ಗುರುವಾರ , ನವೆಂಬರ್ 21, 2019
21 °C

ಸಿಂಧು ಬಯೋಪಿಕ್‌ ಆಶಯ

Published:
Updated:

‘ನಟಿ ದೀಪಿಕಾ ಪಡುಕೋಣೆ ನನ್ನ ಬಯೋಪಿಕ್‌ನಲ್ಲಿ ನಟಿಸಲಿ’ ಎಂದು ಬ್ಯಾಡ್ಮಿಂಟನ್‌ ತಾರೆ ಪಿ.ವಿ ಸಿಂಧು ಆಶಿಸಿದ್ದಾರೆ. 

ಸದ್ಯ ಕಬೀರ್‌ ಖಾನ್‌ ನಿರ್ದೇಶನದ ‘83’ ಸಿನಿಮಾದಲ್ಲಿ ಕಪಿಲ್‌ದೇವ್‌ ಪತ್ನಿ ರೋಮಿ ಪಾತ್ರದಲ್ಲಿ ದೀಪಿಕಾ ನಟಿಸುತ್ತಿದ್ದಾರೆ. ಸದ್ಯದಲ್ಲೇ ಅವರು ಮತ್ತೊಂದು ಬಯೋಪಿಕ್‌ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದ್ದು, ಮೂಲಗಳ ಪ್ರಕಾರ ಪಿ.ವಿ ಸಿಂಧು ಅವರ ಬಯೋಪಿಕ್‌ನಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ. 

ನಟ ಸೋನು ಸೂದ್‌ ಅವರು ಪಿ. ವಿ. ಸಿಂಧು ಅವರ ಬಯೋಪಿಕ್‌ ಹಕ್ಕನ್ನು ಪಡೆದುಕೊಂಡಿದ್ದಾರೆ. ಈಗ ಆ ಚಿತ್ರದಲ್ಲಿ ದೀಪಿಕಾ ಪಡುಕೋಣೆ ನಟಿಸಲಿ ಎಂದು ಸಿಂಧು ಆಶಯ ವ್ಯಕ್ತಪಡಿಸಿದ್ದಾರೆ. ‘ದೀಪಿಕಾ ಅವರಿಗೆ ಬ್ಯಾಡ್ಮಿಂಟನ್‌ ಬಗ್ಗೆ ಗೊತ್ತು. ಅವರು ಆಡುತ್ತಾರೆ. ಅವರು ಉತ್ತಮ ನಟಿ ಕೂಡ. ಆದರೆ ಅಂತಿಮ ನಿರ್ಧಾರವೆಲ್ಲ ನಿರ್ದೇಶಕರದೇ’ ಎಂದಿದ್ದಾರೆ. 

ಈ ಚಿತ್ರದಲ್ಲಿ ಪಿ.ವಿ ಸಿಂಧು ಜೀವನ, 2016ರಲ್ಲಿ ಒಲಿಂಪಿಕ್ಸ್‌ನಲ್ಲಿ ಗೆಲುವು ಸಾಧಿಸಿದ್ದು ಇತ್ಯಾದಿ ಕತೆಗಳನ್ನು ಒಳಗೊಳ್ಳಲಿದೆ. ಚಿತ್ರಕ್ಕೆ ಸೋನು ತಯಾರಿ ನಡೆಸುತ್ತಿದ್ದು, ಚಿತ್ರದ ಬಗ್ಗೆ ಅಧಿಕೃತ ಘೋಷಣೆ ಮಾಡಿಲ್ಲ. ಈ ವರ್ಷದ ಅಂತ್ಯದಲ್ಲಿ ಚಿತ್ರ ಸೆಟ್ಟೇರಲಿದೆ ಎಂದು ಅವರು ಹೇಳಿದ್ದಾರೆ. 

ಸೈನಾ ನೆಹ್ವಾಲ್‌ ಅವರ ಬಯೋಪಿಕ್‌ನಲ್ಲಿ ಪರಿಣಿತಿ ಚೋಪ್ರಾ ನಟಿಸಿದ್ದಾರೆ. ಈ ಹಿಂದೆ ಈ ಚಿತ್ರದಲ್ಲಿ ಶ್ರದ್ಧಾ ಕಪೂರ್ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು.

ಪ್ರತಿಕ್ರಿಯಿಸಿ (+)