ಶನಿವಾರ, ಅಕ್ಟೋಬರ್ 19, 2019
27 °C

ಗಮನ ಸೆಳೆದ ಮ್ಯಾರಥಾನ್‌

Published:
Updated:
Prajavani

ಚಾಮರಾಜನಗರ: ಜಿಲ್ಲಾ ದಸರಾದ ಅಂಗವಾಗಿ ಬುಧವಾರ ಬೆಳಿಗ್ಗೆ ನಡೆದ ಬೃಹತ್‌ ಮ್ಯಾರಥಾನ್‌ ಗಮನಸೆಳೆಯಿತು.

ದಸರಾ ಉತ್ಸವ ಸಮಿತಿ ಉಪಾಧ್ಯಕ್ಷ, ಶಾಸಕ ಸಿ.ಎಸ್‌.ನಿರಂಜನ್‌ ಕುಮಾರ್‌ ಅವರು ಚಾಮರಾಜೇಶ್ವರ ದೇವಸ್ಥಾನದ ಆವರಣದಲ್ಲಿ ಮ್ಯಾರಥಾನ್‌ಗೆ ಹಸಿರು ನಿಶಾನೆ ತೋರಿದರು.

ನಂತರ ಮಾತನಾಡಿದ ಅವರು, ‘ಗಾಂಧಿ ಜಯಂತಿ ಹಾಗೂ ದಸರಾ ಅಂಗವಾಗಿ ಮ್ಯಾರಥಾನ್‌ ಆಯೋಜಿಸಲಾಗಿದೆ. ಗಾಂಧೀಜಿ ಅವರ ಆಶಯದಂತೆ ಸಮಾಜಕ್ಕೆ ಸ್ವಚ್ಛತೆಯ ತಿಳಿವಳಿಕೆಯನ್ನು ಹಾಗೂ ಪರಿಸರ ಸಂರಕ್ಷಣೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಇದು’ ಎಂದು ಹೇಳಿದರು. 

ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ.ಆನಂದ ಕುಮಾರ್‌ ಹಾಗೂ ಇತರ ಅಧಿಕಾರಿಗಳು ಸ್ವಲ್ಪ ದೂರದವರೆಗೆ ಮ್ಯಾರಥಾನ್‌ನಲ್ಲಿ ಹೆಜ್ಜೆ ಹಾಕಿದರು.

ನಗರದ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ವಿವಿಧ ಇಲಾಖೆಗಳ ಸಿಬ್ಬಂದಿ, ಸಾರ್ವಜನಿಕರು ಸೇರಿದಂತೆ ಹೆಚ್ಚು ಒಂದೂವರೆ ಸಾವಿರಕ್ಕೂ ಹೆಚ್ಚು ಮಂದಿ ಇದರಲ್ಲಿ ಭಾಗವಹಿಸಿದ್ದರು. ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿಸುವ ಫಲಕಗಳನ್ನು ವಿದ್ಯಾರ್ಥಿಗಳು‌ ಹಿಡಿದಿದ್ದರು. 

ದೇವಸ್ಥಾನದಿಂದ ಆರಂಭವಾದ ನಡಿಗೆ, ಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿ ರಸ್ತೆ, ನ್ಯಾಯಾಲಯದ ರಸ್ತೆ, ಕರಿನಂಜನಪುರದ ರಸ್ತೆ ಮಾರ್ಗವಾಗಿ ಸತ್ಯಮಂಗಲ ರಸ್ತೆಯಲ್ಲಿರುವ ಪ್ರವಾಸಿ ಮಂದಿರದಲ್ಲಿ ಕೊನೆಗೊಂಡಿತು.

Post Comments (+)