ಬೆಳಕಿನ ಹಬ್ಬಕ್ಕೆ ಸಂಭ್ರಮದ ತಯಾರಿ

7
ಕೆ.ಆರ್‌.ಮಾರುಕಟ್ಟೆಯಲ್ಲಿ ಇಳಿದ ಸೊಪ್ಪಿನ ದರ, ಏರಿದ ಹೂವು, ಬೂದುಗುಂಬಳ

ಬೆಳಕಿನ ಹಬ್ಬಕ್ಕೆ ಸಂಭ್ರಮದ ತಯಾರಿ

Published:
Updated:
Deccan Herald

ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿಗೆ ನಗರ ತಯಾರಾಗುತ್ತಿದೆ. ಕೆ.ಆರ್‌.ಮಾರುಕಟ್ಟೆ, ಜಯನಗರ, ಯಶವಂತಪುರ ಸೇರಿದಂತೆ ವಿವಿಧ ಅಂಗಡಿಗಳಲ್ಲಿ ಬಣ್ಣ ಬಣ್ಣದ ಆಕಾಶ ಬುಟ್ಟಿಗಳು ರಸ್ತೆಯಲ್ಲಿ ಸಂಚರಿಸುವವರನ್ನು ಕೈಬೀಸಿ ಕರೆಯುತ್ತಿವೆ. ಮಣ್ಣಿನ ಹಾಗೂ ಪಿಂಗಾಣಿ ಹಣತೆಗಳು, ರಂಗೋಲಿ ಖರೀದಿ ಜೋರಾಗಿದೆ. 

ಹಬ್ಬಕ್ಕಾಗಿ ಹೊಸ ಬಟ್ಟೆ ಖರೀದಿಸಲು, ಗೃಹ ಉಪಯೋಗಿ, ಅಲಂಕಾರಿಕ ವಿದ್ಯುತ್ ದೀಪ, ಪ್ಲಾಸ್ಟಿಕ್‌ ತೋರಣಗಳು, ದಿನಸಿ ಸಾಮಗ್ರಿ ಖರೀದಿ ಕೂಡ ಹೆಚ್ಚುತ್ತಿದೆ. ಗ್ರಾಹಕರನ್ನು ಸೆಳೆಯಲು ಬಟ್ಟೆ ಅಂಗಡಿಗಳು, ಗೃಹ­ಬಳಕೆ ಹಾಗೂ ಎಲೆಕ್ಟ್ರಾನಿಕ್ಸ್ ಮಳಿಗೆಗಳು ರಿಯಾಯಿತಿಯಲ್ಲಿ ವಸ್ತುಗಳನ್ನು ಮಾರಾಟ ಮಾಡುತ್ತಿವೆ.

ಈ ಬಾರಿ ಕೆ.ಆರ್‌.ಮಾರುಕಟ್ಟೆಗೆ ಸೊಪ್ಪು ಹೆಚ್ಚಾಗಿ ಬಂದಿದ್ದು, ದರದಲ್ಲಿ ಭಾರಿ ಇಳಿಕೆ ಕಂಡಿದೆ. ಆದರೂ, ಮೆಂತ್ಯ, ಪಾಲಕ್‌ ಸೊಪ್ಪಿಗೆ ಗ್ರಾಹಕರ ತೀವ್ರ ಬರವಿದೆ. ಬೂದುಗುಂಬಳಕಾಯಿ ಮಾರುಕಟ್ಟೆಗೆ ಕಡಿಮೆ ಪ್ರಮಾಣದಲ್ಲಿ ಬಂದಿರುವುದರಿಂದ ದರ ಗಗನಕ್ಕೇರಿದೆ. 

ಪುದಿನಾ ಹಾಗೂ ಮೆಂತ್ಯ ಸೊಪ್ಪಿನ ದರ ತೀರ ಇಳಿಕೆ ಕಂಡಿದ್ದು, ವ್ಯಾಪಾರಿಯೊಬ್ಬರು ಪುದಿನಾ ಸೊಪ್ಪನ್ನು 5 ಕಟ್ಟಿಗೆ ₹10‌ ರಂತೆ ಮಾರುತ್ತಿರುವುದು ಒಂದೆಡೆಯಾದರೆ, ಇನ್ನೊಂದೆಡೆ ವ್ಯಾಪಾರಿಯೊಬ್ಬರು ₹150 ರಿಂದ ₹200ಕ್ಕೆ ಬೂದುಗುಂಬಳಕಾಯಿ ಮಾರುತ್ತಿರುವುದು ಕಂಡುಬಂತು. ಮಾವಿನ ಎಲೆ ₹5ಕ್ಕೆ ಒಂದು ಕಟ್ಟು ಮಾರಾಟವಾಗುತ್ತಿತ್ತು.

‘ಈ ಬಾರಿ ಮಾರುಕಟ್ಟೆಗೆ ಸೊಪ್ಪು ಹೆಚ್ಚಿನ ಪ್ರಮಾಣದಲ್ಲಿ ಬಂದಿದ್ದು, ದೀಪಾವಳಿ ಹಬ್ಬದ ನಿಮಿತ್ತ ಸೊಪ್ಪನ್ನು ಖರೀದಿಸುವ ಗ್ರಾಹಕರೇ ಇಲ್ಲದಂತಾಗಿದೆ. ಹಾಗಾಗಿ, ಸೊಪ್ಪಿನ ದರ ತೀರ ಇಳಿಕೆ ಕಂಡಿದೆ. ಬಂದಷ್ಟು ಬರಲಿ, ಎಂದು ಕಡಿಮೆ ದರಕ್ಕೆ ಮಾರಾಟ ಮಾಡುತ್ತಿದ್ದೇವೆ. ನಾಲ್ಕೈದು ದಿನಗಳ ಹಿಂದೆ ಕಟ್ಟಿಗೆ ₹30 ರಿಂದ ₹50 ರವರೆಗೆ ಮಾರಾಟ ಮಾಡಿದ್ದೇವೆ’ ಎಂದು ಸೊಪ್ಪಿನ ವ್ಯಾಪಾರಿ ರಮಾನಮ್ಮಾ ಹೇಳಿದರು.

ಸೇಬು, ದಾಳಿಂಬೆ ಕೊಂಡುಕೊಳ್ಳಲು ಸಹ ಗ್ರಾಹಕರು ಹೆಚ್ಚಿನ ಬೆಲೆ ತೆರಬೇಕಾಗಿದೆ. ಏಲಕ್ಕಿ ಬಾಳೆಯ ಬೆಲೆ ಕೆ.ಜಿಗೆ ₹60 ದಾಟಿದೆ. ಹಾಪ್‌ಕಾಮ್ಸ್‌ನಲ್ಲಿ ₹62ಕ್ಕೆ ಮಾರಾಟ ಮಾಡಲಾಗುತ್ತಿದೆ. 

ಮಹಿಳೆಯರು ಮನೆ ಸ್ವಚ್ಛಗೊಳಿಸಿ ಹಬ್ಬದ ತಯಾರಿ ನಡೆಸಿದ್ದರೆ, ಮಾರುಕಟ್ಟೆ ಪ್ರದೇಶಗಳಲ್ಲಿ ವ್ಯಾಪಾರಸ್ಥರು ಅಂಗಡಿಗಳಿಗೆ ಬಣ್ಣ ಹೊಡೆದು, ಲಕ್ಷ್ಮಿ ಪೂಜೆಗೆ ಸಿದ್ಧತೆ ನಡೆಸಿದ್ದಾರೆ. 

ಹಬ್ಬದ ನಿಮಿತ್ತ ಹೂವಿಗೆ ಬೇಡಿಕೆ ಹೆಚ್ಚಾಗಿದೆ. ದುಂಡು ಮಲ್ಲಿಗೆ, ಕನಕಾಂಬರ ಸದ್ಯ ಮಾರಿಗೆ ₹150 ರಂತೆ ಮಾರಾಟವಾಗುತ್ತಿದೆ. ನಾಳೆ ಮತ್ತಷ್ಟೂ ದರ ಏರಿಕೆಯಾಗಲಿದೆ.
ವಿಜಯಲತಾ, ಹೂವಿನ ವ್ಯಾಪಾರಿ

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !