ಸೋಮವಾರ, ಅಕ್ಟೋಬರ್ 14, 2019
28 °C
ಸಂಸ್ಕೃತಿ ಪರಿಚಯಕ್ಕೆ ಜೆ.ವಿ.ವಿ.ಪಿ. ಶಾಲೆಯ ಅಪೂರ್ವ ಪ್ರಯತ್ನ

ಶಾಲೆಯಲ್ಲಿ ಗೊಂಬೆಗಳ ಅದ್ಭುತ ಲೋಕ

Published:
Updated:
Prajavani

ನವರಾತ್ರಿ ಸಮಯದಲ್ಲಿ ಮಕ್ಕಳಿಗೆ ಗೊಂಬೆಗಳ ಮೂಲಕ ಭಾರತೀಯ ಸಂಸ್ಕೃತಿ, ರಾಮಾಯಣ, ಮಹಾಭಾರತದ ಮಹಾಕಾವ್ಯಗಳನ್ನು ಪರಿಚಯಿಸುವ ವಿನೂತನ ಪ್ರಯತ್ನಕ್ಕೆ ಬೆಂಗಳೂರಿನ ಪದ್ಮನಾಭನಗರದ ಜ್ಞಾನ ವಿಜ್ಞಾನ ವಿದ್ಯಾಪೀಠ (ಜೆ.ವಿ.ವಿ.ಪಿ) ಮುಂದಾಗಿದೆ.

ನವರಾತ್ರಿಯ ಒಂಬತ್ತು ದಿನಗಳಲ್ಲೂ ಶಾಲೆಯಲ್ಲಿ ’ದಸರಾ ಗೊಂಬೆ ಪ್ರದರ್ಶನ’ ಏರ್ಪಡಿಸುತ್ತಿದೆ. ಹದಿಮೂರು ವರ್ಷಗಳಿಂದ (2006ರಿಂದ) ಈ ಗೊಂಬೆ ಪ್ರದರ್ಶನ ನಿರಂತರವಾಗಿ ನಡೆಯುತ್ತಿದೆ. 

2006ರಲ್ಲಿ ಆರಂಭವಾದಾಗ 20 ರಿಂದ 30 ಗೊಂಬೆಗಳಿದ್ದವು. ಈ ವರ್ಷ ಅವುಗಳ ಸಂಖ್ಯೆ ಮೂರು ಸಾವಿರಕ್ಕೆ ತಲುಪಿದೆ. ಅದಕ್ಕೆ ಕಾರಣ, ಪ್ರಾಚಾರ್ಯೆ ಲಕ್ಷ್ಮಿ ಅವರ ಆಸಕ್ತಿ. ಪ್ರತಿ ವರ್ಷ ದೇಶದ ಬೇರೆ ಬೇರೆ ರಾಜ್ಯಗಳಿಂದ ಅಪರೂಪದ ಗೊಂಬೆಗಳನ್ನು ಸಂಗ್ರಹಿಸಿ ತಂದಿದ್ದಾರೆ.

ಎಂತೆಂಥ ಗೊಂಬೆಗಳಿವೆ ?

ಈ ಶಾಲೆಯ ಸಂಗ್ರಹದಲ್ಲಿ ಸಂಪೂರ್ಣ ರಾಮಾಯಣ, ಮಹಾಭಾರತದ ಪ್ರಮುಖ ಪ್ರಸಂಗಗಳನ್ನು ವಿವರಿಸುವ ಗೊಂಬೆಗಳಿವೆ. ಭಾಗವತದ ಕತೆಗಳನ್ನು ಹೇಳುವ ಗೊಂಬೆಗಳೂ ಇವೆ. ಜತೆಗೆ, ಬೇಡರ ಕಣ್ಣಪ್ಪನ ಕತೆ, ಗರುಡೋತ್ಸವ, ದಶಾವತಾರ, ಪುರಿ ಜಗನ್ನಾಥನ ರಥೋತ್ಸವ.. ಹೀಗೆ ಹಲವು ಘಟನಾವಳಿಗಳನ್ನು ವಿವರಿಸುವ ’ಗೊಂಬೆ ಸೆಟ್‌ಗಳಿವೆ’. 

ಗೊಂಬೆ ಪ್ರದರ್ಶನ ಕೇವಲ ಮಹಾಕಾವ್ಯ, ಕಲೆ–ಸಂಸ್ಕೃತಿಗಷ್ಟೇ ಸೀಮಿತವಾಗಿಲ್ಲ. ವನ್ಯಜೀವಿ ಸಂರಕ್ಷಣೆ ಮತ್ತು ಅರಣ್ಯಕ್ಕೆ ಸಂಬಂಧಿಸಿದ ಪರಿಸರ ಕಾಳಜಿಯ ವಿಚಾರಗಳತ್ತಲೂ ವಿಸ್ತರಿಸಿಕೊಂಡಿದೆ. 

ಈ ವರ್ಷದ ವಿಶೇಷ ಪ್ರದರ್ಶನ

ಶಾಲೆಯ ಎರಡು ವಿಶಾಲ ಕೊಠಡಿಗಳಲ್ಲಿ ಮೂರು ಸಾವಿರಕ್ಕೂ ಹೆಚ್ಚು ಗೊಂಬೆಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಈ ಬಾರಿ ಜೇಡಿಮಣ್ಣು, ಗಾಜು, ಪೇಪರ್ ಮ್ಯಾಶ್ ಮತ್ತು ಮರದಿಂದ ಮಾಡಿದ ಗೊಂಬೆಗಳಿವೆ. 300ಕ್ಕೂ ಹೆಚ್ಚು ಗೊಂಬೆಗಳ ಮೈಸೂರು ದಸರೆಯ ಜಂಬೂ ಸವಾರಿ ಈ ವರ್ಷದ ಪ್ರಮುಖ ಆಕರ್ಷಣೆ. 

ಈ ಗೊಂಬೆ ಪ್ರದರ್ಶನ ಕೇವಲ ಶಾಲಾ ಮಕ್ಕಳಿಗಷ್ಟೇ ಅಲ್ಲ, ಸಾರ್ವಜನಿಕರ ವೀಕ್ಷಣೆಗೂ ಅವಕಾಶವಿದೆ. ಕಳೆದ ವರ್ಷ ಒಂದು ಸಾವಿರಕ್ಕೂ ಹೆಚ್ಚು ಜನ  ಪ್ರದರ್ಶನ ವೀಕ್ಷಿಸಿದ್ದರು. 

Post Comments (+)