ಯಾರಿಗೆ ದೀಪಾವಳಿ ಬೋನಸ್‌?

7
deepawali

ಯಾರಿಗೆ ದೀಪಾವಳಿ ಬೋನಸ್‌?

Published:
Updated:
Deccan Herald

ಬೆಂಗಳೂರು: ಮೂರು ಲೋಕಸಭಾ ಮತ್ತು ಎರಡು ವಿಧಾನಸಭಾ ಕ್ಷೇತ್ರಗಳಿಗೆ ಶನಿವಾರ ನಡೆದ ಉಪಚುನಾವಣೆ ಫಲಿತಾಂಶ ಮಂಗಳವಾರ (ನ.6) ಹೊರಬೀಳಲಿದ್ದು, ಮೂರೂ ಪಕ್ಷಗಳಲ್ಲಿ ರಾಜಕೀಯ ಚಟುವಟಿಕೆಯ ಅಲೆ ಎಬ್ಬಿಸುವ ಸಾಧ್ಯತೆ ಇದೆ.

ಮಂಡ್ಯ, ಬಳ್ಳಾರಿ, ಶಿವಮೊಗ್ಗ ಲೋಕಸಭಾ ಕ್ಷೇತ್ರಗಳು ಮತ್ತು ರಾಮನಗರ ಮತ್ತು ಜಮಖಂಡಿ ವಿಧಾನಸಭೆ ಕ್ಷೇತ್ರಗಳಿಗೆ  ಉಪಚುನಾವಣೆ ನಡೆದಿತ್ತು. ಜೆಡಿಎಸ್‌– ಕಾಂಗ್ರೆಸ್‌ ಮೈತ್ರಿ ಕೂಟ ಮತ್ತು ಬಿಜೆಪಿ ನಡುವೆ ಜಿದ್ದಾಜಿದ್ದಿನ ಪೈಪೋಟಿ ಕೆಲವು ಕ್ಷೇತ್ರಗಳಲ್ಲಿ ಇತ್ತು. ಬಳ್ಳಾರಿ, ಶಿವಮೊಗ್ಗ ಮತ್ತು ಜಮಖಂಡಿ ಕ್ಷೇತ್ರದ ಗೆಲುವು ಯಾರ ಪಾಲಾಗಲಿದೆ ಎಂಬ ಕುತೂಹಲ ಎಲ್ಲೆಡೆ ಮೂಡಿದೆ.

ಕಾಂಗ್ರೆಸ್‌– ಜೆಡಿಎಸ್‌ ದೋಸ್ತಿಗಳು ಹೆಚ್ಚಿನ ಸ್ಥಾನಗಳನ್ನು ಗೆದ್ದರೆ, ಎರಡು ಪಕ್ಷಗಳ ಮೈತ್ರಿ ಇನ್ನಷ್ಟು ಗಟ್ಟಿಯಾಗುತ್ತದೆ. ಒಂದು ವೇಳೆ ಕಾಂಗ್ರೆಸ್‌ ಒಂದೂ ಸ್ಥಾನವನ್ನು ಗೆಲ್ಲದಿದ್ದರೆ ಮೈತ್ರಿ ಕಡಿದುಕೊಳ್ಳಲು ಆಂತರಿಕ ಒತ್ತಡ ಹೆಚ್ಚಾಗಬಹುದು. ಕಾಂಗ್ರೆಸ್‌ ಎರಡು ಸ್ಥಾನಗಳಲ್ಲಿ ಗೆದ್ದರೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ಪಕ್ಷದಲ್ಲಿ ತಮ್ಮ ಹಿಡಿತವನ್ನು ಹೆಚ್ಚಿಸಿಕೊಳ್ಳಲಿದ್ದಾರೆ.

ಬಿಜೆಪಿ ನಾಯಕರಿಗೆ ಈ ಚುನಾವಣೆ ಸವಾಲಾಗಿದೆ. ಈ ಹಿಂದೆ ಗೆದ್ದಿದ್ದ ಶಿವಮೊಗ್ಗ, ಬಳ್ಳಾರಿ ಲೋಕಸಭಾ ಕ್ಷೇತ್ರಗಳನ್ನು ಉಳಿಸಿಕೊಳ್ಳುವ ಜತೆಗೆ ಜಮಖಂಡಿ ಕ್ಷೇತ್ರವನ್ನು ಗೆದ್ದರೆ, ಯಡಿಯೂರಪ್ಪ ನಾಯಕತ್ವ ಅಬಾಧಿತ. ಇಲ್ಲವಾದರೆ, ರಾಮನಗರ ಮತ್ತು ಮಂಡ್ಯ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ವಿಷಯವನ್ನು ಮುಂದಿಟ್ಟುಕೊಂಡು ಕೆಲವರು ನಾಯಕತ್ವ ಬದಲಾವಣೆಗೆ ಒತ್ತಡ ಹೇರುವ ಸಂಭವ ಇದೆ.

ಮಂಡ್ಯ ಮತ್ತು ರಾಮನಗರದಲ್ಲಿ ಜೆಡಿಎಸ್‌ ಗೆದ್ದರೂ ಬಿಜೆಪಿ ಮತಗಳಿಕೆ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ. ಕಾಂಗ್ರೆಸ್‌ ಅನುಪಸ್ಥಿತಿಯಲ್ಲಿ ಈ ಎರಡೂ ಕ್ಷೇತ್ರಗಳಲ್ಲಿ ಬೇರು ಬಿಡುವ ಪ್ರಯತ್ನ ಎಷ್ಟರ ಮಟ್ಟಿಗೆ ಫಲ ನೀಡಿದೆ ಎಂಬುದು ಫಲಿತಾಂಶದಿಂದ ಗೊತ್ತಾಗಲಿದೆ. ಒಂದು ವೇಳೆ ಶಿವಮೊಗ್ಗದಲ್ಲಿ ಜೆಡಿಎಸ್‌ ಗೆದ್ದರೆ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರಕ್ಕಾಗಿ ಪಟ್ಟು ಹಿಡಿಯಬಹುದು.

Tags: 

ಬರಹ ಇಷ್ಟವಾಯಿತೆ?

 • 6

  Happy
 • 2

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !