‘ಕೂಡಗಿ ದರ್ಗಾ ಆಸ್ತಿ ರಕ್ಷಿಸಿ; ರಕ್ಷಣೆ ಕೊಡಿ’

ಶುಕ್ರವಾರ, ಏಪ್ರಿಲ್ 19, 2019
30 °C

‘ಕೂಡಗಿ ದರ್ಗಾ ಆಸ್ತಿ ರಕ್ಷಿಸಿ; ರಕ್ಷಣೆ ಕೊಡಿ’

Published:
Updated:

ವಿಜಯಪುರ: ‘ಬಸವನಬಾಗೇವಾಡಿ ತಾಲ್ಲೂಕಿನ ಕೂಡಗಿ ಗ್ರಾಮದಲ್ಲಿನ ಹಜರತ್ ಶಹಜಾದೇಮಸ್ತಾನ ಖಾದ್ರಿ ದರ್ಗಾದ ಆಸ್ತಿ ರಕ್ಷಿಸಿ’ ಎಂದು ದರ್ಗಾದ ಧರ್ಮಗುರು ಮನೆತನದ ಸೈಯ್ಯದ್‌ ಮಹಿಬೂಬಪಾಶಾ ಜಾಗೀರದಾರ ಮನವಿ ಮಾಡಿದರು.

‘ಈ ಆಸ್ತಿ ರಕ್ಷಣೆಗಾಗಿ ಮುಂದಾಗಿ, ಹೋರಾಟಕ್ಕಿಳಿದರೆ ಗೂಂಡಾಗಳ ಕಡೆಯಿಂದ ಪ್ರಾಣ ಬೆದರಿಕೆ ಬಂದಿದೆ. ನನಗೆ ಹಾಗೂ ನನ್ನ ಕುಟುಂಬಕ್ಕೆ ರಕ್ಷಣೆ ಒದಗಿಸಿ’ ಎಂದು ರಾಜ್ಯ ಸಾರಿಗೆ ಸಂಸ್ಥೆಯ ನಿವೃತ್ತ ನೌಕರರು ಆಗಿರುವ ಜಾಗೀರದಾರ ಮಂಗಳವಾರ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಣ್ಣೀರಿಟ್ಟರು.

‘ದರ್ಗಾ ಒಡೆತನದಲ್ಲಿ 50ಕ್ಕೂ ಹೆಚ್ಚು ವಾಣಿಜ್ಯ ಮಳಿಗೆಗಳಿವೆ. ಇವುಗಳಿಂದ ಮಾಸಿಕ ₹ 2 ಲಕ್ಷದಿಂದ ₹ 3 ಲಕ್ಷ ಬಾಡಿಗೆ ಬರುತ್ತಿದೆ. ಈ ಹಣವನ್ನು ದರ್ಗಾ ಸಮಿತಿ ಅಧ್ಯಕ್ಷ, ಸದಸ್ಯರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದನ್ನು ಪ್ರಶ್ನಿಸಿದವರಿಗೆ ಬೆದರಿಕೆ ಹಾಕುತ್ತಿದ್ದಾರೆ’ ಎಂದು ದೂರಿದರು.

‘ದರ್ಗಾ ಆಸ್ತಿ ದುರ್ಬಳಕೆಯಾಗುತ್ತಿದೆ ಎಂದೇ ಈ ಹಿಂದೆ 2004ರಿಂದ 2016ರವರೆಗೂ ವಕ್ಫ್ ಬೋರ್ಡ್‌ ಆಡಳಿತಾಧಿಕಾರಿ ನೇಮಿಸಿತ್ತು. ಈಚೆಗೆ ಸಮಿತಿ ರಚನೆಯಾಗಿದೆ. ಆದರೆ ಸಮಿತಿ ಅಧ್ಯಕ್ಷ, ಸದಸ್ಯರಾದ ಕಾಶೀಮಸಾಬ್ ಕೊಡಗಾನೂರ, ನನ್ನ ಸಹೋದರ ಸಂಬಂಧಿಗಳಾದ ಮೆಹರಾಜ ಗೌಸ್ ಪೀರಾ ಜಾಗೀರದಾರ, ಶಫೀಕ್‌ಪೀರಾ ಗೌಸ್‌ಪೀರಾ ಜಾಗೀರದಾರ ತಮ್ಮ ಅಕ್ರಮ ಚಟುವಟಿಕೆ ಮುಂದುವರೆಸಿದ್ದು, ಪ್ರಶ್ನಿಸಿದರೆ ಜೀವ ಬೆದರಿಕೆ ಹಾಕುತ್ತಿದ್ದಾರೆ.

ಈ ಸಮಿತಿಗೆ ವಿಜಯಪುರದ ಧರ್ಮಗುರು ಹಾಸಿಂಪೀರಾ ತನ್ವೀರ್ ಹಾಶ್ಮಿ ಬೆಂಬಲವಾಗಿ ನಿಂತಿದ್ದಾರೆ. ಇವರ ಸಹೋದರ ವಾಜೀದ್ ಪೀರಾ ಪೊಲೀಸರಿಗೆ ನಾವು ಗೃಹ ಸಚಿವ ಎಂ.ಬಿ.ಪಾಟೀಲ ಮನುಷ್ಯರು. ನಮ್ಮವರ ವಿರುದ್ಧ ಯಾವುದೇ ಪ್ರಕರಣ ದಾಖಲಿಸಬಾರದು ಎಂದು ಬೆದರಿಸಿದ್ದಾರೆ. ಸ್ಥಳೀಯ ಪೊಲೀಸರು ಇದಕ್ಕೆ ಅಂಜಿ ಮೌನಕ್ಕೆ ಶರಣಾಗಿದ್ದಾರೆ. ಗೂಂಡಾಗಳಿಗೆ ಬೆಂಬಲಿಸುತ್ತಿದ್ದಾರೆ’ ಎಂದು ಸೈಯ್ಯದ್ ಮಹಿಬೂಬ್‌ಪಾಶಾ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !