ನ್ಯೂನತೆಯುಳ್ಳ ಮಕ್ಕಳಿಗೆ ವರದಾನವಾದ ‘ಡಿಇಐಸಿ’

7

ನ್ಯೂನತೆಯುಳ್ಳ ಮಕ್ಕಳಿಗೆ ವರದಾನವಾದ ‘ಡಿಇಐಸಿ’

Published:
Updated:
Prajavani

ವಿಜಯಪುರ: ನ್ಯೂನತೆಯುಳ್ಳ ಮಕ್ಕಳನ್ನು ಸದೃಢರನ್ನಾಗಿಸಲು, ನಗರದಲ್ಲಿರುವ ಜಿಲ್ಲಾ ಶೀಘ್ರ ಮಧ್ಯಸ್ಥಿಕೆ ಕೇಂದ್ರ ಕಾರ್ಯ ನಿರ್ವಹಿಸುತ್ತಿದೆ.

ಹುಟ್ಟುವಾಗಲೇ ನ್ಯೂನ್ಯತೆಯಿದ್ದರೆ ಅಥವಾ ಅಂಗವಿಕಲತೆಗೊಳಪಟ್ಟ ಮಕ್ಕಳು ಕುಟುಂಬಕ್ಕೆ ಹೊರೆ. ಇದನ್ನು ತಪ್ಪಿಸಲು ನಗರದ ಹಳೇ ಜಿಲ್ಲಾ ಆಸ್ಪತ್ರೆ ಕಟ್ಟಡದಲ್ಲಿ, ವರ್ಷದ ಹಿಂದೆಯೇ ಜಿಲ್ಲಾ ಶೀಘ್ರ ಮಧ್ಯಸ್ಥಿಕೆ ಕೇಂದ್ರ ಆರಂಭಗೊಂಡಿದ್ದು, ಸಾಕಷ್ಟು ಜನರಿಗೆ ನೆರವಾಗಿದೆ.

‘ಹುಟ್ಟುವ 100 ಮಕ್ಕಳಲ್ಲಿ 6ರಿಂದ 7ಮಕ್ಕಳಿಗೆ ಜನ್ಮತಃ ನ್ಯೂನ್ಯತೆ ಇರುತ್ತದೆ. ಇದಲ್ಲದೆ ಕೆಲ ಶಿಶುಗಳಿಗೆ ಪೌಷ್ಟಿಕಾಂಶದ ಕೊರತೆ, ಇತರೆ ಕಾಯಿಲೆಗಳು ಬರುವ ಸಾಧ್ಯತೆ ಇರುತ್ತದೆ. ಇಂಥ ಮಕ್ಕಳ ಮರಣ ತಪ್ಪಿಸುವ ಜತೆಗೆ ಜೀವನ ಮಟ್ಟ ಹೆಚ್ಚಿಸಲು ‘ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದಡಿ’ 0–6 ವರ್ಷದೊಳಗಿನ ಮಕ್ಕಳಿಗೆ, 6–18 ವರ್ಷದೊಳಗಿನ ಮಕ್ಕಳಿಗೆ ಶಾಲೆಗಳಿಗೆ ಭೇಟಿ ನೀಡಿ ಸಂಚಾರ ಆರೋಗ್ಯ ತಂಡಗಳು ತಪಾಸಣೆ ನಡೆಸಿ, ಆಯುಷ್ಮಾನ್‌ ಭಾರತ–ಆರೋಗ್ಯ ಕರ್ನಾಟಕ ಯೋಜನೆಯಡಿ ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ ಡಿಇಐಸಿ ಕೇಂದ್ರದಲ್ಲಿಯೂ ಈ ಚಿಕಿತ್ಸೆ ಆರಂಭಿಸಲಾಗಿದೆ’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಮಹೇಂದ್ರ ಕಾಪಸೆ ‘ಪ್ರಜಾವಾಣಿ’ಗೆ ತಿಳಿಸಿದರು.

‘2015ರಲ್ಲಿ ಡಿಇಐಸಿ ಕೇಂದ್ರ ಸ್ಥಾಪನೆಗೆ ಅನುಮತಿ ಪಡೆದುಕೊಳ್ಳಲಾಯಿತು. 2016ರಲ್ಲಿ ಹಳೆಯ ಕಟ್ಟಡ ಪುನರುಜ್ಜೀವನಗೊಳಿಸಿ, 2017ರ ಮಾರ್ಚ್‌ ತಿಂಗಳಲ್ಲಿ ₹ 15 ಲಕ್ಷ ಮೌಲ್ಯದ ಹಲವು ಚಿಕಿತ್ಸಾ ಸಲಕರಣೆಗಳೊಂದಿಗೆ ಆರಂಭಗೊಂಡ ಈ ಕೇಂದ್ರದಲ್ಲಿ, ನ್ಯೂಟ್ರಲ್‌ ಟ್ಯೂಬ್‌ ಡಿಫೆಕ್ಟ್‌, ಕ್ಲೆಪ್ಟ್‌ ಆಫ್‌ ಅಂಡ್‌ ಪಾಲಟ್‌, ಡೌನ್ಸ್ ಸಿಂಡ್ರೋಮ್‌ ಸೇರಿದಂತೆ 38 ಕಾಯಿಲೆಗಳ ತಪಾಸಣೆ ನಡೆಸಿ, ಚಿಕಿತ್ಸೆ ನೀಡಲಾಗುತ್ತಿದೆ. ಇದೂವರೆಗೆ 1189 ಮಕ್ಕಳು ತಪಾಸಣೆ ಮತ್ತು ಚಿಕಿತ್ಸೆ ಪಡೆದುಕೊಂಡಿದ್ದಾರೆ. ಬಹುತೇಕರು ಆರೋಗ್ಯಯುತ ಜೀವನ ನಡೆಸುತ್ತಿದ್ದಾರೆ. ಸದ್ಯ 40 ಮಕ್ಕಳು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ’ ಎಂದು ಅವರು ಹೇಳಿದರು.

‘ಜಿಲ್ಲಾ ಆಸ್ಪತ್ರೆಯ ನುರಿತ ಕಿವಿ, ಮೂಗು ಮತ್ತು ಗಂಟಲು ತಜ್ಞರು, ನೇತ್ರ ತಜ್ಞರು, ಕೀಲು ಮತ್ತು ಎಲುಬು ತಜ್ಞರು, ಮಾನಸಿಕ ರೋಗ ತಜ್ಞರು ವಾರದಲ್ಲಿ ಎರಡು ಬಾರಿ, ಮಕ್ಕಳ ನರರೋಗ ತಜ್ಞರು ವಾರದಲ್ಲಿ ಒಂದು ಬಾರಿ ಈ ಕೇಂದ್ರಕ್ಕೆ ಭೇಟಿ ನೀಡಿ ಮಕ್ಕಳ ತಪಾಸಣೆ ನಡೆಸಲಿದ್ದಾರೆ.

ಇದರ ಜತೆಗೆ ಡಾ.ಅಶ್ವಿನಿ ಬಿದರಿ ಆಸ್ಪತ್ರೆಯ ಆಡಿಯೋಲಾಜಿಸ್ಟ್‌ ವಾರಕ್ಕೆ ಮೂರು ಬಾರಿ, ಕಾರ್ಡಿಯೋಲಾಜಿಸ್ಟ್ ವಾರಕ್ಕೆ ಒಮ್ಮೆ, ಚಿಕ್ಕಮಕ್ಕಳ ನರರೋಗ ತಜ್ಞರು ಒಡಂಬಡಿಕೆ ಪ್ರಕಾರ ತಿಂಗಳಿಗೆ ಒಂದು ಬಾರಿ ಭೇಟಿ ಚಿಕಿತ್ಸೆ ನೀಡಲಿದ್ದಾರೆ’ ಎಂದು ಅವರು ವಿವರಿಸಿದರು.

ಆತ್ಮವಿಶ್ವಾಸ ವೃದ್ಧಿ

‘ನ್ಯೂನ್ಯತೆಯಿಂದ ಕುಗ್ಗಿರುವ ಮಕ್ಕಳಿಗೆ ಗುಣಮಟ್ಟದ ಚಿಕಿತ್ಸೆ ನೀಡುವ ಜತೆಗೆ, ನ್ಯೂನ್ಯತೆಯಿಂದ ಹೊರ ಬರುವಂಥ ವಾತಾವರಣ ನಿರ್ಮಿಸಲು ಆಟಕಿ ಸಾಮಾನುಗಳು ಸಹ ಈ ಕೇಂದ್ರಗಳಲ್ಲಿವೆ. ಅಲ್ಲದೆ ಗೋಡೆಗಳ ಮೇಲೆ ನ್ಯೂನ್ಯತೆ ಮಕ್ಕಳು ಕುಳಿತುಕೊಂಡಿರುವುದು, ಸ್ಟಿಕ್‌ ಸಹಾಯದಿಂದ ನಡೆಯುತ್ತಿರುವ, ಆಟವಾಡುತ್ತಿರುವುದು ಸೇರಿದಂತೆ ಹಲವು ವಿವಿಧ ಬಗೆಯ ಚಿತ್ರಗಳನ್ನು ಬಿಡಿಸಲಾಗಿದೆ. ಇದು ಮಾಯವಾಗಿರುವ ಆತ್ಮವಿಶ್ವಾಸ ವೃದ್ಧಿಯಾಗಲು ನೆರವಾಗಲಿದೆ’ ಎಂದು ಕೇಂದ್ರದ ವ್ಯವಸ್ಥಾಪಕ ಪ್ರವೀಣ ಮನಗೊಂಡ ಹೇಳಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !