ಮೈಸೂರಿನಲ್ಲಿ ನಾಡಹಬ್ಬದ ಸಂಭ್ರಮ ಇಂದಿನಿಂದ

7
ಪರಂಪರೆಯ ಅನಾವರಣ, ಗಜಪಡೆಯ ಸೊಬಗು

ಮೈಸೂರಿನಲ್ಲಿ ನಾಡಹಬ್ಬದ ಸಂಭ್ರಮ ಇಂದಿನಿಂದ

Published:
Updated:
Deccan Herald

ಮೈಸೂರು: ನಾಡಿನ ಸಾಂಸ್ಕೃತಿಕ ಸಿರಿತನ ಬಿಂಬಿಸುವ, ಪ್ರವಾಸಿಗರ ಕಣ್ಮನ ಸೆಳೆಯುವ ನಾಡಹಬ್ಬ ದಸರಾ ಮಹೋತ್ಸವದ ವೈಭವ ಚಾಮುಂಡೇಶ್ವರಿ ಸನ್ನಿಧಾನದಲ್ಲಿ ಬುಧವಾರ ಅನಾವರಣಗೊಳ್ಳಲಿದೆ.

ಬಿಸಿಲು– ಮಳೆಯ ಕಣ್ಣಾಮುಚ್ಚಾಲೆ ಆಟದ ನಡುವೆಯೇ ನಗರದೆಲ್ಲೆಡೆ ಸಂಭ್ರಮ ಗರಿಗೆದರಿದೆ. ವಿದ್ಯುತ್‌ ದೀ‍‍ಪಾಲಂಕಾರದಿಂದ ಕಂಗೊಳಿಸುತ್ತಿರುವ ಅರಮನೆ ನಗರಿಯ ಬೀದಿಗಳು, ಪಾರಂಪರಿಕ ಕಟ್ಟಡಗಳು, ವೃತ್ತಗಳು ಶರನ್ನವರಾತ್ರಿಗೆ ರಂಗು ತುಂಬಿವೆ. ಸಾಂಸ್ಕೃತಿಕ ಸೊಬಗು ಬೆಳಕಿನ ರೂಪದಲ್ಲಿ ಪ್ರಜ್ವಲಿಸುತ್ತಿದ್ದು, ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ.

ಚಾಮುಂಡಿಬೆಟ್ಟದಲ್ಲಿ ನಾಡದೇವತೆಗೆ ಅಗ್ರಪೂಜೆ ಬಳಿಕ ಬೆಳಿಗ್ಗೆ 7.05ರಿಂದ 7.35ರ ವರೆಗೆ ಸಲ್ಲುವ ಶುಭ ತುಲಾ ಲಗ್ನದಲ್ಲಿ ನಾಡಹಬ್ಬಕ್ಕೆ ಉದ್ಯಮಿ, ಲೇಖಕಿ ಸುಧಾಮೂರ್ತಿ ಚಾಲನೆ ನೀಡಲಿದ್ದಾರೆ. ಚಾಮುಂಡಿ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡಲಿದ್ದಾರೆ.

ದಸರಾ ಕಾರ್ಯಕ್ರಮಗಳಿಗೆ ಚುನಾವಣಾ ನೀತಿ ಸಂಹಿತೆ ಅಡಚಣೆಯಾಗದು ಎಂದು ಚುನಾವಣಾ ಆಯೋಗ ಹಸಿರು ನಿಶಾನೆ ತೋರಿದರೆ ಮಾತ್ರ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಇತರ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

ಸಿಂಗಾರಗೊಂಡ ಅರಮನೆ: ವಿಶ್ವಪ್ರಸಿದ್ಧ ಅಂಬಾವಿಲಾಸ ಅರಮನೆ ಆವರಣದಲ್ಲಿ ಅ.10ರಿಂದ 19ರವರೆಗೆ ಸಾಂಸ್ಕೃತಿಕ ಲೋಕ ತೆರೆದುಕೊಳ್ಳಲಿದೆ. ಅದಕ್ಕಾಗಿ ಅರಮನೆ ಮುಂಭಾಗದಲ್ಲಿ ವೇದಿಕೆ ನಿರ್ಮಿಸಲಾಗಿದೆ. ಸಂಜೆ 7 ಗಂಟೆಗೆ ಸಂಗೀತ ವಿದ್ವಾನ್‌ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ವಿವಿಧ ಕಾರ್ಯಕ್ರಮ ಆಯೋಜಿಸಲು ಕಲಾಮಂದಿರ, ಪುರಭವನ, ಚಿಕ್ಕ ಗಡಿಯಾರ, ಗಾನಭಾರತಿ, ಕಿರು ರಂಗಮಂದಿರ, ಜಗನ್ಮೋಹನ ಅರಮನೆ, ಮಹಾರಾಜ ಕಾಲೇಜು ಮೈದಾನದಲ್ಲಿ ವೇದಿಕೆ ಸಜ್ಜುಗೊಳಿಸಲಾಗಿದೆ.

ಪ್ರವಾಸಿಗರ ಸೆಳೆಯಲು ದಸರೆ ಆರಂಭಕ್ಕೆ ಮುನ್ನವೇ ಹಲವು ಕಾರ್ಯಕ್ರಮ ಆಯೋಜಿಸಿ ಹಬ್ಬದ ವಾತಾವರಣ ನಿರ್ಮಿಸಲಾಗಿದೆ. ಯುವ ದಸರಾ, ರೈತ ದಸರಾ, ನಾಡಕುಸ್ತಿ, ಮಹಿಳಾ ಮತ್ತು ಮಕ್ಕಳ ದಸರಾ, ಗಾಜಿನ ಮನೆಯಲ್ಲಿ ಫಲಪುಷ್ಪ ಪ್ರದರ್ಶನ, ದಸರಾ ವಸ್ತುಪ್ರದರ್ಶನ, ಯೋಗ ದಸರಾ, ಕವಿಗೋಷ್ಠಿ, ಚಲನಚಿತ್ರೋತ್ಸವ, ಆಹಾರ ಮೇಳ, ಮತ್ಸ್ಯಮೇಳ, ಓಪನ್‌ ಸ್ಟ್ರೀಟ್‌ ಉತ್ಸವಕ್ಕೆ ಸಿದ್ಧತೆ ನಡೆದಿದೆ.

ಕ್ರೀಡೆಗೆ ಹೊಸ ಸ್ಪರ್ಶ: ಈ ಬಾರಿ ದಸರಾ ಕ್ರೀಡಾಕೂಟ ಹೊಸ ಸ್ವರೂಪದಲ್ಲಿ ನಡೆಯಲಿದೆ. ‘ದಸರಾ ಸಿ.ಎಂ ಕಪ್‌’ ಎಂಬ ಹೆಸರು ಇಟ್ಟಿದ್ದು, ಕ್ರೀಡಾ ಇಲಾಖೆಯ ಮಾನ್ಯತೆ ನೀಡಲಾಗಿದೆ. ಪ್ರತಿ ಕ್ರೀಡೆಯಲ್ಲಿ ಅಗ್ರ ಎಂಟು ತಂಡಗಳು ಪೈಪೋಟಿ ನಡೆಸಲಿವೆ. ಈ ಹಿಂದೆ ತಾಲ್ಲೂಕು, ಜಿಲ್ಲಾ, ವಲಯ ಮಟ್ಟದಲ್ಲಿ ಗೆದ್ದು ಅರ್ಹತೆ ಗಿಟ್ಟಿಸಿಕೊಳ್ಳುತ್ತಿದ್ದರು. ಈ ಬಾರಿ ಬಹುಮಾನ ಮೊತ್ತದಲ್ಲೂ ಹೆಚ್ಚಳವಾಗಿದೆ.

ಧಾರ್ಮಿಕ ವೈಭವ: ಧಾರ್ಮಿಕ ದಸರಾ ಆಚರಣೆಗೆ ಅರಮನೆ ಕೂಡ ಸನ್ನದ್ಧುಗೊಂಡಿದೆ. ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಸಾರಥ್ಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳು, ಖಾಸಗಿ ದರ್ಬಾರ್‌ ನಡೆಯಲಿವೆ. ವಿಜಯದಶಮಿ ದಿನದಂದು ವಜ್ರಮುಷ್ಟಿ ಕಾಳಗ ನಡೆಯಲಿದ್ದು, ನಾಲ್ವರು ಜಟ್ಟಿಗಳು ಸಿದ್ಧರಾಗುತ್ತಿದ್ದಾರೆ.

ಭಾರಿ ಭದ್ರತೆ: ದಸರಾ ಭದ್ರತೆಗಾಗಿ ಈ ಬಾರಿ 5,284 ಪೊಲೀಸ್‌ ಸಿಬ್ಬಂದಿ ನಿಯೋಜಿಸಲಾಗಿದೆ. 76 ಸಿ.ಸಿ ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ಅಂಬಾರಿ ಹೊರಲು ಅರ್ಜುನ ಸಿದ್ಧ

ಏಳನೇ ಬಾರಿ ಚಿನ್ನದ ಅಂಬಾರಿ ಹೊರಲು ಕ್ಯಾಪ್ಟನ್‌ ಅರ್ಜುನ ಆನೆ ಕಾತರದಿಂದ ಕಾಯುತ್ತಿದೆ. ಮಾವುತ ವಿನು ಎರಡನೇ ಬಾರಿ ಈ ಆನೆ ಮುನ್ನಡೆಸಲಿದ್ದಾರೆ.

12 ಆನೆಗಳು ಒಂದೂವರೆ ತಿಂಗಳಿನಿಂದ ತಾಲೀಮು ನಡೆಸಿದ್ದು, ನಗರದ ವಾತಾವರಣಕ್ಕೆ ಹೊಂದಿಕೊಂಡಿವೆ. ಮೊದಲ ಬಾರಿ ಭಾಗವಹಿಸುತ್ತಿರುವ ಧನಂಜಯ ಆನೆ ಬಗ್ಗೆ ಎಲ್ಲರಲ್ಲಿ ಕುತೂಹಲವಿದೆ.

ಮಿನಿ ಜಂಬೂಸವಾರಿ

ಇದೇ ಮೊದಲ ಬಾರಿ ಅ. 14ರಂದು ಮೆರವಣಿಗೆ ತಾಲೀಮು ನಡೆಯಲಿದೆ. ಮಿನಿ ಜಂಬೂಸವಾರಿ ಇದಾಗಿದ್ದು, ಚಿನ್ನದ ಅಂಬಾರಿ ಇರುವುದಿಲ್ಲ ಅಷ್ಟೆ. ತಾಲೀಮಿನಲ್ಲಿ ಅಲಂಕೃತ ಗಜಪಡೆ ಜೊತೆ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಸಂಸ್ಕೃತಿಯನ್ನು ಬಿಂಬಿಸುವ ಉಡುಪು ತೊಟ್ಟು ಭಾಗವಹಿಸಲಿದ್ದಾರೆ.

ಈ ಬಾರಿ ₹ 25 ಕೋಟಿ‌

ಈ ಬಾರಿಯ ದಸರಾ ಮಹೋತ್ಸವಕ್ಕೆ ಸರ್ಕಾರ ₹ 25 ಕೋಟಿ ಅನುದಾನ ಘೋಷಿಸಿದೆ. ಅದರಲ್ಲಿ ₹ 15 ಕೋಟಿ ಈಗಾಗಲೇ ಬಿಡುಗಡೆ ಆಗಿದೆ.

ಲಕ್ಷ ಗೊಂಬೆಗಳ ಸೊಬಗು

ಜಗನ್ಮೋಹನ ಅರಮನೆಯಲ್ಲಿ ಅ.10ರಿಂದ ಒಂದು ಲಕ್ಷ ಗೊಂಬೆಗಳ ಪ್ರದರ್ಶನ ಏರ್ಪಡಿಸಲಾಗಿದೆ.

ಆಂಧ್ರಪ್ರದೇಶದ ಗಾಯತ್ರಿ ಸೇವಾ ಟ್ರಸ್ಟ್‌ ಒಂದು ತಿಂಗಳು ಈ ಪ್ರದರ್ಶನ ಆಯೋಜಿಸುತ್ತಿದೆ. ಮಹಾಭಾರತ, ರಾಮಾಯಣ ಹಾಗೂ ಇತರ ಪೌರಾಣಿಕ ಪಾತ್ರಗಳನ್ನು ಬಿಂಬಿಸುವ, ವಿವಿಧ ಸಂಸ್ಕೃತಿಯನ್ನು ಪ್ರದರ್ಶಿಸುವ ಗೊಂಬೆಗಳನ್ನು ಪ್ರದರ್ಶನಕ್ಕೆ ಇಡಲಾಗುತ್ತಿದೆ.

ಇಂದಿನಿಂದ ಮಂಗಳೂರು ದಸರಾ

ಮಂಗಳೂರು: ಮಂಗಳೂರು ದಸರಾ ಎಂದೇ ಖ್ಯಾತವಾದ ನಗರದ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ನವರಾತ್ರಿ ಮಹೋತ್ಸವ ಬುಧವಾರ ಬೆಳಿಗ್ಗೆ 11.50ಕ್ಕೆ ನವದುರ್ಗೆಯರು ಮತ್ತು ಶಾರದಾ ಮಾತೆಯ ಪ್ರತಿಷ್ಠಾಪನೆಯೊಂದಿಗೆ ಆರಂಭವಾಗಲಿದೆ.

ಇದೇ 14ರಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಮಂಗಳೂರು ದಸರಾಕ್ಕೆ ಚಾಲನೆ ನೀಡಲಿದ್ದು, 19ರಂದು ಸಂಜೆ 4ರಿಂದ ಶಾರದಾ ಮಾತೆಯ ಶೋಭಾಯಾತ್ರೆ ನಡೆಯಲಿದೆ.

ನಗರದ ಮಂಗಳಾದೇವಿ ದೇವಸ್ಥಾನ, ಕಟೀಲಿನ ದುರ್ಗಾಪರಮೇಶ್ವರಿ ದೇವಸ್ಥಾನ ಸಹಿತ ಕರಾವಳಿ ಭಾಗದ ಹಲವಾರು ದೇವಿ ಮಂದಿರಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.

 

ಬರಹ ಇಷ್ಟವಾಯಿತೆ?

 • 9

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !