ದಸರಾ ಮಹೋತ್ಸವಕ್ಕೆ ಅದ್ಧೂರಿ ಚಾಲನೆ

7
ಸಾಂಸ್ಕೃತಿಕ ಕಾರ್ಯಕ್ರಮಗಳ ಮೆರುಗು, ಕಲಾತಂಡಗಳ ಆಕರ್ಷಕ ಮೆರವಣಿಗೆ

ದಸರಾ ಮಹೋತ್ಸವಕ್ಕೆ ಅದ್ಧೂರಿ ಚಾಲನೆ

Published:
Updated:
Deccan Herald

ಚಾಮರಾಜನಗರ: ನಾಡ ಹಬ್ಬ ದಸರಾ ಅಂಗವಾಗಿ ಜಿಲ್ಲಾಡಳಿತ ಹಮ್ಮಿಕೊಂಡಿರುವ ನಾಲ್ಕು ದಿನಗಳ ಜಿಲ್ಲಾ ದಸರಾ ಮಹೋತ್ಸವಕ್ಕೆ ಶನಿವಾರ ಅದ್ಧೂರಿ ಚಾಲನೆ ದೊರೆಯಿತು.

ಚಾಮರಾಜೇಶ್ವರ ದೇವಾಲಯದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಹಾಗೂ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್‌.ಮಹೇಶ್ ಅವರು ನಗಾರಿ ಬಾರಿಸುವ ಮೂಲಕ ಉದ್ಘಾಟಿಸಿದರು.

ನಂತರ ಮಾತನಾಡಿದ ಎನ್‌.ಮಹೇಶ್‌ ಅವರು ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರು ಚಾಮರಾಜನಗರ ಜಿಲ್ಲೆ ಹಾಗೂ ಹಳೆ ಮೈಸೂರು ಭಾಗಗಳಿಗೆ ನೀಡಿದ ಕೊಡುಗೆಯನ್ನು ಸ್ಮರಿಸಿದರು.

‘ಹಳೆ ಮೈಸೂರು ಭಾಗದ 12 ಜಿಲ್ಲೆಗಳಿಗೆ ಮೈಸೂರು ಸಂಸ್ಥಾನದ ಅರಸರ ಕೊಡುಗೆಯನ್ನು ನೆನಪಿಸಿಕೊಳ್ಳುವುದಕ್ಕಾಗಿ ನಾವು ದಸರಾ ಆಚರಿಸಬೇಕು’ ಎಂದು ಅವರು ಹೇಳಿದರು.

‘ರಾಜ್ಯದ ಹೈದರಾಬಾದ್‌ ಕರ್ನಾಟಕ ಭಾಗ ಮತ್ತು ಹಾಗೂ ಹಳೆಮೈಸೂರು ಭಾಗದ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಸ್ಥಿತಿಗಳನ್ನು ಹೋಲಿಸಿದರೆ ವ್ಯತ್ಯಾಸಗಳನ್ನು ಕಾಣಬಹುದು. ಇದರಲ್ಲಿ ಮೈಸೂರು ಅರಸರ ಪಾತ್ರ ದೊಡ್ಡದು. ಇಲ್ಲಿ ಏನೇನೋ ಅಭಿವೃದ್ಧಿಗಳು ಆಗಿದೆಯೋ ಅದಕ್ಕೆಲ್ಲ ಕಾರಣ ಮೈಸೂರು ಅರಸರು, ಅದರಲ್ಲೂ ನಾಲ್ವಡಿ ಕೃಷ್ಣರಾಜ ಒಡೆಯರು’ ಎಂದು ಸ್ಮರಿಸಿದರು.

‘ಬೆಂಗಳೂರಿನಲ್ಲಿ ಕೇಂದ್ರ ಸರ್ಕಾರದ ದೊಡ್ಡ ದೊಡ್ಡ ಸಂಸ್ಥೆಗಳು ಸ್ಥಾಪನೆಯಾಗಿವೆ ಎಂದರೆ, ಅದಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರು ಕಾರಣ. ಮುಂಬೈ ಕರ್ನಾಟಕ ಹಾಗೂ ಉತ್ತರ ಕರ್ನಾಟಕದ ಭಾಗದಲ್ಲಿ ಈಗಲೂ ದೇವದಾಸಿ, ಜೋಗಿತಿ ಪದ್ಧತಿ ಇದೆ. ನಮ್ಮಲ್ಲೂ ಅದು ಇತ್ತು. ಆದರೆ, ಈ ಎಲ್ಲ ಅನಿಷ್ಟ ಪದ್ಧತಿಗಳನ್ನು ಶಾಸನಗಳ ಮೂಲಕ ರದ್ದು ಪಡಿಸಿದ್ದು ಮೈಸೂರು ಅರಸರು’ ಎಂದು ಎನ್‌. ಮಹೇಶ್‌ ಹೇಳಿದರು.

‘1921ರಲ್ಲೇ ಮೀಸಲಾತಿ ವ್ಯವಸ್ಥೆ ಜಾರಿಗೊಳಿಸಿದವರು, ದಲಿತ ಹಿಂದುಳಿದ ವರ್ಗಗಳ ಏಳಿಗೆಗೆ ಶ್ರಮಿಸಿದವರು ನಾಲ್ವಡಿ ಕೃಷ್ಣರಾಜ ಒಡೆಯರು. ಅವರ ಆಡಳಿತವನ್ನು ಗಾಂಧೀಜಿ ಅವರು ಸುವರ್ಣ ಅಕ್ಷರಗಳಲ್ಲಿ ಬರೆದಿಡಬೇಕು ಎಂದು ಹೇಳಿದ್ದರು. ಅವರು ಮಾಡಿರುವ ಸಾಧನೆಯನ್ನು, ಆ ಕಾಲದ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯಲು ನಾವು ದಸರಾ ಆಚರಿಸಬೇಕು’ ಎಂದು ಹೇಳಿದರು.

ಗುಂಡ್ಲುಪೇಟೆ ಶಾಸಕ ಸಿ.ಎಸ್‌. ನಿರಂಜನ್‌ ಕುಮಾರ್‌ ಅವರು ಮಾತನಾಡಿ, ‘ಚಾಮರಾಜ ಒಡೆಯರ್‌ ಅವರು ಹುಟ್ಟಿದ ಊರು. ಅವರಿಗೆ ಕೃತಜ್ಞತೆ ಸಲ್ಲಿಸಲು ನಾವು ದಸರಾ ಕಾರ್ಯಕ್ರಮವನ್ನು ಆಚರಿಸಬೇಕು’ ಎಂದರು.

ಸಂಸದ ಆರ್‌. ಧ್ರುವನಾರಾಯಣ ಅವರು ಮಾತನಾಡಿ, ‘ಈ ಬಾರಿಯಷ್ಟು ಜನಸ್ತೋಮ ಯಾವತ್ತೂ ಇರಲಿಲ್ಲ. ಕಳೆದ ಬಾರಿ ಅಭಿವೃದ್ಧಿ ಕೆಲಸಗಳು ಅರ್ಧಂಬರ್ಧ ಆಗಿದ್ದರಿಂದ ಸ್ವಲ್ಪ ಗೊಂದಲಮಯವಾಗಿತ್ತು’ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗ ಶೆಟ್ಟಿ ಮಾತನಾಡಿ, ‘ಜಿಲ್ಲಾ ದಸರಾ ಆಚರಣೆಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ₹1 ಕೋಟಿ ನೀಡಿದ್ದಾರೆ. ನಾಲ್ಕು ದಿನಗಳ ಕಾಲ ಅದ್ಧೂರಿಯಾಗಿ ಕಾರ್ಯಕ್ರಮ ನಡೆಯಲಿದೆ’ ಎಂದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ, ಉಪಾಧ್ಯಕ್ಷ ಜೆ. ಯೋಗೇಶ್‌, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ದೊಡ್ಡಮ್ಮ, ಉಪಾಧ್ಯಕ್ಷ ದಯಾನಿಧಿ, ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್‌ ಕುಮಾರ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಧರ್ಮೇಂದರ್‌ ಕುಮಾರ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ ಇದ್ದರು.

ಚಾಮರಾಜೇಶ್ವರನಿಗೆ ವಿಶೇಷ ಪೂಜೆ

ಇದಕ್ಕೂ ಮೊದಲು ಶನಿವಾರ ಬೆಳಿಗ್ಗೆ, ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ, ಸಂಸದ ಆರ್‌.ಧ್ರುವನಾರಾಯಣ, ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಹಾಗೂ ಇತರ ಉನ್ನತ ಅಧಿಕಾರಿಗಳು ಚಾಮರಾಜೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಜಿಲ್ಲಾ ದಸರಾ ಮಹೋತ್ಸವಕ್ಕೆ ಚಾಲನೆ ನೀಡಿದರು.

ಡೊಳ್ಳುಕುಣಿತ, ವೀರಗಾಸೆ, ಕಂಸಾಳೆ ನೃತ್ಯ ತಂಡಗಳು ಹಾಗೂ ಮಂಗಳವಾದ್ಯಗಳು ಸಾಂಪ್ರದಾಯಿಕ ಉದ್ಘಾಟನೆಗೆ ಮೆರುಗು ನೀಡಿದವು. ರೇಷ್ಮೆ ಅಂಗಿ ಹಾಗೂ ಪಂಚೆ ಉಟ್ಟಿದ್ದ ಸಚಿವ ಸಿ.ಪುಟ್ಟರಂಗಶೆಟ್ಟಿ ಹಾಗೂ ಇತರ ಅತಿಥಿಗಳನ್ನು ಮಂಗಳವಾದ್ಯಗಳೊಂದಿಗೆ ಮೆರವಣಿಗೆ ಮೂಲಕ ದೇವಾಲಯಕ್ಕೆ ಕರೆ ತರಲಾಯಿತು. 

ಚಾಮರಾಜೇಶ್ವರ ಹಾಗೂ ಪರಿವಾರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ಉತ್ಸವ ಮೂರ್ತಿಯ ಎದುರಿಗೆ ಇರಿಸಲಾಗಿದ್ದ ದೀಪವನ್ನು ಬೆಳಗುವುದರ ಮೂಲಕ ಉಸ್ತುವಾರಿ ಸಚಿವರು ದಸರಾ ಸಂಭ್ರಮಕ್ಕೆ ಸಾಂಪ್ರದಾಯಿಕ ಚಾಲನೆ ನೀಡಿದರು.

ಅಡ್ಡ ಬಂದ ರಾಹುಕಾಲ: ದಸರಾದ ಸಾಂಪ್ರದಾಯಿಕ ಉದ್ಘಾಟನೆಗೆ ರಾಹುಕಾಲ ಅಡ್ಡ ಬಂತು. ಶನಿವಾರ ಬೆಳಿಗ್ಗೆ 10 ಗಂಟೆಗೆ ಉತ್ಸವಕ್ಕೆ ಚಾಲನೆ ನೀಡಲಾಗುವುದು ಎಂದು ಜಿಲ್ಲಾಡಳಿತ ಹೇಳಿತ್ತು. ಆಮಂತ್ರಣ ಪತ್ರಿಕೆಯಲ್ಲೂ ಅದೇ ಸಮಯವನ್ನು ನಮೂದಿಸಲಾಗಿತ್ತು. ಆದರೆ, ಶನಿವಾರ ಬೆಳಿಗ್ಗೆ 9 ಗಂಟೆಯಿಂದ 10.30ಕ್ಕೆ ರಾಹುಕಾಲ ಇದ್ದುದರಿಂದ ಕೊನೆ ಕ್ಷಣದಲ್ಲಿ ಕಾರ್ಯಕ್ರಮವನ್ನು ಮುಂದೂಡಲಾಗಿತ್ತು.

ಸಚಿವರು, ಸಂಸದರು ಸೇರಿದಂತೆ ಎಲ್ಲ ಅತಿಥಿಗಳು 10 ಗಂಟೆಗೆ ಲಭ್ಯ ಇದ್ದರೂ, ರಾಹುಕಾಲ ಮುಗಿಯುವವರೆಗೆ ಕಾದರು. ನಂತರ 10.45ಕ್ಕೆ ವಿಶೇಷ ಪೂಜೆ ನೆರವೇರಿತು.

ಮುದ ನೀಡಿದ ಸಾಂಸ್ಕೃತಿಕ ಕಾರ್ಯಕ್ರಮಗಳು

ಸಂಜೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ದಸರಾ ಮಹೋತ್ಸವಕ್ಕೆ ಮೆರುಗು ತಂದವು. ಬನ್ನೂರು ಗ್ರಾಮದ ರಂಗಸ್ವಾಮಿ ತಂಡದಿಂದ ನಗಾರಿ ಬಾರಿಸುವ ಪ್ರದರ್ಶನ, ಗುಂಡ್ಲುಪೇಟೆಯ ಬಿ. ಸಿದ್ದನಗೌಡ ಅವರ ಹಿಂದೂಸ್ಥಾನಿ ಸಂಗೀತ ಪ್ರೇಕ್ಷಕರ ಮನ ಸೆಳೆಯಿತು.

ಬಿಳಿಗಿರಿರಂಗನ ಬೆಟ್ಟದ ಪುಷ್ಪಮಾಲೆ ಕಲಾ ಸಂಘದವರು ಪ್ರದರ್ಶಿಸಿದ ಸೋಲಿಗರ ಗೊರುಕನ ನೃತ್ಯ ಗಮನ ಸೆಳೆಯಿತು. ‘ಕಾಲೇಜು ಸಂಜೆ’ ಎಂಬ ಕಾರ್ಯಕ್ರಮದ ಅಡಿಯಲ್ಲಿ ಕಾಲೇಜು ವಿದ್ಯಾರ್ಥಿಗಳು ಪ್ರದರ್ಶಿಸಿದ ಸಾಂಸ್ಕೃತಿಕ ವೈವಿಧ್ಯಮ ಕಾರ್ಯಕ್ರಮಗಳು ಪ್ರೇಕ್ಷರನ್ನು ರಂಜಿಸಿದವು.

‘ನಾಲ್ವಡಿ ಕೃಷ್ಣರಾಜ ಒಡೆಯರ ಪ್ರತಿಮೆ ಸಂರಕ್ಷಿಸಿ’

ಚಾಮರಾಜನಗರದಲ್ಲಿರುವ ಪ್ರವಾಸಿ ಮಂದಿರದ ಆವರಣದಲ್ಲಿರುವ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಪ್ರತಿಮೆಯನ್ನು ಉದ್ಯಾನದಲ್ಲಿ ಎತ್ತರ ಜಾಗದಲ್ಲಿ ಸ್ಥಾಪನೆ ಮಾಡುವಂತೆ ಎನ್‌. ಮಹೇಶ್‌ ಅವರು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

‘ಪ್ರತಿಮೆ ಒಂದು ಮೂಲೆಯಲ್ಲಿ ಅನಾಥವಾಗಿ ಬಿದ್ದಿದೆ. ಪ್ರತಿಮೆ ಇಡಬೇಕಾದ ಜಾಗ ಅದಲ್ಲ. 10 ವರ್ಷಗಳಿಂದ ಮನವಿ ಮಾಡುತ್ತಿದ್ದೇನೆ. ಇದುವರೆಗೂ ಆ ಕೆಲಸವನ್ನು ಮಾಡಿಲ್ಲ. ಇಂದಾದರೂ ಈ ಬಗ್ಗೆ ನಿರ್ಧಾರ ಕೈಗೊಳ್ಳಿ’ ಎಂದು ಅವರು ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಹಾಗೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

* ಉಪ್ಪಿನ ಋಣವನ್ನು ಮುಪ್ಪಿನವರೆಗೂ ಮರೆಯಬಾರದು ಎಂಬ ಮಾತು ಇದೆ. ಮೈಸೂರು ಸಂಸ್ಥಾನದವರ ಕೊಡುಗೆಗಳನ್ನು ನಾವೆಂದೂ ಮರೆಯಬಾರದು.
–ಎನ್. ಮಹೇಶ್‌, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !