ದೀಪಾವಳಿ; ಆನಂದದ ಲೀಲಾವಳಿ..!

7
ಸೋಮವಾರದಿಂದ ಹಬ್ಬಕ್ಕೆ ವಿಧ್ಯುಕ್ತ ಚಾಲನೆ; ಶುಕ್ರವಾರ ತೆರೆ

ದೀಪಾವಳಿ; ಆನಂದದ ಲೀಲಾವಳಿ..!

Published:
Updated:
Deccan Herald

ವಿಜಯಪುರ: ವಿಜಯಪುರ ನಗರವೂ ಸೇರಿದಂತೆ ಜಿಲ್ಲೆಯ ಪಟ್ಟಣ, ಗ್ರಾಮೀಣ ಪ್ರದೇಶದಲ್ಲಿ ಇದೀಗ ಬೆಳಕಿನ ಹಬ್ಬ ದೀಪಾವಳಿಯ ಸಿದ್ಧತೆ ಬಿರುಸುಗೊಂಡಿದೆ.

ಮನೆಗಳು ಸೇರಿದಂತೆ ಬಜಾರ್‌ನಲ್ಲಿನ ಅಂಗಡಿಗಳಲ್ಲೂ ಸ್ವಚ್ಛತೆ ನಡೆದಿದೆ. ಬಣ್ಣ ಹಚ್ಚುವ ಕಾರ್ಯ ಬಹುತೇಕ ಮುಗಿದಿದ್ದು; ಹಬ್ಬದ ವಹಿವಾಟು ಬಿರುಸುಗೊಂಡಿದೆ.

ಸೋಮವಾರದಿಂದಲೇ ಹಬ್ಬದ ಆಚರಣೆಗೆ ವಿಧ್ಯುಕ್ತ ಚಾಲನೆ ಸಿಗಲಿದೆ. ಅಂತಿಮ ಹಂತದ ಖರೀದಿಗೆ ವಿಜಯಪುರಿಗರು ಸೇರಿದಂತೆ ಜಿಲ್ಲೆಯ ವಿವಿಧೆಡೆಯ ಜನಸ್ತೋಮ ಬೇರೆಡೆ ತೆರಳಿ ಭರ್ಜರಿ ಖರೀದಿ ನಡೆಸುವಲ್ಲಿ ನಿರತವಾಗಿದೆ.

ಇದೀಗ ರಾತ್ರಿ ಹೊತ್ತಲ್ಲಿ ಬಜಾರ್‌ಗಳು ಕಂಗೊಳಿಸಲಾರಂಭಿಸಿವೆ. ಎತ್ತ ನೋಡಿದರೂ ಝಗಮಗಿಸುವ ವಿದ್ಯುತ್‌ ದೀಪಾಲಂಕಾರ ಸೂಜಿಗಲ್ಲಿನಂತೆ ಎಲ್ಲರನ್ನೂ ಆಕರ್ಷಿಸುತ್ತಿದೆ. ಪ್ರತಿ ಅಂಗಡಿ ಮುಂಭಾಗವೂ ಶಾಮಿಯಾನ ಹಾಕಲಾಗಿದ್ದು, ವಿಶೇಷ ವಹಿವಾಟು ನಡೆಸಲಾಗುತ್ತಿದೆ.

ಬೃಹತ್‌ ಅಂಗಡಿಗಳ ಮಾಲೀಕರು, ಶೋ ರೂಂಗಳು ಹಬ್ಬದ ವಿಶೇಷ ರಿಯಾಯಿತಿ ಪ್ರಕಟಿಸಿವೆ. ಕೂಪನ್‌, ಲಕ್ಕಿ ಡ್ರಾ ಆಯೋಜಿಸಿ ಗ್ರಾಹಕರನ್ನು ತಮ್ಮತ್ತ ಸೆಳೆಯಲು ವಿಭಿನ್ನ ಪ್ರಚಾರ ತಂತ್ರ ಅನುಸರಿಸುತ್ತಿವೆ. ದೀಪಾವಳಿ ಹಬ್ಬದ ಹದಿನೈದು ದಿನಕ್ಕೂ ಮುನ್ನವೇ ಗ್ರಾಹಕರನ್ನು ಪೈಪೋಟಿಯಿಂದ ಸೆಳೆಯುವ ಚಿತ್ರಣ ಬಜಾರ್‌ನಲ್ಲಿ ಗೋಚರಿಸುತ್ತಿದೆ.

ಬಗೆ ಬಗೆಯ ಆಕಾಶ ಬುಟ್ಟಿಗಳು ಬಜಾರ್‌ನಲ್ಲಿದ್ದು, ರಾತ್ರಿ ವೇಳೆ ವಿದ್ಯುತ್ ದೀಪದ ಬೆಳಕಿನಿಂದ ವಿಶಿಷ್ಟವಾಗಿ ಕಂಗೊಳಿಸುತ್ತಿವೆ. ಒಂದಕ್ಕಿಂತ ಒಂದು ಚೆಂದ ಎಂಬಂತಿದ್ದು; ಖರೀದಿದಾರರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತಿವೆ. ವರ್ಷದಿಂದ ವರ್ಷಕ್ಕೆ ವಿಭಿನ್ನ ಬಗೆಯ ಆಕಾಶಬುಟ್ಟಿಗಳು ಮಾರುಕಟ್ಟೆಗೆ ಲಗ್ಗೆಯಿಡುತ್ತಿದ್ದು, ಖರೀದಿಯೂ ಬಿರುಸುಗೊಂಡಿದೆ.

ಮಣ್ಣಿನ ಹಣತೆಗಳಿಗೂ ಇದೀಗ ಬೇಡಿಕೆ ಹೆಚ್ಚಿದೆ. ರಸ್ತೆ ಬದಿ ಹಣತೆ ಮಾರುವವರ ಸಂಖ್ಯೆಯೂ ಹೆಚ್ಚಿದೆ. ಮನೆಯ ಮುಂಭಾಗ, ದೇವರ ಜಗುಲಿ ಮೇಲೆ ಹಬ್ಬದ ದಿನ, ಕಾರ್ತೀಕ ಮಾಸ ಪೂರ್ತಿ ದೀಪ ಹಚ್ಚಲಿಕ್ಕಾಗಿಯೇ ಮಣ್ಣಿನ ಹಣತೆಗಳನ್ನು ಹುಡುಕಿಕೊಂಡು ಮಾರುಕಟ್ಟೆಗೆ ಬರುವವರ ಸಂಖ್ಯೆ ದೀಪಾವಳಿ ಸಮೀಪಿಸುತ್ತಿದ್ದಂತೆ ಹೆಚ್ಚುತ್ತಿದೆ. ಭಾನುವಾರ ಬಿರುಸಿನ ಖರೀದಿ ನಡೆಯಿತು.

ಒಟ್ಟಾರೆ ವಿಜಯಪುರ ನಗರ ಸೇರಿದಂತೆ ಜಿಲ್ಲೆಯ ಗ್ರಾಮೀಣ ಪ್ರದೇಶ ಇದೀಗ ಹಬ್ಬದ ಸಂಭ್ರಮ ಇಮ್ಮಡಿಗೊಳಿಸಲಿಕ್ಕಾಗಿಯೇ ನವ ವಧುವಿನಂತೆ ಸಿಂಗಾರಗೊಂಡಿವೆ. ಬಜಾರ್‌ಗಳಂತೂ ಝಗಮಗಗೊಳಿಸುವ ವಿದ್ಯುತ್ ದೀಪಾಲಂಕಾರಗಳಿಂದ ಕಣ್ಮನ ತಣಿಸುತ್ತಿವೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !