ಅಚ್ಚರಿಯ ಕೋಟೆ ದೌಲತಾಬಾದ್‌

7

ಅಚ್ಚರಿಯ ಕೋಟೆ ದೌಲತಾಬಾದ್‌

Published:
Updated:
Prajavani

‘ಚಿ ತ್ರದುರ್ಗದ ಏಳು ಸುತ್ತಿನ ಕೋಟೆ ಒಂದು ತೆರನಾದ ಅದ್ಭುತವಾದರೆ, ಮಹಾರಾಷ್ಟ್ರದ ಔರಂಗಾಬಾದ್ ಬಳಿ ಇರುವ ದೌಲತಾಬಾದ್ ಕೋಟೆ ಅದೊಂದು ವಿಸ್ಮಯ'.

ವರ್ಷಗಳ ಹಿಂದೆ ಚಿತ್ರದುರ್ಗದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಗೆಳೆಯ ವೆಂಕಟೇಶ ಹೀಗೆ ಹೇಳಿದ್ದ. ಕಾರ್ಯ ಒತ್ತಡದ ಮಧ್ಯೆ ಅಷ್ಟು ದೂರ ಎಲ್ಲಿ ಹೋಗಲು ಆದೀತೆಂದು ಆಸೆ ಕೈಬಿಟ್ಟಿದ್ದೆ. ಆದರೆ, ಇತ್ತೀಚೆಗೆ ನಾಸಿಕ್, ಅಜಂತಾ, ಎಲ್ಲೋರಾ ಪ್ರವಾಸ ಕೈಗೊಂಡಾಗ, ಕೋಟೆ ನೋಡಿಯೇ ಬಿಡೋಣ ಎಂದು ತೀರ್ಮಾನಿಸಿದೆ. ಕುಟುಂಬ ಸದಸ್ಯರೂ ಜತೆಯಾದರು.

ರಾಷ್ಟ್ರೀಯ ಹೆದ್ದಾರಿಯಿಂದಲೇ ಬೃಹತ್ ಕೋಟೆಯತ್ತ ಕೈ ಮಾಡಿ ತೋರಿಸಿದ ಕಾರು ಚಾಲಕ, ‘ಬೆಟ್ಟದ ಮೇಲೆ ಕೋಟೆ ಇದೆ. ಎತ್ತರದ ಮೆಟ್ಟಿಲು, ಏರು ರಸ್ತೆಗಳಿವೆ. ಆಯಾಸವಾಗುತ್ತೆ. ಒಂದಿಷ್ಟು ಬಿಸ್ಕತ್ ಪಾಕೆಟ್, ನೀರಿನ ಬಾಟ್ಲಿ ಒಯ್ಯಿರಿ’ ಎಂದು ಮುನ್ಸೂಚನೆ ನೀಡಿದ. ಆತ ಹೇಳಿದ್ದನ್ನು ಪಾಲಿಸುತ್ತ, ಕೋಟೆಯತ್ತ ಹೆಜ್ಜೆ ಹಾಕಿದೆವು. ಪ್ರವೇಶದ್ವಾರದ ದೈತ್ಯ, ವಿಶಾಲ ಬಾಗಿಲು ನಮ್ಮ ಎತ್ತರ ಪದೇ ಪದೇ ನೋಡಿಕೊಳ್ಳುವಂತೆ ಮಾಡಿದವು. ನಾವೇ ಇಷ್ಟು ಕಿರಿದಾಗಿ ಕಂಡರೆ, ಇರುವೆಗಳ ಪಾಡು ಎಂಥದ್ದು ಎಂದು ಒಂದು ಕ್ಷಣ ಮೈ ಜುಂ ಅನ್ನಿಸಿತು.

ಬೆಟ್ಟವನ್ನು ಆದಷ್ಟು ಬೇಗಬೇಗನೇ ಏರಿ ಕೋಟೆಯ ತುದಿ ತಲುಪುವ ಆತ್ಮವಿಶ್ವಾಸದಿಂದಲೇ ಹೊರಟೆವು. ಆದರೆ, ನಮ್ಮ ಆಸೆ ಸುಲಭವಾಗಿ ಈಡೇರಲಿಲ್ಲ. ಸಮೀಪದಲ್ಲೇ ಕೋಟೆ ಇದ್ದಂತೆ ಕಂಡಿತು. ಆದರೆ ಏರು ರಸ್ತೆ, ಮೆಟ್ಟಿಲು, ಕಿರುದಾರಿ, ಕಂದಕ, ಕತ್ತಲ ಹಾದಿ, ತಿರುವುಗಳನ್ನು ದಾಟುತ್ತ ಸಾಗಿದಂತೆ ಅದು ದೂರದೂರಕ್ಕೆ ಹೋದಂತೆ ಭಾಸವಾಯಿತು. ವಿಶಾಲ ದಾರಿ ಮುಗೀತು ಎನ್ನುವಷ್ಟರಲ್ಲಿ ಕಿರು ದಾರಿ, ಅದು ಕೊನೆಗೊಳ್ಳುತ್ತಿದ್ದಂತೆಯೇ ಎತ್ತರದ ಮೆಟ್ಟಿಲು. ಒಂದು ಬದಿಯಲ್ಲಿ ಕತ್ತಲು ಆವರಣ. ಇನ್ನೇನೂ ಸ್ಫೋಟ ಮಾಡಿಯೇ ಬಿಡುತ್ತೇವೆ ಎಂಬಂತೆ ಸಿದ್ಧಗೊಂಡಿರುವ ತೋಪುಗಳು. ಅದರ ಪಯಣವೇ ರೋಚಕ.

ವಿದೇಶಿಯರಿಗೆ ರಸವತ್ತಾಗಿ ವಿವರಿಸುತ್ತಿದ್ದ ಅಲ್ಲಿನ ಗೈಡ್‌ಗಳು, ‘ಇಲ್ಲಿಯ ಒಂದೊಂದು ಕಲ್ಲು ಒಂದೊಂದು ಕಥೆ ಹೇಳುತ್ತವೆ. 12ನೇ ಶತಮಾನದ ಈ ಕೋಟೆಯು ತನ್ನೊಳಗೆ ಹಲವು ರಹಸ್ಯಗಳನ್ನು ಅಡಗಿಸಿಕೊಂಡಿದೆ. ಇಲ್ಲಿ ಆಳ್ವಿಕೆ ನಡೆಸಿದ ರಾಜವಂಶಸ್ಥರು ಕೋಟೆಯ ವ್ಯಾಪ್ತಿಯನ್ನು ಹಂತಹಂತವಾಗಿ ವಿಸ್ತರಿಸಿದರು. ಶತ್ರುಗಳು ಸುಲಭವಾಗಿ ದಾಳಿ ಮಾಡದಂತೆ ಇನ್ನಷ್ಟು ಜಟಿಲ, ನಿಗೂಢಗೊಳಿಸಿದರು. ಆಗ ಅವರು ರೂಪಿಸಿದ ತಂತ್ರಗಾರಿಕೆ ನೆರವಿನಿಂದಲೇ 800 ವರ್ಷಗಳ ನಂತರವೂ ಕೋಟೆ ಇಷ್ಟು ಗಟ್ಟಿಯಾಗಿ ಉಳಿದಿದೆ’ ಎಂದು ವರ್ಣಿಸುತ್ತ ಬೆರಗುಗೊಳಿಸಿದರು.

ಮಾತುಗಳನ್ನು ಆಲಿಸುತ್ತ ಹೆಜ್ಜೆ ಹಾಕಿದ ನಮಗೆ ಕಲ್ಲುಗಳೇ ಕಥೆಗಳು ಹೇಳತೊಡಗಿದವು. ಅಲ್ಲಿನ ಫಲಕಗಳು ಕೊಂಚ ಮಾಹಿತಿ ನೀಡಿದವು. ದೌಲತಾಬಾದ್ ಎಂಬ ಹೆಸರಿಗೂ ಮುನ್ನ ಇದು ದೇವಗಿರಿಯಾಗಿತ್ತು. 11ನೇ ಶತಮಾನದಲ್ಲಿ ಕಲ್ಯಾಣದ ಚಾಲುಕ್ಯರು, ಹೊಯ್ಸಳರು ಮೇಲೆ ವಿಜಯ ಸಾಧಿಸಿದ ಯಾದವರ ರಾಜ ಭಿಲ್ಲಮ-5 ಇದನ್ನು ಸ್ಥಾಪಿಸಿದ. ಅದೇ ವಂಶದ ರಾಮಚಂದ್ರದೇವನನ್ನು 1296ರಲ್ಲಿ ಮಣಿಸಿದ ಅಲ್ಲಾಹುದ್ದೀನ್ ಖಿಲ್ಜಿ ಕೋಟೆಯನ್ನು ತನ್ನ ವಶಕ್ಕೆ ತೆಗೆದುಕೊಂಡ.

ನಂತರದ ದಿನಗಳಲ್ಲಿ ಹಲವು ದಾಳಿಗಳು ನಡೆದವು. ಖಿಲ್ಜಿ ಸಂಸ್ಥಾನದ ಮೇಲೆ ದಾಳಿ ನಡೆಸಿದ ಮಹಮ್ಮದ್-ಬಿನ್-ತುಘಲಖ್ ದೇವಗಿರಿಯನ್ನು ಸ್ವಾಧೀನಪಡಿಸಿಕೊಂಡ. ಭದ್ರತೆ, ಸೌಕರ್ಯ ಮತ್ತು ಇನ್ನಿತರ ಕಾರಣಗಳಿಂದ 1328ರಲ್ಲಿ ದೆಹಲಿಯಲ್ಲಿದ್ದ ರಾಜಧಾನಿಯನ್ನು ದೇವಗಿರಿಗೆ ವರ್ಗಾಯಿಸಿದ. ದೌಲತಾಬಾದ್ (ಸಂಪತ್ತಿನ ಗಣಿ) ಎಂಬ ಹೆಸರನ್ನೂ ಇಟ್ಟ. ಕ್ರಮೇಣ ಬೇರೆ ಬೇರೆ ಕಾರಣಗಳಿಗಾಗಿ ರಾಜಧಾನಿಯು ಪುನಃ ದೆಹಲಿಗೆ ವರ್ಗವಾಯಿತು. 16ನೇ ಶತಮಾನದಲ್ಲಿ ಅಹಮದ್‌ ನಗರದ  ನಿಜಾಮಶಾಹಿಗಳು ದೌಲತಾಬಾದ್ ವಶಪಡಿಸಿಕೊಂಡು ತಮ್ಮ ರಾಜಧಾನಿ ಮಾಡಿಕೊಂಡರು. 1734ರಲ್ಲಿ ಹೈದರಾಬಾದ್‌ನ  ನಿಜಾಮ್ ಅವರ ವ್ಯಾಪ್ತಿಗೆ ಬರುವವರೆಗೂ ಕೋಟೆಯು ಹಲವು ಘಟನಾವಳಿಗಳಿಗೆ ಸಾಕ್ಷಿಯಾಯಿತು.

ಬೆಳಿಗ್ಗೆ 10ಕ್ಕೆ ಕೋಟೆಯತ್ತ ಹೆಜ್ಜೆ ಹಾಕಲು ಆರಂಭಿಸಿದ ನಾವು ತುದಿ ತಲುಪುವ ವೇಳೆಗೆ ಮಧ್ಯಾಹ್ನ 1 ಆಗಿತ್ತು. ಮೂರು ದಿನಗಳ ವ್ಯಾಯಾಮ ಒಂದೇ ದಿನದಲ್ಲಿ ಮಾಡಿದಂತಾಯಿತು. ಅಲ್ಲಿ ಕೆಲ ಹೊತ್ತು ವಿಶ್ರಾಂತಿ ಪಡೆದವು. ಅಲ್ಲಿಂದ ಪುನಃ ಹೊರಟು ಕಾರಿನ ಬಳಿ ಬರುವ ವೇಳೆಗೆ ಸಂಜೆ 4 ಆಗಿತ್ತು. ಕೋಟೆಯ ವೈಭವ ನೆನಪಿಸಿಕೊಳ್ಳುತ್ತ, ನಿದ್ದೆ ಮಾಡುತ್ತ ಪಯಣ ಮುಂದುವರೆಸಿದೆವು.

ಎಲ್ಲರಂತಲ್ಲ ಈ ಕೋಟೆ...

ಸುಮಾರು 62.70 ಹೆಕ್ಟೇರ್ ವಿಸ್ತೀರ್ಣದ ಈ ಕೋಟೆಯು 200 ಮೀಟರ್ ಎತ್ತರದ ಶಂಖ ಅಥವಾ ಆಮೆ ಆಕಾರದಂತೆ ಕಾಣುವ ಬೆಟ್ಟದ ಮೇಲೆ ನಿರ್ಮಾಣಗೊಂಡಿದೆ. ಬಾವಿಗಳು, ಸಭಾಂಗಣ, ಆನೆ ಹೊಂಡ, ಖುತುಬ್ ಮಿನಾರ್ ಮಾದರಿಯ ಚಾಂದ್ ಮಿನಾರ್ ಮುಂತಾದವು ಒಳಗೊಂಡಿದೆ.

ಶತ್ರುಗಳು ಒಂದು ವೇಳೆ ದಾಳಿ ನಡೆಸಿದರೂ ಕೋಟೆಯ ಮೂರು ಹಂತದ ರಕ್ಷಣಾ ಗೋಡೆಗಳನ್ನು ದಾಟಿ ಬರಬೇಕಿತ್ತು. ಕಾರ್ಯಾಚರಣೆ ವೇಳೆ ಸ್ವಲ್ಪ ಆಯ ತಪ್ಪಿದರೂ ಶತ್ರುಗಳು ನೀರು ಇರುವ ಆಳವಾದ ಕಂದಕದಲ್ಲಿ ಬೀಳುತ್ತಿದ್ದರು. ಅದರೊಳಗೆ ಬಿದ್ದವರು ಮೊಸಳೆಗಳಿಗೆ ಆಹಾರವಾಗುತ್ತಿದ್ದರು. ಬೃಹದಾಕಾರದ ಬಾಗಿಲುಗಳನ್ನು ಭೇದಿಸಲು ಶತ್ರುಗಳು ಅಲ್ಲದೇ ಪ್ರಾಣಿಗಳಿಗೂ ಸಾಧ್ಯವಾಗುತ್ತಿರಲಿಲ್ಲ.

ಎಲ್ಲಿ ಬೇಕೆಂದರಲ್ಲಿ ಇರುವ ತೋಪುಗಳಿಂದ ಶತ್ರುಗಳ ಮೇಲೆ ದಾಳಿ ಮಾಡಲಾಗುತಿತ್ತು. ಕೋಟೆಯೊಳಗೆ ಸುಲಭವಾಗಿ ಪ್ರವೇಶಿಸಲು ಮತ್ತು ನಿರ್ಗಮಿಸಲು ಶತ್ರು ಸೈನಿಕರಿಗೆ ಸಾಧ್ಯವಾಗುತ್ತಿರಲಿಲ್ಲ. ರಹಸ್ಯ ಮತ್ತು ನಿಗೂಢ ವ್ಯವಸ್ಥೆಯಿಂದಾಗಿ ಅವರು ಪದೇ ಪದೇ ಗೊಂದಲಕ್ಕೆ ಒಳಗಾಗಿ ಸಿಲುಕಿಕೊಳ್ಳುತ್ತಿದ್ದರು. ಅಲ್ಲಿಂದ ತಪ್ಪಿಸಿಕೊಳ್ಳಲಾಗದೇ ಸಂಚಿನ ಬಲೆಗೆ ಬಿದ್ದು ಪ್ರಾಣ ಕಳೆದುಕೊಳ್ಳುತ್ತಿದ್ದರು.

ಬಹುಧರ್ಮೀಯ ಕೋಟೆ

ಪುರಾತತ್ವ ಇಲಾಖೆಯವರು ಕೋಟೆ ಆವರಣದ ಸುತ್ತಮುತ್ತ ಉತ್ಖನನ ನಡೆಸಿದಾಗ, ಹಲವು ಅಂಶಗಳು ಬೆಳಕಿಗೆ ಬಂದವು. ಅಲ್ಲಲ್ಲಿ ಮುಸ್ಲಿಂ ಸ್ಮಾರಕಗಳ ಅವಶೇಷಗಳು ಸಿಕ್ಕರೆ, ಕೆಲ ಕಡೆ ಹಿಂದೂ ದೇವರ ಮೂರ್ತಿಗಳು ಪತ್ತೆಯಾಗಿವೆ.

ಜೈನ ತೀರ್ಥಂಕರರು ಮತ್ತು ಅವರ ಅನುಯಾಯಿಗಳ ಮೂರ್ತಿಗಳು ಸಹ ಸಿಕ್ಕಿವೆ. ಆಗಿನ ಕಾಲಘಟ್ಟದಲ್ಲಿ ಜನರು ಬಳಸುತ್ತಿದ್ದ ವಸ್ತುಗಳು ಸಹ ಪತ್ತೆಯಾಗಿವೆ. ಒಟ್ಟಾರೆ ಈ ಕೋಟೆಯು ವಿಶೇಷ ಸಂಗತಿಗಳಿಂದ ಕೂಡಿದೆ. ಸಂಶೋಧನೆ ಮಾಡಿದಷ್ಟು ಹೊಸ ಹೊಸ ಸಂಗತಿಗಳು ಬೆಳಕಿಗೆ ಬರುತ್ತದೆ.

ಕೋಟೆ ತಲುಪುವುದು ಹೇಗೆ?

ದೌಲತಾಬಾದ್ ಕೋಟೆಗೆ ತಲುಪಲು ಮೊದಲು ಔರಂಗಾಬಾದ್‌ಗೆ ಹೋಗಬೇಕು. ಔರಂಗಾಬಾದ್‌ಗೆ ಪ್ರಮುಖ ಮಹಾನಗರಗಳಿಂದ ಬಸ್, ರೈಲು ಮತ್ತು ವಿಮಾನ ಸೌಕರ್ಯವಿದೆ. ಔರಂಗಾಬಾದ್ ವಿಮಾನ ನಿಲ್ದಾಣದಿಂದ 22 ಕಿ.ಮೀ ದೂರದಲ್ಲಿ ಇರುವ ಕೋಟೆಗೆ ಬೇರೆಯೊಂದು ವಾಹನ ವ್ಯವಸ್ಥೆ ಮೂಲಕ ಹೋಗಬಹುದು. ಕೋಟೆಯ ಸಮೀಪದಲ್ಲೇ ರೈಲು ನಿಲ್ದಾಣವಿದ್ದು, ಬೆಂಗಳೂರು, ಮುಂಬೈ, ಹೈದರಾಬಾದ್, ಸಿಕಂದರಾಬಾದ್ ಸೇರಿದಂತೆ ವಿವಿಧೆಡೆಯಿಂದ ರೈಲಿನಲ್ಲಿ ಪ್ರಯಾಣಿಸಬಹುದು. ಬಸ್ ಸೌಲಭ್ಯವೂ ಇದೆ. ಸ್ವಂತ ವಾಹನವಿದ್ದರೆ, ಬೆಂಗಳೂರಿನಿಂದ ಮಹಾರಾಷ್ಟ್ರದ ಸತಾರಾ ಅಥವಾ ಶಿರಡಿ ಮಾರ್ಗದ ಮೂಲಕ ಕೋಟೆಗೆ ಹೋಗಬಹದು

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !