ಪದಕ್ರೌರ್ಯವೇ ಜೀವಾಳ

ಮಂಗಳವಾರ, ಏಪ್ರಿಲ್ 23, 2019
31 °C

ಪದಕ್ರೌರ್ಯವೇ ಜೀವಾಳ

Published:
Updated:

‘ನಾನು ಮತ್ತು ಆಕಾಶ್‌ ಬಸ್‌ ಹತ್ತಿದೆವು. ಜಗಳ ಆರಂಭವಾಯಿತು. ನಾನು ಆಕಾಶ್‌ನನ್ನು ಬಿಡಿಸಲು ಹೋದೆ... ಅವರು ನನ್ನ ಮೇಲೆಯೂ ದಾಳಿ ಮಾಡಿದರು. ಬಸ್‌ನ ಹಿಂಭಾಗಕ್ಕೆ ಎಳೆದೊಯ್ದರು. ಒಬ್ಬರಾದ ಮೇಲೆ ಒಬ್ಬರು ಅತ್ಯಾಚಾರ ಮಾಡಿದರು. ನಂತರ ಮುಕೇಶ್‌ ಎಂಬಾತ ನನ್ನನ್ನು ಮನ ಬಂದಂತೆ ಕಚ್ಚಿದ. ರಾಡ್‌ ತೊಗೊಂಡು ನನ್ನ ಹಿಂಭಾಗದಲ್ಲಿ ತೂರಿಸಿದ... ಹೊಟ್ಟೆಯೊಳಗೆಲ್ಲ ಏನೋ ಕದಡಿದಂತೆ... ಆಮೇಲೆ ಕೈ ಹಾಕಿ ಮಾಂಸಖಂಡವನ್ನೆಲ್ಲ ಎಳೆದಂತಾಯಿತು... ಬಹುಶಃ ಆತ ಏನನ್ನೋ ನನ್ನ ಒಡಲಾಳದಿಂದ ಕಿತ್ತುಹಾಕಿದ್ದ. ಆಮೇಲೆ ನಮ್ಮನ್ನು ರಸ್ತೆಗೆಸೆದರು...’

ಒಂದೊಂದೇ ಪದ ಜೋಡಿಸಿ, ಆ ಹುಡುಗಿ ಹೇಳುತ್ತಿದ್ದರೆ ಕರುಳು ಕಿವುಚಿದಂತಾಗುತ್ತದೆ. ನಮ್ಮ ಕರುಳನ್ನೇ ತೆಗೆದು ನಮ್ಮ ಕೈಗಿಟ್ಟಂತೆ! ದೆಹಲಿಯ ನಿರ್ಭಯಾ ಪ್ರಕರಣ ಆಧರಿಸಿ ಮಾಡಿದ ವೆಬ್‌ ಸಿರೀಸ್ ‘ಡೆಲ್ಲಿ ಕ್ರೈಮ್’. ಯಾವುದನ್ನೂ ಅತಿರೇಕಕ್ಕೆ ಒಯ್ಯದೆಯೇ ಸಾಕ್ಷ್ಯಚಿತ್ರದಂತೆ ಎಲ್ಲವನ್ನೂ ದಾಖಲಿಸುತ್ತ ಹೋಗುತ್ತಾರೆ ಇದರ ನಿರ್ದೇಶಕರು.

7 ವೆಬಿಸೋಡುಗಳು, ಪ್ರತಿಯೊಂದೂ 47ರಿಂದ 53 ನಿಮಿಷಗಳ ಅವಧಿಯವು. ಆದರೆ ಇಡೀ ಸರಣಿ ವೀಕ್ಷಕರನ್ನು ಕಟ್ಟಿ ಹಾಕುತ್ತದೆ. ಏನು ಮಾಡುತ್ತಿದ್ದರು ದೆಹಲಿ ಪೊಲೀಸರು ಎಂಬ ಪ್ರಶ್ನೆಗೆ ಉತ್ತರ ನೀಡುವಂತೆ ಇಡೀ ಸರಣಿಯನ್ನು ಹೆಣೆಯಲಾಗಿದೆ. ಪೊಲೀಸ್‌ ವ್ಯವಸ್ಥೆಯನ್ನು ಮಾನವೀಯ ದೃಷ್ಟಿಯಿಂದ ನೋಡುತ್ತಲೇ ಇಡೀ ತಂಡದ ಶ್ರಮವನ್ನು ಜನರ ಮುಂದೆ ತಂದಿಡುವಲ್ಲಿ ಅವರ ಶ್ರಮವನ್ನು ಸೂಕ್ಷ್ಮವಾಗಿ ತೋರಿಸಿದೆ. 

ಐಪಿಎಸ್‌ ಅಧಿಕಾರಿ ಛಾಯಾ ಶರ್ಮಾ ಅವರ ಪಾತ್ರವನ್ನು ವರ್ತಿಕಾ ಚತುರ್ವೇದಿ ಹೆಸರಿನಲ್ಲಿ ಶೆಫಾಲಿ ಶಾಹ್‌ ಸಮರ್ಥವಾಗಿ ನಿಭಾಯಿಸಿದ್ದಾರೆ.

ರಿಚಿ ಮೆಹ್ತಾ ನಿರ್ದೇಶನದ ಈ ಸಿರೀಸ್‌ ನೆಟ್‌ಫ್ಲಿಕ್ಸ್‌ನಲ್ಲಿ ಜನಪ್ರಿಯವಾಗುತ್ತಿದ್ದಂತೆಯೇ ದೆಹಲಿ ಪೊಲೀಸ್‌ ಅಧಿಕಾರಿಯೊಬ್ಬರ ಕೆಂಗಣ್ಣಿಗೂ ಪಾತ್ರವಾಗಿದೆ. ವಸಂತ್‌ ವಿಹಾರ್‌ ಠಾಣಾಧಿಕಾರಿ ಪಾತ್ರವನ್ನು ತಿರುಚಲಾಗಿದೆಯೆಂದು ಆ ಅಧಿಕಾರಿ ಗರಂ ಆಗಿದ್ದಾರೆ. ವ್ಯವಸ್ಥೆಯನ್ನು ನಾಟಕೀಯಗೊಳಿಸಲು ಇದು ಅಗತ್ಯವಾಗಿತ್ತು ಎಂಬ ಸಮರ್ಥನೆ ನೀಡಿರುವ ರಿಚಿ, ಆ ಅಧಿಕಾರಿಗೆ ಕ್ಷಮಾಪಣೆ ಕೇಳಿದ್ದರೂ ಇಂತಹ ಹಲವು ಅಸಮಾಧಾನಗಳು ಹೊಗೆಯಾಡುತ್ತಲೇ ಇವೆ.

‘ವ್ಯವಸ್ಥೆಯನ್ನು ಸಂಕೇತಿಸುವ ದೃಷ್ಟಿಯಿಂದ ಹಾಗೆ ಚಿತ್ರೀಕರಿಸಲಾಗಿದೆ’ ಎಂದೂ ರಿಚಿ ಸಮಜಾಯಿಷಿ ನೀಡಿದ್ದಾರೆ.

ಈ ವಾದ–ವಿವಾದ, ಚರ್ಚೆಗಳೇನೇ ಇರಲಿ, ರಾಜಕೀಯ ವ್ಯವಸ್ಥೆ ಒಂದು ಸನ್ನಿವೇಶವನ್ನು ಬಳಸಿಕೊಳ್ಳುವ ಬಗೆ, ಮಾಧ್ಯಮ ತನ್ನ ಸುದ್ದಿಯ ಹಪಾಹಪಿಗಾಗಿ ಎಲ್ಲಕ್ಕೂ ಅಡ್ಡಿಪಡಿಸುವ ರೀತಿ, ಸುದ್ದಿ ಶೋಧದಲ್ಲಿ ಕೈಗೊಳ್ಳುವ ಕ್ರಮಗಳು ಇವೆಲ್ಲವನ್ನೂ ಬಿಗಿಯಾಗಿ ಹೆಣೆಯಲಾಗಿದೆ.

ಟಿ.ವಿ ಸರಣಿಗಳಿಗೆ ನಿಗದಿತ ಸಮಯವೆಂಬುದಿದ್ದು ವೀಕ್ಷಕರನ್ನು ಒಂದು ಶಿಸ್ತಿಗೆ ಒಳಪಡಿಸಿರುತ್ತದೆ. ವೆಬಿಸೋಡುಗಳು ಹಾಗಲ್ಲ, ಬಿಗಿಯಾದ ನಿರೂಪಣೆ, ಕುತೂಹಲಗಳೇ ಅವುಗಳ ಜೀವಾಳ. ಇದು ಒಂಚೂರು ಎಳಸಾದರೂ... ನೋಡುಗ ಮುಂದಿನ ಕಂತನ್ನು ಸಾರಾಸಗಟಾಗಿ ತಿರಸ್ಕರಿಸುವ ಸಾಧ್ಯತೆಗಳೇ ಹೆಚ್ಚು. ಒಂದರಿಂದ ಇನ್ನೊಂದು ಕಂತಿಗೆ ಕತೆ ಹೆಣೆಯುವ ಜಾಣ್ಮೆ ನೆಟ್‌ಫ್ಲಿಕ್ಸ್‌ ನಿರ್ಮಾತೃಗಳಿಗೆ ಸಲೀಸಾಗಿದೆ. ಪಾತ್ರಗಳ ಆಯ್ಕೆ, ಅಭಿವ್ಯಕ್ತಿ, ನಿರ್ಲಿಪ್ತರಾಗಿರುವುದು, ಪ್ರಕರಣವನ್ನು ಸ್ವೀಕರಿಸುವ ವಿಧಾನ ಎಲ್ಲವೂ ಸುದೀರ್ಘ ಅಧ್ಯಯನದ ಫಲವೆಂಬಂತೆ ಬಿಂಬಿತವಾಗಿದೆ. ವಾಂಛೆಗೂ ಮಿಗಿಲಾದ ತಿರಸ್ಕಾರ, ಅನುಭವಿಸಬೇಕು ಎನ್ನುವುದಕ್ಕಿಂತಲೂ ಆಳಬೇಕೆನ್ನುವ ಮನೋಸ್ಥಿತಿಯನ್ನು ತೋರಿಸುವ ಕಥನ ಇದು. ನೋಡಲೇಬೇಕಾದ ವೆಬ್‌ಸರಣಿ ‘ಡೆಲ್ಲಿ ಕ್ರೈಮ್’.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !