ಭಾನುವಾರ, ಆಗಸ್ಟ್ 18, 2019
23 °C
ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಗಳ ‘ಸಮಾಜಮುಖಿ’ ತುಡಿತ

ಉನ್ನತ ಕಲಿಕೆಯ ನವ ನಡಿಗೆ

Published:
Updated:

ಭಾಕ್ರಾನಂಗಲ್ ಅಣೆಕಟ್ಟನ್ನು 1954ರಲ್ಲಿ ಉದ್ಘಾಟಿಸುವಾಗ ಪ್ರಧಾನಿ ಜವಾಹರಲಾಲ್ ನೆಹರೂ ಟಂಕಿಸಿದ ವಾಕ್ಯ: ‘ಇವು ಆಧುನಿಕ ಭಾರತದ ಮಂದಿರಗಳು’. ಅಣೆಕಟ್ಟನ್ನೇ ದೃಷ್ಟಿಯಲ್ಲಿ ಇಟ್ಟುಕೊಂಡು ಮಾಡಿದ ಉದ್ಗಾರ ಇದಲ್ಲ. ಕೈಗಾರಿಕೆಗಳು, ವೈಜ್ಞಾನಿಕ ಸಂಸ್ಥೆಗಳು ಅವರ ಮನಸ್ಸಿನಲ್ಲಿದ್ದವು. ಭಾರತದ ಪ್ರಗತಿ ಎಂದರೆ, ಅದನ್ನು ವಿಜ್ಞಾನ- ತಂತ್ರಜ್ಞಾನದ ಮೂಲಕವೇ ಸಾಧಿಸಬೇಕೆಂಬ ವಾಸ್ತವದ ಅರಿವು ಅವರಿಗಿತ್ತು. ಸರ್ ಎಂ.ವಿಶ್ವೇಶ್ವರಯ್ಯ ಹೇಳಿದ ‘ಕೈಗಾರಿಕೆ ಇಲ್ಲವೇ ಸರ್ವನಾಶ’ ಎಂಬ ಮಾತು ನೆಹರೂ ಆಲೋಚನೆಗೆ ಹತ್ತಿರವಿತ್ತು.

ಸ್ವತಂತ್ರ ಭಾರತದಲ್ಲಿ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಗಳು (ಐ.ಐ.ಟಿ.) ತಲೆ ಎತ್ತಲು ನೆಹರೂ ಅವರ ಈ ದೂರದರ್ಶಿತ್ವವೇ ಅಡಿಪಾಯ. ಈಗ ಜ್ಞಾನಮಂದಿರಗಳ ಸಂಖ್ಯೆ ಜನಸಂಖ್ಯೆಯ ಹೆಚ್ಚಳಕ್ಕೆ ಅನುಗುಣವಾಗಿ ಏರುತ್ತಲೇ ಇದೆ. 2016ರಲ್ಲಿ ಸ್ಥಾಪನೆಯಾದ ಧಾರವಾಡದ ಐ.ಐ.ಟಿ. ಸೇರಿದಂತೆ ನಮ್ಮ ದೇಶದಲ್ಲಿ 23 ಐ.ಐ.ಟಿ.ಗಳಿವೆ. ಕರ್ನಾಟಕದಲ್ಲಿ ಖಾಸಗಿ ವಿಶ್ವವಿದ್ಯಾಲಯಗಳೂ ಸೇರಿದಂತೆ 55 ವಿಶ್ವವಿದ್ಯಾಲಯಗಳಿವೆ. ಗುಜರಾತಿನ ನಂತರ ಕರ್ನಾಟಕಕ್ಕೇ ಆ ಸ್ಥಾನ. ಅಚ್ಚರಿ ಎನಿಸಬಹುದು, ಭಾರತೀಯ ವಿಜ್ಞಾನ ಸಂಸ್ಥೆಯು ಡೀಮ್ಡ್ ವಿಶ್ವವಿದ್ಯಾಲಯದ ಪಟ್ಟಿಯಲ್ಲಿಯೇ ಸೇರುತ್ತದೆ. ಕರ್ನಾಟಕದ ಎಲ್ಲ ವಿಶ್ವವಿದ್ಯಾಲಯಗಳ ಹೆಸರು ಮತ್ತು ಅವು ಎಲ್ಲಿವೆ ಎಂಬುದು ಬಹುಶಃ ರಾಜ್ಯಪಾಲರ ಕಚೇರಿಗೆ ಗೊತ್ತು ಎನ್ನುವುದು ಕುಚೋದ್ಯದ ಮಾತಲ್ಲ.

ವಿಜ್ಞಾನ– ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿ ಇರಬೇಕೆಂದರೆ, ಅಂಥ ಸಂಸ್ಥೆಗಳಿಗೆ ಉತ್ತೇಜನ ಕೊಡಲು ದೊಡ್ಡ ಮೊತ್ತದ ಅನುದಾನ ಬೇಕಾಗುತ್ತದೆ. ಒಂದು ಅಂದಾಜಿನಂತೆ, ಆಯವ್ಯಯದಲ್ಲಿ ವಾರ್ಷಿಕ ₹7,000 ಕೋಟಿ ಅನುದಾನ ಐ.ಐ.ಟಿ.ಗಳಿಗೆ ಲಭಿಸುತ್ತದೆ. ಅಮೆರಿಕದಲ್ಲಿ ಇದಕ್ಕಿಂತ ಆರು ಪಟ್ಟು ಮೊತ್ತ ಅಂಥ ಸಂಸ್ಥೆಗಳಿಗಿದೆ. ಐ.ಐ.ಟಿ.ಗಳು ಸ್ವಾಯತ್ತ ಸಂಸ್ಥೆಗಳಾದರೂ, ಆಡಳಿತಾತ್ಮಕವಾಗಿ ಮಾನವ ಸಂಪನ್ಮೂಲ ಅಭಿವೃದ್ಧಿಯ ಸಚಿವಾಲಯಕ್ಕೆ ಒಳಪಡುತ್ತವೆ. ಇನ್ನು ವಿಶ್ವವಿದ್ಯಾಲಯಗಳೋ ರಾಷ್ಟ್ರದಾದ್ಯಂತ ಅಣಬೆಗಳಂತೆ ತಲೆಎತ್ತಿವೆ- ಒಟ್ಟು 851. ಅವುಗಳ ಸಂಶೋಧನಾ ಗುಣಮಟ್ಟ ದಶಕ ದಶಕಕ್ಕೂ ಕುಸಿಯುತ್ತಿದೆ ಎಂಬುದು ಗುಟ್ಟಾಗಿ ಉಳಿದಿಲ್ಲ. ಐ.ಐ.ಟಿ.ಯಿಂದ ಹೊರಬರುವ ಚತುರಮತಿಗಳು ರಾಷ್ಟ್ರದ ಆಸ್ತಿಯೆಂದೇ ಈಗಲೂ ಪರಿಗಣಿಸಲಾಗುತ್ತಿದೆ. ಉನ್ನತ ವಿಜ್ಞಾನ ಸಂಸ್ಥೆಗಳು ಮಾಡುವ ಸಂಶೋಧನೆಗಳು ಜನಸಾಮಾನ್ಯರ ಗಮನಕ್ಕೆ ಬರುವುದು ಅಪರೂಪ. ಅವೆಲ್ಲ ಅಂತರರಾಷ್ಟ್ರೀಯ ವಿಜ್ಞಾನ ಪತ್ರಿಕೆಗಳಲ್ಲಿ ಮಾತ್ರ ಪ್ರಕಟವಾಗುವಂತಹವು. ಹಾಗಾದರೆ ಈರಣ್ಣ ಬೋರಣ್ಣನ ಅವಶ್ಯಕತೆಯನ್ನು ಪೂರೈಸುವವರಾರು? ಸಮಾಜಮುಖಿಯಾಗದ ಹೊರತು ವಿಜ್ಞಾನವು ಸಾರ್ವಜನಿಕರ ಗಮನಕ್ಕೆ ಬರದು. ಜನಸಾಮಾನ್ಯರ ಅಭಿಪ್ರಾಯದಲ್ಲಿ ವಿಜ್ಞಾನ ಸಂಸ್ಥೆಗಳು ದಂತಗೋಪುರಗಳೇ.

ಈಗ ಪರಿಸ್ಥಿತಿ ಸ್ವಲ್ಪ ಬದಲಾಗುತ್ತಿದೆ. ಗಾಂಧೀಜಿ ಹೇಳಿದ ಏಳು ಪಾಪಗಳಲ್ಲಿ ‘ಮಾನವೀಯತೆಯಿಲ್ಲದ ವಿಜ್ಞಾನ’ವೂ ಒಂದು. ಇಂತಹ ಆರೋಪದಿಂದ ಹೊರಬರುವ ನಿಟ್ಟಿನಲ್ಲಿ ಉನ್ನತ ವಿಜ್ಞಾನ ಸಂಸ್ಥೆಗಳು ತಡವಾಗಿಯಾದರೂ ಕಣ್ಣು ತೆರೆಯುತ್ತಿವೆ. 50ರ ದಶಕದಲ್ಲೇ ಆರಂಭವಾದ ಖರಗಪುರ, ಬಾಂಬೆ, ದೆಹಲಿ, ಮದ್ರಾಸ್ ಐ.ಐ.ಟಿ.ಗಳು ಮೂಲಭೂತ ಸಂಶೋಧನೆಯಲ್ಲಿ ತೊಡಗಿದರೂ ಅವುಗಳ ನಂತರ ಸ್ಥಾಪನೆಯಾದ ಹೈದರಾಬಾದ್, ಗುವಾಹಟಿ ಐ.ಐ.ಟಿ.ಗಳು ಮೂಲಭೂತ ಸಂಶೋಧನೆಗಳ ಜೊತೆಗೆ ಜನಾರೋಗ್ಯದ ಸಂಶೋಧನೆಗೆ ಹೆಚ್ಚು ಕಾಳಜಿ ವಹಿಸುತ್ತಿವೆ. ಖರಗಪುರ ಐ.ಐ.ಟಿ., ಭೂಕಂಪನಗಳ ಅಧ್ಯಯನಕ್ಕೆ ಒತ್ತುಕೊಟ್ಟು ಒಂದು ತಾಂತ್ರಿಕ ಸಂಹಿತೆಯನ್ನೇ ಹೊರತಂದಿದೆ. ನವೋದ್ಯಮ ಕೊಟ್ಟಿರುವ ಜಿಗಿತವನ್ನು ಐ.ಐ.ಟಿ.ಗಳು ಬಹುಬೇಗ ಗ್ರಹಿಸಿವೆ. ಆಯಿಲ್ ಇಂಡಿಯಾ ಕಂಪನಿಯು ಗುವಾಹಟಿಯ ಐ.ಐ.ಟಿ.ಗೆ ₹ 50 ಕೋಟಿ ಕೊಟ್ಟು, ಈಶಾನ್ಯ ಭಾರತದ ತೈಲ ಬಾವಿಗಳಲ್ಲಿ ಗರಿಷ್ಠ ಪ್ರಮಾಣದ ತೈಲವನ್ನು ಮರುಪಡೆಯಲು ತಾಂತ್ರಿಕ ಸಹಾಯ ಕೇಳಿದೆ. ತೈಲ ಬವಣೆಯನ್ನು ಅನುಭವಿಸುತ್ತಿರುವ ಈ ಸಂದರ್ಭದಲ್ಲಿ ಇದಕ್ಕೆ ಆದ್ಯತೆ ಸಹಜವಾಗಿಯೇ ಸಿಗುತ್ತದೆ.

ಹಿಮಾಚಲ ಪ್ರದೇಶದ ಮಂಡಿ ಐ.ಐ.ಟಿ., ಜಾಗತಿಕ ಸಮಸ್ಯೆಯಾದ ಹವಾಗುಣ ಬದಲಾವಣೆಗೆ ಹಿಮಾಲಯದ ತಪ್ಪಲಲ್ಲಿರುವ 12 ರಾಜ್ಯಗಳು ಹೇಗೆ ಸುಲಭವಾಗಿ ತುತ್ತಾಗುತ್ತವೆ ಎಂಬುದಲ್ಲದೆ, ಅದರ ನಿಯಂತ್ರಣಕ್ಕೆ ಬೇಕಾದ ಸಿದ್ಧತೆಗಳನ್ನು ಸೂಚಿಸುವ ಮಹತ್ತರ ಯೋಜನೆಯನ್ನು ಕೈಗೊಂಡಿದೆ. ಹೃದಯಾಘಾತಕ್ಕೆ ಮುನ್ನ ಹೃದಯಕೋಶಗಳು ಟ್ರೊಪೋನಿನ್-1 ಎಂಬ ಪ್ರೋಟೀನ್ ಬಿಡುಗಡೆ ಮಾಡಿ ಅದು ರಕ್ತದಲ್ಲಿ ಸೇರುತ್ತದೆ. ಅದನ್ನು ಗುರುತಿಸಬಲ್ಲ ನ್ಯಾನೊ ಸಾಧನ ಅಭಿವೃದ್ಧಿಯು ಹೈದರಾಬಾದ್ ಐ.ಐ.ಟಿ.ಯ ಸಂಶೋಧನೆಯಲ್ಲಿ ಆದ್ಯತೆ ಗಳಿಸಿದೆ. ಭಾರತದಲ್ಲಿ ವಿವಿಧೋದ್ದೇಶದ ಸುಮಾರು 5,000 ಅಣೆಕಟ್ಟುಗಳಿವೆ. ಅವುಗಳಿಗೂ ಒಂದು ಆಯುಷ್ಯ
ವಿರುತ್ತದೆ ತಾನೆ? ಅವನ್ನು ನಮ್ಮ ಸುಪರ್ದಿಗೆ ಕೊಡಿ, ಅವುಗಳ ಆಯುಷ್ಯವನ್ನು ಹೆಚ್ಚಿಸುತ್ತೇವೆ ಎಂದಿರುವ ಮದ್ರಾಸ್ ಐ.ಐ.ಟಿ., ನವೋದ್ಯಮಕ್ಕೆ ಸಂಬಂಧಿಸಿದಂತೆ ಇಂಥ 40 ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಉದ್ಯಮಿಗಳಿಂದ ಈ ಸಂಶೋಧನೆಗಳ ಅನುಷ್ಠಾನಕ್ಕೆ ₹1,010 ಕೋಟಿ ಸಂಗ್ರಹಿಸಿದೆ. ಅದು ತಂತ್ರಜ್ಞಾನದಲ್ಲಿ ಎಷ್ಟು ವಿಶ್ವಾಸ ತಳೆದಿದೆ ಎಂದರೆ, ಅಂತರಿಕ್ಷ ತಂತ್ರಜ್ಞಾನದಿಂದ ತೊಡಗಿ ತ್ಯಾಜ್ಯ ನಿರ್ವಹಣೆಯವರೆಗೆ ಯಾವುದೇ ಸವಾಲಿಗೆ ನಾವು ಪರಿಹಾರ ಸೂಚಿಸುತ್ತೇವೆ ಎನ್ನುವ ದಿಟ್ಟ ಮಾತುಗಳನ್ನಾಡಿದೆ.

ಬಾಂಬೆ, ದೆಹಲಿ ಐ.ಐ.ಟಿ.ಗಳು ಮತ್ತು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯು ಶಿಕ್ಷಣ ಮತ್ತು ಸಂಶೋಧನೆಯ ಗುಣಮಟ್ಟದಲ್ಲಿ ಜಗತ್ತಿನ 200 ಪ್ರಮುಖ ಸಂಸ್ಥೆಗಳ ಪಟ್ಟಿಯಲ್ಲಿ ಸೇರಿವೆ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವೇ ಅಭಿನಂದಿಸಿದೆ. ಕಳೆದ ಸುಮಾರು 20 ವರ್ಷಗಳಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯು ಸಾಮಾಜಿಕ ಬೇಡಿಕೆಗಳತ್ತಲೂ ಮುಖ ಮಾಡಿರುವುದು ಸ್ಪಷ್ಟ. ಇದಕ್ಕೆ ಎರಡು ಕಾರಣಗಳುಂಟು. ಕೇಂದ್ರ ಸರ್ಕಾರದಿಂದ ದೊರೆಯುವ ಭರ್ಜರಿ ಅನುದಾನದ ಜೊತೆಗೆ ಕಾರ್ಪೊರೇಟ್ ಸಂಸ್ಥೆಗಳು ತಮಗೆ ಬೇಕಾದ ಸಂಶೋಧನೆಗೆ ನವೋದ್ಯಮದ ಪರಿಕಲ್ಪನೆಯಲ್ಲಿ ಧಾರಾಳವಾಗಿ ಹಣ ಸಂದಾಯ ಮಾಡುತ್ತಿರುವುದು.

ಭಾರತೀಯ ವಿಜ್ಞಾನ ಸಂಸ್ಥೆಯ ಆದ್ಯತೆ ಮೂಲತಃ ಸಂಶೋಧನೆಗೆ ಒತ್ತುಕೊಡುವುದು. ಆದರೆ ಈ ಸಂಸ್ಥೆ ಕೂಡ ಸಮಾಜದ ಬೇಕು ಬೇಡಗಳಿಗೆ ಇತ್ತೀಚೆಗೆ ಸ್ಪಂದಿಸುತ್ತಿದೆ. ವೈಜ್ಞಾನಿಕ ತಂತ್ರ ಬಳಸಿ ಉನ್ನತ ಮಟ್ಟದ, ಆದರೆ ಸುಲಭ ಬೆಲೆಗೆ ಎಟುಕುವ ನೀರಿನ ಶುದ್ಧಿಕಾರಕ ಉಪಕರಣ ಸೃಷ್ಟಿಗೆ ಗಮನಕೊಟ್ಟಿದೆ. ಇಂದು ಪೂರೈಕೆಯಾಗುತ್ತಿರುವ ನೀರಿನ ಗುಣಮಟ್ಟ ನೋಡಿದರೆ ಇಂಥ ತಂತ್ರಜ್ಞಾನ ಅತ್ಯಗತ್ಯವಾಗಿ ಬೇಕು ಎಂಬುದನ್ನು ಯಾರಾದರೂ ಹೇಳಿಯಾರು. ದೇಶದಲ್ಲಿ ನಾಲ್ಕು ಕೋಟಿ ಜನ ಮಧುಮೇಹದಿಂದ ಬಳಲುತ್ತಿದ್ದಾರೆ ಎನ್ನುವುದು ಸಾಧಾರಣ ಸಂಗತಿಯೇನೂ ಅಲ್ಲ. ವಿಜ್ಞಾನ ಇದಕ್ಕೆ ಯಾವ ಪರಿಹಾರ ಸೂಚಿಸುತ್ತದೆ- ಆಹಾರ ಪದ್ಧತಿಯ ಬದಲಾವಣೆ ಹೊರತು. ಮಧುಮೇಹದ ನಿರ್ವಹಣೆಗೆ ಬಳಸಬಹುದಾದ ಉಪಕರಣಗಳ ಸೃಷ್ಟಿಯಲ್ಲೂ ಈ ಸಂಸ್ಥೆ ತೊಡಗಿದೆ. ಫ್ಲೂಗೆ 1930ರಿಂದಲೂ ಲಸಿಕೆ ಲಭ್ಯವಿದೆ. ಅದರಲ್ಲಿ ಹೊಸ ಮಾರ್ಗ ಹಿಡಿಯುವ ಸಂಶೋಧನೆಯೂ ಇಲ್ಲಿ ಪ್ರಾಶಸ್ತ್ಯ ಗಳಿಸಿದೆ.

ಇದೇ ಸಂದರ್ಭದಲ್ಲಿ ಇನ್ನೊಂದು ಹಿಮ್ಮುಖ ನಡಿಗೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಐ.ಐ.ಟಿ.ಗಳಲ್ಲಿ ಪ್ರವೇಶ ಪಡೆದು ಅಧ್ಯಯನ ಮಾಡುತ್ತಿರುವಾಗಲೇ ಕಳಚಿಕೊಂಡು ಹೋಗುವ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ಇತ್ತೀಚೆಗಿನ ಸಮೀಕ್ಷೆಯ ಪ್ರಕಾರ, ದೆಹಲಿಯ ಐ.ಐ.ಟಿ. ಒಂದರಿಂದಲೇ 2017-19ರ ಅವಧಿಯಲ್ಲಿ 782 ವಿದ್ಯಾರ್ಥಿಗಳು ಮಧ್ಯದಲ್ಲೇ ಶಿಕ್ಷಣ ತೊರೆದು ಹೊರನಡೆದಿದ್ದಾರೆ. ದೇಶದ ಪ್ರತಿಷ್ಠಿತ ಮೊದಲ ಐ.ಐ.ಟಿ.ಗಳಾದ ಖರಗಪುರ, ಕಾನ್ಪುರ, ಮದ್ರಾಸ್ ಐ.ಐ.ಟಿ.ಗಳಲ್ಲಿ ಇದೇ ‘ಟ್ರೆಂಡ್’ ಶುರುವಾಗಿದೆ. ಇನ್ನೂ ಕಳವಳಕಾರಿ ಎಂದರೆ, ಮಧ್ಯದಲ್ಲೇ ಕೈಬಿಡುವ ಶೇ 50ರಷ್ಟು ವಿದ್ಯಾರ್ಥಿಗಳು ಹಿಂದುಳಿದ ವರ್ಗಗಳಿಂದ ಬಂದವರು. ಶಿಕ್ಷಣದ ಜೊತೆಗೆ ಈ ವರ್ಗದ ಮನೋಸ್ಥೈರ್ಯವನ್ನು ಹೆಚ್ಚಿಸುವ ಹೊಣೆ ಯಾರದ್ದು?

Post Comments (+)