ದೀಪಾವಳಿಗೆ ಮಣ್ಣಿನ ಹಣತೆಗಳ ಮೆರುಗು

7
ಮಾರುಕಟ್ಟೆಗೆ ಲಗ್ಗೆ ಇಟ್ಟ ಆಕರ್ಷಕ ಹಣತೆಗಳು; ಖರೀದಿಗೆ ಮುಂದಾದ ಗ್ರಾಹಕರು

ದೀಪಾವಳಿಗೆ ಮಣ್ಣಿನ ಹಣತೆಗಳ ಮೆರುಗು

Published:
Updated:
Deccan Herald

ಚಾಮರಾಜನಗರ: ದೀಪಾವಳಿ ಹಬ್ಬಕ್ಕೆ ದಿನಗಣನೆ ಆರಂಭವಾಗಿದೆ. ಹಬ್ಬದ ದಿನದಂದು ಎಲ್ಲರ ಮನೆಯಂಗಳಗಳಲ್ಲಿ ಹಣತೆಗಳು ಬೆಳಗಲಿವೆ. ಈ ಹಣತೆಗಳಿಗೆ ಬೇಡಿಕೆ ಹೆಚ್ಚಾಗಿದೆ.

ಪಟ್ಟಣದ ದೊಡ್ಡ ಅಂಗಡಿ ಬೀದಿ, ಚಿಕ್ಕ ಅಂಗಡಿ ಬೀದಿ ಸೇರಿದಂತೆ ಬಹುತೇಕ ಜನಸಂದಣಿ ಸ್ಥಳಗಳಲ್ಲಿ ವಿವಿಧ ಬಗೆಯ ಮಣ್ಣಿನ ದೀಪಗಳನ್ನು ತಳ್ಳುಗಾಡಿ ಹಾಗೂ ಅಂಗಡಿ ಮಳಿಗೆಗಳಲ್ಲಿ ಮಾರಾಟ ಮಾಡಲಾಗುತ್ತಿದೆ.

ಬಗೆಬಗೆಯ ಮಣ್ಣಿನ ಹಣತೆ: ವಿವಿಧ ರೀತಿಯ ಹಣತೆಗಳು ನಗರಕ್ಕೆ ಲಗ್ಗೆ ಇಟ್ಟಿವೆ. ಸೀಮೆಹಂಚಿನ ದೀಪ, ಗಾಜಿನ ದೀಪ, ಗೊಂಬೆ ದೀಪ, ಮಣ್ಣಿನ ಸ್ಟ್ಯಾಂಡ್‌ ದೀಪ ಹೀಗೆ ಹತ್ತಕ್ಕೂ ಹೆಚ್ಚು ಬಗೆಯ ಹಣತೆಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ.

ಅಲಂಕಾರಕ್ಕೆ ಬಳಕೆ: ಮನೆಯಂಗಳದಲ್ಲಿ ಬಣ್ಣದ ರಂಗೋಲಿ ಹಾಕಿ ಅದರ ಮೇಲೆ ಹಣತೆ ಇಟ್ಟು ಬೆಳಗಿಸುತ್ತಾರೆ. ಮಾರುಕಟ್ಟೆಯಲ್ಲಿ ವಿವಿಧ ಅಲಂಕಾರಿಕ ಹಣತೆಗಳು ಗ್ರಾಹಕರನ್ನು ಸೆಳೆಯುತ್ತಿವೆ.

ಹಣತೆಗಳ ಬೆಲೆ: ಮಣ್ಣಿನ ಹಣತೆಗಳು ₹2ರಿಂದ ಆರಂಭವಾಗಿ ₹120 ರವರೆಗೂ ಮಾರಾಟವಾಗುತ್ತಿವೆ. ಚಿಕ್ಕ ದೀಪ (ಒಂದಕ್ಕೆ) ₹2, ದೊಡ್ಡ ದೀಪ ₹5, ಪಿಂಗಾಣಿ ದೀಪ ₹10, ಸೀಮೆ ಹಂಚಿನ ದೀಪ ₹10ರಿಂದ ₹20, ಮಣ್ಣಿನ ಸ್ಟ್ಯಾಂಡ್‌ ದೀಪ (ಜೋಡಿ) ₹30, ಗಾಜಿನ ದೀಪ (ಜೋಡಿ) ₹ 100, ಗೊಂಬೆ ದೀಪ ₹60ಕ್ಕೆ ಮಾರಾಟವಾಗುತ್ತಿದೆ.

‘ಕರಕುಶಲ ಕರ್ಮಿಗಳು ತಯಾರಿಸಿದ ಮಣ್ಣಿನ ದೀಪಗಳನ್ನು ತಂದು ಮಾರಾಟ ಮಾಡುತ್ತೇವೆ. ಅಲ್ಲಿಂದ ಬರುವ ವೇಳೆ 1,000 ದೀಪಗಳ ಪೈಕಿ 50 ದೀಪಗಳು ಒಡೆದಿರುತ್ತವೆ. ಇದರಿಂದ ಆರ್ಥಿಕ ಹೊರೆ ಬೀಳುತ್ತದೆ. ಒಂದು ದೀಪಕ್ಕೆ ₹50 ಪೈಸೆ ಲಾಭ ಸಿಗುತ್ತದೆ. ದೊಡ್ಡ ದೀಪಗಳಲ್ಲಿ ₹2 ಸಿಗುತ್ತದೆ ಎಂದು ಮಣ್ಣಿನ ಹಣತೆ ವ್ಯಾಪಾರಿ ಅಬ್ರಾರ್‌ ಪಾಷಾ ‘ಪ್ರಜಾವಾಣಿ’ಗೆ ತಿಳಿಸಿದರು.

ಪಟಾಕಿ ಸಿಡಿಸುವುದಿಲ್ಲ: ‘ತವರು ಮನೆಯಲ್ಲಿ ದೀಪಾವಳಿ ಹಬ್ಬವನ್ನು ಆಚರಿಸುತ್ತೇನೆ. ಅಲ್ಲಿ ಪಟಾಕಿ ಬದಲಿಗೆ ದೀಪಗಳನ್ನು ಹಚ್ಚಿ ಸಂಭ್ರಮಿಸುತ್ತೇವೆ. ಬಗೆಬಗೆಯ ತಿನಿಸುಗಳನ್ನು ತಯಾರಿಸಿ ಸವಿಯುತ್ತೇವೆ. ಮನೆಯಂಗಳದಲ್ಲಿ ರಂಗೋಲಿ ಇಟ್ಟು ಸಂಜೆ ವೇಳೆ ಪಡಸಾಲೆಗೆ ದೀಪಗಳನ್ನು ಇಡುತ್ತೇವೆ. ಮಕ್ಕಳಿಂದಲೂ ದೀಪಗಳನ್ನು ಬೆಳಗಿಸುತ್ತೇವೆ’ ಎಂದು ಶಂಕರಪುರ ಬಡಾವಣೆ ನಿವಾಸಿ ಆಶಾರಾಣಿ ಹೇಳಿದರು.

ಐದಾರು ವರ್ಷದ ಹಿಂದಿನ ವ್ಯಾಪಾರ ಈಗಿಲ್ಲ:

‘ಐದಾರು ವರ್ಷಗಳ ಹಿಂದೆ ಮಣ್ಣಿನ ದೀಪಗಳ ವ್ಯಾಪಾರ ಚೆನ್ನಾಗಿ ನಡೆಯುತ್ತಿತ್ತು. ಈಗ ದೀಪಗಳನ್ನು ಖರೀದಿ ಮಾಡಿ ಹಚ್ಚುವ ಸಂಸ್ಕೃತಿ ಕಡಿಮೆಯಾಗಿದೆ. ಮೇಣದ ಬತ್ತಿ ಹಚ್ಚುತ್ತಾರೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ದೀಪಗಳನ್ನು ಖರೀದಿಸುತ್ತೇವೆ. ಮುಂದಿನ ಕಾರ್ತಿಕ ಮಾಸದವರೆಗೂ ಮಾರಾಟ ಮಾಡುತ್ತೇವೆ’ ಎಂದು ಅಬ್ರಾರ್‌ ಪಾಷಾ ಹೇಳಿದರು.

ಹಸಿರು ಪರಿಸರ ಆಚರಿಸಲು ಸೂಚನೆ:

ಚಾಮರಾಜನಗರ: ನಗರದಲ್ಲಿ 125 ಡೆಸಿಬಲ್‌ಗಳಿಗಿಂತ ಹೆಚ್ಚು ಶಬ್ದ ಉಂಟುಮಾಡುವ ಪಟಾಕಿಗಳ ದಾಸ್ತಾನು, ಮಾರಾಟ ಹಾಗೂ ಬಳಕೆಯನ್ನು ನಿಷೇಧಿಸಲಾಗಿದೆ.

ಆಸ್ಪತ್ರೆ, ಶಾಲೆ, ಪ್ರಾರ್ಥನಾ ಮಂದಿರ, ವೃದ್ಧಾಶ್ರಮ, ಇನ್ನಿತರ ಸ್ಥಳಗಳ ಸುತ್ತಮುತ್ತ ಶಬ್ದ ಉಂಟು ಮಾಡುವ ಪಟಾಕಿ ಹಾಗೂ ಸಿಡಿಮದ್ದುಗಳ ಬಳಕೆ ಮಾಡಬಾರದು. ನಿಯಮ ಉಲ್ಲಂಘಿಸಿದರೆ ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಕಾವೇರಿ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !