ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಪ್ತ ಸಮಾಲೋಚಕರಾಗಿ ಶಿಕ್ಷಕರು

ಅಕ್ಷರ ಗಾತ್ರ

ಶಿಕ್ಷಣ ಕ್ಷೇತ್ರದಲ್ಲಿ ಅಗಾಧ ಬೆಳೆವಣಿಗೆಗಳು ಕಂಡುಬರುತ್ತಿವೆ. ಹೊಸ ಹೊಸ ಅಗತ್ಯಗಳನ್ನು ಶಿಕ್ಷಣತಜ್ಞರು, ಚಿಂತಕರು ಕಂಡುಕೊಂಡು ಅವನ್ನು ಜಾರಿಗೆ ತರುತ್ತಿದ್ದಾರೆ. ಈ ಹೊಸ ಅಗತ್ಯಗಳ ತಾಣವೇ ಈ ಸಮಾಜ! ಆರೋಗ್ಯಕರ ಸಮಾಜಕ್ಕೆ ಬೇಕಾದ ಪೌರರನ್ನು ಒದಗಿಸುವ ಜವಾಬ್ದಾರಿ ಶಾಲೆಗಳ ಮೇಲಿದೆ ಎಂಬುದನ್ನು ಅನೇಕ ತಜ್ಞರು ಮಾತ್ರವಲ್ಲದೆ ಕೆಲ ಶಾಲೆಗಳೂ ಕಂಡುಕೊಂಡಿವೆ. ಇದು ಒಂದು ಸಕಾರಾತ್ಮಕ ಬೆಳವಣಿಗೆ.

ನಮ್ಮಲ್ಲಿ ನಡೆದ ಸಾಮಾಜಿಕ ಸ್ಥಿತ್ಯಂತರಗಳಲ್ಲಿ ಚಿಕ್ಕಚೊಕ್ಕ ಸಂಸಾರಗಳ ಉಗಮವೂ ಒಂದು. ಇದರಿಂದಾಗಿ ಆ ಮಕ್ಕಳಿಗೆ ಹೆಚ್ಚೆನಿಸುವಷ್ಟು ಪ್ರೀತಿ ಸಿಕ್ಕಿದ್ದೂ ಸತ್ಯ; ಬೇಕಿರದ ಹತ್ತಾರು ಸೌಲಭ್ಯಗಳು ಸಿಗುತ್ತಿರುವುದೂ ಸತ್ಯ. ಇದು ಮಗುವಿನ ಭವಿಷ್ಯದ ದೃಷ್ಟಿಯಿಂದ ಸಂಪೂರ್ಣವಾಗಿ ಒಳ್ಳೆಯದು ಎನ್ನಲಾಗುವುದಿಲ್ಲ. ‘ಬೇಡ’ ಎಂಬುದನ್ನು ಕೇಳೇ ಇರದ, ‘ಸೋಲು’ ಎಂಬುದು ಗೊತ್ತೇ ಇರದ ಸ್ಥಿತಿ ಸ್ವಾಗತಾರ್ಹವಾದುದಲ್ಲ, ಕೆಲವೊಮ್ಮೆ ಭವಿಷ್ಯಕ್ಕೆ ತೊಂದರೆಯೂ ಆಗಬಹುದು.

ಇದೇ ಸ್ಥಿತ್ಯಂತರದ ಸಮಯದಲ್ಲಿ ಮಹಿಳೆಯರ ಸಬಲೀಕರಣ, ಶಿಕ್ಷಣವೂ ಸಾಗಿತು. ಮಹಿಳೆಯರು ಉದ್ಯೋಗಕ್ಕೆ ಹೋಗುವುದು ಹೆಚ್ಚಿತು. ಮಕ್ಕಳ ಮಾನಸಿಕ ಅಗತ್ಯಗಳನ್ನು ಪೂರೈಸುವ ಹೊಣೆಯನ್ನು ಶಾಲೆಗಳು ಹೊರಬೇಕಾದ ಸ್ಥಿತಿ ನಿರ್ಮಾಣವಾಯಿತು. ಆದರೆ, ಶಾಲೆಗಳು ಇದಕ್ಕೆ ಸಿದ್ಧವಾಯಿತೇ? ಎಂಬ ಪ್ರಶ್ನೆಗೆ ಉತ್ತರ ‘ಕೆಲವು ಶಾಲೆಗಳು, ಹೌದು’ ಎಂಬುದು. ಇದೇ ಸಂದರ್ಭದಲ್ಲಿನ ಸಮಾನಾಂತರ ಬೆಳವಣಿಗೆ ಎಂದರೆ ಮಕ್ಕಳನ್ನು ಹೊಡೆಯಬಾರದು ಎಂಬ ಕಾನೂನು ಬಂದದ್ದು! ಸಾಮಾಜಿಕ ಚಿಂತಕರು ಇತ್ತ ಕಡೆ ಗಮನ ಹರಿಸಬೇಕು. ಇದಕ್ಕೆ ಪರಿಹಾರ ಮನೋವೈಜ್ಞಾನಿಕ ನೆಲೆಯಿಂದ ಒದಗಿದೆ. ಅದೇ ಆಪ್ತಸಮಾಲೋಚನೆ.

ಇಂದಿನ ಉದ್ವಿಗ್ನತ ಯುಗದಲ್ಲಿ ವ್ಯಕ್ತಿಜೀವನದ ಎಲ್ಲ ಕ್ಷೇತ್ರಗಳಲ್ಲಿಯೂ ಆಪ್ತಸಮಾಲೋಚಕರ ಅವಶ್ಯಕತೆ ಹೆಚ್ಚುತ್ತಿದೆ. ಅದರಲ್ಲಿಯೂ ಹೆಚ್ಚು ಬದಲಾವಣೆಗೆ ಒಳಗಾಗುತ್ತಿರುವ ಇಂದಿನ ಶೈಕ್ಷಣಿಕ ವ್ಯವಸ್ಥೆಯಲ್ಲಿ ತೀವ್ರತೆರನಾದ ಪೈಪೋಟಿಯನ್ನು ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ಆಪ್ತಸಮಾಲೋಚನೆಯು ಅವರ ಬೆಳವಣಿಗೆಯ ಪ್ರತಿಹಂತದಲ್ಲೂ ಅವಶ್ಯಕವಾಗಿದೆ.

ಶಾಲೆಯನ್ನು ಒಂದು ಸಾಮಾಜಿಕ ಪ್ರಯೋಗಾಲಯವೆಂದೇ ಹೇಳುತ್ತೇವೆ. ಶಾಲೆಯೆಂಬುದು ಕೇವಲ ಮಕ್ಕಳ ಓದು-ಬರಹಕ್ಕೆ ಸಂಬಂಧಿಸಿದ್ದಲ್ಲ, ಮಕ್ಕಳ ಸರ್ವತೋಮುಖ ಅಭಿವೃದ್ಧಿಯ ಅಡಿಪಾಯವಾಗಿದೆ. ಇಂದು ನಾವು ನೋಡುತ್ತಿರುವ-ಕೇಳುತ್ತಿರುವ ಎಷ್ಟೋ ಸಮಾಜವಿರೋಧಿ ಚಟುವಟಿಕೆಗಳಿಗೆ ಕಾರಣ ಉತ್ತಮ ಶಿಕ್ಷಣದ ಕೊರತೆ ಎಂದರೆ ತಪ್ಪಾಗಲಾರದು. ಬೆಳೆಯುತ್ತಿರುವ ಮಕ್ಕಳಲ್ಲಿ ಅವರದೇ ಆದ ಶೈಕ್ಷಣಿಕ, ವೈಯಕ್ತಿಕ ಮತ್ತು ಸಾಮಾಜಿಕ ಸಮಸ್ಯೆಗಳನ್ನು ಗಮನಿಸುತ್ತಿದ್ದರೆ ಶಿಕ್ಷಣಕ್ಷೇತ್ರದಲ್ಲಿ ಆಪ್ತಸಮಾಲೋಚಕರ ಅವಶ್ಯಕತೆ ಎಷ್ಟು ಎಂಬುದು ಅರಿವಾಗುತ್ತದೆ. ಆದರೆ ಮಹಾನಗರಗಳಂತಹ ಕಡೆ ಬೆರೆಳೆಣಿಕೆಯಷ್ಟು ಶಾಲೆಗಳನ್ನು ಹೊರತುಪಡಿಸಿ ಇತರ ಶಾಲೆಗಳಲ್ಲಿ ಆಪ್ತಸಮಾಲೋಚಕರು ಇಲ್ಲ. ಹಾಗಾಗಿ ಉತ್ತಮ ಪೌರರ ನಿರ್ಮಾಣಕ್ಕೆ ಶಿಕ್ಷಕರೇ ಆಪ್ತಸಮಾಲೋಚಕರಾಗಿ ಕಾರ್ಯ ನಿರ್ವಹಿಸಬೇಕಾಗುತ್ತದೆ.

ಶಿಕ್ಷಕರು ಆಪ್ತ ಸಮಾಲೋಚಕರಾಗಿ ಕಾರ್ಯ ನಿರ್ವಹಿಸಲು ಸಾಧ್ಯವೇ? ಅವರೇನು ಹತ್ತಾರು ವರ್ಷ ಮನೋವಿಜ್ಞಾನವನ್ನು ಅಧ್ಯಯನ ಮಾಡಿದ್ದಾರೆಯೇ? ಅಲ್ಲದೇ ಬೋಧನೆ ಮಾಡಲು ಇಡೀ ಶೈಕ್ಷಣಿಕ ವರ್ಷ ಸಾಲುವುದಿಲ್ಲ ಇನ್ನು ಇದೆಂತಹ ಹೆಚ್ಚುವರಿ ಕೆಲಸ? ಈ ಎಲ್ಲ ಸಂಗತಿಗಳನ್ನು ಬದಿಗಿಟ್ಟು ನೋಡಿದರೆ ಆಪ್ತಸಮಾಲೋಚಕರೂ ಆಗುವ ಶಿಕ್ಷಕರಿಗೆ ತಮ್ಮ ಶಿಕ್ಷಕ ಕೆಲಸ ಅತಿ ಸುಲಭವಾಗುತ್ತದೆ; ಆತ್ಮತೃಪ್ತಿಯನ್ನೂ ತರುತ್ತದೆ.

ಇಲ್ಲಿ ಬೇಕಿರುವುದು ವಿದ್ಯಾರ್ಥಿಗಳ ವರ್ತನೆಗಳನ್ನು ವೈಜ್ಞಾನಿಕ ದೃಷ್ಟಿಯಿಂದ ಅರ್ಥ ಮಾಡಿಕೊಳ್ಳುವ ಸೂಕ್ಷ್ಮತೆ, ಅಷ್ಟೆ. ಜೊತೆಗೆ ಶಿಕ್ಷಕರಿಗೆ ಬಿ. ಎಡ್., ಡಿ. ಎಡ್‍.ಗಳಲ್ಲಿ ಶೈಕ್ಷಣಿಕ ಮನೋವಿಜ್ಞಾನವನ್ನು ಅಗತ್ಯಕ್ಕೆ ತಕ್ಕಷ್ಟು ಕಲಿಸಿಯೇ ಇರುತ್ತಾರೆ. ಅದರ ಬಳಕೆಯಾದರೆ ಸಾಕು! ಶಿಕ್ಷಕರು ಶಾಲೆಯಲ್ಲಿ ಆಪ್ತ ಸಮಾಲೋಚಕರಾಗಿ ಕಾರ್ಯ ನಿರ್ವಹಿಸಬಹುದು. ಅಲ್ಲದೇ ಪೋಷಕರ ನಂತರ ನಿರಂತರ ಮಕ್ಕಳ ಸಂಪರ್ಕದಲ್ಲಿರುವ ಮತ್ತು ಮಕ್ಕಳ ಮೇಲೆ ಹೆಚ್ಚಿನ ಪ್ರಭಾವ ಬೀರುವ ಶಿಕ್ಷಕರು ಮಕ್ಕಳ ಸಮಸ್ಯೆಗಳನ್ನು ಸುಲಭವಾಗಿ ಗ್ರಹಿಸಬಲ್ಲರು.

ಒಂದು ವೇಳೆ ಯಾವುದೇ ಮಗು ಮಕ್ಕಳ ಮನೋವಿಜ್ಞಾನಿಯ ಬಳಿ ಸಮಸ್ಯೆಯ ಪರಿಹಾರಕ್ಕಾಗಿ ತೆರಳಿದಾಗ ಮಗುವಿನ ಶೈಕ್ಷಣಿಕ ಹಿನ್ನೆಲೆ ಮತ್ತು ಸಾಧನೆಯ ಬಗ್ಗೆ ಮನೋವಿಜ್ಞಾನಿಗೆ ಅಗತ್ಯವಿರುವ ಮಾಹಿತಿಗೆ ಶಿಕ್ಷಕರೆ ಮೂಲ ಆಗರವಾಗಿರುತ್ತಾರೆ. ಹಾಗಾಗಿ ಆಪ್ತ ಸಮಾಲೋಚನೆಯ ಕಾರ್ಯ ಶಿಕ್ಷಕರಿಗೆ ಹೆಚ್ಚುವರಿ ಕಾರ್ಯವಲ್ಲ. ಬದಲಾಗಿ ಆಪ್ತ ಸಮಾಲೋಚನೆಯು ಮಕ್ಕಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಕಲಿಕೆಯ ಪ್ರಕ್ರಿಯೆಯಲ್ಲಿ ತೊಡಗುವಂತೆ ಮಾಡುವ ಮೂಲಕ ಶಿಕ್ಷಕರು ಬೋಧನೆಗೆ ಹೆಚ್ಚು ಶ್ರಮ ಹಾಕುವುದನ್ನು ತಪ್ಪಿಸುತ್ತದೆ.

ಆಪ್ತ ಸಮಾಲೋಚನೆ ಪ್ರಯೋಜನಗಳು ಆಶ್ಚರ್ಯ ಹುಟ್ಟಿಸುವಂತಹವು. ಅವುಗಳಲ್ಲಿ ಮುಖ್ಯವಾದವುಗಳು: ವಿಭಿನ್ನ ಕೌಟುಂಬಿಕ ಮತ್ತು ಸಾಮಾಜಿಕ, ಆರ್ಥಿಕ ಹಿನ್ನೆಲೆಗಳ ಮಕ್ಕಳು ಶಾಲೆಗೆ ಬರುವುದರಿಂದ ಅವರ ಅವಶ್ಯಕತೆಯನ್ನು ಇದು ಪೂರೈಸುತ್ತದೆ. ಶಿಶು ಕೇಂದ್ರಿಕೃತ ಶಿಕ್ಷಣದ ಕಾರ್ಯಕ್ರಮ ಇದರಿಂದ ಅನುಷ್ಠಾನವಾಗುತ್ತದೆ. ಮಕ್ಕಳ ಸುಪ್ತ ಪ್ರತಿಭೆಯನ್ನು ಹೊರತರಲು ಸಾಧ್ಯವಾಗುತ್ತದೆ. ಯಾಂತ್ರಿಕ ಕಲಿಕೆಗೆ ಬದಲಾಗಿ ಅರ್ಥಪೂರ್ಣ ಕಲಿಕೆಗೆ ಉತ್ತೇಜನ ನೀಡುತ್ತದೆ.

ಮಕ್ಕಳಲ್ಲಿ ಸಾಧನೆಯ ಅಭಿಪ್ರೇರಣೆಯ (ಮೋಟಿವೇಷನ್‍) ಮಟ್ಟವನ್ನು ಹೆಚ್ಚಿಸುತ್ತದೆ. ಮಕ್ಕಳ ವರ್ತನಾ ಸಮಸ್ಯೆಗಳು, ಆತ್ಮಹತ್ಯೆ, ಬಾಲಾಪರಾಧ, ಉದ್ವಿಗ್ನಮಯ ಬಾಲ್ಯ, ಮಾಧ್ಯಮಗಳ ದುಷ್ಪರಿಣಾಮ,ಮಕ್ಕಳ ದುರ್ಬಳಕೆಗೊಳಗಾಗುವುದನ್ನು ತಪ್ಪಿಸುತ್ತದೆ. ವಿದ್ಯಾರ್ಥಿಯು ಜೀವನದ ಗುರಿಗಳನ್ನು ರೂಪಿಸಿಕೊಳ್ಳಲು, ಪರಿಸರಕ್ಕೆ ಉತ್ತಮ ರೀತಿಯಲ್ಲಿ ಹೊಂದಿಕೊಳ್ಳಲು, ಗುರಿಸಾಧನೆಗೆ ಎದುರಾಗುವ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸಹಾಯವಾಗುತ್ತದೆ. ಮನೋಬಲದ ಪ್ರಾಮುಖ್ಯವನ್ನು ತಿಳಿಸಲು, ಮಕ್ಕಳ ಮಾನಸಿಕ ಆರೋಗ್ಯವನ್ನು ಕಾಪಾಡಲು ಇದು ರಾಜಮಾರ್ಗ‍.

ಪ್ರಾಥಮಿಕ ಮತ್ತು ಪ್ರೌಢಶಾಲೆಯ ಮಕ್ಕಳಿಗೆ ಮುಖ್ಯವಾಗಿ ಶೈಕ್ಷಣಿಕ ಮತ್ತು ವೈಯಕ್ತಿಕ ಆಪ್ತ ಸಮಾಲೋಚನೆಯ ಅವಶ್ಯಕವಿರುತ್ತದೆ. ಅವೇನು? ಅವುಗಳಿಂದೇನು ಪ್ರಯೋಜನ ಎಂಬುದನ್ನು ನೋಡೋಣ:

ಶೈಕ್ಷಣಿಕ ಆಪ್ತ ಸಮಾಲೋಚನೆ: ವಿದ್ಯಾರ್ಥಿಯ ಕಡಿಮೆ ಸಾಧನೆ, ನಿಧಾನಗತಿಯ ಕಲಿಕೆ, ಕ್ರೀಡೆಗಳಲ್ಲಿ ಹಿಂದುಳಿದಿರುವುದು, ಪ್ರಥಮ ಶ್ರೇಣಿಯ ಆಕಾಂಕ್ಷೆ, ಪರೀಕ್ಷಾ ಆತಂಕ, ಸ್ಫರ್ಧೆಯಲ್ಲಿನ ಸೋಲು, ಪಾಲಕರ ನಿರೀಕ್ಷೆಗಳನ್ನು ಹುಸಿ ಮಾಡಿದ ದುಃಖ, ಹತಾಶೆ, ಶಾಲೆಗೆ ಅನಿಯಮಿತ ಹಾಜರಿ ಇತ್ಯಾದಿ ಸಮಸ್ಯೆಗಳನ್ನು ಆಪ್ತ ಸಮಾಲೋಚಕನ ಬಳಿ ತರುತ್ತಾರೆ. ಇಂತಹ ಸಂದರ್ಭದಲ್ಲಿ ಸಮಾಲೋಚಕರು ವಿದ್ಯಾರ್ಥಿ ಸ್ವಮೌಲ್ಯಮಾಪನ ಮಾಡಿಕೊಳ್ಳಲು, ಸಮಸ್ಯೆಯ ಸ್ವಯಂ ವಿಶ್ಲೇಷಣೆ ಮಾಡಲು ಪ್ರೋತ್ಸಾಹಿಸಿ ತಮ್ಮ ವೈಫಲ್ಯಗಳಿಗೆ ತಾವೇ ಜವಾಬ್ದಾರರು ಎಂಬುದನ್ನು ಮನವರಿಕೆ ಮಾಡಿಕೊಂಡು ಉತ್ತಮ ಅಭಿಪ್ರೇರಣೆಯ ಮೂಲಕ ಕಾರ್ಯೋನ್ಮುಖವಾಗುವಂತೆ ಮಾಡಬೇಕು. ವಿದ್ಯಾರ್ಥಿಗಳು ತಾವು ಕಲಿತ ತಾರ್ಕಿಕ ಜ್ಞಾನವನ್ನು ದೈನಂದಿನ ಜೀವನದಲ್ಲಿ ಅನ್ವಯಿಸುವುದನ್ನು ಕಲಿಸಬೇಕು. ತರ್ಕಬದ್ಧ ಆಲೋಚನೆಯ ಸಾಮರ್ಥ್ಯ, ಸ್ವಯಂ ಕಲ್ಪನೆ, ಯಾವ ಸ್ವಭಾವ ಹೊಂದಾಣಿಕೆಗೆ ಮತ್ತು ಕಾರ್ಯದಕ್ಷತೆಗೆ ಸಹಾಯ ಮಾಡುತ್ತದೆಯೋ ಅದನ್ನು ಬೆಳೆಸಿಕೊಳ್ಳಲು ನೆರವಾಗಬೇಕು. ವಿದ್ಯಾರ್ಥಿಯು ವಿಶೇಷ ಚಿಂತನೆಯನ್ನು ಹೊಂದುವ ಮನೆಗೆಲಸಗಳನ್ನು ಕೊಡಬೇಕು. ಮಕ್ಕಳ ವಿಮರ್ಶಾತ್ಮಕ ಚಿಂತನೆ, ಅಂತರಾವಲೋಕನ, ಪರಿಣಾಮಕಾರಿ ಸಂವಹನ, ವಿಭಿನ್ನ ಅನ್ವೇಷಣೆಗೆ ಮಾರ್ಗದರ್ಶನವನ್ನು ನೀಡಿ, ಧನಾತ್ಮಕ ಚಿಂತನೆ ಬೆಳೆಸುವ ಮೂಲಕ ಮನೋಬಲದ ಪ್ರಾಬಲ್ಯವನ್ನು ಹೆಚ್ಚಿಸಬೇಕು.

ವೈಯಕ್ತಿಕ ಆಪ್ತ ಸಮಾಲೋಚನೆ: ಈ ಬಗೆಯ ಸಮಾಲೋಚನೆ ತಾರುಣ್ಯಾವಧಿಯ ಮಕ್ಕಳಿಗೆ ಹೆಚ್ಚು ಅವಶ್ಯಕ. 9ರಿಂದ 16ನೇ ವಯಸ್ಸಿನ ಅವಧಿಯಲ್ಲಿ ಮಕ್ಕಳು ಪ್ರೌಢಜೀವನಕ್ಕೆ ಅವಶ್ಯಕವಾದ ನೈಪುಣ್ಯವನ್ನು ಸಂಪಾದಿಸಬೇಕಾಗುತ್ತದೆ. ಈ ವಯಸ್ಸಿನಲ್ಲಿ ತಮ್ಮ ನಿಲುವು ತಮ್ಮದೇ ಆದ ಗುರುತನ್ನು (ಐಡೆಂಟಿಟಿ) ಸಾಧಿಸಿಕೊಳ್ಳದಿದ್ದರೆ ಜೀವನವೆಲ್ಲಾ ಗೊಂದಲದಲ್ಲೇ ಕಳೆಯಬೇಕಾಗುತ್ತದೆ. ಆದ್ದರಿಂದ 9ರಿಂದ 16 – ಈ ವಯಸ್ಸಿನ ಮಕ್ಕಳಿಗೆ ಶಾಲೆಯಲ್ಲಿ ಆಪ್ತ ಸಮಾಲೋಚನೆ ಅತ್ಯಗತ್ಯ ಎನ್ನುವುದನ್ನು ಮನಗಾಣಬಹುದು. ತಾರುಣ್ಯದಲ್ಲಿ ಪ್ರತಿಭಟನೆಯ ಸ್ವಭಾವ ಹೆಚ್ಚಿರುವುದರಿಂದ ಮಾನವ ಕ್ಷೇಮಕ್ಕಾಗಿ ರೂಪುಗೊಂಡ ನಿಯಮಗಳನ್ನು ಮುರಿಯಬಾರದು ಎಂಬ ಅರಿವು ಮೂಡಿಸಬೇಕಾಗುತ್ತದೆ. ಸ್ನೇಹಮಯ ವಾತಾವರಣ ಸೃಷ್ಟಿಸಿ ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ವೃದ್ಧಿಸಿ ವಾಸ್ತವತೆಯನ್ನು ಎದುರಿಸಲು ಸಜ್ಜುಗೊಳಿಸುವುದು, ತಾರುಣ್ಯದ ಅವಧಿಯಲ್ಲಿ ತಮ್ಮ ರೂಪ, ಮನಸ್ಸನ್ನು ವಿಚಲಿತಗೊಳಿಸುವ ವಿಷಯ ಈ ಗುಂಗುಗಳಿಂದ ಹೊರಬಂದು ಭವಿಷ್ಯವನ್ನು ರೂಪಿಸಿಕೊಳ್ಳಲು ಪ್ರಯತ್ನಿಸಲು ಮಕ್ಕಳಿಗೆ ನೆರವಾಗಬೇಕಾದ ಅವಶ್ಯಕತೆಯಿರುತ್ತದೆ. ತಾರುಣ್ಯದಲ್ಲಿ ಕಂಡುಬರುವಷ್ಟು ಸಮಸ್ಯೆಗಳು ಇನ್ಯಾವ ವಯಸ್ಸಿನಲ್ಲೂ ಕಂಡುಬರುವುದಿಲ್ಲ. ಆದ್ದರಿಂದಲೇ ಮನೋವಿಜ್ಞಾನಿಗಳು ಇದನ್ನು ಸಂಕ್ಷೋಭೆಯ ಕಾಲ ಎಂದಿದ್ದಾರೆ. ಶಾರೀರಿಕ ಬದಲಾವಣೆಯ ಬಗ್ಗೆ ವೈಜ್ಞಾನಿಕ ತಿಳಿವಳಿಕೆಯನ್ನು ನೀಡಿ, ಸ್ವಯಂ ಪರಿಕಲ್ಪನೆ ರೂಪಿಸಿಕೊಳ್ಳಲು ನೆರವಾಗಿ. ಟೀಕೆಗಳನ್ನು ಎದುರಿಸುವ ಸಾಮರ್ಥ್ಯ, ಸ್ವಾವಲಂಬನೆ ಪರಿಣತಿಗಳನ್ನು, ಮೌಲ್ಯಗಳನ್ನು ಬೆಳೆಸಿಕೊಳ್ಳಲು ಉತ್ತಮ ಮಾರ್ಗದರ್ಶನ ನೀಡಬೇಕಾದಂತಹ ಆಪ್ತಸಮಾಲೋಚನೆಯಿದು.

ಶಿಕ್ಷಕರು ಹೊಂದಬೇಕಾದ ವಿಶೇಷ ಜ್ಞಾನ: ಕೌನ್ಸಲಿಂಗ್ ಅಥವಾ ಆಪ್ತಸಲಹೆ ನೀಡುವ ಶಿಕ್ಷಕರು ಇದಕ್ಕೆ ಸಂಬಂಧಿಸಿದಂತೆ ಸ್ವಲ್ಪಮಟ್ಟಿಗೆ ವಿಶೇಷ ಜ್ಞಾನವನ್ನು ಹೊಂದಿದ್ದರೆ ಮಾತ್ರ ವಿದ್ಯಾರ್ಥಿಯ ಸಮಸ್ಯೆಯನ್ನು ಅರ್ಥಮಾಡಿಕೊಳ್ಳಬಲ್ಲರು ಹಾಗೂ ವಿದ್ಯಾರ್ಥಿಯೇ ತನ್ನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನೆರವಾಗಬಲ್ಲರು. ಆದರೆ ಶಿಕ್ಷಕರಿಗೆ ಇದೇನೂ ಕಷ್ಟವಲ್ಲ.

ಆಪ್ತಸಲಹೆಗೆ ತೊಡಗುವ ಶಿಕ್ಷಕ :

*ಉತ್ತಮ ಅವಲೋಕನಕಾರನಾಗಿರಬೇಕು.
* ಮಕ್ಕಳ ಬೆಳವಣಿಗೆಯ ವಿವಿಧ ಹಂತಗಳ ಲಕ್ಷಣಗಳ ಬಗ್ಗೆ ಅರಿವು ಹೊಂದಿರಬೇಕು.
* ಮಗುವಿನ ವಿಕಾಸದ ಮೇಲೆ ಅನುವಂಶೀಯತೆ ಮತ್ತು ಪರಿಸರದ ಪ್ರಭಾವಗಳನ್ನು ತಿಳಿದಿರಬೇಕು.
* ವಿವಿಧ ವಯೋಮಾನದ ಮಕ್ಕಳಲ್ಲಿ ಕಂಡುಬರುವ ಸಾಮಾನ್ಯ ಶೈಕ್ಷಣಿಕ ಸಮಸ್ಯೆಗಳ ಬಗ್ಗೆ ಅರಿವಿರಬೇಕು.
* ವೈಯಕ್ತಿಕ ವಿಭಿನ್ನತೆಗಳನ್ನು ಅರ್ಥಮಾಡಿಕೊಂಡಿರಬೇಕು.
* ವಿದ್ಯಾರ್ಥಿಗಳ ವಿವಿಧ ಆಸಕ್ತಿಗಳು, ಮನೋಭಾವ, ಸಾಮಾರ್ಥ್ಯ ಹಾಗೂ ಸಮಸ್ಯೆಗಳ ಆಳವನ್ನು ಅರಿಯಲು ತಾನೇ ಸ್ವತಃ ಪ್ರಶ್ನಾವಳಿಯನ್ನು ತಯಾರು ಮಾಡಿಕೊಳ್ಳಬೇಕು.
*ವಿದ್ಯಾರ್ಥಿಗಳ ದೈಹಿಕ, ಮಾನಸಿಕ, ಸಂವೇಗಾತ್ಮಕ, ಸಾಮಾಜಿಕ ಹಾಗೂ ನೈತಿಕ ಬೆಳವಣಿಗೆಯ ಬಗ್ಗೆ ಜ್ಞಾನ ಹೊಂದಿರಬೇಕು.
*ಎಲ್ಲ ಮಕ್ಕಳು ಒಂದೇ ಪ್ರಮಾಣದ ಸಾಧನೆಯ ಅಭಿಪ್ರೇರಣೆಯನ್ನು ಹೊಂದಿರುವುದಿಲ್ಲವೆಂದು ತಿಳಿದಿರಬೇಕು.
* ಯಾವುದೇ ವಸ್ತು ವಿಷಯದ ಬಗ್ಗೆ ಪೂರ್ವಗ್ರಹ ಪೀಡಿತ, ಪಕ್ಷಾಪಾತಿಯಾಗಿರಬಾರದು.
*ಆಪ್ತ ಸಮಾಲೋಚನೆಯು ಮಾರ್ಗದರ್ಶನದಂತಿರಬೇಕೆ ಹೊರತು ನಿರ್ದೇಶನವಾಗಬಾರದು. ಅಂದರೆ ಶಿಕ್ಷಕ ತನ್ನ ಅಭಿಪ್ರಾಯ ಧೋರಣೆ, ದೃಷ್ಟಿಕೋನಗಳನ್ನು ವಿದ್ಯಾರ್ಥಿಗಳ ಮೇಲೆ ಹೇರದೆ ವಿದ್ಯಾರ್ಥಿ ತನ್ನದೇ ಆದ ಅಭಿಪ್ರಾಯ ದೃಷ್ಟಿಕೋನಗಳನ್ನು ಬೆಳೆಸಿಕೊಳ್ಳುವ ಮೂಲಕ ಸಮಸ್ಯೆ ಪರಿಹಾರದಲ್ಲಿ ತೊಡಗುವಂತೆ ಮಾಡಬೇಕು.
* ಸಹಜ ಪ್ರವೃತ್ತಿಗಳನ್ನು ಅರ್ಥಮಾಡಿಕೊಂಡಿರಬೇಕು ಹಾಗೂ ವಿದ್ಯಾರ್ಥಿಯು ಸಮಾಜ ಸಮ್ಮತ ಮಾರ್ಗದಲ್ಲಿ ಸಹಜ ಪ್ರವೃತ್ತಿ ವ್ಯಕ್ತಪಡಿಸಬೇಕೆಂಬುದನ್ನು ತಿಳಿಸಿಕೊಡಬೇಕು.
* ವೈಯುಕ್ತಿಕ ಆಪ್ತ ಸಮಾಚನೆಗೆ ಸಂಬಂಧಿಸಿದಂತೆ ಶಿಕ್ಷಕ ಗೌಪ್ಯತೆಯನ್ನು ಕಾಯ್ದುಕೊಳ್ಳುವನೆಂಬ ಭರವಸೆಯನ್ನು ವಿದ್ಯಾರ್ಥಿಯಲ್ಲಿ ಮೂಡಿಸಬೇಕು.

ಆಪ್ತ ಸಮಾಲೋಚನೆಯು ಪೂರ್ವಸಿದ್ಧತೆಯಿಂದ ಕೂಡಿದ್ದು ಹಂತ ಹಂತವಾಗಿ ಸಾಗುವಂತೆ ಯೋಜಿಸಿಕೊಂಡಿರಬೇಕು. ಆಪ್ತ ಸಮಾಲೋಚನೆಯು ಸರಳವೂ, ನಿರಂತರ ಪ್ರಕ್ರಿಯೆಯೂ ಆಗಿದ್ದು ಮಕ್ಕಳ ಬೆಳವಣಿಗೆಯ ಮಟ್ಟವನ್ನು ಅನುಸರಣೆ (ಫಾಲೋ–ಅಪ್) ಮಾಡುತ್ತಿರಬೇಕು. ಆಪ್ತ ಸಮಾಲೋಚಕನಾಗಿ ಕಾರ್ಯ ನಿರ್ವಹಿಸುವ ಶಿಕ್ಷಕ ಶಾಲೆಯ ಮುಖ್ಯ ಶಿಕ್ಷಕರಿಂದ, ಇತರೆ ಸಿಬ್ಬಂದಿವರ್ಗದವರಿಂದ ಹಾಗೂ ಪೋಷಕರಿಂದ ಬೆಂಬಲವನ್ನು ಪಡೆದುಕೊಳ್ಳುವುದೊಳಿತು. ಪೋಷಕರ ಸಭೆಯಲ್ಲಿ ವಿದ್ಯಾರ್ಥಿಯ ಕೇವಲ ಶೈಕ್ಷಣಿಕೆ ಪ್ರಗತಿಯನ್ನಲ್ಲದೇ ಮಾನಸಿಕ ಆರೋಗ್ಯದ ಬಗ್ಗೆಯೂ ಚರ್ಚಿಸಿ. ಬದುಕು ವಿಸ್ತಾರವಾದುದಾಗಲಿ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT