗೆ ಸಾರ್ವಜನಿಕ ವಾಹನ ಸಂಚಾರವನ್ನು ನಿಷೇಧಿಸಲಾಗಿದ್ದು, ಬ್ಯಾಂಡ್ ಸ್ಟ್ಯಾಂಡ್ ಆವರಣದಲ್ಲಿ ಉಚಿತವಾಗಿ ಈ ಸೇವೆ ನೀಡಲಾಗುತ್ತಿದೆ. 

‘ನಾಲ್ಕೈದು ವರ್ಷಗಳಿಂದ ಈ ಸೌಲಭ್ಯ ಚಾಲ್ತಿಯಲ್ಲಿದೆ. ಸುಮಾರು 50 ಸೈಕಲ್‌ಗಳು ಸೇವೆಯಲ್ಲಿವೆ. ಸಾರ್ವಜನಿಕರು, ಗುರುತಿನ ಚೀಟಿ, ಪ್ಯಾನ್‌ಕಾರ್ಡ್‌, ಆಧಾರ ಕಾರ್ಡ್‌... ಯಾವುದಾದರೂ ಒಂದು ಗುರುತಿನ ಚೀಟಿಯನ್ನು ನೀಡಿ ಸೈಕಲ್‌ ಪಡೆಯಬಹದು’ ಎಂದು ಮಹಾಂತೇಶ್‌ ವಿವರಿಸಿದರು.

‘ಉದ್ಯಾನದಲ್ಲಿ ಎರಡು ಪರಿಸರ ಸ್ನೇಹಿ ವಿದ್ಯುತ್‍ಚಾಲಿತ ವಾಹನಗಳೂ ಇವೆ. ಆಸಕ್ತರು, ₹25 ಪಾವತಿಸಿ ಅರ್ಧ ಗಂಟೆಗೆ ಈ ಸೌಲಭ್ಯ ಪಡೆಯಬಹುದು’ ಎಂದರು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !