ಸೋಮವಾರ, ಮಾರ್ಚ್ 30, 2020
19 °C
ನೃತ್ಯ

ಜಡೆ ಸವಾಲ್‌ನಲ್ಲಿ ಕೃಷ್ಣನ ಅರಸಿ...

ಕೋಡಿಬೆಟ್ಟು ರಾಜಲಕ್ಷ್ಮಿ Updated:

ಅಕ್ಷರ ಗಾತ್ರ : | |

Prajavani

ಆಗಮ ಶಾಸ್ತ್ರದಲ್ಲಿ ದೇವಾಲಯ ನೃತ್ಯದ ಉಲ್ಲೇಖವಿದೆ. ದೇವದಾಸಿಯರು ಈ ನೃತ್ಯಸೇವೆಯನ್ನು ನಿಷ್ಠೆಯಿಂದ ಕಲಿತು ಮಾಡುತ್ತಿದ್ದ ಕಾಲವಿತ್ತು. ಕಾಲ ಬದಲಾದಂತೆ ಈ ಆಚರಣೆಗಳು ಮತ್ತು ನಂಬಿಕೆಗಳು ಬದಲಾಗುತ್ತ ಬಂದವು. ಈ ನೃತ್ಯ ಪ್ರಕಾರವನ್ನು ಕಲಿತು ಜತನ ಮಾಡುವುದು ಒಳ್ಳೆಯದು ಎಂದು ಭಾವಿಸಿದ ಹಿರಿಯ ನೃತ್ಯಗುರು ಕಲಾಮಂಡಲಂ ಪ್ರೊ. ಉಷಾ ದಾತಾರ್‌ ಅವರು ದೇವಾಲಯ ನೃತ್ಯ ಕಲಿಕೆಗಾಗಿಯೇ ಆಂಧ್ರಪ್ರದೇಶಕ್ಕೆ ತೆರಳಿದವರು. ಇದೀಗ ದೇವಾಲಯ ನೃತ್ಯದ ಹೆಜ್ಜೆಗಾರಿಕೆಯನ್ನು ಅರಿತ, ನಮ್ಮ ನಡುವಿನ ಏಕೈಕ ಕಲಾವಿದೆ ಎನಿಸಿಕೊಂಡಿದ್ದಾರೆ.

1970– 71ರ ಸಾಲಿನಲ್ಲಿ ಈ ಕಲಿಕೆಗಾಗಿ ಅವರನ್ನು ಆಂಧ್ರಪ್ರದೇಶದ ಹಳ್ಳಿಗಳಲ್ಲಿರುವ ದೇವಾಲಯಗಳಿಗೆ ಕಳುಹಿಸಿದವರು ಕಮಲಾದೇವಿ ಚಟ್ಟೋಪಾಧ್ಯಾಯರು. ‘ಅವರ ಪ್ರೇರಣೆಯಿಂದ ನಾನು ಅಲ್ಲಿನ ಹಿರಿಯ ದೇವದಾಸಿಯರಿಂದ ದೇವಾಲಯ ನೃತ್ಯ ಕಲಿತೆ’ ಎಂದು ಉಷಾ ದಾತಾರ್‌ ತಮ್ಮ ವಿದ್ಯಾರ್ಥಿ ದಿನಗಳನ್ನು ನೆನಪಿಸಿಕೊಂಡರು. ಇತ್ತೀಚೆಗೆ ಮಂಗಳೂರು ಪುರಭವನದಲ್ಲಿ ಕರ್ನಾಟಕ ನೃತ್ಯಕಲಾ ಪರಿಷತ್‌ ವತಿಯಿಂದ ನಡೆದ ಭರತಮುನಿ ಜಯಂತಿ ಕಾರ್ಯಕ್ರಮದಲ್ಲಿ ಅವರು ದೇವಾಲಯ ನೃತ್ಯ ಪ್ರದರ್ಶಿಸಿದರು.

‘ದೇವದಾಸಿಯರು ಎಂದರೆ ಮೈಮಾರಿ
ಕೊಳ್ಳುವವರು ಎಂಬುದು ತಪ್ಪು ಕಲ್ಪನೆ. ನಾನು ಭೇಟಿ ಮಾಡಿದ ದೇವದಾಸಿಯರು ಸಂಸ್ಕೃತ ಬಲ್ಲ, ದೇವರ ಚಿಂತನೆಯಲ್ಲಿಯೇ ಸದಾ ತೊಡಗಿಸಿ
ಕೊಂಡ, ಹೊರಗಿನ ಆಹಾರವನ್ನು ಸೇವಿಸದ, ಸದಾ ಮಡಿಯಲ್ಲಿಯೇ ಇರುವ ಹೆಂಗಸರಾಗಿದ್ದರು. ಛತ್ರಿ ಚಾಮರ, ವಾದ್ಯವೃಂದ ಮತ್ತು ಅರ್ಚಕರೊಂದಿಗೆ ಬೆಳಿಗ್ಗೆ ದೇವಸ್ಥಾನ ಪ್ರವೇಶಿಸುವ ದೇವದಾಸಿಯರನ್ನು ವೀಳ್ಯ ಮರ್ಯಾದೆ ಸಲ್ಲಿಸಿ ಬರಮಾಡಿಕೊಳ್ಳುತ್ತಿದ್ದರು. ಅವರು ದೇವಸ್ಥಾನದ ಪ್ರಾಕಾರದಲ್ಲಿ ಅಷ್ಟ ದಿಕ್ಪಾಲಕರ ಪೂಜೆ ಮಾಡಿ, ನೃತ್ಯ ಸೇವೆ ಸಲ್ಲಿಸಿ, ಕುಂಭಾರತಿಯನ್ನು ಬೆಳಗಿದ ಬಳಿಕ ಬ್ರಹ್ಮಸ್ಥಾನದಲ್ಲಿ ಕುಂಭಾರತಿಯನ್ನು ಸ್ಥಾಪಿಸುತ್ತಿದ್ದರು. ಈ ನೃತ್ಯ ಸೇವೆ ವೀಕ್ಷಿಸಲು ಭಕ್ತರಿಗೆ ಅವಕಾಶವಿರಲಿಲ್ಲ. ದೇವಾಲಯದ ಕೈಂಕರ್ಯ ಮಾಡುವವರು ಶ್ರದ್ಧೆಯಿಂದ ಮಾಡುವ ಸೇವೆ ಇದಾಗಿತ್ತು’ ಎಂದು ವಿವರಿಸುತ್ತಾರೆ ಅವರು.

ಈ ಮಾದರಿಯನ್ನು ವೇದಿಕೆಗೆ ಅಳವಡಿಸಿಕೊಂಡ ಉಷಾ ದಾತಾರ್‌ ಸಭೆಯ ಮಧ್ಯದಿಂದ ಛತ್ರಿ ಚಾಮರ ಮತ್ತು ವಾದ್ಯವೃಂದದೊಂದಿಗೆ ಬಂದು ವೀಳ್ಯವನ್ನು ಪಡೆದು, ಅಷ್ಟದಿಕ್ಪಾಲಕರನ್ನು ಪೂಜಿಸುವ ನೃತ್ಯ ಪ್ರದರ್ಶಿಸಿದರು. ಈ ಪೂಜೆಯ ಬಳಿಕ ದರ್ಬಾರ್‌ನಲ್ಲಿ ಪ್ರದರ್ಶಿಸುವ ದೇವರ ಅರ್ಚನೆ ’ಶಿವ ಕೈವಾರ’ ನರ್ತನ ನಡೆಯಿತು. ಎರಡನೇ ಅವಧಿಯಲ್ಲಿ, ದೇವಸ್ಥಾನಗಳಲ್ಲಿ ಹಿಂದೆ ಪ್ರಸ್ತುತಪಡಿಸುತ್ತಿದ್ದ ದೇವದಾಸೀ ಶೈಲಿಯ ಭಾಮಾ ಕಲಾಪವನ್ನು ಪ್ರಸ್ತುತಪಡಿಸಿದರು. ’ನವ ಜನಾರ್ದನ ಪಾರಿಜಾತ’ ಎಂಬ ಈ ಪ್ರಸ್ತುತಿಯು ಪ್ರೇಕ್ಷಕರೊಂದಿಗೆ ಸಂವಾದ ನಡೆಸುವ ರೀತಿಯಲ್ಲಿ ಮೂಡಿಬಂತು.

ಶ್ರೀ ಕೃಷ್ಣ ಮತ್ತು ಸತ್ಯಭಾಮೆಯರು ಹಂಸತೂಲಿಕಾ ತಲ್ಪದ ಮೇಲೆ ಮಲಗಿರುವಾಗ ಸರ್ವಾಲಂಕೃತ ಸತ್ಯಭಾಮೆಯನ್ನು ನೋಡಬೇಕೆಂದು ಮಧ್ಯರಾತ್ರಿ ಶ್ರೀಕೃಷ್ಣನಿಗೆ ಆಸೆಯಾಯಿತು. ಆಕೆಯನ್ನು ಎಬ್ಬಿಸಿ, ತಾನೇ ಕೈಯ್ಯಾರೆ ಅಲಂಕರಿಸಿ ಕನ್ನಡಿ ಮುಂದೆ ನಿಂತು ‘ನಮ್ಮಿಬ್ಬರಲ್ಲಿ ಯಾರು ಚಂದ ಭಾಮಾ..’ ಎಂದು ಪ್ರಶ್ನಿಸುತ್ತಾನೆ. ತನ್ನ ಸೌಂದರ್ಯದ ಬಗ್ಗೆ ಬಹಳ ಅಭಿಮಾನ ಹೊಂದಿರುವ ಭಾಮಾ ‘ಅದರಲ್ಲೇನಿದೆ ಕೇಳಲು, ನಾನೇ ಚಂದ’ ಎಂದು ಉತ್ತರಿಸುವಳು. ಅದನ್ನು ಒಪ್ಪುವ ಕೃಷ್ಣ ‘ಈ ನೀಳ ಜಡೆಯಲ್ಲಿ ನನಗೊಂದು ಏಟು ಕೊಟ್ಟುಬಿಡು’ ಎಂದು ಮನವಿ ಮಾಡುತ್ತಾನೆ. ಆದರೆ ಗಂಡನಿಗೆ ಹೊಡೆಯುವುದು ಸತಿ ಧರ್ಮವಲ್ಲ ಎಂದು ಭಾಮೆ ನಿರಾಕರಿಸುತ್ತಾಳೆ. ಇದೇ ಮಾತು ಜಗಳವಾಗಿ ಮಾರ್ಪಟ್ಟು ಕೃಷ್ಣ ಮನೆಬಿಟ್ಟು ಹೋಗುತ್ತಾನೆ.

ಇತ್ತ ಕಾದು ಕಾದು ಸೋತ ಸತ್ಯಭಾಮೆಯು ಅವನನ್ನು ಹುಡುಕಿ ಹುಡುಕಿ ಸೋಲುತ್ತಾಳೆ. ಕೊನೆಗೆ ಗೋಪಿಕೆಯರೊಡನೆ ಜಲಕ್ರೀಡೆಯಾಡುವ ಕೃಷ್ಣನ ನೋಡಿ, ’ಅಲ್ಲಿಗೇ ಬಂದು ಜಡೆಯಲ್ಲಿ ಬಾರಿಸಿಬಿಡುವೆ’ ಎಂದು ಸಿಟ್ಟಿನಿಂದ ಮನದಲ್ಲೇ ಅಂದುಕೊಳ್ಳುತ್ತಾಳೆ. ಭಾಮೆಯ ಮನದ ಮಾತು ಅರಿತ ಕೃಷ್ಣ ಆಕೆಯ ಬಳಿಗೆ ಬರುತ್ತಾನೆ. ಮನೆಗೆ ಬರುವ ಕೃಷ್ಣನನ್ನು ಆರಾಧಿಸುವ ಭಾಮೆ ದೇವರ ವೈಭವವನ್ನು ಕೊಂಡಾಡುವ ಭಕ್ತೆಯಾಗುತ್ತಾರೆ. ‘ಮೂರು ಲೋಕಗಳ ಒಡೆಯನಿಗೆ ಶರಣಾಗುವ’ ಸುಂದರ ಗೀತೆ ದೇಶ್‌ ರಾಗದಲ್ಲಿ ಮೂಡಿಬಂದು ಸಭಿಕರೆಲ್ಲರೂ ದೇವರ ಭಜನೆಯಲ್ಲಿಯೇ ಮುಳುಗಿ ಹೋಗುವಂತೆ ಮಾಡಿತು.  ಹಾಡು ಮುಗಿಯುತ್ತಲೇ ಇಡೀ ಸಭೆ ಎದ್ದುನಿಂತು 72ರ ಹರೆಯದ ಹಿರಿಯ ಕಲಾವಿದೆಯ ಸಾಧನೆಗೆ ಅಭಿನಂದನೆ ಸಲ್ಲಿಸಿತು.

ವೇದಿಕೆಯನ್ನಿಡೀ ಆವರಿಸುತ್ತ ಪ್ರೇಕ್ಷಕರ ಗಮನ ಸೆಳೆದಿಟ್ಟುಕೊಂಡು ಈ ಕಲಾಪವನ್ನು ಚಿಗರೆಯಂತಹ, ಲಘು ಹೆಜ್ಜೆಗಳೊಂದಿಗೆ ಅಮೋಘವಾಗಿ ಪ್ರಸ್ತುತಪಡಿಸಿದರು. ಭಾಮೆಯು ಕೇವಲ ಸ್ವರ್ಣವನ್ನೇ ಧರಿಸುವವಳು. ತನ್ನ ನೀಳವಾದ ಜಡೆಯ ಬಗ್ಗೆ ಅತೀವ ಹೆಮ್ಮೆ. ಹಾಗೆಂದೇ ತೆರೆಯ ಮೇಲೆ ಜಡೆಯನ್ನು ನೀಳವಾಗಿ ಇಳಿಬಿಟ್ಟು ರಂಗ ಪ್ರವೇಶಿಸುವ ಭಾಮೆ, ‘ಮಾ ಜಡತೋ, ವಾಲ್‌ ಜಡತೋ...ಕೀಲ್‌ ಜಡತೋ’ ಎಂದೆಲ್ಲ ಹಮ್ಮಿನಿಂದ ಜಡೆಯನ್ನು ಹೊಗಳಿಕೊಳ್ಳುತ್ತಾಳೆ. ಹೀಗೆ ಜಡೆಸವಾಲ್‌ನೊಂದಿಗೇ ಈ ಪ್ರಸ್ತುತಿ ಆರಂಭ.

ಕೃಷ್ಣನನ್ನು ಹುಡುಕಿ ಹುಡುಕಿ ದೊಪ್ಪನೆ ಕುಸಿಯುವ ಭಾಮೆ ಸೋತು ಬಸವಳಿಯುತ್ತಾಳೆ. ಕೃಷ್ಣನ ಪ್ರೀತಿಗಾಗಿ ಹುಚ್ಚಿಯಂತಾಗುವಳು. ದಾರಿಯುದ್ದಕ್ಕೂ ಕಾಣುವ ಒಬ್ಬೊಬ್ಬರೂ ಕೃಷ್ಣನಂತೆಯೇ ಗೋಚರಿಸಿ ಅವರ ಬಳಿ ಹೋಗುತ್ತ ಅದು ಕೃಷ್ಣನಲ್ಲ ಎಂದು ಗೊತ್ತಾಗುತ್ತಲೇ ಅವರ ಮೇಲೆ ಕೋಪಗೊಳ್ಳುವ ರೀತಿ. ಅವರನ್ನು ಬೈಯ್ಯುವ ರೀತಿಯಲ್ಲಿ ಪ್ರೇಕ್ಷಕರನ್ನು ಉದ್ದೇಶಿಸಿಯೇ ಬೈಯ್ಯುತ್ತ ಉಷಾ ದಾತಾರ್‌ ನರ್ತಿಸಿದರು. ನಟುವಾಂಗ, ಮೃದಂಗದವರನ್ನು ಹಿಡಿದು ಇವರು ಕೃಷ್ಣನೇ ಎಂದು ಪ್ರಶ್ನಿಸಿ, ಅವನು ಸಿಗದೇ ಕೋಪಗೊಂಡುದೂ ಆಯಿತು.

ದೇವಸ್ಥಾನಗಳ ಉತ್ಸವಗಳಲ್ಲಿ ಸಾಮಾನ್ಯರಿಗೂ ಅರ್ಥವಾಗುವಂತಹ ನೃತ್ಯವನ್ನು ದೇವದಾಸಿಯರು ಪ್ರದರ್ಶಿಸಬೇಕಾಗಿತ್ತು. ಹಾಗಾಗಿ ತೀರಾ ಶಾಸ್ತ್ರೀಯ ಶೈಲಿಗೆ ಶರಣಾಗದ ಈ ಕಲಾಪದಲ್ಲಿ, ಜನರನ್ನು ರಂಜಿಸುವ, ಲಾವಣಿ ಛಾಯೆ ಇರುವ ಹಾಡುಗಳನ್ನೇ ಆಯ್ಕೆ ಮಾಡಿಕೊಳ್ಳುವುದು ರೂಢಿ. ಹಾಗೆಂದು ಜನಾಕರ್ಷಣೆಗಾಗಿ ಕಲಾವಿದೆಯು ಚೆಲ್ಲುಚೆಲ್ಲಾದ ನೃತ್ಯ ಮಾಡುವಂತಿಲ್ಲ. ದೇವಸ್ಥಾನದಲ್ಲಿ ಪಂಡಿತ–ಪಾಮರರೂ ಭೇದವಿಲ್ಲದೆ ನಿರಂತರ ದೇವರ ಧ್ಯಾನವನ್ನು ವೈವಿಧ್ಯಮಯವಾಗಿ ಮಾಡುವಂತೆ ಸ್ಫೂರ್ತಿ ತುಂಬುವುದು ಆಕೆಯ ಕರ್ತವ್ಯವಾಗಿತ್ತು. ಹಾಗಾಗಿ ದರ್ಬಾರ್‌ ಹಾಲ್‌ನಲ್ಲಿ ಪ್ರಸ್ತುತಪಡಿಸುವ ನೃತ್ಯದಲ್ಲಿ ಆಕೆ ಶೃಂಗಾರ ರಸದ ನೃತ್ಯ ಪ್ರಸ್ತುತ ಪಡಿಸುವುದು ನಿಷಿದ್ಧ. ಪಾದಗಳನ್ನು ನೆಲದಿಂದ ಹೆಚ್ಚು ಎತ್ತರಕ್ಕೆ ಎತ್ತುವ ಹೆಜ್ಜೆಗಾರಿಕೆಗೆ ಅವಕಾಶವಿಲ್ಲ. ವೇಷಭೂಷಣವು ಕತ್ತಿನವರೆಗೆ, ಪಾದದವರೆಗೆ ಮುಚ್ಚಿದಂತೆ ಇರಬೇಕಾಗಿತ್ತು. ನೃತ್ಯಭಂಗಿಗಳು ಪ್ರೇಕ್ಷಕರಿಗೆ ಮುಖ ಮಾಡಿದಂತೆಯೇ ಇರಬೇಕಿತ್ತು ವಿನಾ ದೇಹದ ಪಾರ್ಶ್ವಭಾಗ ಪ್ರೇಕ್ಷಕರಿಗೆ ಕಾಣುವಂತೆ ದೀರ್ಘವಾಗಿ ನರ್ತಿಸುವ ಹೆಜ್ಜೆಗಾರಿಕೆಗೆ ಅವಕಾಶವಿರಲಿಲ್ಲ. ಕೈಗಳನ್ನು ಹೆಚ್ಚು ಚಾಚದೇ, ಮೇಲೆತ್ತದೇ ಬಹಳ ಸೀಮಿತ ನಿಲುವಿನೊಂದಿಗೆ ಪ್ರದರ್ಶಿಸುವ ನೃತ್ಯ ಪ್ರಕಾರ ಇದು. ಮೂಲದಲ್ಲಿ ಒಟ್ಟು ಐದು ಗಂಟೆಗಳ ದೀರ್ಘ ಪ್ರದರ್ಶನ ಇದು ಎಂದು ಉಷಾ ದಾತಾರ್‌ ವಿವರಣೆ. 


 ಕಲಾಮಂಡಲಂ ಪ್ರೊ.ಉಷಾ ದಾತಾರ್‌ 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)