ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಸರಾ ಗೊಂಬೆಗಳು ಕತೆ ಹೇಳುತ್ತವೆ

Last Updated 4 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

ಗೊಂಬೆಗಳು ಮನುಕುಲದ ಆಲ್ಟರ್ ಇಗೊ- ಪ್ರತ್ಯಾತ್ಮವೆಂದರೂ ತಪ್ಪಾಗದು. ಗೊಂಬೆಯ ತಯಾರಿಕೆ, ಆರಾಧನೆ, ಗೊಂಬೆಯೊಂದಿಗೆ ಬೆಸೆವ ಬದುಕು ಬಹುಶಃ ಪ್ರಪಂಚದ ಯಾವುದೇ ಭೌಗೋಳಿಕ ಪ್ರದೇಶವನ್ನು ಬಿಡದೆ ವ್ಯಾಪಿಸಿಕೊಂಡಿದೆ.

ಥಾಯ್ಲೆಂಡ್‌, ನೇಪಾಳ, ಮ್ಯಾನ್ಮಾರ್, ಚೀನಾ, ಅಮೆರಿಕ, ರಷ್ಯ ತಮ್ಮದೇ ಆದ ವಿಶಿಷ್ಟ ಶೈಲಿಯ ಗೊಂಬೆಗಳಿಗೆ ಹೆಸರುವಾಸಿ. ನಮ್ಮ ಚನ್ನಪಟ್ಟಣ, ಕಿನ್ನಾಳ, ಮೈಸೂರು, ಸಾಗರ ಸೇರಿದಂತೆ ಉತ್ತರ ಪ್ರದೇಶದ ವಾರಣಸಿ, ಆಂಧ್ರದ ಕೊಂಡಪಲ್ಲಿ, ಒಡಿಶಾದ ಪಿಪ್ಲಿ, ತಮಿಳುನಾಡಿನ ಕಾಂಚಿಪುರದ ಗೊಂಬೆಗಳ ಸೊಗಸೇ ಸೊಗಸು.

ನವರಾತ್ರಿಯ ಸಮಯದಲ್ಲಿ ಗೊಂಬೆಗಳ ಪ್ರದರ್ಶನ ಸಂಪ್ರದಾಯ ಶತಮಾನಗಳಿಂದ ಬೆಳೆದು ಬಂದಿದೆ. ನವರಾತ್ರಿಯು ಉತ್ತರ ಭಾರತದಲ್ಲಿ ರಾಮಲೀಲಾ, ಬಂಗಾಳದಲ್ಲಿ ದುರ್ಗಾಪೂಜಾ ಎಂಬ ಹೆಸರುಗಳಲ್ಲಿ ಪ್ರಸಿದ್ಧ. ತಮಿಳುನಾಡು, ಆಂಧ್ರ ಪ್ರದೇಶದಲ್ಲೂ ನವರಾತ್ರಿಯಲ್ಲಿ ಗೊಂಬೆಗಳ ಅಲಂಕಾರ ಮಾಡಿ ಪ್ರದರ್ಶನಕ್ಕಿಡುವ ಸಂಪ್ರದಾಯವಿದೆ. ಕರ್ನಾಟಕದಲ್ಲಿ ಅದರಲ್ಲೂ ಹಳೆಯ ಮೈಸೂರು ಭಾಗಗಳಲ್ಲಿ ನವರಾತ್ರಿಯ ಗೊಂಬೆ ಹಬ್ಬ ತುಂಬಾ ಖ್ಯಾತಿ ಪಡೆದಿದೆ. ತಲೆ, ತಲಾಂತರಗಳಿಂದ ಇದೊಂದು ಸಂಪ್ರದಾಯವಾಗಿ ಬೆಳೆದು ಬಂದಿದೆ.

ಪಟ್ಟದ ಗೊಂಬೆಗಳ ಪ್ರಾಮುಖ್ಯತೆ

ಗೊಂಬೆಗಳ ಪ್ರದರ್ಶನಕ್ಕೆ ಮರದಿಂದ ನಿರ್ಮಿಸಿದ ಒಂಭತ್ತು ಮೆಟ್ಟಿಲು ಜಗಲಿ ನಿರ್ಮಿಸುತ್ತಾರೆ. ಮೊದಲ ಮೆಟ್ಟಿಲಲ್ಲಿ ಕಳಶವಿರಿಸಿ, ಕುಲದೈವವನ್ನು ಆವಾಹಿಸಲಾಗುತ್ತದೆ. ನಂತರದ ಮೆಟ್ಟಿಲಿನಲ್ಲಿ ರಾಜ-ರಾಣಿಯರ ಪ್ರತಿರೂಪವಾಗಿ ‘ಪಟ್ಟದ ಬೊಂಬೆ’ ಗಳನ್ನು ಇರಿಸಲಾಗುತ್ತದೆ. ಮದುವೆಯ ಸಂದರ್ಭದಲ್ಲಿ ಪಟ್ಟದ ಗೊಂಬೆ ನೀಡುವ ಪದ್ಧತಿ ರೂಢಿಯಲ್ಲಿದೆ.

ಇನ್ನುಳಿದ ಮೆಟ್ಟಿಲುಗಳಲ್ಲಿ ವೈವಿಧ್ಯಮಯ ಪ್ರಜೆಗಳ ರೂಪದ ಬೊಂಬೆಗಳಿರುತ್ತವೆ. ಇದರಲ್ಲಿ ಸೆಟ್ಟಿಯ ಗೊಂಬೆಯಂತೂ ಇರಲೇಬೇಕು. ಅದೇ ರೀತಿ ಚಿಕ್ಕ ಉದ್ಯಾನ ಕೂಡ. ಕಾಲ ಬದಲಾದಂತೆ ಈಗ ಆಧುನಿಕ ರೀತಿಯಲ್ಲಿ ಥೀಮ್ಯಾಟಿಕ್ ಗೊಂಬೆಯಿರಿಸುವುದು ರೂಢಿಯಾಗಿದೆ. ವರ್ಷಾನುವರ್ಷ ಈ ಸಂಪ್ರದಾಯ ಪಾಲಿಸಿಕೊಂಡು ಬಂದ ನೂರಾರು ಮನೆಗಳಿವೆ ಎನ್ನುತ್ತಾರೆರಮೇಶ ಕೆಂಗೇರಿ.

ಗೊಂಬೆ ಬಾಗಿನ: ಹಾಗಂದರೇನು?

ಹಳೆ ಮೈಸೂರು ಪ್ರಾಂತ್ಯದಲ್ಲಿ ಗೊಂಬೆ ಬಾಗಿನ ಸಂಪ್ರದಾಯ ಚಾಲ್ತಿಯಲ್ಲಿದೆ. ನವರಾತ್ರಿಯ ಒಂಬತ್ತು ದಿನಗಳಲ್ಲೂ ಸಣ್ಣ ಮಕ್ಕಳೆಲ್ಲಾ ಗುಂಪುಗೂಡಿ ಮನೆ, ಮನೆಗಳಿಗೆ ತೆರಳಿ ‘ನಿಮ್ಮ ಮನೆಯಲ್ಲಿ ಗೊಂಬೆ ಇಟ್ಟಿದ್ದೀರಾ’ ಎಂದು ಕೇಳಿ ಒಳನುಗ್ಗುತ್ತಾರೆ. ಮನೆಯವರಿಂದ ಗೊಂಬೆ ಬಾಗಿನ ಪಡೆದು ಮರಳುತ್ತಾರೆ. ಬಾಗಿನವಾಗಿ ನೀಡುವ ಕೋಡುಬಳೆ,ಚಕ್ಕುಲಿ,ನಿಪ್ಪಟ್ಟು ಮತ್ತು ಸಿಹಿ ತಿನಿಸುಗಳ ಸವಿ ಸಯುವುದೇ ಒಂದು ಸೊಬಗು.

ಗೊಂಬೆ ನೋಡಲು ಬರುವ ಮಕ್ಕಳಿಗೆ ಮನೆಯವರು ಪ್ರೀತಿಯಿಂದ ಸಿಹಿ ಮತ್ತು ಕರಿದ ಕುರುಕಲು ತಿಂಡಿ,ತಿನಿಸುಗಳ ಜತೆಗೆ ಕಾಣಿಕೆ ನೀಡುವುದು ವಾಡಿಕೆ. ನವರಾತ್ರಿ ಬಂತೆಂದರೆ ಮನೆ,ಮನೆಗಳಲ್ಲಿ ‘ಗೊಂಬೆ ಬಾಗಿನ’ ಸಿದ್ಧಪಡಿಸುವುದೇ ಮಾಡುವುದೇ ಸಂಭ್ರಮ.

ಊರ ವಾದ್ಯಗಾರರು ಪ್ರತಿ ಸಂಜೆ ಬಂದು ಗೊಂಬೆಗಳ ಮುಂದೆ ವಾದ್ಯ ಊದಿ, ಡೋಲು ಬಾರಿಸಿ, ಮನೆಯವರು ನೀಡುವ ದವಸವನ್ನು ಚೀಲಕ್ಕೆ ತುಂಬಿಕೊಂಡು ಹೋಗುತ್ತಾರೆ.

50 ವರುಷ: 50 ಸಾವಿರ ಗೊಂಬೆ

ಬಸವನಗುಡಿಗೆ ಹೊಂದಿಕೊಂಡಿರುವ ತ್ಯಾಗರಾಜನಗರದ ಭಾಗ್ಯಲಕ್ಷ್ಮಿ ಅವರು ಸುಮಾರು 50 ವರ್ಷಗಳಿಂದ ಗೊಂಬೆ ಇಡುತ್ತಿದ್ದಾರೆ. ಪ್ರತಿವರ್ಷ ವಿವಿಧ ಪರಿಕಲ್ಪನೆಗಳನ್ನು ಸಾಕಾರಗೊಳಿಸುವ ಅವರ ಪ್ರಯತ್ನಕ್ಕೆ ಪ್ರಶಂಸೆ, ಪ್ರಶಸ್ತಿ ಮತ್ತು ಬಹುಮಾನಗಳು ಸಂದಿವೆ.ಈ ಬಾರಿ ಅವರ ಮನೆಯಲ್ಲಿ ಗ್ರಾಮೀಣ ಸೊಗಡು ಪಸರಿಸಿದೆ. ತ್ರಿಕೂಟಾಚಲ ಬೆಟ್ಟದ ಶ್ರೇಣಿ, ಹಿಮಾಲಯ,ವಿಧಾನಸೌಧ, ಕೃಷ್ಣನ ರಾಸಲೀಲೆಯ ಗೊಂಬೆಗಳ ಜೋಡಣೆ ಸೊಗಸು ಕಣ್ತುಂಬಿಕೊಳ್ಳಬಹುದು.

ಸರಿಸುಮಾರು 50 ಸಾವಿರಕ್ಕೂ ಹೆಚ್ಚು ಗೊಂಬೆಗಳ ಸಂಗ್ರಹವಿರುವ ಅವರ ಮನೆಯಲ್ಲಿರುವ ಸಾವಿರಾರು ಬಗೆಯ ಗೊಂಬೆಗಳು ಮನತಣಿಸುತ್ತವೆ. ವಿದೇಶಗಳಿಂದ ಗೊಂಬೆಗಳನ್ನು ಸಂಗ್ರಹಿಸಿ ತಂದಿರುವ ಅವರು ಬಹುಪಾಲು ಸಮಯವನ್ನು ಅವುಗಳ ಜೋಡಣೆ, ಒಪ್ಪ ಓರಣದಲ್ಲಿ ಕಳೆಯುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT