ಶಕ್ತಿದೇವತೆಗಳ ಆರಾಧನೆಗೆ ನಗರ ಸಜ್ಜು

7

ಶಕ್ತಿದೇವತೆಗಳ ಆರಾಧನೆಗೆ ನಗರ ಸಜ್ಜು

Published:
Updated:
Deccan Herald

ನಾಡಹಬ್ಬ ದಸರಾವನ್ನು ದೇಶದಾದ್ಯಂತ ನವರಾತ್ರಿ ಹಬ್ಬವಾಗಿ ವಿಜೃಂಭಣೆಯಿಂದ ಆಚರಿಸುವುದುಂಟು. ಪೂಜೆಯ ವಿಧಾನಗಳಲ್ಲಿ ಸ್ವಲ್ಪ ವ್ಯತ್ಯಾಸಗಳಿದ್ದರೂ ದೇಶದಾದ್ಯಂತ ಪೂಜಿಸುವುದು ದುರ್ಗಾಮಾತೆಯನ್ನೆ.

ಕರ್ನಾಟಕದಲ್ಲಿ ಚಾಮುಂಡೇಶ್ವರಿ, ಗುಜರಾತಿನಲ್ಲಿ ಅಂಬಾಮಾತಾ ಎಂದು ದುರ್ಗೆಯನ್ನು ಪೂಜಿಸಲಾಗುತ್ತದೆ. ಬೆಂಗಾಳಿಗಳಿಗೂ ಇದು ಸಡಗರದ ಹಬ್ಬ. ಒಂಬತ್ತು ದಿನವೂ ಉತ್ಸವದಂತೆ ಆಚರಿಸುವ ಈ ಹಬ್ಬದಲ್ಲಿ ಬೆಂಗಾಳಿಗಳು ದೇವಿಯ ಹಲವು ಭಂಗಿಗಳನ್ನು ಪೂಜಿಸಿ ಆರಾಧಿಸುತ್ತಾರೆ.

ವಿಜಯನಗರದ ಅರಸರ ಕಾಲದಿಂದ ನವರಾತ್ರಿ ಅಥವಾ ದಸರಾ ಹಬ್ಬದ ಆಚರಣೆ ಬಂದಿದೆ ಎಂಬುದು ಇತಿಹಾಸ ತಜ್ಞರ ಅಭಿಪ್ರಾಯ. ಮೈಸೂರಿನ ರಾಜಪರಿವಾರದವರು ‘ದಸರಾ ಉತ್ಸವ’ವನ್ನು ಆಚರಿಸಿಕೊಂಡು ಬಂದಿದ್ದು, ಅದು ವಿಶ್ವಪ್ರಸಿದ್ಧಿಯಾಗಿದೆ. ಅಲ್ಲಿನ ಜಂಬೂ ಸವಾರಿಯಂತೂ ನಯನ ಮನೋಹರ. ಇದನ್ನು ನೋಡಲು ದೇಶ, ವಿದೇಶದಿಂದ ಪ್ರವಾಸಿಗರು ಮೈಸೂರಿಗೆ ಬರುತ್ತಾರೆ.

ಅಂತೆಯೇ ರಾಜಧಾನಿ ಬೆಂಗಳೂರಿನಲ್ಲೂ ನವರಾತ್ರಿ ಹಬ್ಬ ಕಳೆಕಟ್ಟಿದೆ. ನಗರದಲ್ಲಿ ಹತ್ತಾರು ದೇವಿಯರು ನೆಲೆಸಿದ್ದಾರೆ. ಅಲ್ಲೆಲ್ಲ ನವರಾತ್ರಿ ಉತ್ಸವವನ್ನು ಸಡಗರ, ಸಂಭ್ರಮದಿಂದ ಆಚರಿಸಲಾಗುತ್ತದೆ. ನಾಡ ಹಬ್ಬವಾಗಿರುವ ದಸರಾ ‘ಗೊಂಬೆ ಹಬ್ಬ’ ಎಂದೂ ಪ್ರಸಿದ್ಧಿಯಾಗಿದೆ. ದಸರಾ ಗೊಂಬೆಗಳನ್ನು ಸಂಗ್ರಹಿಸಿಟ್ಟು, ಪೂಜಿಸುವುದನ್ನು ನಗರದ ಹಲವಾರು ನಿವಾಸಿಗರು ರೂಢಿಸಿಕೊಂಡು ಬಂದಿದ್ದಾರೆ.

ರಾಮಾಯಣ, ಮಹಾಭಾರತದ ಸನ್ನಿವೇಶಗಳು, ಪೌರಾಣಿಕ ಮಹಾನ್‌ ವ್ಯಕ್ತಿಗಳ ಗೊಂಬೆಗಳನ್ನು ತಂದು, ಮನೆಯಲ್ಲಿ ಒಂಬತ್ತು ದಿನವಿಟ್ಟು ಆರಾಧಿಸುವುದರಲ್ಲಿಯೇ ಹಲವರು ಭಕ್ತಿ ಭಾವ ಮೆರೆಯುತ್ತಾರೆ. ಈ ಹಬ್ಬಕ್ಕಾಗಿ ಚನ್ನಪಟ್ಟಣದಿಂದ ದಸರಾ ಗೊಂಬೆಗಳನ್ನು ತಂದು ಮನೆಯಲ್ಲಿ ಅಲಂಕರಿಸುತ್ತಾರೆ.

ಸಿಲಿಕಾನ್‌ ಸಿಟಿಯಾದ ಬೆಂಗಳೂರಿಗೆ ಉದ್ಯೋಗ ಅರಸಿ ವಿವಿಧ ರಾಜ್ಯಗಳಿಂದ ಬಂದಿರುವ ಜನರು ನೆಲೆಸಿದ್ದಾರೆ. ವ್ಯಾಪಾರ, ವಹಿವಾಟಿನಲ್ಲಿ ತೊಡಗಿರುವ ಗುಜರಾತಿಗಳು, ರಾಜಸ್ಥಾನಿಗಳು, ಬೆಂಗಾಳಿಗಳು ನವರಾತ್ರಿಯನ್ನು ಸಂಭ್ರಮದಿಂದ ಇಲ್ಲಿಯೇ ಆಚರಿಸುತ್ತಾರೆ. ತಮ್ಮ ಸಮುದಾಯಗಳ ಒಕ್ಕೂಟಗಳನ್ನು ಕಟ್ಟಿಕೊಂಡಿರುವ ಅವರು ಒಂಬತ್ತು ದಿನವೂ ಒಂದೆಡೆ ಸೇರಿ ಸಂಭ್ರಮಿಸುತ್ತಾರೆ.

ನಗರದ ವಿವಿಧ ಮಾಲ್‌ಗಳಲ್ಲೂ ನವರಾತ್ರಿ ಹಬ್ಬದ ಪ್ರಯುಕ್ತ ಕೋಲಾಟ ಸೇರಿದಂತೆ ವಿವಿಧ ಜಾನಪದ ನೃತ್ಯಗಳು, ಸಂಗೀತ ಕಾರ್ಯಕ್ರಮಗಳು ಜರುಗಲಿವೆ. ನಗರದ ಅರಮನೆ ಮೈದಾನ ಹಾಗೂ ಕೆಲ ಹೋಟೆಲ್‌ಗಳಲ್ಲಿ ದಾಂಡಿಯ ಉತ್ಸವಗಳೂ ಆಯೋಜನೆಗೊಂಡಿವೆ.

ದೇವಿ ದೇವಾಲಯಗಳಲ್ಲಿ ಪೂಜೆ: ಗಾಂಧಿನಗರದ ಅಣ್ಣಮ್ಮ ದೇವಾಲಯ, ಬನಶಂಕರಿಯ ಬನಶಂಕರಮ್ಮ ದೇವಾಲಯ, ಬನ್ನೇರುಘಟ್ಟದ ಮೀನಾಕ್ಷಿ ದೇವಾಲಯ, ಮಲ್ಲೇಶ್ವರದ ಸರ್ಕಲ್‌ ಮಾರಮ್ಮ, ಕನ್ಯಕಾ ಪರಮೇಶ್ವರಿ, ಮಾಗಡಿ ರಸ್ತೆಯ ಟೋಲ್‌ಗೇಟ್‌ ಬಳಿಯ ಬನಶಂಕರಿ ದೇವಾಲಯ, ರಾಜರಾಜೇಶ್ವರಿ ನಗರದ ರಾಜರಾಜೇಶ್ವರಿ, ನಿಮಿಷಾಂಬ ದೇವಾಲಯ, ಜಯನಗರದ 7ನೇ ಬ್ಲಾಕ್‌ನ ದುರ್ಗಾ ಪರಮೇಶ್ವರಿ ದೇವಾಲಯ, ಶಂಕರಮಠದಲ್ಲಿನ ಶಾರದಾಂಬ ದೇವಿ ದೇವಾಲಯ, ಅನ್ನಪೂರ್ಣೇಶ್ವರಿ ನಗರದ ಮಾತಾ ಅನ್ನಪೂರ್ಣೇಶ್ವರಿ ದೇವಾಲಯ, ಆಸ್ಟಿನ್‌ ಟೌನ್‌ನ ರಾಜರಾಜೇಶ್ವರಿ ದೇವಾಲಯ, ಕೃಷ್ಣರಾಜಪುರದ ದೊಡ್ಡಮ್ಮ ದೇವಿ ದೇವಾಲಯ ಸೇರಿದಂತೆ ವಿವಿಧ ಬಡಾವಣೆಗಳಲ್ಲಿನ ದೇವಿ ದೇವಾಲಯಗಳಲ್ಲಿ ಒಂಬತ್ತು ದಿನವೂ ವಿಶೇಷ ಪೂಜಾ ಕಾರ್ಯಗಳು ನೆರವೇರಲಿವೆ.

ಶಕ್ತಿ ಆರಾಧನೆ: ದೇವಿ ಎಂದರೆ ಶಕ್ತಿ. ಇದು ಶಕ್ತಿಯ ಆರಾಧನೆಗೆ ಮೀಸಲಾದ ಹಬ್ಬ. ಇದರಲ್ಲಿ ಶಕ್ತಿಯನ್ನು ವಿವಿಧ ರೂಪಗಳಲ್ಲಿ ಪೂಜಿಸಲಾಗುತ್ತದೆ.

ನವರಾತ್ರಿಯ ಮೊದಲ ಮೂರು ದಿನಗಳಲ್ಲಿ ಪ್ರಕೃತಿಮಾತೆಯನ್ನು ಲಕ್ಷ್ಮಿ ಸ್ವರೂಪದಲ್ಲಿಯೂ, ಆ ಬಳಿಕದ ಮೂರು ದಿನಗಳಲ್ಲಿ ಸರಸ್ವತಿ ಸ್ವರೂಪದಲ್ಲೂ, ಕೊನೆಯ ಮೂರು ದಿನಗಳಲ್ಲಿ ‘ದುರ್ಗಾ’ ರೂಪದಲ್ಲಿಯೂ ಆರಾಧಿಸಲಾಗುತ್ತದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !