ಬುಧವಾರ, ನವೆಂಬರ್ 20, 2019
21 °C
ಕಾರ್ಯಾಗಾರ

ಮಹಾರಾಣಿ ಕಾಲೇಜಿಗೆ ಡಿಸಿಎಂ ಭೇಟಿ 20ಕ್ಕೆ: ಶಾಸಕ ಎಲ್‌.ನಾಗೇಂದ್ರ

Published:
Updated:
Prajavani

ಮೈಸೂರು: ‘ಶತಮಾನದ ಐತಿಹ್ಯ ಹೊಂದಿರುವ ನಗರದ ಮಹಾರಾಣಿ ಕಾಲೇಜಿಗೆ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥನಾರಾಯಣ ಸೆ.20ರ ಶುಕ್ರವಾರ ಭೇಟಿ ನೀಡಲಿದ್ದು, ಕುಂದು–ಕೊರತೆ ಆಲಿಸಿ, ಅಭಿವೃದ್ಧಿಗೆ ಒತ್ತು ನೀಡಲಿದ್ದಾರೆ’ ಎಂದು ಶಾಸಕ ಎಲ್.ನಾಗೇಂದ್ರ ತಿಳಿಸಿದರು.

ನಗರದ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಸುವರ್ಣ ಮಹೋತ್ಸವದ ಅಂಗವಾಗಿ ಮಂಗಳವಾರ ಯುವ ರೆಡ್ ಕ್ರಾಸ್ ಘಟಕದ ಸಹಯೋಗದಲ್ಲಿ ನಡೆದ ವಿಶ್ವವಿದ್ಯಾನಿಲಯ ಮಟ್ಟದ ಒಂದು ದಿನದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ‘ಕಾಲೇಜಿನ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದು ಹೇಳಿದರು.

‘ಮಕ್ಕಳಿಗೆ ಪೌಷ್ಟಿಕತೆಯ ಕೊರತೆಯಿದೆ. ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಸಾಕಷ್ಟು ಯೋಜನೆ ರೂಪಿಸಿದೆ. 2027ರೊಳಗೆ ಅಪೌಷ್ಟಿಕತೆಯನ್ನು ನಿರ್ಮೂಲನೆಗೊಳಿಸಬೇಕು ಎಂಬುದೇ ಮೋದಿ ಗುರಿಯಾಗಿದೆ. ಅದಕ್ಕೆ ನಾವೆಲ್ಲರೂ ಸಹಕರಿಸಬೇಕು. ಸರ್ಕಾರದಿಂದ ರೂಪುಗೊಳ್ಳುವ ಯೋಜನೆ, ಸಿಗುವ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ತಿಳಿಸಿದರು.

ಮಹಿಳೆಯರ ಮಾನಸಿಕ ಸ್ವಾಸ್ಥ್ಯ–ವಿಚಾರವಾಗಿ ಮೈಸೂರು ವೈದ್ಯಕೀಯ ಕಾಲೇಜಿನ ಡಾ.ಬಿ.ಎನ್.ರವೀಶ್, ದೈಹಿಕ ಸ್ವಾಸ್ಥ್ಯ–ಕುರಿತಂತೆ ಪ್ರಸೂತಿ ತಜ್ಞೆ ಡಾ.ಪೂರ್ಣಿಮಾ, ಮಹಿಳೆ ಮತ್ತು ಸಮಾಜ–ವಿಷಯದಲ್ಲಿ ಸಿದ್ಧಾರ್ಥ ನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಧ್ಯಾಪಕ ಪ್ರಸನ್ನಕುಮಾರ್ ಉಪನ್ಯಾಸ ನೀಡಿದರು.

ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಪ್ರೊ.ಶಿವಪ್ಪ ಶಾಂತಪ್ಪನವರ, ಎನ್‍ಎಸ್‍ಎಸ್ ಪ್ರಾದೇಶಿಕ ನಿರ್ದೇಶಕ ಖಾದ್ರಿ ನರಸಿಂಹಯ್ಯ, ಮೈಸೂರು ವಿ.ವಿ.ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕ ಡಾ.ಶ್ರೀಕಂಠಸ್ವಾಮಿ, ಯುವರಾಜ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ರುದ್ರಯ್ಯ, ಎನ್‍ಎಸ್‍ಎಸ್ ಸಂಯೋಜನಾಧಿಕಾರಿ ಡಾ.ಬಿ.ಚಂದ್ರಶೇಖರ್, ಡಾ.ಸುಚಿತ್ರಾ, ಪ್ರೊ.ರಮೇಶ್, ಡಾ.ಸಿದ್ದಪ್ಪ, ಜಯರಾಂ, ನಿಂಗರಾಜು ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)