ಶುಕ್ರವಾರ, ನವೆಂಬರ್ 22, 2019
27 °C

ಮನುಜ ಮತ ಸಾರುವ ಸೈಕಲ್‌ ಯಾತ್ರೆ

Published:
Updated:
Prajavani

ಇವರ ಹೆಸರು ನಾಗರಾಜ ಗೌಡ. ಮೂಲತಃ ಹಾಸನದವರು. 48 ವರ್ಷದ ಗೌಡರು ಹಾಸನ ಬಿಟ್ಟು ಹಲವು ವರ್ಷಗಳೇ ಆಗಿವೆ. ದೆಹಲಿಯಲ್ಲಿ ಹವ್ಯಾಸಿ ಛಾಯಾಗ್ರಾಹಕರಾಗಿ ನೆಲೆ ನಿಂತಿದ್ದ ಗೌಡರು ಕೆಲವು ವರ್ಷಗಳ ಹಿಂದೆ ಬಾಲಿವುಡ್‌ ಸಿನಿಮಾ ಸೆಳೆತದಿಂದ ಮುಂಬೈಗೆ ವಾಸ್ತವ್ಯ ಬದಲಾಯಿಸಿದ್ದಾರೆ. ವಿಷಯ ಅದಲ್ಲ. ನಯಾ ಪೈಸೆ ಖರ್ಚಿಲ್ಲದೆ ಸೈಕಲ್‌ ಮೇಲೆ ಇಡೀ ದೇಶ ಸುತ್ತುವ ಅವರ ಹವ್ಯಾಸ ಸ್ವಾರಸ್ಯಕರವಾಗಿದೆ.

ಸುಮಾರು ಎರಡು ವರ್ಷಗಳ ಹಿಂದೆ ಗೌಡರು ಮುಂಬೈನಿಂದ ಸೈಕಲ್‌ ಮೇಲೆ ಆರಂಭಿಸಿರುವ ಸದ್ಭಾವನಾ ಯಾತ್ರೆ ಉತ್ತರ ಭಾರತವನ್ನು ಸುತ್ತಿ ಇದೀಗ ಬೆಂಗಳೂರಿಗೆ ಬಂದಿದೆ.  

ಭಯೋತ್ಪಾದನೆ,ಸರ್ವಭಾವ ಸಮಭಾವ, ರಾಷ್ಟ್ರೀಯ ಏಕತೆ, ವಿಶ್ವಶಾಂತಿ, ಪರಿಸರ ರಕ್ಷಣೆ ಇಂತಹ ಮುಂತಾದ ಸಾಮಾಜಿಕ ಕಳಕಳಿಯ ವಿಷಯಗಳ ಬಗ್ಗೆ ಜನಜಾಗೃತಿ ಮೂಡಿಸಲು 2017ರ ಡಿಸೆಂಬರ್‌ 17ರಂದು ಮುಂಬೈನಿಂದ ಸೈಕಲ್‌ ಯಾತ್ರೆ ಹೊರಟಿದ್ದರು. 

ಗುಜರಾತ್‌ನ ಕಛ್‌, ಬುಜ್‌, ರಾಜಸ್ಥಾನ, ಪಂಜಾಬ್‌ ಸೇರಿದಂತೆ ಉತ್ತರ ಭಾರತದ ಎಲ್ಲ ರಾಜ್ಯಗಳನ್ನು ಸೈಕಲ್‌ ಮೇಲೆ ಒಂದು ಸುತ್ತು ಹಾಕಿ 15 ದಿನಗಳ ಹಿಂದೆ ಬೆಂಗಳೂರು ತಲುಪಿದ್ದಾರೆ. ಕರ್ನಾಟಕದಲ್ಲಿ ಎರಡು ತಿಂಗಳು ಸುತ್ತಿದ ಬಳಿಕ ಗೌಡರ ಸೈಕಲ್‌ ಯಾತ್ರೆ ಕೇರಳ, ತಮಿಳುನಾಡು, ಒಡಿಶಾ, ಬಿಹಾರ, ಪಶ್ಚಿಮ ಬಂಗಾಳದತ್ತ ಹೊರಡಲಿದೆ. 

ಇದು ಖರ್ಚಿಲ್ಲದ ಸೈಕಲ್‌ ಯಾತ್ರೆ
ಗೌಡರದ್ದು ನಯಾಪೈಸೆ ಖರ್ಚಿಲ್ಲದ ಭಾರತ ಯಾತ್ರೆ! ಪ್ರತಿ ದಿನ ಹೆದ್ದಾರಿಯಲ್ಲಿ 80–100 ಕಿ.ಮೀ ಸಂಚರಿಸುವ ಅವರಿಗೆ ಮಂದಿರ, ಮಸೀದಿ, ಚರ್ಚ್‌, ಗುರುದ್ವಾರ, ಬಸೀದಿ, ಆರ್ಯ ಸಮಾಜ, ಗಾಂಧಿ ಆಶ್ರಮಗಳೇ ಆಶ್ರಯ ಮತ್ತು ಅನ್ನದ ತಾಣಗಳು. ಹೆದ್ದಾರಿಗಳಲ್ಲಿರುವ ಡಾಬಾಗಳಲ್ಲಿ ಕೂಡ ಉಚಿತ ಊಟ, ತಿಂಡಿ ಜತೆಗೆ ಖರ್ಚಿಗೆ ಒಂದಿಷ್ಟು ಕಾಸು ಸಿಗುತ್ತದೆ. 

25 ವರ್ಷಗಳ ಹಿಂದೆಯೇ ದೆಹಲಿಗೆ ತೆರಳಿ ಹವ್ಯಾಸಿ ಛಾಯಾಗ್ರಾಹಕರಾಗಿ ಕೆಲಸ ಮಾಡುತ್ತಿದ್ದ ನಾಗರಾಜ, ಆಗಾಗ ಹವ್ಯಾಸಕ್ಕಾಗಿ ಸೈಕಲ್‌ ಯಾತ್ರೆ ಕೈಗೊಳ್ಳುತ್ತಿದ್ದರು. ಗಾಂಧಿವಾದಿ ಡಾ.ಎಸ್‌.ಎನ್‌.ಸುಬ್ಬಾರಾವ್‌ ಅವರು ಉತ್ತರ ಪ್ರದೇಶದ ಗೋರಖಪುರದಲ್ಲಿ ನಡೆಸಿದ ಯುವ ಶಿಬಿರ ಇವರ ಜೀವನದ ದಿಕ್ಕು ಬದಲಿಸಿತು. ಅಲ್ಲಿಂದ ಶಾಂತಿ, ಸದ್ಭಾವನೆ ಮತ್ತು ಗಾಂಧಿ ಸಂದೇಶ ಸಾರಲು ಯಾತ್ರೆ ಆರಂಭಿಸಿದರು.

ದಾರಿಯುದ್ದಕ್ಕೂ ಸಿಗುವ ಶಾಲೆಗಳಿಗೆ ತೆರಳಿ ಸೌಹಾರ್ದತೆ, ಸಾಮರಸ್ಯ ಕುರಿತು ಪಾಠ ಮಾಡಿದ್ದಾರೆ. ಮಕ್ಕಳು ಮತ್ತು ಜನರೊಂದಿಗೆ ಬೆರೆಯುವಾಗ ಸಿಗುವ ಆನಂದ ಬೇರೆ ಎಲ್ಲಿಯೂ ಸಿಗಲಾರದು ಎನ್ನುವಾಗ ಗೌಡರ ಕಣ್ಣಲ್ಲಿ ಮಿಂಚು ಕಾಣುತ್ತದೆ. ಅಂದು ಆರಂಭಿಸಿದ ಯಾತ್ರೆ ಇನ್ನೂ ನಡೆಯುತ್ತಲೇ ಇದೆ.

ಸ್ವಾರಸ್ಯಕರ ಅನುಭವಗಳ ಗಣಿ
ಸದಾ ಸೈಕಲ್‌ ತುಳಿಯುವ ಕಾರಣ ನಾಗರಾಜ ಅವರ ಆರೋಗ್ಯ ಚೆನ್ನಾಗಿದೆ. 48ನೇ ವಯಸ್ಸಿನಲ್ಲಿಯೂ ಸೈಕಲ್‌ ಮೇಲೆ ದೇಶ ಪರ್ಯಟನೆಯ ಉಮೇದು ಕಡಿಮೆಯಾಗಿಲ್ಲ. ಸೈಕಲ್‌ ಮೇಲೆ ಸೊಳ್ಳೆ ಪರದೆ, ಹಾಸಿಗೆ, ಹೊದಿಕೆ, ಬಟ್ಟೆಗಳ ಬ್ಯಾಗ್‌ ಸಿದ್ಧ ಮಾಡಿಟ್ಟುಕೊಂಡು ಕರ್ನಾಟಕ ಸುತ್ತಲು ಅಣಿಯಾಗಿದ್ದಾರೆ. 

ಸೈಕಲ್‌ ಮೇಲೆ ಹಲವಾರು ರಾಜ್ಯಗಳನ್ನು ಸುತ್ತಿ ಬಂದಿರುವ ಗೌಡರು ತಮ್ಮೊಂದಿಗೆ ಸ್ವಾರಸ್ಯಕರ ಅನುಭವಗಳನ್ನು ಹೊತ್ತು ತಂದಿದ್ದಾರೆ. ಅವು ವರ ಜೀವನದ ಪಾಠಗಳಂತೆ. ಅದನ್ನು ಅವರ ಮಾತಲ್ಲೇ ಕೇಳಿ... 
ಜೈಪುರದಲ್ಲಿ ‘ಕಿಸ್ನೆ ಕಹಾ ಆಪ್ ಕಾ ಕೋಯಿ ನಹಿ. ಮೈ ಹ್ಞೂಂ ನಾ!’ ಎಂಬ ಬೋರ್ಡ್‌ ಕಂಡಿತು. ಆ ಬೋರ್ಡ್‌ ಬರೆಸಿದವರು ಯಾರು ಎಂದು ಹುಡುಕಿಕೊಂಡು ಹೊರಟೆ. ಆ ವ್ಯಕ್ತಿ ಸಿಕ್ಕರು. ಅವರ ಹೆಸರು ಪದಮ್‌ ಜೈನ್‌. ನನ್ನ ಯಾತ್ರೆ ಬಗ್ಗೆ ಕೇಳಿ ಬೆನ್ನು ತಟ್ಟಿದರು. ಸತ್ಕಾರ ಮಾಡಿ, ದಾರಿಯ ಖರ್ಚಿಗೆ ಹಣ ಕೊಟ್ಟು ಕಳಿಸಿದರು. ನೆರವು ಕೇಳಿ ಬರುವವರಿಗೆ ಅವರ ಮನೆಯ ಬಾಗಿಲು 24 ಗಂಟೆಯೂ ತೆರೆದಿರುತ್ತದೆ. 

‘ಹಲವಾರು ರಾಜಕಾರಣಿಗಳು, ಮುಖ್ಯಮಂತ್ರಿಗಳು, ಮಂತ್ರಿಗಳನ್ನು ಯಾತ್ರೆಯ ವೇಳೆ ಭೇಟಿಯಾಗಿದ್ದೇನೆ. ನೀವು ಒಳ್ಳೆಯ ಕೆಲಸ ಮಾಡುತ್ತಿದ್ದೀರಿ ಎಂದು ಬೆನ್ನು ಸವರಿ ಕಳಿಸುತ್ತಾರೆ. ಆದೇ ರಸ್ತೆ, ಗದ್ದೆ, ಹೊಲಗಳಲ್ಲಿ ಕೆಲಸ ಮಾಡುವ ಜನಸಾಮಾನ್ಯರ ಬಳಿ ಹೋದರೆ ಊಟ ಕೊಟ್ಟು ಉಪಚರಿಸುತ್ತಾರೆ. ಅವರಿಗೆ ನಾವು ಸಾಮರಸ್ಯ, ಸದ್ಭಾವನೆ ಬಗ್ಗೆ ಹೇಳುವುದು ಏನೂ ಇಲ್ಲ. ಇವೆಲ್ಲವೂ ಅವರೆಲ್ಲರ ಜೀವನದಲ್ಲಿ ಹಾಸು ಹೊಕ್ಕಾಗಿರುತ್ತವೆ’ ಎನ್ನುತ್ತಾರೆ. 

‘ಪಂಜಾಬ್‌ನ ಲೂಧಿಯಾನದಲ್ಲಿ ಹೀರೊ ಸೈಕಲ್‌ ಕಂಪನಿ ಕಾರ್ಖಾನೆಯವರು ಸೈಕಲ್‌ ರಿಪೇರಿ ಮಾಡಿ ಕೊಟ್ಟಿದ್ದಾರೆ’ ಎನ್ನುವ ಗೌಡರಿಗೆ ಯಾತ್ರೆಯುದ್ದಕ್ಕೂ ಇಂತಹ ಹಲವಾರು ಮರೆಯಲಾರದು ಅನುಭವಗಳಾಗಿವೆ.

ದೇಶ ಬದಲಾಗಿದೆ... ಚಕ್ರಗಳೂ ಬದಲಾಗಿವೆ...ಆದರೆ, ಇವರ ಸೈಕಲ್‌ ಮಾತ್ರ ಕೊಂಚವೂ ಬದಲಾಗಿಲ್ಲ! 

ಪ್ರತಿಕ್ರಿಯಿಸಿ (+)