ಮಂಗಳವಾರ, ನವೆಂಬರ್ 19, 2019
22 °C

ಸತ್ತರೂ ನಿಲ್ಲದು ಮನುಷ್ಯನ ಚಲನೆ! : ಆಸ್ಟ್ರೇಲಿಯಾ ವಿಜ್ಞಾನಿಯ ಸಂಶೋಧನೆ

Published:
Updated:

ಕೇರ್ನ್ಸ್‌ (ಆಸ್ಟ್ರೇಲಿಯಾ): ಮೃತದೇಹಗಳು ಸಂಚರಿಸಿ ವೀಕ್ಷಕರಲ್ಲಿ ಭಯ ಹುಟ್ಟಿಸುವ ದೃಶ್ಯಗಳು ಹಾರರ್‌ ಸಿನಿಮಾಗಳಲ್ಲಿ ಸಾಮಾನ್ಯ. ವಾಸ್ತವದಲ್ಲಿ, ಮೃತದೇಹ ಚಲಿಸಿದೆ ಎಂದರೆ ಅದನ್ನು ಯಾರೂ ನಂಬುವುದಿಲ್ಲ. ಆದರೆ, ಶವಗಳು ನಿಜಕ್ಕೂ ಚಲಿಸುತ್ತವೆ ಎಂದು ಆಸ್ಟ್ರೇಲಿಯಾದ ವಿಜ್ಞಾನಿ ಅಲಿಸನ್‌ ವಿಲ್ಸನ್‌ ಹೇಳಿದ್ದಾರೆ. ಈ ಸಂಶೋಧನೆಯು ರೋಗಶಾಸ್ತ್ರಜ್ಞರು ಮತ್ತು ಅಪರಾಧ ತನಿಖಾಧಿಕಾರಿಗಳಿಗೆ ನೆರವಾಗುವ ಸಾಧ್ಯತೆ ಇದೆ.

ಸತ್ತ ನಂತರ ಮನುಷ್ಯನಿಗೆ ‘ಚಿರಶಾಂತಿ ಲಭಿಸುವುದಿಲ್ಲ’. ಒಂದು ವರ್ಷಕ್ಕೂ ಹೆಚ್ಚು ಕಾಲ ಶವಗಳಲ್ಲಿ ಚಲನೆ ಇರುತ್ತದೆ ಎಂದು ಅಲಿಸನ್‌ ಹೇಳಿದ್ದಾರೆ. 

ಶವಗಳನ್ನು ಅವರು 17 ತಿಂಗಳು ಅಧ್ಯಯನ ನಡೆಸಿದ್ದಾರೆ. ಮೃತದೇಹಗಳ ಫೋಟೊಗಳನ್ನು ತೆಗೆದು ಚಲನೆಯನ್ನು ದಾಖಲಿಸಿದ್ದಾರೆ. ಒಂದು ಮೃತದೇಹದ ಕೈಯನ್ನು ಶರೀರಕ್ಕೆ ಅಂಟಿಕೊಂಡಂತೆ ಇರಿಸಲಾಗಿತ್ತು. ಆದರೆ, ನಿಧಾನಕ್ಕೆ ಆ ಕೈಯು ದೇಹದಿಂದ ದೂರ ಸರಿದಿರುವುದನ್ನು ಅವರು ಗುರುತಿಸಿದ್ದಾರೆ. 

ಶವದ ಕೊಳೆಯುವಿಕೆ, ಒಣಗುವಿಕೆ ಮತ್ತು ಮೂಳೆಕಟ್ಟುಗಳು ಒಣಗುವ ಪ್ರಕ್ರಿಯೆಯಲ್ಲಿ ಈ ಚಲನೆ ಕಾಣಿಸಿಕೊಳ್ಳುತ್ತಿರಬಹುದು ಎಂದು ಅಲಿಸನ್‌ ವಿಶ್ಲೇಷಿಸಿದ್ದಾರೆ.  ಸಿಡ್ನಿ ಹೊರವಲಯದಲ್ಲಿ ಇರುವ ಮೃತದೇಹ ಕೇಂದ್ರದಲ್ಲಿ ಅವರು ತಮ್ಮ ಸಂಶೋಧನೆ ನಡೆಸಿದ್ದಾರೆ. ಮೃತದೇಹಗಳ ಮೇಲೆ ಸಂಶೋಧನೆ ನಡೆಸುವುದಕ್ಕಾಗಿಯೇ ಈ ಕೇಂದ್ರವನ್ನು ರೂಪಿಸಲಾಗಿದೆ. 

ದೃಶ್ಯಗಳನ್ನು ಅತ್ಯಂತ ನಿಧಾನಗತಿಯಲ್ಲಿ ಮುಂದಕ್ಕೆ ಸರಿಸಿ ವೀಕ್ಷಿಸುವ ವಿಧಾನವನ್ನು ಇನ್ನಷ್ಟು ಉತ್ತಮಪಡಿಸಿ ವ್ಯಕ್ತಿಯ ಸಾವಿನ ಸಮಯವನ್ನು ಅಂದಾಜಿಸಲು ಅಲಿಸನ್‌ ಮತ್ತು ಅವರ ಸಹೋದ್ಯೋಗಿಗಳು ಯತ್ನಿಸುತ್ತಿದ್ದರು. ಈ ಪ್ರಕ್ರಿಯೆಯಲ್ಲಿ ಅವರಿಗೆ ಅತ್ಯಂತ ಅಚ್ಚರಿದಾಯಕ ವಿಚಾರವೊಂದು ಗೊತ್ತಾಯಿತು. ದೃಶ್ಯಗಳನ್ನು ಅತ್ಯಂತ ನಿಧಾನಗತಿಯಲ್ಲಿ ನೋಡುತ್ತಿದ್ದಾಗ ಶವವು ಗಣನೀಯವಾಗಿಯೇ ಚಲಿಸಿರುವುದು ಅವರ ಗಮನಕ್ಕೆ ಬಂತು. 

‘ಕೌತುಕವೇ ಅಧ್ಯಯನಕ್ಕೆ ಪ್ರೇರಣೆ’

‘ಸಣ್ಣವಳಿದ್ದಾಗಲೇ ನನಗೆ ಸಾವಿನ ಅಧ್ಯಯನದ ಬಗ್ಗೆ ಬಹಳ ಆಕರ್ಷಣೆ ಇತ್ತು. ಸಾವಿನ ಬಳಿಕ ದೇಹ ಹೇಗೆ ನಾಶವಾಗುತ್ತದೆ ಎಂಬುದರ ಕೌತುಕ ಇತ್ತು. ನಾನು ಕೃಷಿಕ ಕುಟುಂಬದಲ್ಲಿ ಬೆಳೆದವಳು. ಜಾನುವಾರುಗಳ ಸಾವು ಮತ್ತು ಆ ಪ್ರಕ್ರಿಯೆಯನ್ನು ಗಮನಿಸುತ್ತಿದ್ದುದೇ ಈ ಆಕರ್ಷಣೆಗೆ ಕಾರಣ ಆಗಿರಬಹುದು’ ಎಂದು ಅಲಿಸನ್‌ ಹೇಳಿದ್ದಾರೆ.  ‘ಬೇರೊಂದು ಅಧ್ಯಯನ ಕೈಗೊಂಡಿದ್ದಾಗ ಶವದಲ್ಲಿ ಸ್ವಲ್ಪ ಮಟ್ಟಿಗೆ ಚಲನೆಯನ್ನು ಗುರುತಿಸಿದ್ದೆ. ಈ ಬಗೆಗಿನ ಮಾಹಿತಿಗಾಗಿ ಹುಡುಕಾಟ ಆರಂಭಿಸಿದೆ. ಜಗತ್ತಿನ ಎಲ್ಲಿಯೂ ಇದರ ಮಾಹಿತಿ ದೊರೆಯಲಿಲ್ಲ. ಹಾಗಾಗಿ ಈ ಅಧ್ಯಯನ ಮಾಡಬೇಕು ಎಂಬ ನಿರ್ಧಾರಕ್ಕೆ ಬಂದೆ’ ಎಂದಿದ್ದಾರೆ.

 

ಪ್ರತಿಕ್ರಿಯಿಸಿ (+)