ರಿಯಾಯಿತಿ ಇಲ್ಲ; ಶಾಪಿಂಗ್‌ ಮುಗಿದಿಲ್ಲ

7

ರಿಯಾಯಿತಿ ಇಲ್ಲ; ಶಾಪಿಂಗ್‌ ಮುಗಿದಿಲ್ಲ

Published:
Updated:
Deccan Herald

ವರಮಹಾಲಕ್ಷ್ಮಿಯಿಂದ ಶುರುವಾದ ಮಹಿಳೆಯರ ಸೀರೆ ಕೊಳ್ಳುವ ಸಂಭ್ರಮ ದೀಪಾವಳಿಗೂ ಮುಂದುವರಿದಿದೆ. ಹಬ್ಬಕ್ಕೂ ಸೀರೆಗೂ ಏನಕೇನ ಸಂಬಂಧವೋ ಗೊತ್ತಿಲ್ಲ, ಹಬ್ಬದ ನೆಪದಲ್ಲಿ ನಗರದ ಮಹಿಳೆಯರು ಸೀರೆ ಮಳಿಗೆಗಳಿಗೆ ಲಗ್ಗೆ ಇಡದೇ ಇರುವುದಿಲ್ಲ. ಒಟ್ಟಿನಲ್ಲಿ ಸೀರೆ ಕೊಳ್ಳದೇ ಹಬ್ಬ ಪೂರ್ಣಗೊಳ್ಳುವುದಿಲ್ಲ. 

ನವರಾತ್ರಿ ಸಂಭ್ರಮ ಮುಗಿಯುತ್ತಿದ್ದಂತೆ, ದೀಪದ ಹಬ್ಬ ಮನೆ ಬಾಗಿಲಿಗೆ ಬಂದಿದೆ. ಹಬ್ಬಕ್ಕೆ ಎರಡು ದಿನವಿರುವಾಗಲೂ ರೇಷ್ಮೆ ಸೀರೆಗಳ ಬೃಹತ್ ಸೀರೆ ಮಾರುಕಟ್ಟೆ ಚಿಕ್ಕಪೇಟೆಗೆ ಹೋದರೆ ಮಹಿಳೆಯರ ಸೀರೆ ಖರೀದಿ ಮುಗಿದಿರಲಿಲ್ಲ. ಚಿಕ್ಕಪೇಟೆಯ ಸಣ್ಣ, ದೊಡ್ಡ ಸೀರೆ ಮಳಿಗೆಗಳು, ರೆಡಿಮೇಡ್‌ ಉಡುಪು ಮಳಿಗೆಗಳು ಗಿಜಿಗುಡುತ್ತಿದ್ದವು. ಸಂಜೆ ಏಳಾದರೂ ಚಿಕ್ಕಪೇಟೆ ಕಡೆ ಬರುವವರ ಸಂಖ್ಯೆ ಕಡಿಮೆಯಾಗಿರಲಿಲ್ಲ. ಎಷ್ಟು ಮಂದಿ ಸೀರೆ ಕೊಂಡು ತೆರಳುತ್ತಿದ್ದರೋ ಅಷ್ಟೇ ಮಂದಿ ಆ ಕಡೆ ಬರುತ್ತಿದ್ದರು. 

ಹಾಗಂತ ದೀಪಾವಳಿಗೆ ಅಲ್ಲಿನ ಯಾವುದೇ ಸೀರೆ ಮಳಿಗೆ ರಿಯಾಯಿತಿ ಇದೆ ಎಂದು ಬ್ಯಾನರ್‌ಗಳನ್ನು ಹಾಕಿರಲಿಲ್ಲ. ಕೆಲವು ಮಳಿಗೆಗಳು ಸೀರೆಗಳ ದರ ಚೀಟಿಯ ಮೇಲೆ ಎಂಆರ್‌ಪಿ ಮತ್ತು ರಿಯಾಯಿತಿ ದರವನ್ನು ನಮೂದಿಸಿ ‘ಚೌಕಾಸಿ ಇಲ್ಲ’ ಎಂದು ಮೊದಲೇ ಘೋಷಿಸಿಬಿಟ್ಟಿದ್ದರು. ಆದರೂ, ಚಿಕ್ಕಪೇಟೆ ಎಂದರೆ ರೇಷ್ಮೆ ಸೀರೆಗಳ ದೊಡ್ಡಪೇಟೆ ಎಂದೇ ಪ್ರಸಿದ್ಧ. ಎಷ್ಟೇ ಮಾಲ್‌ಗಳು, ಬೃಹತ್‌ ಮಳಿಗೆಗಳು ಮನೆ ಬಳಿಯೇ ಇದ್ದರೂ ಮದುವೆ, ಹಬ್ಬದ ಸಂದರ್ಭದಲ್ಲಿ ಸೀರೆ ಕೊಳ್ಳಲು ಚಿಕ್ಕಪೇಟೆಗೆ ಬರುವವರೇ ಹೆಚ್ಚು. ಎಷ್ಟೇ ವಾಹನ ದಟ್ಟಣೆ ಇರಲಿ, ಕಿರಿದಾದ ರಸ್ತೆ, ಪಾರ್ಕಿಂಗ್‌ ಸಮಸ್ಯೆ ಇದ್ದರೂ ಸೀರೆ ಕೊಳ್ಳುವ ಸಂಭ್ರಮಕ್ಕೆ ಅದೆಲ್ಲ ಅಡ್ಡಿಯಾಗುವುದೇ ಇಲ್ಲ.

‘ರಿಯಾಯಿತಿ ಇಲ್ಲ ಎಂದು ಹಬ್ಬಕ್ಕೆ ಸೀರೆ ಕೊಳ್ಳದೇ ಇರೋಕಾಗುತ್ತಾ’ ಎಂದು ನಗುತ್ತಲೇ ಉತ್ತರಿಸಿದವರು ರಾಜಾಜಿನಗರದ ಗೌರಮ್ಮ. ಹಬ್ಬಕ್ಕೆ ಮಗಳಿಗೆ ಉಡುಗೊರೆ ಕೊಡಬೇಕು. ಅತ್ತೆಗೊಂದು ಸೀರೆಕೊಳ್ಳಬೇಕು ಎಂಬ ತರಾತುರಿಯಲ್ಲಿ ಅವರಿದ್ದರು.

‘ನಮ್ಮಲ್ಲಿ ಹಬ್ಬಕ್ಕೆಂದು ರಿಯಾಯಿತಿ ಘೋಷಿಸುವುದಿಲ್ಲ. ಆದರೂ, ಶೇಕಡಾ 5ರಷ್ಟು ರಿಯಾಯಿತಿ ಇದ್ದೇ ಇರುತ್ತದೆ ಎಂದು ಶ್ರೀವಾರು ಸಿಲ್ಕ್ಸ್‌ನ ಸಿಬ್ಬಂದಿ ಹೇಳುತ್ತಾರೆ. ಪ್ರತಿ ಸೀರೆಯ ಬೆಲೆಯಲ್ಲಿ ₹250 ಕಡಿತ ಮಾಡಲಾಗಿತ್ತು. ಕೆಲವು ಮಳಿಗೆಯವರು ಹೋಲ್‌ಸೇಲ್‌ ದರ ಎಂದು ಹೇಳುತ್ತಾ ಗ್ರಾಹಕರನ್ನುಸೆಳೆಯುತ್ತಿದ್ದರು. ಹಬ್ಬದ ದಿನವೂ ಮಳಿಗೆಗಳು ತೆರೆದಿರುತ್ತವೆ ಎಂಬುದು ಹಬ್ಬದ ಮುಗಿಯುವವರೆಗೂ ಶಾಪಿಂಗ್‌ ಮುಗಿಯಲ್ಲ ಎಂಬುದನ್ನು ತೋರಿಸುತ್ತದೆ.

ಇನ್ನು ರಸ್ತೆ ಬದಿಯ ವ್ಯಾಪಾರವೂ ಅಷ್ಟೇ ಜೋರಾಗಿತ್ತು. ಅವೆನ್ಯೂ ರಸ್ತೆ ಮತ್ತು ಮಾರುಕಟ್ಟೆಯಿಂದ ಚಿಕ್ಕಪೇಟೆಗೆ ಸಾಗುವ ರಸ್ತೆಯುದ್ದಕ್ಕೂ ಅಲ್ಲಲ್ಲಿ ಮಣ್ಣಿನ ದೀಪಗಳನ್ನು ರಾಶಿ ಹಾಕಿ ಮಾರುತ್ತಿದ್ದರು. ಹಬ್ಬಕ್ಕೆ ಎರಡೇ ದಿನ ಇದ್ದ ಕಾರಣ ವಿವಿಧ ಗಾತ್ರ, ವಿನ್ಯಾಸದ ಮಣ್ಣಿನ ದೀಪಗಳು ಕಡಿಮೆ ಬೆಲೆಗೆ ಸಿಗುತ್ತಿತ್ತು. ಸೀರೆ ಕೊಂಡ ಜನ ದೀಪಗಳನ್ನು ಕೊಂಡೊಯ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !