ರೈಲಿನಲ್ಲಿ ‘ಡಿ3’ ಟೀಂ

7

ರೈಲಿನಲ್ಲಿ ‘ಡಿ3’ ಟೀಂ

Published:
Updated:
Prajavani

ಧಾರವಾಡದಿಂದ ಬೆಂಗಳೂರಿಗೆ ಹೋಗುವ ಸಿದ್ಧಗಂಗಾ ಇಂಟರ್ ಸಿಟಿ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್‌ ರೈಲು ಹತ್ತಲು ಚಿಕ್ಕಜಾಜೂರು ಸ್ಟೇಷನ್‌ನಲ್ಲಿ ಕಾಯುತ್ತಿದ್ದೆ. ರೈಲು ಬಂತು. ಹಿಂದಿನ ಬೋಗಿ ಏರಲು ಹೊರಟೆ. ‘ಇಲ್ಲಿ ಜಾಗವಿಲ್ಲ. ಡಿ-3 ಬೋಗಿಗೆ ಹೋಗಿ’ ಎಂದು ಅಧಿಕಾರಿಯೊಬ್ಬರು ಹೇಳಿದರು. ಅವರ ಸಲಹೆಯಂತೆ ಡಿ–3 ಬೋಗಿ ಹತ್ತಿ ಕುಳಿತೆ. ಹಿಂದಿನಿಂದ ಹಳೆಯ ಚಿತ್ರಗೀತೆಗಳು, ಜನಪದ ಗೀತೆ, ದಾಸರ ಪದ, ಭಾವಗೀತೆ, ತತ್ಪದ, ಶರಣರ ವಚನಗಳ ಗೀತ ಗಾಯನ ಹಾಡುತ್ತಿದದ್ದು ಕೇಳಿತು. ಗಾಯನ ಕೇಳಿಬರುತ್ತಿದ್ದ ಸ್ಥಳಕ್ಕೆ ಹೋಗಿ ನೋಡಿದೆ. ಅಲ್ಲಿ ಏಳೆಂಟು ಮಂದಿ, ಹಾಡುತ್ತಿದ್ದರು. ನಾನು ಹೋಗುವ ವೇಳೆಗೆ ಹಾಡುವುದನ್ನು ಮುಗಿಸಿ ಸಹ ಪ್ರಯಾಣಿಕರಿಗೆ ಸಂಕ್ರಾಂತಿ ಎಳ್ಳು ಬೆಲ್ಲ, ಕಬ್ಬಿನ ಚೂರನ್ನು ಕೈಗಿಟ್ಟು, ರೈಲು ಇಳಿದು ನಡೆಯುತ್ತಿದ್ದರು. ನಾನು ಬೀರೂರಿನಲ್ಲಿ ಇಳಿದು ಹೊರಟೆ.

ಮತ್ತೊಂದು ದಿನ, ಅದೇ ಸ್ಟೇಷನ್‌ನಲ್ಲಿ ಅದೇ ರೈಲಿನ ಡಿ-3 ಬೋಗಿಗೆ ಹತ್ತಿದೆ. ಮತ್ತೆ ಆ ಹಾಡು ಹೇಳುತ್ತಿದ್ದ ಗುಂಪು ಕಂಡಿತು. ಆದರೆ ಅಂದು ಹಾಡುತ್ತಿರಲಿಲ್ಲ. ಎಲ್ಲರೂ ಉಪಹಾರ ಸೇವಿಸುತ್ತಿದ್ದರು. ಆ ದಿನದ ಘಟನೆ ಬಗ್ಗೆ ಕುತೂಹಲವಿದ್ದ ನನಗೆ, ತಂಡದೊಂದಿಗೆ ಮಾತಾಡಬೇಕೆನಿಸಿತು. ಹೋಗಿ ಪರಿಚಯ ಮಾಡಿಕೊಂಡೆ. ಅದರಲ್ಲಿ ಒಬ್ಬರು ಪ್ರತಿಕ್ರಿಯಿಸುತ್ತಾ, ‘ನಾನು ರಾಜಶೇಖರಮೂರ್ತಿ. ನಿತ್ಯ ಹರಿಹರ–ಕಡೂರು ನಡುವೆ ಮರದ ವ್ಯಾಪಾರಕ್ಕಾಗಿ ಓಡಾಡುತ್ತೇನೆ’ ಎಂದರು. ನನಗೆ ಅವರ ಪರಿಚಯಕ್ಕಿಂತ, ಪ್ರಯಾಣಿಕರ ಒಗ್ಗಟ್ಟು, ಹಾಗೂ ಅವರ ‘ಆರ್ಕೆಸ್ಟ್ರಾ’ ಬಗ್ಗೆ ತಿಳಿಯುವ ಹಂಬಲ. ಅದಕ್ಕೆ ಅವರ ಮಾತನ್ನು ಅರ್ಧಕ್ಕೆ ನಿಲ್ಲಿಸಿ, ‘ಅವತ್ತು ಹಾಡು ಹೇಳ್ತಿದ್ದರಲ್ಲ, ಅದರ ಬಗ್ಗೆ ಹೇಳಿ’ ಎಂದೆ. ಆಗ ಅವರು ‘ಓ!... ಆ ಕಥೆನಾ’ ಎನ್ನುತ್ತಾ ಪ್ರಯಾಣಿಕರ ಗೀತ ಗಾಯನದ ಕಥೆ ಹೇಳಲು ಶುರುಮಾಡಿದರು.

‘ನಾನು ಮೂರ್ನಾಲ್ಕು ವರ್ಷಗಳಿಂದ ಇದೇ ರೈಲಿನಲ್ಲಿ ಓಡಾಡುತ್ತಿದ್ದೇನೆ. ಎರಡೂವರೆ ತಾಸು ಪ್ರಯಾಣದ ಹಾದಿ. ಬೋರ್‌ ಆಗಬಾರದು ಎಂದುಕೊಂಡು ಅಕ್ಕಪಕ್ಕದ ಪ್ರಯಾಣಿಕರನ್ನು ಮಾತನಾಡಿಸುತ್ತಾ ಗೆಳೆತನ ಮಾಡಿಕೊಂಡೆ. ಈ ಸರಣಿಯಲ್ಲಿ ಹರಿಹರ – ದಾವಣಗೆರೆಯಿಂದ ರೈಲು ಹತ್ತುವವರು ಪರಿಚಯವಾದರು. ಸ್ನೇಹಿತರಾದರು. ಗೆಳೆತನ ಸಂಘದ ರೂಪ ಪಡೆಯಿತು. ಒಮ್ಮೆ ಸಹಪ್ರಯಾಣಿಕ ನೀಲಕಂಠಪ್ಪರಿಗೆ ವರ್ಗಾವಣೆಯಾಯಿತು. ಈ ರೈಲಿನಲ್ಲೇ ಅವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ಮಾಡಿದೆವು. ಕಾರ್ಯಕ್ರಮ ಯಶಸ್ವಿಯಾಯಿತು. ಭಾಗವಹಿಸಿದ್ದವರಿಗೂ ಉತ್ಸಾಹ ಬಂತು. ತಂಡ ಮತ್ತಷ್ಟು ಗಟ್ಟಿಯಾಯಿತು. ಅಂದಿನಿಂದ ಈ ಬೋಗಿಗೆ ‘ರೈಲಿನ ಮಜಾ ಟಾಕೀಸ್ ಡಿ-3’ ಎಂದು ಹೆಸರಿಟ್ಟೆವು. ನಮ್ಮ ಹಾಡು ಹೇಳುವ ಉತ್ಸಾಹ ಕಂಡ ಗೆಳೆಯರೊಬ್ಬರು ಮೈಕ್ ಕೊಡಿಸಿದರು. ಕರೋಕೆ ಸಂಗೀತ ಹಾಕಿಕೊಂಡು ಹಾಡು ಹೇಳಲು ಆರಂಭಿಸಿದೆವು. ‘ಹಾಡ್ತಾ ಹಾಡ್ತಾ ರಾಗ’ ಅಂತರಲ್ಲಾ, ಹಾಗೆ ಎಲ್ಲರಿಗೂ ಹಾಡುವುದು ಅಭ್ಯಾಸವಾಗಿ ಹೋಯಿತು. ನೀವು ಅಂದು ಕೇಳಿದ್ದು, ಇದೇ ಸಂಗೀತ ರಸಸಂಜೆಯ ಕಾರ್ಯಕ್ರಮವೇ’ ಎಂದು ಸುಧೀರ್ಘವಾಗಿ ವಿವರಿಸುತ್ತಾ ಡಿ–3 ಪ್ರಯಾಣಿಕರ ತಂಡದ ಚಟುವಟಿಕೆಯನ್ನು ರಾಜಶೇಖರ ಮೂರ್ತಿ ತೆರೆದಿಟ್ಟರು.

ಈ ತಂಡದ ಸಂಗೀತ ಕಾರ್ಯಕ್ರಮ ನಿರಂತರವಾಗಿರುತ್ತದೆ. ರಾಷ್ಟ್ರೀಯ ಹಬ್ಬಗಳು, ನಾಡ ಹಬ್ಬಗಳು, ತಂಡದ ಸದಸ್ಯರ ಜನ್ಮದಿನ, ಬಡ್ತಿ ಪಡೆದವರಿಗೆ ಅಭಿನಂದನೆ, ನಿವೃತ್ತರಾದವರಿಗೆ ಬೀಳ್ಕೊಡುಗೆ.. ಹೀಗೆ ಬೋಗಿಯಲ್ಲೇ ಎಲ್ಲ ಕಾರ್ಯಕ್ರಮಗಳನ್ನು ನಡೆಸುತ್ತಾರೆ.

ಪ್ರಯಾಣದ ವೇಳೆ ಚೇತನ್ ಜಿಂಗಾಡೆಯಂತಹ ಹಿನ್ನೆಲೆ ಗಾಯಕರು, ಕೆಲವು ಅಪರೂಪದ ವ್ಯಕ್ತಿಗಳು ಜತೆಯಾಗಿದ್ದಾರೆ. ಝೀ ಕನ್ನಡ ವಾಹಿನಿಯ ಸರಿಗಮಪ ರಿಯಾಲಿಟಿ ಶೋನ ಸ್ಪರ್ಧಿ ಹನುಂತಪ್ಪ ಇವರ ಗಾಯನ ತಂಡವನ್ನು ಕಂಡು ಅಚ್ಚರಿಪಟ್ಟು ಪ್ರೋತ್ಸಾಹಿಸಿದ್ದಾರೆ.

‘ಪ್ರಯಾಣಿಕರಿಗೆ ಈ ಚಟುವಟಿಕೆ ಕಿರಿ ಕಿರಿಯಾ ಗಿಲ್ಲ. ಕೆಲವರು ಮೌನವಾಗಿ ಸಂಗೀತ ಆಲಿಸುತ್ತಾರೆ. ಇನ್ನೂ ಕೆಲವರು ನಮ್ಮೊಂದಿಗೆ ಹಾಡಿ ಖುಷಿ ಪಡುತ್ತಾರೆ. ಇಲ್ಲಿವರೆಗೂ ಬೇಡ ಎಂಬ ಮಾತು ಬಂದಿಲ್ಲ. ಬಂದರೆ ಖಂಡಿತ ನಿಲ್ಲಿಸಿಬಿಡುತ್ತೇವೆ’ ಎಂದು ಖುಷಿಯಿಂದ ಹೇಳುತ್ತಾರೆ ಸದಸ್ಯರು.

ಈ ಟೀಂನಲ್ಲಿ ಕೃಷಿ, ಆರೋಗ್ಯ, ಶಿಕ್ಷಣ, ಪೊಲೀಸ್, ಬ್ಯಾಂಕ್‌, ಔಷಧ ವಿತರಕ ಪ್ರತಿನಿಧಿಗಳು, ವ್ಯಾಪಾರಸ್ಥರು, ಕುಶಲಕರ್ಮಿಗಳು, ಕೊರಿಯರ್ ಸರ್ವಿಸ್‌ನವರು, ಕಲಾ ಶಿಕ್ಷಕಿಯರು ಹೀಗೆ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುವವರಿದ್ದಾರೆ. ಆರಿಫುಲ್ಲನಂಥ ಉತ್ತಮ ಹಾಡುಗಾರರಿದ್ದಾರೆ. ಹತ್ತು – ಹದಿನೈದು ಬಾರಿ ರಕ್ತದಾನ ಮಾಡಿರುವ ಮಳಲಕೆರೆ ಬಸವರಾಜರಂತಹ ದಾನಿಗಳೂ ಇದ್ದಾರೆ.

ಅವರ ಎಲ್ಲರ ಮಾತುಗಳನ್ನು ಆಲಿಸುವ ಹೊತ್ತಿಗೆ ನನ್ನ ನಿಲ್ದಾಣ ಬಂತು. ಡಿ3 ತಂಡದ ಪ್ರೀತಿಯ ಬೀಳ್ಕೊಡುಗೆಯೊಂದಿಗೆ ನನ್ನ ಊರಿನತ್ತ ಹೆಜ್ಜೆ ಹಾಕಿದೆ.

ಸಾಮಾಜಿಕ ಜಾಗೃತಿ
‘ರೈಲಿನ ಮಜಾ ಟಾಕೀಸ್ ಡಿ-3’ ತಂಡ ಮನರಂಜನೆಗಷ್ಟೇ ಸೀಮಿತವಾಗಿಲ್ಲ. ರೈಲಿನಲ್ಲಿ ಪ್ರಯಾಣಿಕರಿಗೆ ಶುಚಿತ್ವ ಕುರಿತು ಜಾಗೃತಿ ಮೂಡಿಸುತ್ತಾರೆ. ಮಿತ ನೀರು ಬಳಕೆ, ರೈಲ್ವೆ ಇಲಾಖೆಯ ನಿಯಮ ಪಾಲನೆಯ ಬಗ್ಗೆ ಅರಿವು ಮೂಡಿಸುತ್ತಾರೆ. ಅಶಕ್ತರಿಗೆ, ವೃದ್ಧರಿಗೆ ಜಾಗಬಿಟ್ಟುಕೊಟ್ಟು, ಅವರ ಲಗೇಜುಗಳನ್ನು ಕ್ಯಾರಿಯೇಜ್‌ಗೆ ಎತ್ತಿಡುವಂತಹ ಕಾರ್ಯಗಳಲ್ಲೂ ನೆರವಾಗುತ್ತಾರೆ. ಸಹ ಪ್ರಯಾಣಿಕರ ಅನಾರೋಗ್ಯಕ್ಕೀಡಾದಾಗ ಅವರಿಗೆ ಚಿಕಿತ್ಸೆ ಕೊಡಿಸಿಮನೆಗೆ ತಲುಪಿಸಿದ್ದನ್ನು ತಂಡದ ಸದಸ್ಯರು ನೆನಪಿಸಿಕೊಳ್ಳುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !