ಗುರುವಾರ , ನವೆಂಬರ್ 21, 2019
26 °C
ಜಿಲ್ಲಾ ಕ್ರೀಡಾಂಗಣದಲ್ಲಿ ಚಾಮರಾಜನಗರ ತಾಲ್ಲೂಕುಮಟ್ಟದ ದಸರಾ ಕ್ರೀಡಾಕೂಟ, ಕ್ರೀಡಾಸಕ್ತರ ಆರೋಪ

ಚಾಮರಾಜನಗರ ತಾಲ್ಲೂಕುಮಟ್ಟದ ದಸರಾ ಕ್ರೀಡಾಕೂಟ| ಕ್ರೀಡಾಪಟುಗಳಿಗೆ ಮೂಲಸೌಕರ್ಯ ಕೊರತೆ

Published:
Updated:
Prajavani

ಚಾಮರಾಜನಗರ: ನಗರದ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಶ್ರಯದಡಿ ಸೋಮವಾರದಿಂದ ಆರಂಭಗೊಂಡಿರುವ ಚಾಮರಾಜನಗರ ತಾಲ್ಲೂಕುಮಟ್ಟದ ದಸರಾ ಕ್ರೀಡಾಕೂಟ ನಡೆಯುತ್ತಿದ್ದು, ಕೂಟದಲ್ಲಿ ಭಾಗವಹಿಸುವ ಕ್ರೀಡಾಳುಗಳಿಗೆ ಮೂಲ ಸೌಕರ್ಯ ಕಲ್ಪಿಸಿಲ್ಲ ಎಂದು ಕ್ರೀಡಾಪಟುಗಳು ಹಾಗೂ ಕ್ರೀಡಾಸಕ್ತರು ದೂರಿದ್ದಾರೆ. 

ಮಂಗಳವಾರ ಕೊಕ್ಕೊ, ಕಬಡ್ಡಿ ಹಾಗೂ ವಾಲಿಬಾಲ್‌ ಕ್ರೀಡೆಗಳು ನಡೆದವು. ಒಂದೂವರೆ ಸಾವಿರ ಕ್ರೀಡಾಪಟುಗಳು ಸೇರಿದ್ದರು. ಎಲ್ಲರಿಗೂ ಶೌಚಾಲಯ, ಕುಡಿಯುವ ನೀರು, ಗ್ಲುಕೋಸ್, ಆಂಬುಲೆನ್ಸ್‌, ಪ್ರಥಮ ಚಿಕಿತ್ಸೆ ವ್ಯವಸ್ಥೆಗಳಂತಹ ಕನಿಷ್ಠ ಮೂಲ ಸೌರ್ಯಗಳು ಕಂಡು ಬರಲಿಲ್ಲ. 

ಶೌಚಾಲಯ ಇಲ್ಲ: ತಾಲ್ಲೂಕಿನ ವಿವಿಧ ಭಾಗಗಳಿಂದ ಬರುವ ಕ್ರೀಡಾಪಟುಗಳಿಗೆ ಅದರಲ್ಲೂ ಮಹಿಳಾ ಕ್ರೀಡಾಪಟುಗಳಿಗೆ ಕ್ರೀಡಾಂಗಣದಲ್ಲಿ  ಶೌಚಾಲಯದ ವ್ಯವಸ್ಥೆ ಇಲ್ಲ. ತಾತ್ಕಾಲಿಕ ವ್ಯವಸ್ಥೆಯೂ ಇರಲಿಲ್ಲ. ಕ್ರೀಡಾಪಟುಗಳು ಖಾಸಗಿ ಬಸ್‌ ನಿಲ್ದಾಣದಲ್ಲಿರುವ ಹಣ ನೀಡಿ ಬಳಕೆ ಮಾಡುವ ಶೌಚಾಲಯಕ್ಕೆ ಹೋಗಬೇಕು. ದೂರದಲ್ಲಿರುವ ಕ್ರೀಡಾ ಹಾಸ್ಟೆಲ್‌ನ ಶೌಚಾಲಯಕ್ಕೆ ಹೋಗಬೇಕಾಯಿತು.  ಕ್ರೀಡಾಂಗಣದೊಳಗೆ ನಿರ್ಮಿಸಲಾಗಿರುವ ಶೌಚಾಲಯ ಕಟ್ಟಡ ಈವರೆಗೂ ಉದ್ಘಾಟನೆಗೊಂಡಿಲ್ಲ.

ಟ್ಯಾಂಕರ್‌ ನೀರು: ಮೊದಲ ದಿನ ಟ್ಯಾಂಕರ್‌ನಲ್ಲಿ ಕುಡಿಯುವ ನೀರು ಪೂರೈಕೆ ಮಾಡಲಾಯಿತು. ಎರಡನೇ ದಿನ ಕುಡಿಯುವ ನೀರಿಗೆ ಸರಿಯಾದ ವ್ಯವಸ್ಥೆ ಇರಲಿಲ್ಲ. ಕ್ರೀಡಾಪಟುಗಳು ಪಂದ್ಯಗಳ ನಡುವೆ ನೀರು ಕುಡಿಯುತ್ತಾರೆ. ಸಾಕಷ್ಟು ನೀರಿನ ಅಗತ್ಯ ಇತ್ತು. ಆದರೆ, ಕುರ್ಚಿಯೊಂದರಲ್ಲಿ 20 ಲೀಟರ್‌ನ ಒಂದು ಕ್ಯಾನ್‌ ಮಾತ್ರ ಇರಿಸಿದ್ದು ಕಂಡು ಬಂತು. ಅದು ಖಾಲಿಯಾದಾಗ ಭರ್ತಿ ಮಾಡುವವರೂ ಇರಲಿಲ್ಲ.

ಕ್ರೀಡಾಕೂಟ ಉದ್ಘಾಟನೆಯ ದಿನ ಇದ್ದ ಆಂಬುಲೆನ್ಸ್‌, ಮಂಗಳವಾರ ಕಂಡು ಬಂದಿರಲಿಲ್ಲ. ತುರ್ತು ಪರಿಸ್ಥಿತಿಯಲ್ಲಿ ಪ್ರಥಮ ಚಿಕಿತ್ಸೆ ನೀಡಲು ಬೇಕಾದ ಕನಿಷ್ಠ ಔಷಧಿಗಳೂ ಕಂಡು ಬರಲಿಲ್ಲ. ನಿಶಕ್ತರಾದರೆ ನೀಡಲು ಗ್ಲುಕೋಸ್‌ ಅಥವಾ ಒಆರ್‌ಎಸ್‌ ಕೂಡ ಇರಲಿಲ್ಲ. 

ಅವ್ಯವಸ್ಥೆ ಆರೋಪ: ‘ಕ್ರೀಡಾಕೂಟಕ್ಕೆ ಸರ್ಕಾರದಿಂದ ಅನುದಾನವಿದ್ದರೂ ಸಮರ್ಪಕವಾಗಿ ಬಳಸಿಲ್ಲ. ಕ್ರೀಡಾಪಟುಗಳಿಗೆ ಮೂಲ ಸೌಕರ್ಯ ಒದಗಿಸಿಲ್ಲ’ ಎಂದು ನಗರಸಭೆ ಸದಸ್ಯ ಮಹೇಶ್ ಆರೋಪಿಸಿದರು.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಚಲುವಯ್ಯ ಅವರು, ‘ಮೊದಲ ದಿನ ನಗರಸಭೆಯ ವತಿಯಿಂದ ಟ್ಯಾಂಕರ್‌ ನೀರು ಪೂರೈಸಲಾಗಿತ್ತು. ಅಲ್ಲದೆ, ಕುಡಿಯುವ ನೀರಿನ ಉದ್ದೇಶಕ್ಕೆ 20 ಲೀಟರ್‌ ಕ್ಯಾನ್‌ಗಳನ್ನು ಬಳಸಲಾಗುತ್ತಿದೆ. ಮಂಗಳವಾರ ಆಂಬುಲೆನ್ಸ್‌ ಇಲ್ಲದಿದ್ದರೂ ಪ್ರಥಮ ಚಿಕಿತ್ಸೆ ನೀಡಲು ಆರೋಗ್ಯ ಇಲಾಖೆಯ ಒಬ್ಬರು ಸಿಬ್ಬಂದಿ ಬಂದಿದ್ದರು. ಕ್ರೀಡಾ ಹಾಸ್ಟೆಲ್‌ನ ಶೌಚಾಲಯವನ್ನು ಕ್ರೀಡಾಪಟುಗಳಿಗಾಗಿ ಮೀಸಲಿಡಲಾಗಿತ್ತು’ ಎಂದು ಹೇಳಿದರು. 

‘ಸೋಮವಾರ ರಾತ್ರಿ ಮಳೆ ಬಂದಿದ್ದರಿಂದ ಮಂಗಳವಾರ ಕ್ರೀಡಾಂಗಣದಲ್ಲಿ ನೀರು ನಿಂತಿತ್ತು. ಇದರಿಂದಾಗಿ ಬೆಳಿಗ್ಗೆ ಸ್ವಲ್ಪ ಸಮಸ್ಯೆಯಾಯಿತು. ಪಂದ್ಯಗಳು ಆರಂಭವಾಗುವಾಗ ಸ್ವಲ್ಪ ವಿಳಂಬವಾಯಿತು’ ಎಂದು ಅವರು ಹೇಳಿದರು. 

‘ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ’

‘ಕ್ರೀಡಾಕೂಟ ಉದ್ಘಾಟನೆಗೆ ಹಾಕಲಾಗಿದ್ದ ಪೆಂಡಾಲ್‌ ಮಾತ್ರ ಇದೆ. ಉಳಿದಂತೆ ಕ್ರೀಡಾಂಗಣದ ಸುತ್ತ ಎಲ್ಲಿಯೂ ನೆರಳಿಗಾಗಿ ಪೆಂಡಾಲ್‌ ವ್ಯವಸ್ಥೆ ಮಾಡಿಲ್ಲ. ಸೋಮವಾರ ಹಾಕಲಾದ ಪೆಂಡಾಲ್‌ ದೂರದಲ್ಲಿದೆ. ಅಲ್ಲಿ ಸಾಕುಪ್ರಾಣಿಗಳು ವಿಶ್ರಮಿಸುತ್ತಿವೆ. ನಮಗೆ ಮಾಹಿತಿ ನೀಡಲು ಅಲ್ಲದೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿಗಳು ಒಬ್ಬರೂ ಇಲ್ಲ’ ಎಂದು ಕೊಕ್ಕೊ ತರಬೇತುದಾರ ಗೋವಿಂದ್‌ ದೂರಿದರು.

‘ಆಟ ಆಡಿಸುವ ಅಂಪೈರ್‌ಗಳಿಗೆ, ತರಬೇತುದಾರರಿಗೆ ಕುಳಿತುಕೊಳ್ಳಲು ಕುರ್ಚಿಗಳ ವ್ಯವಸ್ಥೆ ಕಲ್ಪಿಸಿಲ್ಲ. ಪಂದ್ಯಗಳ ಬಳಿಕ ಬೇರೆಯ ಪಂದ್ಯದ ಕೋರ್ಟ್‌ನಲ್ಲಿರುವ ಕುರ್ಚಿಯನ್ನೇ ಆಶ್ರಯಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕ್ರೀಡಾಕೂಟ ಆಯೋಜನೆಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ’ ಎಂದು ಕ್ರೀಡಾಪಟು ಮಹೇಶ್ ‘ಪ್ರಜಾವಾಣಿ’ಗೆ ಹೇಳಿದರು.

ಪ್ರತಿಕ್ರಿಯಿಸಿ (+)