ದಸರಾ ಚಲನಚಿತ್ರೋತ್ಸವ ಉದ್ಘಾಟಿಸಿದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ

7
ಸರ್ಕಾರ ಬೀಳುವ ಭಯವಿಲ್ಲ, ಹಾಡು ಕೇಳುತ್ತ ಎಲ್ಲ ಮರೆಯುವೆ

ದಸರಾ ಚಲನಚಿತ್ರೋತ್ಸವ ಉದ್ಘಾಟಿಸಿದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ

Published:
Updated:

ಮೈಸೂರು: ‘ಸಮ್ಮಿಶ್ರ ಸರ್ಕಾರ ಬಿದ್ದು ಹೋಗುತ್ತದೆ ಎಂಬ ಚಿಂತೆ ಇಲ್ಲ. ರಾತ್ರಿ ಕನ್ನಡದ ಹಳೆಯ ಚಿತ್ರಗೀತೆಗಳನ್ನು ಕೇಳುತ್ತಾ ಮಲಗುತ್ತೇನೆ. ಬೆಳ್ಳಿಗೆಯಿಂದ ಸಂಜೆವರೆಗೂ ಆದ ಎಲ್ಲ ನೋವುಗಳನ್ನು ಮರೆತುಬಿಡುತ್ತೇನೆ’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಮ್ಮೊಳಗಿನ ಭಾವನೆಯನ್ನು ಹೊರಹಾಕಿದರು.

ದಸರಾ ಮಹೋತ್ಸವದ ಅಂಗವಾಗಿ ಬುಧವಾರ ಇಲ್ಲಿ ಆಯೋಜಿಸಿದ್ದ ದಸರಾ ಚಲನಚಿತ್ರೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

‘ಮನಸ್ಸಿನಲ್ಲಿ ಎಷ್ಟೇ ಚಿಂತೆಗಳಿದ್ದರೂ ರಾತ್ರಿ ಮಲಗುವ ಮುನ್ನ ಕನ್ನಡದ ಹಳೆಯ ಗೀತೆಗಳನ್ನು ಕೇಳಿದರೆ ಎಲ್ಲವೂ ಮರೆತು ಹೋಗುತ್ತದೆ. ದೀಪಾವಳಿ ವೇಳೆಗೆ ಸಮ್ಮಿಶ್ರ ಸರ್ಕಾರ ಬಿದ್ದುಹೋಗುತ್ತದೆ ಎಂದು ಡೆಡ್‌ಲೈನ್‌ ಕೊಟ್ಟಿದ್ದಾರೆ. ಯಾವುದಕ್ಕೂ ತಲೆಕೆಡಿಸಿಕೊಳ್ಳುವುದಿಲ್ಲ’ ಎಂದರು.

ನಿಂತು ಸಿನಿಮಾ ನೋಡಿದ್ದೇನೆ: ಚಿಕ್ಕಂದಿನಿಂದಲೂ ಕನ್ನಡ ಸಿನಿಮಾಗಳನ್ನು ನೋಡುತ್ತಾ ಬೆಳೆದೆ. ಅದರಲ್ಲೂ ಡಾ.ರಾಜಕುಮಾರ್‌ ಸಿನಿಮಾಗಳಿಂದ ಬಹಳಷ್ಟು ಒಳ್ಳೆಯ ಗುಣಗಳನ್ನು ಅಳವಡಿಸಿಕೊಂಡಿದ್ದೇನೆ. ಬಡವರು, ಕಷ್ಟವೆಂದು ಬರುವವರಿಗೆ ತಕ್ಷಣ ಸ್ಪಂದಿಸುವ ಗುಣ ನನ್ನಲ್ಲಿದ್ದರೆ, ಅದಕ್ಕೆ ರಾಜಕುಮಾರ್‌ ಕಾರಣ ಎಂದು ಹೇಳಿದರು.

‘ಮೂರೂವರೆ ವಜ್ರ ಸಿನಿಮಾವನ್ನು ಹಾಸನದಲ್ಲಿ ಎರಡು ಷೋ ನೋಡಿ, ಹೊಳೆನರಸೀಪುರಕ್ಕೆ ರಾತ್ರಿ ಬಸ್‌ ಇಲ್ಲದೆ ನಡೆದುಕೊಂಡು ಹೋಗಿದ್ದೇನೆ. ಸಿನಿಮಾ ಮೇಲಿನ ಪ್ರೀತಿ ಎಷ್ಟಿತ್ತೆಂದರೆ ಕೆಲವೊಮ್ಮೆ ನಿಂತುಕೊಂಡೇ ಎರಡೂವರೆ ಗಂಟೆ ಸಿನಿಮಾ ನೋಡಿದ್ದೇನೆ’ ಎಂದು ಹಳೆಯ ದಿನಗಳನ್ನು ನೆನಪಿಸಿಕೊಂಡರು.

‘ಮೈಸೂರಿಗೂ ನನಗೂ ದೊಡ್ಡ ನಂಟಿದೆ. ನನ್ನ ಸಿನಿಮಾ ವೃತ್ತಿ ಬದುಕು ಆರಂಭವಾಗಿದ್ದೇ ಇಲ್ಲಿಂದ. ನಜರಾಬಾದ್‌ನ ಕಾಂಪ್ಲೆಕ್ಸ್‌ ಒಂದರಲ್ಲಿ ಸಿನಿಮಾ ಹಂಚಿಕೆದಾರನಾಗಿ ಕೆಲಸ ಮಾಡುತ್ತಿದ್ದೆ. ಅಂಬರೀಷ್ ಅವರ ಮೂರು ಸಿನಿಮಾಗಳು ನಮ್ಮ ಸಂಸ್ಥೆಯಿಂದ ಬಿಡುಗಡೆಯಾಗಿದ್ದವು’ ಎಂದು ಹಿಂದಿನ ಘಟನೆಗಳನ್ನು ಮೆಲುಕು ಹಾಕಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !