ಮಂಗಳವಾರ, ಡಿಸೆಂಬರ್ 10, 2019
26 °C
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಸೆರಗಿನಲ್ಲೇ ಕಳ್ಳ ಬೇಟೆ

ಉರುಳಿಗೆ ಸಿಲುಕಿ ನರಳಿ ನರಳಿ ಸತ್ತ ಜಿಂಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೆಂಗಳೂರು: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಸೆರಗಿನಲ್ಲೇ ಇರುವ ರಾಗಿಹಳ್ಳಿಯ ಕಾಡಿನಂಚಿನಲ್ಲಿ ಜಿಂಕೆಯೊಂದು ಉರುಳಿಗೆ ಸಿಲುಕಿ ನರಳಿ ನರಳಿ ಸತ್ತಿದೆ.

ಕೊಳೆತ ಸ್ಥಿತಿಯಲ್ಲಿದ್ದ ಜಿಂಕೆಯ ಕಳೇಬರ ಶನಿವಾರ ಪತ್ತೆಯಾಗಿದ್ದು, ವನ್ಯಜೀವಿ ಸಂರಕ್ಷಿತ ಪ್ರದೇಶದ ಆಸುಪಾಸಿನಲ್ಲಿ ಕಳ್ಳಬೇಟೆ ಅವ್ಯಾಹತವಾಗಿರುವುದಕ್ಕೆ ಮತ್ತೊಂದು ಪುರಾವೆ ಸಿಕ್ಕಿದೆ.

ತಂತಿಯ ಉರುಳಿಗೆ ಸಿಕ್ಕಿ ಜಿಂಕೆಯೊಂದು ಮೃತಪಟ್ಟಿದ್ದನ್ನು ಸ್ಥಳೀಯರೊಬ್ಬರು ನೋಡಿ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದರು.

‘ಜಿಂಕೆ ವಾರದ ಹಿಂದೆ ಮೃತಪಟ್ಟಿರುವ ಸಾಧ್ಯತೆ ಇದೆ. ಹಂದಿ ಹಿಡಿಯಲು ಸ್ಥಳೀಯರು ಉರುಳು ಇಡುತ್ತಾರೆ. ಉರುಳಿಗೆ ಬಿದ್ದ ಪ್ರಾಣಿಯನ್ನು ಸಾಮಾನ್ಯವಾಗಿ ಬೇಟೆಗಾರರು ಕೊಂಡೊಯ್ಯುತ್ತಾರೆ. ಆದರೆ, ಜಿಂಕೆಯ ಮೃತದೇಹ ಸ್ಥಳದಲ್ಲೇ ಇತ್ತು’ ಎಂದು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ ಶಂಕಿನಮಠ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸತ್ತ ಜಿಂಕೆ ಮರಣೋತ್ತರ ಪರೀಕ್ಷೆ ಬಳಿಕವಷ್ಟೇ ಅದಕ್ಕೆ ವಯಸ್ಸಾಗಿತ್ತು ಎಂಬುದನ್ನು ಖಚಿತವಾಗಿ ಹೇಳಬಹುದು’ ಎಂದರು. 

‘ನಗರದ ಸೆರಗಿನಲ್ಲೇ ವನ್ಯಜೀವಿಗಳ ಬೇಟೆ ಅವ್ಯಾಹತವಾಗಿ ನಡೆಯುತ್ತಿದಿದೆ. ಹಂದಿ, ಮೊಲ, ಕಾಡುಕೋಳಿ ಬೇಟೆ ಇಲ್ಲಿ ಮಾಮೂಲಿ. ನಮಗೆ ಆಗಾಗ ಗುಂಡಿನ ಸದ್ದು ಕೇಳಿಸುತ್ತದೆ. ಮೂರು ತಿಂಗಳ ಹಿಂದೆಯೂ ಒಂದು ಜಿಂಕೆಯನ್ನು ಬೇಟೆಯಾಡಿದ್ದರು. ಇದು ಅರಣ್ಯ ಇಲಾಖೆಗೆ ತಿಳಿಯದ ವಿಚಾರವೇನಲ್ಲ. ಈ ಬಗ್ಗೆ ಮಾಹಿತಿ ನೀಡಿದರೆ, ಅರಣ್ಯ ಇಲಾಖೆ ಅಧಿಕಾರಿಗಳು ಒಮ್ಮೆ ಸ್ಥಳಕ್ಕೆ ಭೇಟಿ ನೀಡುತ್ತಾರೆ. ಆದರೆ, ಕಳ್ಳ ಬೇಟೆಗಾರರನ್ನು ಪತ್ತೆ ಹಚ್ಚಿ ಶಿಕ್ಷೆಗೆ ಗುರಿಪಡಿಸುವ ಯಾವುದೇ ಪ್ರಯತ್ನ ನಡೆಯುತ್ತಿಲ್ಲ’ ಎಂದು ರಾಗಿಹಳ್ಳಿ ನಿವಾಸಿ ವಿಷ್ಣು ಆರೋಪಿಸಿದರು.

‘ಕಳ್ಳಬೇಟೆಗಾರರ ವಿರುದ್ಧ ಕ್ರಮ’

‘ವನ್ಯಜೀವಿಗಳ ಬೇಟೆ ಆಡದಂತೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಆಗಾಗ ಏರ್ಪಡಿಸುತ್ತಲೇ ಇದ್ದೇವೆ. ಆದರೂ, ಇಂತಹ ಪ್ರಕರಣಗಳು ಕದ್ದುಮುಚ್ಚಿ ನಡೆಯುತ್ತಲೇ ಇವೆ. ಜಿಂಕೆ ಸತ್ತ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ಉರುಳು ಇಟ್ಟವರು ಯಾರು ಎಂಬುದನ್ನು ಪತ್ತೆ ಹಚ್ಚಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ’ ಎಂದು ಪ್ರಶಾಂತ್‌ ತಿಳಿಸಿದರು.

‘ಸೂಕ್ಷ್ಮ ವಲಯ ಕಿರಿದುಗೊಳಿಸದಿರಿ’

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಪರಿಸರ ಸೂಕ್ಷ್ಮ ವಲಯದ (ಇಎಸ್‌ಝಡ್) ವ್ಯಾಪ್ತಿ ಪ್ರಸ್ತುತ 268.9 ಚದರ ಕಿ.ಮೀ ಇದೆ. ಇದನ್ನು 168.84 ಚದರ ಕಿ.ಮೀ.ಗೆ ಕಡಿತಗೊಳಿಸುವ ಬಗ್ಗೆ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ ನವೆಂಬರ್‌ನಲ್ಲಿ ಕರಡು ಅಧಿಸೂಚನೆ ಹೊರಡಿಸಿದೆ.

ಇಎಸ್‌ಜೆಡ್‌ ಕಡಿತಗೊಂಡರೆ ಇಲ್ಲಿನ ವನ್ಯಜೀವಿಗಳು ಇನ್ನಷ್ಟು ಸಂಕಷ್ಟದಲ್ಲಿ ಸಿಲುಕಲಿವೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ ಪರಿಸರ ಕಾರ್ಯಕರ್ತ ವಿಜಯ್‌ ನಿಶಾಂತ್‌.

‘ಬನ್ನೇರುಘಟ್ಟ ಪರಿಸರದಲ್ಲಿ ಕಳ್ಳಬೇಟೆ ಅವ್ಯಾಹತವಾಗಿದೆ. ಆದರೆ, ಇಂತಹ ಪ್ರಕರಣಗಳು ಬೆಳಕಿಗೆ ಬರುವುದು ಅಪರೂಪ. ಈ ಬಗ್ಗೆ ಪರಿಸರ ಕಾರ್ಯಕರ್ತರು ದೂರುತ್ತಲೇ ಇದ್ದರೂ ಇದನ್ನು ಅರಣ್ಯಅಧಿಕಾರಿಗಳು ಅಲ್ಲಗಳೆಯುತ್ತಿದ್ದರು. ರಾಗಿಹಳ್ಳಿಯಲ್ಲಿ ಜಿಂಕೆ ಸತ್ತ ಪ್ರಕರಣದಿಂದ ಇದಕ್ಕೊಂದು ಪುರಾವೆ ಸಿಕ್ಕಿದೆ. ಇಲಾಖೆ ಸಿಬ್ಬಂದಿ ಇನ್ನಾದರೂ ಎಚ್ಚೆತ್ತು ಕಳ್ಳಬೇಟೆಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಅವರು ಒತ್ತಾಯಿಸಿದರು.

ಪ್ರತಿಕ್ರಿಯಿಸಿ (+)