ವಿಭೂತಿಹಳ್ಳಿ ವಸತಿ ಶಾಲೆಗೆ ದಶಕದ ಸಂಭ್ರಮ..! ಶೇ100 ಫಲಿತಾಂಶದಲ್ಲಿ ಮುಂಚೂಣಿ

7
ಆಟೋಟದಲ್ಲೂ ಮುಂದು

ವಿಭೂತಿಹಳ್ಳಿ ವಸತಿ ಶಾಲೆಗೆ ದಶಕದ ಸಂಭ್ರಮ..! ಶೇ100 ಫಲಿತಾಂಶದಲ್ಲಿ ಮುಂಚೂಣಿ

Published:
Updated:
Deccan Herald

ಆಲಮೇಲ: ದಶಕದ ಹಿಂದೆ (2018) ಇಲ್ಲಿಗೆ ಸಮೀಪದ ವಿಭೂತಿಹಳ್ಳಿಯಲ್ಲಿ ಆರಂಭಗೊಂಡ ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆಗೆ ಇದೀಗ ದಶಮಾನೋತ್ಸವದ ಸಂಭ್ರಮ.

40 ವಿದ್ಯಾರ್ಥಿನಿಯರಿಂದ ಆರಂಭಗೊಂಡ ವಸತಿ ಶಾಲೆಯಲ್ಲಿ ಇದೀಗ ಒಟ್ಟು 246 ವಿದ್ಯಾರ್ಥಿನಿಯರು 6ನೇ ತರಗತಿಯಿಂದ ಎಸ್‌ಎಸ್‌ಎಲ್‌ಸಿಯವರೆಗೆ ವ್ಯಾಸಂಗ ಮಾಡುತ್ತಿದ್ದಾರೆ. ಹತ್ತು ಎಕರೆ ವಿಶಾಲ ಪ್ರದೇಶದಲ್ಲಿ ವಸತಿ ಶಾಲೆ ನಿರ್ಮಾಣಗೊಂಡಿದೆ.

ದಶಕದ ಅವಧಿಯಲ್ಲಿ ಬಾಡಿಗೆ ಕಟ್ಟಡದಿಂದ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡ ವಸತಿ ಶಾಲೆಯ ಎಸ್‌ಎಸ್‌ಎಲ್‌ಸಿ ಫಲಿತಾಂಶ ವರ್ಷದಿಂದ ವರ್ಷಕ್ಕೆ ಸುಧಾರಿಸಿದೆ. ಈಚೆಗೆ 100% ಫಲಿತಾಂಶದ ಸಾಧನೆ ಎಲ್ಲರ ಚಿತ್ತ ಒಮ್ಮೆ ಇತ್ತ ಹೊರಳುವಂತೆ ಮಾಡಿದೆ.

ವಿಶಾಲ ವಸತಿ ಗೃಹಗಳು, ಶಿಕ್ಷಕರ ನಿಲಯಗಳು, ಊಟದ ಕೋಣೆ ಸೇರಿದಂತೆ ಇನ್ನಿತರೆ ಪರಿಸರ ಕಲಿಕೆಗೆ ಪೂರಕವಾಗಿದೆ. ಎಲ್ಲವೂ ಸುಸಜ್ಜಿತವಾಗಿದ್ದು, ವಿಸ್ತಾರವಾದ ಆಟದ ಮೈದಾನ ವಿದ್ಯಾರ್ಥಿನಿಯರ ದೈಹಿಕ ಸದೃಢತೆ ಕಾಪಾಡಿಕೊಳ್ಳಲು ಅನುಕೂಲವಾಗಿದೆ.

ವಸತಿ ಶಾಲೆಯ ಬಾಲಕಿಯರು ಶುಭಕೋರುವ ಸಂದರ್ಭ ‘ಜೈ ಭಾರತ’ ಎಂದು ಹೇಳುವ ಮೂಲಕ ತಮ್ಮೊಳಗಿನ ದೇಶಪ್ರೇಮ ವ್ಯಕ್ತಪಡಿಸುವುದು ಇಲ್ಲಿನ ವೈಶಿಷ್ಟ್ಯತೆಗಳಲ್ಲೊಂದು.

ಶಾಲೆಯ ಪ್ರಾಂಶುಪಾಲ ದೇವೇಂದ್ರ ದೊಡ್ಡಮನಿ ಶಿಸ್ತು ರೂಪಿಸಿದ್ದಾರೆ. ಯಾವುದಕ್ಕೂ ಕೊರತೆಯಿಲ್ಲದಂತೆ ಮುತುವರ್ಜಿ ವಹಿಸಿದ್ದಾರೆ. ಎಲ್ಲದಕ್ಕೂ ಸಮಯ ನಿಗದಿ ಪಡಿಸಿದ್ದಾರೆ. ಮಕ್ಕಳಲ್ಲಿ ಪಾಠ, ಆಟ, ಸಾಂಸ್ಕೃತಿಕ ಚಟುವಟಿಕೆಗೆ ಉತ್ತೇಜನ ನೀಡುವ ಮೂಲಕ ಬಾಲೆಯರಿಗೆ ಸೂಕ್ತ ಪ್ರೋತ್ಸಾಹ ನೀಡುತ್ತಿದ್ದಾರೆ.

‘ವಸತಿ ಶಾಲೆಯಲ್ಲಿ ಕಲಿಯುತ್ತಿರುವ ಹೆಣ್ಮಕ್ಕಳು ಹೆಚ್ಚಾಗಿ ಪರಿಶಿಷ್ಟರು. ಇವರಲ್ಲಿ ಆತ್ಮಸ್ಥೈರ್ಯ ತುಂಬಿ, ಎಲ್ಲರೂ ಸದಾ ಹಸನ್ಮುಖಿಯಾಗಿರುವಂತೆ ನೋಡಿಕೊಳ್ಳುತ್ತಿರುವ ಇಲ್ಲಿನ ಅಧ್ಯಾಪಕರ ತಂಡಕ್ಕೊಂದು ನಮನ. ಈ ತಂಡ ಹೆಚ್ಚು ಸಕ್ರಿಯವಾಗಿರುವುದರಿಂದಲೇ ಫಲಿತಾಂಶದ ಸಾಧನೆ 100% ಬರಲು ಕಾರಣವಾಗಿದೆ’ ಎನ್ನುತ್ತಾರೆ ಪಾಲಕರ ಪ್ರತಿನಿಧಿ ಭಾಗಣ್ಣ ಗುರುಕಾರ.

‘ಪದೇ ಪದೇ ಅನಾರೋಗ್ಯಕ್ಕೀಡಾಗುತ್ತಿದ್ದೆವು. ಇದನ್ನು ಮನಗಂಡ ಶಿಕ್ಷಕ ಸಮೂಹ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲು ಮುಂದಾಯಿತು. ನಮ್ಮ ಪೋಷಕರು ನೆರವು ನೀಡಿದರು. ಇದರ ಫಲವಾಗಿ 500 ಲೀಟರ್‌ ಸಾಮರ್ಥ್ಯದ ಪ್ರತ್ಯೇಕ ಟಾಕಿಯಿದೆ. ಇದರ ಮೂಲಕ ನೀರನ್ನು ಶುದ್ಧೀಕರಿಸಿ ಕುಡಿಯಲು ಹಾಸ್ಟೆಲ್‌ನಲ್ಲಿ ಒದಗಿಸುತ್ತಿದ್ದಾರೆ. ಇದರಿಂದ ನಮ್ಮ ಆರೋಗ್ಯ ಸದೃಢವಾಗಿದೆ’ ಎಂದು ವಿದ್ಯಾರ್ಥಿನಿಯರಾದ ನಿಸರ್ಗಾ, ಸಹನಾ ಹೆಮ್ಮೆಯಿಂದ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಿತ್ಯ ಸಂಜೆ ಲಘು ಉಪಹಾರ ನೀಡುತ್ತಾರೆ. ಅಲ್ಲಿಯೂ ನೆನೆದ ಉಸುಳಿಕಾಳು, ವಾರಕ್ಕೆ ಎರಡು ಬಾರಿ ತತ್ತಿ, ಬಾಳೆಹಣ್ಣು, ಸಿಹಿ ತಿನಿಸು, ತಿಂಗಳಿಗೆ ಎರಡು ಸಲ ಚಿಕನ್ ನೀಡಲಾಗುತ್ತಿದೆ. ಊಟದ ಮೆನುವಿನಂತೆ ರುಚಿ–ಶುಚಿಯಾದ ಅಡುಗೆ ಮಾಡಿ ಬಡಿಸುತ್ತಾರೆ’ ಎಂದು ಅವರು ಹೇಳಿದರು.

ಪ್ರಯೋಗಾಲಯ, ಕಂಪ್ಯೂಟರ್‌ ಕೊಠಡಿಗಳು ಸದಾ ಕ್ರಿಯಾಶೀಲತೆಯ ತಾಣವಾಗಿವೆ. ಮಕ್ಕಳ ಅಭಿರುಚಿಗೆ ತಕ್ಕಂತೆ ರೂಪುಗೊಂಡಿವೆ. ಪ್ರತಿ ಶನಿವಾರದ ಪುಸ್ತಕ ಓದು ಮತ್ತು ಯೋಗ ವಿದ್ಯಾರ್ಥಿನಿಯರ ಅಚ್ಚುಮೆಚ್ಚಿನ ಕಾರ್ಯಕ್ರಮವಾಗಿವೆ. ಇದರ ಜತೆಯಲ್ಲೇ ಕಲಿಕೆಯೂ ದೃಢೀಕರಣಗೊಳ್ಳುತ್ತಿದೆ.

ಪಠ್ಯ–ಪಠ್ಯೇತರ

ಫಲಿತಾಂಶದಲ್ಲಿ ಈ ಶಾಲೆ ಮುಂಚೂಣಿಯಲ್ಲಿದೆ. ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಯರಿಗೆ ರಜೆ ಅವಧಿಯಲ್ಲಿ ವಿಶೇಷ ತರಗತಿ ನಡೆಸುತ್ತಾರೆ ಶಾಲಾ ಸಿಬ್ಬಂದಿ. ಪ್ರತಿ ಭಾನುವಾರ ಬೆಳಿಗ್ಗೆ ಅತಿಥಿಗಳಿಂದ ವಿಶೇಷ ಉಪನ್ಯಾಸವಿರುತ್ತದೆ. ಈಶ್ವರೀಯ ವಿಶ್ವವಿದ್ಯಾಲಯದಿಂದ ಆಗಾಗ್ಗೆ ವಿಶೇಷ ತರಗತಿಗಳು ನಡೆಯಲಿವೆ.

ಇಲ್ಲಿನ ಬಾಲಕಿಯರು ಆಟದಲ್ಲೂ ಮುಂದು. ಬೆಳಗಾವಿ ವಿಭಾಗ ಮಟ್ಟದ ವಾಲಿಬಾಲ್‌ನಲ್ಲಿ ಪ್ರಥಮ ಸ್ಥಾನ ಪಡೆದು, ರಾಜ್ಯ ಮಟ್ಟದಲ್ಲಿ ಭಾಗವಹಿಸಿದ್ದಾರೆ. ಸತತ ಮೂರು ವರ್ಷಗಳಿಂದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗಿಯಾಗುತ್ತಿರುವುದು ನಮ್ಮ ಹೆಮ್ಮೆ ಎನ್ನುತ್ತಾರೆ ದೇವೇಂದ್ರ.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !