ವಜ್ರಮುಷ್ಟಿ ಕಾಳಗಕ್ಕೆ ಚಾಮರಾಜನಗರದ ಜಟ್ಟಿ ಸಜ್ಜು

7
ವಿಜಯದಶಮಿ ದಿನ ಜಂಬೂ ಸವಾರಿಗೂ ಮುನ್ನ ನಡೆಯುವ ರೋಮಾಂಚಕ ಕಾಳಗ

ವಜ್ರಮುಷ್ಟಿ ಕಾಳಗಕ್ಕೆ ಚಾಮರಾಜನಗರದ ಜಟ್ಟಿ ಸಜ್ಜು

Published:
Updated:
Deccan Herald

ಚಾಮರಾಜನಗರ: ನಾಡಹಬ್ಬ ದಸರಾ ಸಂಭ್ರಮದಲ್ಲಿ ವಿಜಯದಶಮಿ ದಿನದಂದು ಮೈಸೂರಿನ ಅಂಬಾ ವಿಲಾಸ ಆವರಣದಲ್ಲಿ ನಡೆಯುವ ಮೈನವಿರೇಳಿಸುವ ವಜ್ರಮುಷ್ಟಿ ಕಾಳಗಕ್ಕೆ ಪಟ್ಟಣದ ಜಟ್ಟಿಯೊಬ್ಬರು ಸಜ್ಜುಗೊಳ್ಳುತ್ತಿದ್ದಾರೆ!

ಅವರೇ ಪುರುಷೋತ್ತಮ. ಒಂದು ತಿಂಗಳಿನಿಂದ ಪಟ್ಟಣದ ದೊಡ್ಡ ಗರಡಿಯಲ್ಲಿ ತರಬೇತುದಾರ ಪುಟ್ಟಣ್ಣ ಅವರಿಂದ ತರಬೇತಿ ಪಡೆಯುತ್ತಿದ್ದಾರೆ. ಇಲ್ಲಿನ ವರದರಾಜಪುರದ ನಿವಾಸಿ ದಶಮಂದಿ ಶ್ರೀನಿವಾಸ ಜಟ್ಟಪ್ಪ ಅವರ ಮಗನಾಗಿರುವ ಪುರುಷೋತ್ತಮ ಅವರು 2006ರಲ್ಲಿ ಈ ಕಾಳಗದಲ್ಲಿ ಭಾಗವಹಿಸಿದ್ದರು.

ದಸರಾ ಮಹೋತ್ಸವದಲ್ಲಿ ವಜ್ರಮುಷ್ಟಿ ಕಾಳಗಕ್ಕೆ ಅತ್ಯಂತ ಮಹತ್ವವಿದೆ. ವಿಜಯದಶಮಿಯ ದಿನ ನಡೆಯುವ ಜಂಬೂ ಸವಾರಿಗೂ ಮೊದಲು ರಾಜ ಮನೆತನದವರ ಸಮ್ಮುಖದಲ್ಲಿ ಈ ಕಾಳಗ ನಡೆಯುತ್ತದೆ. ಸಂಪ್ರದಾಯದ ಉದ್ದೇಶದಿಂದ ನಡೆಯುವ ಈ ಕಾಳಗ ಕೆಲವೇ ಸೆಕೆಂಡುಗಳಲ್ಲಿ ಮುಗಿಯುತ್ತದೆ. ಆದರೂ, ಈ ಕಾಳಗವನ್ನು ವೀಕ್ಷಿಸಲು ಜನರ ದಂಡೇ ನೆರೆಯುತ್ತದೆ. 

ನಾಲ್ವರು ಜಟ್ಟಿಗಳು: ಜಟ್ಟಿ ಜನಾಂಗಕ್ಕೆ ಸೇರಿದ ನಾಲ್ವರು ಪೈಲ್ವಾನರು ವಜ್ರಮುಷ್ಟಿ ಕಾಳಗ ಮಾಡುತ್ತಾರೆ. ಕೈಯಲ್ಲಿ ದಂತದ ನಖವನ್ನು ಧರಿಸಿ ಮಾಡುವ ಈ ಹೊಡೆದಾಟದಲ್ಲಿ ಯಾರಾದರೂ ಒಬ್ಬ ಜಟ್ಟಿಯ ತಲೆಯಲ್ಲಿ ರಕ್ತ ಸುರಿಯಲು ಆರಂಭವಾದ ತಕ್ಷಣ ಕಾಳಗವನ್ನು ಮುಕ್ತಾಯ ಮಾಡುವುದು ರೂಢಿಯಿಂದಲೂ ನಡೆದುಕೊಂಡು ಬಂದಿದೆ.

ಬೆಂಗಳೂರು, ಮೈಸೂರು, ಚನ್ನಪಟ್ಟಣ ಮತ್ತು ಚಾಮರಾಜನಗರದ ತಲಾ ಒಬ್ಬೊಬ್ಬ ಜಟ್ಟಿ ಈ ವಜ್ರಮುಷ್ಟಿ ಕಾಳಗದಲ್ಲಿ ಭಾಗವಹಿಸುವುದು ರೂಢಿ.

‘ಈ ನಾಲ್ಕು ಊರುಗಳಿಂದ ಪ್ರತಿವರ್ಷ ಜಟ್ಟಿಗಳನ್ನು ಕಳುಹಿಸಲೇಬೇಕು. ಇದರಲ್ಲಿ ಭಾಗವಹಿಸುವವರು ಜಟ್ಟಿ ಜನಾಂಗದವರೇ ಆಗಬೇಕು. ನಾವು ಕೂಡ ಅನೇಕ ವರ್ಷಗಳಿಂದ ಇದರಲ್ಲಿ ಭಾಗವಹಿಸುತ್ತಿದ್ದೇವೆ’ ಎಂದು ಚಾಮರಾಜನಗರದ ಜಟ್ಟಿಗಳಿಗೆ 30 ವರ್ಷಗಳಿಂದ ತರಬೇತಿ ನೀಡುತ್ತಿರುವ ಪುಟ್ಟಣ್ಣ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ವರ್ಷ ಇಂತಹವರನ್ನು ಕಳುಹಿಸುತ್ತೇವೆ ಎಂದು ರಾಜಮನೆತನಕ್ಕೆ ಮೊದಲೇ ತಿಳಿಸುತ್ತೇವೆ. ದಸರಾ ಆರಂಭಕ್ಕೆ ಒಂದು ತಿಂಗಳು ಇರುವಾಗ ಆಯ್ಕೆ ಮಾಡಿದವರಿಗೆ ತರಬೇತಿ ನೀಡಲು ಆರಂಭಿಸುತ್ತೇವೆ. ಕಾಳಗದ ನಡೆಗಳನ್ನು ಕಲಿಸಲಾಗುತ್ತದೆ. ಪ್ರತಿ ದಿನ ಬೆಳಿಗ್ಗೆ ತರಬೇತಿ ಇರುತ್ತದೆ’ ಎಂದು ವಿವರಿಸಿದರು.

ಆರೋಗ್ಯ ಮುಖ್ಯ: ಜಟ್ಟಿಯನ್ನು ಆಯ್ಕೆ ಮಾಡುವಾಗ ವಯಸ್ಸಿನ ಮಿತಿ ನೋಡುವುದಿಲ್ಲ. ಆರೋಗ್ಯದಿಂದ ಇರಬೇಕು. ಜ್ವರ, ಮಧುಮೇಹ, ರಕ್ತದೊತ್ತಡ ಮುಂತಾದ ರೋಗಗಳು ಇರಬಾರದು. ದೈಹಿಕವಾಗಿ ಸದೃಢರಾಗಿರಬೇಕು. ಈ ವರ್ಷ ವರುಣ್‌ ಎಂಬ ಯುವಕ ವಜ್ರಮುಷ್ಟಿ ಕಾಳಗದಲ್ಲಿ ಭಾಗವಹಿಸಬೇಕಿತ್ತು. ಆದರೆ, ಅವನಿಗೆ ಜ್ವರ ಬಂದಿದ್ದರಿಂದ ಪುರುಷೋತ್ತಮ ಅವರನ್ನು ಆಯ್ಕೆ ಮಾಡಲಾಯಿತು ಎಂದು ಜಟ್ಟಿ ಸಮುದಾಯದ ಮುಖಂಡ ಮಂಜುನಾಥ್‌ ತಿಳಿಸಿದರು.

ಚಾಮರಾಜನಗರದಲ್ಲಿ ಜಟ್ಟಿ ಸಮುದಾಯದವರಿಗೆ ಸೇರಿದ ಸುಮಾರು 150 ಮನೆಗಳಿವೆ. ಅದರಲ್ಲಿ ಐದಾರು ಕುಟುಂಬಗಳ ಸದಸ್ಯರು ವಜ್ರಮುಷ್ಟಿ ಕಾಳಗದಲ್ಲಿ ಭಾಗವಹಿಸುತ್ತಾರೆ ಎಂದು ಪುಟ್ಟಣ್ಣ ಮಾಹಿತಿ ನೀಡಿದರು.

ಕಾಳಗದಲ್ಲಿ ಪಾಲ್ಗೊಳ್ಳುವುದು ಗೌರವದ ವಿಷಯ

‘ವಜ್ರಮುಷ್ಟಿ ಕಾಳಗದಲ್ಲಿ ಭಾಗವಹಿಸುವುದು ಎಂದರೆ ಅದೊಂದು ಗೌರವ. ನಮ್ಮ ಜನಾಂಗಕ್ಕೆ ಮಾತ್ರ ಇದರಲ್ಲಿ ಭಾಗಿಯಾಗಲು ಅವಕಾಶ. ಇದಕ್ಕಾಗಿ ನಮಗೆ ಗೌರವಧನ ಸಿಗುತ್ತದೆ. ಆದರೆ, ದುಡ್ಡಿಗಾಗಿ ನಾವು ಇದರಲ್ಲಿ ಪಾಲ್ಗೊಳ್ಳುತ್ತಿಲ್ಲ. ಅದು ನಮಗೆ ಮುಖ್ಯವೂ ಅಲ್ಲ. ಹಲವಾರು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಸಂಪ್ರದಾಯವನ್ನು ಮುಂದುವರಿಸಿಕೊಂಡು ಹೋಗುವುದು ಮತ್ತು ರೋಮಾಂಚಕಾರಿಯಾದ ಈ ಸಮರ ಕಲೆಯನ್ನು ಉಳಿಸುವುದಕ್ಕಾಗಿ ಸಂತೋಷದಿಂದಲೇ ಪಾಲ್ಗೊಳ್ಳುತ್ತೇವೆ’ ಎಂದು ಪುರುಷೋತ್ತಮ ತಿಳಿಸಿದರು.

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !